Site icon Vistara News

14 Hours Work: 14 ಗಂಟೆಗಳ ಕೆಲಸ; ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್‌ 3ರಂದು ಐಟಿ ಉದ್ಯೋಗಿಗಳ ಪ್ರತಿಭಟನೆ

14 hours work protest

ಬೆಂಗಳೂರು: ಕೆಲಸದ ಅವಧಿಯನ್ನು ದಿನಕ್ಕೆ 14 ಗಂಟೆಗಳಿಗೆ ವಿಸ್ತರಿಸುವ (14 Hours Work) ಸರ್ಕಾರದ ಚಿಂತನೆಯನ್ನು ಐಟಿ ಉದ್ಯೋಗಿಗಳು (IT Employees) ತೀವ್ರವಾಗಿ ವಿರೋಧಿಸಿದ್ದು, ರಾಜ್ಯ ಸರ್ಕಾರದ (Karnataka Govt) ವಿರುದ್ಧ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಆಗಸ್ಟ್ 3ರಂದು ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ (Freedom park) ಪ್ರತಿಭಟನೆ (Protest) ಮುಷ್ಕರ ನಡೆಯಲಿದೆ.

ಕೆಲಸದ ಅವಧಿಯನ್ನು 14 ಗಂಟೆಗೆ ವಿಸ್ತರಣೆ ಮಾಡಲು ಕರ್ನಾಟಕ ಸಚಿವ ಸಂಪುಟ ಚಿಂತಿಸಿತ್ತು. ಈ ಬಗ್ಗೆ ಐಟಿ ಕಂಪನಿಗಳು ಮಗುಂ ಆಗಿದ್ದವು. ಇದು ಐಟಿ ಉದ್ಯೋಗಿಗಳನ್ನು ಕೆರಳಿಸಿದೆ. ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಐಟಿ ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಇಳಿಯಲು ಐಟಿ ಉದ್ಯೋಗಿಗಳು ನಿರ್ಧರಿಸಿದ್ದಾರೆ. ಐಟಿ ಎಂಪ್ಲಾಯೀಸ್ ಅಸೋಸಿಯೇಷನ್ ಈ ಬಗ್ಗೆ ಹೋರಾಡಲು ತೀರ್ಮಾನಿಸಿದ್ದು, ಸಾವಿರಾರು ಐಟಿ ಉದ್ಯೋಗಿಗಳು ಸೇರಿ ಆಗಸ್ಟ್‌ 3ರಂದು ಪ್ರತಿಭಟಿಸಲು ಮುಂದಾಗಿದ್ದಾರೆ.

14 ಗಂಟೆ ಕೆಲಸದ ಅವಧಿ (Working hours) ವಿಸ್ತರಿಸುವ ಪ್ರಸ್ತಾವಕ್ಕೆ ಸಿಡಿದೆದ್ದಿದ್ದ ಸಾಫ್ಟ್‌ವೇರ್ ಉದ್ಯೋಗಿಗಳು (Software Employees) ಮೊನ್ನೆ ಮಡಿವಾಳ, ಬಿಟಿಎಂ ಲೇಔಟ್‌ನಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರ ನಿರ್ಧಾರ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ನಂತರ ಈ ಕುರಿತು ಇಮೇಲ್‌ ಚಳುವಳಿ ಆರಂಭಿಸಿದ್ದರು.

ಈ ಬಗ್ಗೆ ಕರ್ನಾಟಕ ರಾಜ್ಯ ಐಟಿ ಮತ್ತು/ ಐಟಿಇಎಸ್ ಎಂಪ್ಲಾಯೀಸ್ ಯೂನಿಯನ್ ಅಭಿಯಾನ ಆರಂಭಿಸಿದ್ದು, ʼI oppose the Increase in Working Hoursʼ ಎಂದು ಇಮೇಲ್ ಮೂಲಕ ಸಂದೇಶ ಕಳುಹಿಸಲು ಆರಂಭಿಸಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯ ಅವರಿಗೆ ಸಹಸ್ರಾರು ಸಂಖ್ಯೆಯಲ್ಲಿ ಇಮೇಲ್ ಕಳುಹಿಸಲು ಸಾಮಾಜಿಕ ಜಾಲತಾಣ ಎಕ್ಸ್ ಹಾಗೂ ಫೇಸ್‌ಬುಕ್‌ನಲ್ಲಿ ಟ್ರೆಂಡ್ ಮಾಡಿದ್ದಾರೆ.

ಸರಕಾರದ ಮೇಲೆ ಯಾರ ಒತ್ತಡ?

ಕೆಲಸದ ಅವಧಿಯ ಹೆಚ್ಚಳ ಮೂಲತಃ ಸರ್ಕಾರದ ಚಿಂತನೆಯಲ್ಲ. ಆದರೆ ಐಟಿ-ಬಿಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸದ ಸಮಯ ನಿಗದಿಗೆ ಸರ್ಕಾರದ ಮೇಲೆ ಕೆಲವು ಉದ್ಯಮಿಗಳು ತೀವ್ರ ಒತ್ತಡ ಹೇರುತ್ತಿದ್ದಾರೆ. ಕಾರ್ಮಿಕ ಸಚಿವರ ವಿರೋಧದ ನಡುವೆಯೂ ಮುಖ್ಯಕಾರ್ಯದರ್ಶಿ ಮೂಲಕ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ಯಮಿಗಳು ಕಸರತ್ತು ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯಗೂ ಉದ್ಯಮಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಐಟಿ ಉದ್ಯೋಗಿಗಳು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದ ಸಚಿವ ಸಂತೋಷ್ ಲಾಡ್, ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಉದ್ಯಮಿಗಳು ವಿರೋಧಿಸಿದ್ದಾರೆ. ಆದರೆ 14 ಗಂಟೆ ಕೆಲಸದ ಸಮಯ ನಿಗದಿ ವಿಚಾರದಲ್ಲಿ ಯಾಕೆ ಮೌನ ಎಂದು ಕೆಲ ಪ್ರಭಾವಿ ಉದ್ಯಮಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಉದ್ಯಮಿಗಳ ಪರ ನಿಂತ ಕೆಲ ಸಚಿವರ ವಿರುದ್ಧವೂ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಪುಟ ಸಹೋದ್ಯೋಗಿಗಳ ವಿರುದ್ಧವೂ ಸಚಿವ ಲಾಡ್​ ಕಿಡಿಕಾರಿದ್ದರು.

ಐಟಿ ಸಂಸ್ಥೆಗಳು ಉದ್ಯಮಿಗಳಿಂದ ಹೆಚ್ಚಿನ ಕೆಲಸ ತೆಗೆಸಲು ಹಾಗೂ ಉದ್ಯೋಗ ಕಡಿತ ಮಾಡುವ ಉದ್ದೇಶದಿಂದ ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತಂದು ಇದನ್ನು ಮಾಡಿಸಿಕೊಳ್ಳುತ್ತಿವೆ ಎಂದು ಉದ್ಯೋಗಿಗಳು ಕಿಡಿ ಕಾರಿದ್ದಾರೆ. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಚಿಂತನೆ ನಡೆಸಿತ್ತು. ಜತೆಗೆ, ಬಿಪಿಓಗಳಲ್ಲಿ 12 ಗಂಟೆಗೂ ಅಧಿಕ ಕೆಲಸ ಮಾಡಲು ಅವಕಾಶ ನೀಡಬೇಕು. ಅಲ್ಲದೇ ನಿಯಮಿತವಾಗಿ ಮೂರು ತಿಂಗಳು 125 ಗಂಟೆ ಮೀರದಂತೆ ಕೆಲಸ ಇರಬೇಕು. ಐಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸದ ಅವಧಿ ನಿಗದಿಪಡಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: 14 Hour Workday Bill: 14 ಗಂಟೆ ಕೆಲಸ ಮಾಡಿದರೆ ಹಾರ್ಟ್‌ ಅಟ್ಯಾಕ್‌ ಗ್ಯಾರಂಟಿ? ವೈದ್ಯರು ಹೇಳೋದೇನು?

Exit mobile version