ಬೆಂಗಳೂರು: ದಿನಕ್ಕೆ 14 ಗಂಟೆ ಕೆಲಸದ (14 Hours Work) ಅವಧಿ ವಿಸ್ತರಣೆ ಪ್ರಸ್ತಾವ ವಿರೋಧಿಸಿ ಒಂದೆಡೆ ಐಟಿ ಉದ್ಯೋಗಿಗಳು (IT Employees) ಬೃಹತ್ ಪ್ರತಿಭಟನೆಗೆ (IT workers protest) ತಯಾರಿ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಐಟಿ ಕಂಪನಿಗಳ (IT Companies) ಮುಂದೆ ಸಾವಿರಾರು ಮಂದಿ ಉದ್ಯೋಗಗಳಿಗಾಗಿ (ಕ್ಯೂ ನಿಂತಿರುವ ದೃಶ್ಯ ಕಂಡುಬರುತ್ತಿದೆ.
ದಿನಕ್ಕೆ 14 ಗಂಟೆ ಕೆಲಸದ ಅವಧಿ ವಿಸ್ತರಣೆ ಪ್ರಸ್ತಾವ ವಿರೋಧಿಸಿ ನಾಳೆ ಸರ್ಕಾರದ ವಿರುದ್ಧ ಹಾಗೂ ಐಟಿ ಕಂಪನಿಗಳ ವಿರುದ್ಧ ಬೃಹತ್ ಪ್ರತಿಭಟನೆಗೆ ಐಟಿ ಉದ್ಯೋಗಿಗಳು ಸಜ್ಜು ಮಾಡಿಕೊಳ್ಳುತ್ತಿದ್ದಾರೆ. ಐಟಿ ಉದ್ಯೋಗಿಗಳ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಈ ಪ್ರತಿಭಟನೆಗೆ ತಯಾರು ಮಾಡಿಕೊಂಡಿವೆ. ಫ್ರೀಡಂ ಪಾರ್ಕ್‌ನಲ್ಲಿ ಈ ಪ್ರತಿಭಟನೆ ನಡೆಯಲಿದೆ.
ಮುಷ್ಕರದಲ್ಲಿ ಸಾವಿರಾರು ಐಟಿ ಎಂಪ್ಲಾಯಿಗಳು ಭಾಗವಹಿಸಲಿದ್ದಾರೆ. ಐತಿಹಾಸಿಕವಾಗಿ, ಇದೇ ಮೊದಲ ಬಾರಿಗೆ ಐಟಿ ಉದ್ಯೋಗಿಗಳು ಪ್ರತಿಭಟನೆಗಾಗಿ ರಸ್ತೆಗಿಳಿಯುತ್ತಿದ್ದಾರೆ. ಉದ್ಯೋಗಗಳನ್ನು ಹೆಚ್ಚಿಸಬೇಕು. ಅದರ ಬದಲು ಸಮಯ ವಿಸ್ತರಣೆ ಮಾಡುವುದಲ್ಲ. ಹೀಗೆ ಮಾಡುವುದರಿಂದ ಒತ್ತಡ ಹೆಚ್ಚಾಗಿ ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಆಕ್ರೋಶಿಸಿದ್ದಾರೆ.
ಇನ್ನೊಂದೆಡೆ, ನಗರದ ಐಟಿ ಪಾರ್ಕ್ ಮುಂತಾದ ಐಟಿ ಕಂಪನಿ ಕಟ್ಟಡಗಳ ಮುಂದೆ ನಿನ್ನೆ ಹಾಗೂ ಇಂದು ಸಾವಿರಾರು ಉದ್ಯೋಗಾರ್ಥಿಗಳು ಕ್ಯೂ ನಿಂತಿರುವುದು ಕಂಡುಬಂದಿದೆ. ಮಾನ್ಯತಾ ಟೆಕ್ ಪಾರ್ಕ್ ಕಚೇರಿ ಮುಂದೆ ಮೈಲುದ್ದದ ಕ್ಯೂ ಕಂಡುಬಂತು. ಐಟಿ ಕಂಪನಿಯೊಂದು ಇಂಟರ್‌ವ್ಯೂಗೆ ಕಾಲ್ ಮಾಡಿದ್ದು, ಅದಕ್ಕಾಗಿ ಉದ್ಯೋಗಾರ್ಥಿಗಳು ಜಮಾಯಿಸಿದ್ದಾರೆ. ಸುಮಾರು 2 ಸಾವಿರ ಜನ ಕ್ಯೂ ನಿಂತಿದ್ದುದು ಕಂಡುಬಂತು. ಆದರೆ ಖಾಲಿ ಇದ್ದ ಹುದ್ದೆಗಳು 40 ಮಾತ್ರ!
ಐಟಿ ಕಂಪನಿಗಳು ಹೆಚ್ಚಾಗಿ ಇರುವ ಇಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ರಸ್ತೆ ಮುಂತಾದ ಕಡೆ ಕಂಪನಿಗಳ ಮುಂದೆ ಇಂಥ ಸರತಿ ಸಾಲುಗಳು ಕಂಡುಬಂದಿವೆ. ಉದ್ಯೋಗಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಐಟಿ ಕಂಪನಿಗಳು ಸಂಬಳ ಇತ್ಯಾದಿ ಪರ್ಕ್‌ಗಳ ಪ್ರಮಾಣವನ್ನು ಕಡಿಮೆ ಮಾಡಿವೆ. ಹೊಸ ನೇಮಕಾತಿಗಳು ಕಡಿಮೆಯಾಗಿವೆ. ಇದೇ ವೇಳೆಗೆ, ಇರುವ ಉದ್ಯೋಗಿಗಳ ಕೆಲಸದ ಅವಧಿ ವಿಸ್ತರಣೆಗೆ ಸರ್ಕಾರವನ್ನು ಪ್ರೇರೇಪಿಸುತ್ತಿವೆ ಎಂದು ಈ ಕಂಪನಿಗಳ ಕಾರೈವೈಖರಿಯನ್ನು ಅರಿತಿರುವ ಕ್ಷೇತ್ರ ತಜ್ಞರು ವಿಶ್ಲೇಷಿಸಿದ್ದಾರೆ.
ಸರಕಾರದ ಮೇಲೆ ಯಾರ ಒತ್ತಡ?
ಕೆಲಸದ ಅವಧಿಯ ಹೆಚ್ಚಳ ಮೂಲತಃ ಸರ್ಕಾರದ ಚಿಂತನೆಯಲ್ಲ. ಆದರೆ ಐಟಿ-ಬಿಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸದ ಸಮಯ ನಿಗದಿಗೆ ಸರ್ಕಾರದ ಮೇಲೆ ಕೆಲವು ಉದ್ಯಮಿಗಳು ತೀವ್ರ ಒತ್ತಡ ಹೇರುತ್ತಿದ್ದಾರೆ. ಕಾರ್ಮಿಕ ಸಚಿವರ ವಿರೋಧದ ನಡುವೆಯೂ ಮುಖ್ಯಕಾರ್ಯದರ್ಶಿ ಮೂಲಕ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ಯಮಿಗಳು ಕಸರತ್ತು ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯಗೂ ಉದ್ಯಮಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಐಟಿ ಉದ್ಯೋಗಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದ ಸಚಿವ ಸಂತೋಷ್ ಲಾಡ್, ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಉದ್ಯಮಿಗಳು ವಿರೋಧಿಸಿದ್ದಾರೆ. ಆದರೆ 14 ಗಂಟೆ ಕೆಲಸದ ಸಮಯ ನಿಗದಿ ವಿಚಾರದಲ್ಲಿ ಯಾಕೆ ಮೌನ ಎಂದು ಕೆಲ ಪ್ರಭಾವಿ ಉದ್ಯಮಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಉದ್ಯಮಿಗಳ ಪರ ನಿಂತ ಕೆಲ ಸಚಿವರ ವಿರುದ್ಧವೂ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಪುಟ ಸಹೋದ್ಯೋಗಿಗಳ ವಿರುದ್ಧವೂ ಸಚಿವ ಲಾಡ್ ಕಿಡಿಕಾರಿದ್ದರು.
ಐಟಿ ಸಂಸ್ಥೆಗಳು ಉದ್ಯಮಿಗಳಿಂದ ಹೆಚ್ಚಿನ ಕೆಲಸ ತೆಗೆಸಲು ಹಾಗೂ ಉದ್ಯೋಗ ಕಡಿತ ಮಾಡುವ ಉದ್ದೇಶದಿಂದ ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತಂದು ಇದನ್ನು ಮಾಡಿಸಿಕೊಳ್ಳುತ್ತಿವೆ ಎಂದು ಉದ್ಯೋಗಿಗಳು ಕಿಡಿ ಕಾರಿದ್ದಾರೆ. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆ ಚಿಂತನೆ ನಡೆಸಿತ್ತು. ಜತೆಗೆ, ಬಿಪಿಓಗಳಲ್ಲಿ 12 ಗಂಟೆಗೂ ಅಧಿಕ ಕೆಲಸ ಮಾಡಲು ಅವಕಾಶ ನೀಡಬೇಕು. ಅಲ್ಲದೇ ನಿಯಮಿತವಾಗಿ ಮೂರು ತಿಂಗಳು 125 ಗಂಟೆ ಮೀರದಂತೆ ಕೆಲಸ ಇರಬೇಕು. ಐಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸದ ಅವಧಿ ನಿಗದಿಪಡಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ: 14 Hour Workday Bill: 14 ಗಂಟೆ ಕೆಲಸ ಮಾಡಿದರೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ? ವೈದ್ಯರು ಹೇಳೋದೇನು?