ಹೊಸದಿಲ್ಲಿ: ₹ 2000 ಮುಖಬೆಲೆಯ ನೋಟುಗಳನ್ನು ಆರ್‌ಬಿಐ (RBI) ಹಿಂದೆಗೆದುಕೊಳ್ಳುವ (₹2000 Notes Withdrawn) ಪ್ರಕ್ರಿಯೆ ನಡೆಯುತ್ತಿದ್ದು, ನಿಮ್ಮಲ್ಲಿರುವ ನೋಟುಗಳನ್ನು ಬದಲಿಸಿಕೊಳ್ಳಲು ಇನ್ನೊಂದೇ ವಾರ ಅವಕಾಶವಿದೆ. ಇದರ ಅಂತಿಮ ಗಡು ಸೆಪ್ಟೆಂಬರ್ 30ರಂದು ಇದೆ.
ಸದ್ಯ ಇರುವುದರಲ್ಲಿ ಅತ್ಯಧಿಕ ಮುಖಬೆಲೆಯ ಈ ಕರೆನ್ಸಿಗಳನ್ನು ಆರ್‌ಬಿಐ ವಾಪಸ್ ಪಡೆಯುತ್ತಿದೆ. ಈಗಾಗಲೇ ಸಾಕಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿ ಬಂದಿದ್ದು, ಇನ್ನೂ ಸುಮಾರು 240 ಶತಕೋಟಿ ರೂಪಾಯಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇವೆ. ಇವು ಬ್ಯಾಂಕುಗಳಿಗೆ ಇನ್ನು ಐದು ದಿನಗಳಲ್ಲಿ ಮರಳಬೇಕಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ಮೇ 19ರಂದು 2,000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ಆದೇಶ ನೀಡಿತು. ಜನರಿಗೆ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಸೆಪ್ಟೆಂಬರ್ ಅಂತ್ಯದವರೆಗೆ ಅವಕಾಶ ನೀಡಿದೆ. 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಮಾರುಕಟ್ಟೆಯಲ್ಲಿದ್ದವು. ಅವುಗಳಲ್ಲಿ ಬಹುಪಾಲು ಬ್ಯಾಂಕ್‌ಗೆ ಮರಳಿ ಬಂದಿವೆ. ಆದರೆ ಸೆ.1ರಿಂದ 7% ನೋಟುಗಳು ಚಲಾವಣೆಯಲ್ಲಿವೆ.
ಗುಲಾಬಿ ಬಣ್ಣದ ಈ 2,000 ರೂಪಾಯಿ ನೋಟನ್ನು ನವೆಂಬರ್ 2016ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. ಭ್ರಷ್ಟಾಚಾರ ತಡೆಗಾಗಿ 1,000 ಮತ್ತು 500 ರೂಪಾಯಿಗಳ ನೋಟುಗಳನ್ನು ಡಿಮಾನಿಟೈಸೇಷನ್ ಮಾಡಿದಾಗ, ಅವುಗಳ ಬದಲಿಗೆ ಇದನ್ನು ತರಲಾಗಿತ್ತು. ನಂತರ ಇದು ದೊಡ್ಡ ಮೌಲ್ಯದ ನಗದು ವ್ಯವಹಾರಗಳ ಹೆಚ್ಚಾಗಿ ಬಳಕೆಯಾಗತೊಡಗಿತು.
ಈ ನೋಟುಗಳು ತಮ್ಮ ಉದ್ದೇಶವನ್ನು ಪೂರೈಸಿವೆ. ಇವು ಈಗ ಸಾಮಾನ್ಯವಾಗಿ ಬಳಕೆಯಲ್ಲಿಲ್ಲ ಎಂದು ಆರ್‌ಬಿಐ ಹೇಳಿದೆ. ನಾಲ್ಕರಿಂದ ಐದು ವರ್ಷಗಳ ಬಳಕೆಯಲ್ಲಿ ಹರಿದ, ಮುದ್ದೆಯಾದ ನೋಟುಗಳನ್ನು ಬದಲಿಸುವುದು ಆರ್‌ಬಿಐಯ “ಕ್ಲೀನ್ ನೋಟ್ ನೀತಿ”ಯಲ್ಲಿ ಒಂದು. ಮೇ ತಿಂಗಳಲ್ಲಿ ಇದರ ಪ್ರಕಟಣೆ ಬಂದಾಗ ಇದ್ದಕ್ಕಿದ್ದಂತೆ ₹2000 ಹೊರಗೆ ಬಂದವು; ಆಭರಣದ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಿತು ಎಂದು ವರದಿಯಾಗಿದೆ.
ಗಡುವಿನ ಒಳಗೆ ಮರಳಿಸದಿದ್ದರೆ ಏನಾಗುತ್ತದೆ?
ಈ ನೋಟುಗಳು ಸೆಪ್ಟೆಂಬರ್ 30ರ ನಂತರವೂ ಕಾನೂನುಬದ್ಧವಾದ ಕರೆನ್ಸಿಯಾಗಿಯೇ ಉಳಿಯಲಿವೆ. ಆದರೆ ಅವುಗಳನ್ನು ವಹಿವಾಟುಗಳಲ್ಲಿ ನೀಡುವಂತಿಲ್ಲ ಅಥವಾ ಸ್ವೀಕರಿಸುವಂತಿಲ್ಲ. ಇದನ್ನು RBIಯೊಂದಿಗೆ ಮಾತ್ರ ವಿನಿಮಯ ಮಾಡಿಕೊಳ್ಳಬಹುದು. ಯಾಕೆ ಗಡುವಿನ ಒಳಗೆ ಮರಳಿಸಿಲ್ಲ ಎಂದು ಅದನ್ನು ಹೊಂದಿರುವವರು ಬ್ಯಾಂಕ್‌ಗೆ ವಿವರಿಸಬೇಕಾಗುತ್ತದೆ.
ಇದನ್ನೂ ಓದಿ: ₹ 2000 Notes Withdrawn: ನೋಟ್ ವಾಪಸ್ ಉತ್ತಮ ನಡೆಯೆ? ಮಾಜಿ ಸಿಇಎ ನೀಡಿದ 6 ಕಾರಣ ಇಲ್ಲಿದೆ