ಬೆಂಗಳೂರು: ಸೌದಿ ಅರೇಬಿಯಾದ (Saudi Arabia) ಮೆಕ್ಕಾದಲ್ಲಿರುವ ಮುಸ್ಲಿಮರ ಪವಿತ್ರ ಹಜ್ ಯಾತ್ರೆ (Hajj pilgrims) ಕೈಗೊಂಡಿರುವವರಿಗೆ ಬೇಸಿಗೆಯ ಬಿಸಿಲು, ಬಿಸಿಗಾಳಿಯ (Heat wave) ಹೊಡೆತವು ಮಾರಣಾಂತಿಕವಾಗಿ ಪರಿಣಮಿಸಿದೆ. ಬಿಸಿಗಾಳಿ ಸಂಬಂಧಿತ ಕಾಯಿಲೆಯಿಂದ ಮೆಕ್ಕಾದಲ್ಲಿ (Mecca) 922 ಯಾತ್ರಿಕರು ದುರ್ಮರಣ ಹೊಂದಿದ್ದಾರೆ. ಇವರಲ್ಲಿ ಬೆಂಗಳೂರಿನ ಇಬ್ಬರು ಯಾತ್ರಿಕರೂ ಸೇರಿದ್ದಾರೆ ಎಂದು ಗೊತ್ತಾಗಿದೆ.
ಮೆಕ್ಕಾದಲ್ಲಿ ಬಿಸಿಲಿನ ಹೊಡೆತಕ್ಕೆ ಮೃತಪಟ್ಟ 922 ಯಾತ್ರಿಕರಲ್ಲಿ ಬೆಂಗಳೂರಿನ ಆರ್.ಟಿ ನಗರದ ಕೌಸುರ್ ರುಕ್ಸಾನ (69) ಹಾಗೂ ಫ್ರೇಜರ್ ಟೌನ್‌ನ ಮೊಹಮ್ಮದ್ ಇಲಿಯಾಸ್ (50) ಸೇರಿದ್ದಾರೆ. ಮೆಕ್ಕಾಗಿಂತ 8 ಕಿಲೋಮೀಟರ್ ದೂರದ ಮಿನ ಎಂಬ ನಗರದಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
“ಕಳೆದ 3 ದಿನಗಳ ಬೆಂಗಳೂರಿನ ಇಬ್ಬರು ಸಾವನ್ನಪ್ಪಿದ್ದಾರೆ. ರುಕ್ಸಾನ ತಮ್ಮ ಕುಟುಂಬದ ಜೊತೆಗೆ ಹಜ್ ಯಾತ್ರೆಗೆ ಹೋಗಿದ್ದರು. ಮೊಹಮದ್ ಇಲಿಯಾಸ್ ಫ್ರೇಜರ್ ಟೌನ್ ನಿವಾಸಿ. ಇಬ್ಬರನ್ನೂ ಮೆಕ್ಕಾದಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಅಲ್ಲಿನ ಸರ್ಕಾರವೇ ಅವರ ಮರಣದ ಸರ್ಟಿಫಿಕೇಟ್ ನೀಡುತ್ತದೆ” ಎಂದು ಹಜ್ ಕಮಿಟಿ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್ ಮಾಹಿತಿ ನೀಡಿದ್ದಾರೆ.
“ಕರ್ನಾಟದಿಂದ ಹೋಗಿರುವ ಉಳಿದ ಹಜ್ ಯಾತ್ರಿಗಳು ಸುರಕ್ಷಿತವಾಗಿದ್ದಾರೆ. ಕರ್ನಾಟಕದಿಂದ ಈ ವರ್ಷ ಒಟ್ಟು 10,300 ಜನ ಹಜ್ ಯಾತ್ರೆಗೆ ಹೋಗಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಹಜ್ ಯಾತ್ರೆ ಕೈಗೊಂಡ 68 ಭಾರತೀಯರ ಸಾವು
ಮೆಕ್ಕಾದಲ್ಲಿ ಬಿಸಿಗಾಳಿಯಿಂದಾಗಿ ಮೃತರಾದವರಲ್ಲಿ ಭಾರತದ 68 ಯಾತ್ರಿಕರು (Hajj Pilgrims) ಇದ್ದಾರೆ ಎಂದು ಸೌದಿ ಅರೇಬಿಯಾದ ರಾಜತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಭಾರತದ 68 ಯಾತ್ರಿಕರು ಮೃತಪಟ್ಟಿರುವುದು ದೃಢವಾಗಿದೆ. ಇವರಲ್ಲಿ ಕೆಲವು ಜನ ವಯೋಸಹಜ ಕಾಯಿಲೆಯಿಂದ ಮೃತಪಟ್ಟರೆ, ಹೆಚ್ಚಿನ ಜನ ಉಷ್ಣಗಾಳಿ ಸಂಬಂಧಿತ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ” ಎಂಬುದಾಗಿ ರಾಜತಾಂತ್ರಿಕ ಅಧಿಕಾರಿಗಳು ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಎಲ್ಲ ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಈ ಕಾರಣಕ್ಕೆ ಪ್ರತಿ ವರ್ಷ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ಸೋಮವಾರ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.
ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು, 60 ಮಂದಿ ಜೋರ್ಡಾನ್‌ನವರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ. ಇನ್ನು ತನ್ನ ದೇಶದ ಐವರು ಯಾತ್ರಿಕರು ಸಾವಿಗೀಡಾಗಿದ್ದಾರೆ ಎಂದು ಇರಾನ್ ಹೇಳಿದ್ದು, ಕಾರಣವನ್ನು ಬಹಿರಂಗಪಡಿಸಿಲ್ಲ. ಸೆನೆಗಲ್ ಮೂರು ಸಾವುಗಳನ್ನು ವರದಿ ಮಾಡಿದೆ. ಹಜ್ ಸಮಯದಲ್ಲಿ 136 ಇಂಡೋನೇಷ್ಯಾದ ಯಾತ್ರಿಕರು ಮತಪಟ್ಟಿದ್ದಾರೆ, ಇದರಲ್ಲಿ ಕನಿಷ್ಠ ಮೂವರು ಶಾಖದ ಹೊಡೆತದಿಂದ ನಿಧನರಾಗಿದ್ದಾರೆ ಎಂದು ಅಲ್ಲಿನ ಅದಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌದಿ ಅರೇಬಿಯಾದ ಅಧಿಕಾರಿಗಳು ಶಾಖದ ಒತ್ತಡದಿಂದ ಬಳಲುತ್ತಿರುವ 2,000ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ವರದಿ ಹೇಳಿದೆ. ಕಳೆದ ವರ್ಷ ಇಲ್ಲಿ ವಿವಿಧ ದೇಶಗಳಲ್ಲಿ ಕನಿಷ್ಠ 240 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ಪೈಕಿ ಹೆಚ್ಚಿನವರು ಇಂಡೋನೇಷ್ಯಾದವರು. ಈ ವರ್ಷ ಸುಮಾರು 18,00,000 ಯಾತ್ರಾರ್ಥಿಗಳು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಆ ಪೈಕಿ 16,00,000 ವಿದೇಸಿಗರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕೃತ ಹಜ್ ವೀಸಾ ದುಬಾರಿಯಾದ ಕಾರಣ ಪ್ರತಿವರ್ಷ ಸಾವಿರಾರು ಯಾತ್ರಿಕರು ಅಕ್ರಮವಾಗಿಯೂ ಇಲ್ಲಿಗೆ ಆಗಮಿಸುತ್ತಾರೆ.
ಇದನ್ನೂ ಓದಿ: ಹಜ್ ಯಾತ್ರೆಯಲ್ಲಿ ಪಾಕಿಸ್ತಾನದ ಜೇಬುಗಳ್ಳರ ಕಾಟ; ಸೌದಿ ಅರೇಬಿಯಾ ಖಡಕ್ ವಾರ್ನಿಂಗ್