Site icon Vistara News

2nd PUC Result: ಮೂರೂ ವಿಭಾಗಗಳ ಮೊದಲ ರ‍್ಯಾಂಕ್ ಬಾಲಕಿಯರಿಗೆ; ಕಲಾ ವಿಭಾಗದಲ್ಲಿ ಮೂವರು ಪ್ರಥಮ; ಫಲಿತಾಂಶದ ಸಮಗ್ರ ವಿವರ ಇಲ್ಲಿದೆ

2nd puc result 2024 toppers

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಫಲಿತಾಂಶದಲ್ಲಿ (2nd PUC Result) ಮೂರೂ ವಿಭಾಗಗಳಲ್ಲಿ ಬಾಲಕಿಯರೇ ಪ್ರಥಮ ಸ್ಥಾನಗಳನ್ನು ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಮೂವರು ಪ್ರಥಮ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಬೆಂಗಳೂರು ಜಯನಗರದ NMKRVಯ ಮೇಧಾ, ವಿಜಯಪುರದ SS ಪಿಯು ಕಾಲೇಜಿನ ವೇದಾಂತ್ ಹಾಗೂ ಬಳ್ಳಾರಿ ಇಂದು ಪಿಯು ಕಾಲೇಜಿನ ಕವಿತಾ ಬಿ.ವಿ ತಲಾ 596 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡ ಕೆಇಬಿ ಪಿಯು ಕಾಲೇಜಿನ ರವೀನಾ ಸೋಮಪ್ಪ ಲಮಾಣಿ 595 ಅಂಕ ಪಡೆದು ದ್ವಿತೀಯರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ತುಮಕೂರು ಕುವೆಂಪುನಗರದ ವಿದ್ಯಾನಿಧಿ ಕಾಲೇಜಿನ ಗಾನವಿ 597 ಅಂಕಗಳೊಂದಿಗೆ ಪ್ರಥಮ, ಶಿವಮೊಗ್ಗ ಕುಮದ್ವತಿ ಪಿಯು ಕಾಲೇಜಿನ ಪವನ್ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹರ್ಷಿತ್ 596 ಅಂಕಗಳೊಂದಿಗೆ ದ್ವಿತೀಯರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಧಾರವಾಡd ಬೈರಿದೇವರಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾಲಕ್ಷ್ಮಿ 598 ಅಂಕಗಳೊಂದಿಗೆ ಪ್ರಥಮ ಸ್ಥಾನ, ಮೈಸೂರು ಮೂಲದ ಉರ್ವಿಶ್ ಪ್ರಶಾಂತ್ ಹಾಗೂ ಉಡುಪಿ ಮೂಲದ ವೈಭವಿ ಆಚಾರ್ಯ ತಲಾ 597 ಅಂಕಗಳೊಂದಿಗೆ ದ್ವಿತೀಯ ಸ್ಥಾನಗಳಲ್ಲಿದ್ದಾರೆ.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ -1 ಫಲಿತಾಂಶದಲ್ಲಿ (2nd PUC Result) ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. 3.59 ಲಕ್ಷ ವಿದ್ಯಾರ್ಥಿನಿಯರ ಪೈಕಿ 3.05 ಲಕ್ಷ ಮಂದಿ ಪಾಸ್, ಶೇಕಡಾವಾರು 84.87 ಮಂದಿ ಪಾಸ್ ಆಗಿದ್ದಾರೆ. ಕಳೆದ ವರ್ಷ ಇವರ ಪ್ರಮಾಣ ಶೇಕಡಾ 80.25 ಇತ್ತು. 3.21 ಲಕ್ಷ ಬಾಲಕರ ಪೈಕಿ 2.47 ಮಂದಿ ಪಾಸ್ ಆಗಿದ್ದು, ಶೇಕಡಾವಾರು 79.98 ಮಂದಿ ಪಾಸ್ ಆಗಿದ್ದಾರೆ. ಕಳೆದ ವರ್ಷದ ಪ್ರಮಾಣ ಶೇ.69.05.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ಫಲಿತಾಂಶ ಪ್ರಕಟಿಸಿದೆ. ಪರೀಕ್ಷೆ ಬರೆದವರಲ್ಲಿ ಒಟ್ಟಾರೆ ಶೇಕಡ 81.15 ಮಂದಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಹೊಸದಾಗಿ ಪರೀಕ್ಷೆ ಬರೆದವರು ಶೇ.84.59 ಫಲಿತಾಂಶ ದಾಖಲಿಸಿದ್ದಾರೆ. ಮರಳಿ ಕಟ್ಟಿದವರಲ್ಲಿ ಶೇ.41.98 ಮಂದಿ ಹಾಗೂ ಖಾಸಗಿಯಾಗಿ ಪರೀಕ್ಷೆ ಬರೆದವರಲ್ಲಿ ಶೇ.48.16 ಮಂದಿ ಉತ್ತೀರ್ಣರಾಗಿದ್ದಾರೆ. ರಾಜ್ಯಾದ್ಯಂತ 2024ರ ದ್ವಿತೀಯ ಪಿಯುಸಿಗೆ 6,98,378 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,30,644 ಬಾಲಕರು, 3,67,980 ಬಾಲಕಿಯರು ಪರೀಕ್ಷೆಯನ್ನು ಬರೆದಿದ್ದಾರೆ. ಇವರಲ್ಲಿ 6,81,079 ಮಂದಿ ಉತ್ತೀರ್ಣರಾಗಿದ್ದಾರೆ.

ಕಲಾ ವಿಭಾಗದಲ್ಲಿ 1,87,891 ಮಂದಿ ಪರೀಕ್ಷೆ ಬರೆದು 1,28,448 ಮಂದಿ ಉತ್ತೀರ್ಣರಾಗಿ ಶೇ.68.96, ವಾಣಿಜ್ಯ ವಿಭಾಗದಲ್ಲಿ 2,15,357 ವಿದ್ಯಾರ್ಥಿಗಳು ಪರೀಕ್ಷೆ ಬರೆದು 1,74,315 ಮಂದಿ ಉತ್ತೀರ್ಣರಾಗಿ ಶೇ.80.94 ಹಾಗೂ ವಿಜ್ಞಾನ ವಿಭಾಗದಲ್ಲಿ 2,77,831 ಮಂದಿ ಪರೀಕ್ಷೆ ಬರೆದು 2,49,927 ಉತ್ತೀರ್ಣರಾಗಿ ಶೇ.89.96 ಫಲಿತಾಂಶ ದಾಖಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಎಂದಿನಂತೆ ಮೊದಲ ಸ್ಥಾನದಲ್ಲಿದ್ದು, ಶೇ.97.37 ಫಲಿತಾಂಶ ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಉಡುಪಿ ಇದ್ದು, ಶೇ.96.80 ಫಲಿತಾಂಶ ಗಳಿಸಿದೆ. ಮೂರನೇ ಹಾಗೂ ನಾಲ್ಕನೇ ಸ್ಥಾನಗಳಲ್ಲಿ ವಿಜಯಪುರ (ಶೇ.94.89) ಹಾಗೂ ಉತ್ತರ ಕನ್ನಡ (ಶೇ.92.51) ಇವೆ. ಕೊನೆಯ ಸ್ಥಾನದಲ್ಲಿ ಗದಗ (ಶೇ.72.86) ಪಡೆದಿದೆ. ಬೆಂಗಳೂರು ಉತ್ತರ ಶೇ.88.67 ಹಾಗೂ ಬೆಂಗಳೂರು ದಕ್ಷಿಣ ಶೇ.89.57 ಫಲಿತಾಂಶ ದಾಖಲಿಸಿವೆ.

ಗಣಿತದಲ್ಲಿ 6960 ಮಂದಿ, ಜೀವಶಾಸ್ತ್ರದಲ್ಲಿ 5925 ಮಂದಿ, 2570 ಮಂದಿ ಕನ್ನಡದಲ್ಲಿ , 1499 ಮಂದಿ ಸಂಸ್ಕೃತದಲ್ಲಿ , ಅರ್ಥಶಾಸ್ತ್ರದಲ್ಲಿ 1403 ಮಂದಿ, ಗಣಕ ವಿಜ್ಞಾನದಲ್ಲಿ 2661 ಮಂದಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.

ರಾಜ್ಯಾದ್ಯಂತ ಪಿಯುಸಿ ಪರೀಕ್ಷೆಯು 1,124 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. 80+20 ಮಾದರಿಯಂತೆ (80 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಅಂಕಗಳನ್ನು ನೀಡಲಾಗಿತ್ತು. ಮಾ.25ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಗಿತ್ತು. ಮೌಲ್ಯಮಾಪನ ಕಾರ್ಯ ಮುಗಿದ ಬಳಿಕ ಅಂಕಗಳನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ.

ನಿಮ್ಮ ಫಲಿತಾಂಶವನ್ನು ನೋಡುವುದು ಹೇಗೆ?

ದ್ವಿತೀಯ PUC ಫಲಿತಾಂಶಗಳು ಅಧಿಕೃತ ವೆಬ್ ಸೈಟ್ https://karresults.nic.in ಇದರಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ವಿಷಯ ಸಂಯೋಜನೆ/ಸ್ಟ್ರೀಮ್ ಅನ್ನು ಬಳಸಿಕೊಂಡು ಅದನ್ನು ಪರಿಶೀಲಿಸಬಹುದು. ವಿದ್ಯಾರ್ಥಿಗಳು ಈ ಹಂತಗಳನ್ನು ಅನುಸರಿಸುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು:

karresults.nic.in ನಲ್ಲಿ ಕರ್ನಾಟಕ ಫಲಿತಾಂಶ ಪೋರ್ಟಲ್‌ಗೆ ಭೇಟಿ ನೀಡಿ.
ಮುಖಪುಟದಲ್ಲಿ ನೀಡಲಾದ ಪಿಯುಸಿ 2 ಪರೀಕ್ಷೆಯ ಫಲಿತಾಂಶದ ಲಿಂಕ್ ಅನ್ನು ತೆರೆಯಿರಿ.
ಲಾಗಿನ್ ಪುಟದಲ್ಲಿ, ನಿಮ್ಮ KSEAB ನೋಂದಣಿ ಸಂಖ್ಯೆಯನ್ನು ಒದಗಿಸಿ; ವಿಷಯ ಸಂಯೋಜನೆ ಅಥವಾ ಸ್ಟ್ರೀಮ್ ಅನ್ನು ಆಯ್ಕೆ ಮಾಡಿ (ವಿಜ್ಞಾನ/ಕಲೆ/ವಾಣಿಜ್ಯ)
ನಿಮ್ಮ 2ನೇ ಪಿಯುಸಿ ಫಲಿತಾಂಶವನ್ನು ಮುಂದಿನ ಪುಟದಲ್ಲಿ ಪರಿಶೀಲಿಸಿ.
ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಕಾಲೇಜುಗಳಲ್ಲಿ ಪ್ರಕಟವಾಗಲಿದೆ.

ಮರು ಮೌಲ್ಯಮಾಪನಕ್ಕೆ ಅವಕಾಶ

ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿಗಾಗಿ ಅರ್ಜಿ‌ ಸಲ್ಲಿಸಲು ಏಪ್ರಿಲ್ 10ರಿಂದ ಏಪ್ರಿಲ್ 16ರವರೆಗೆ ಅವಕಾಶ
ಉತ್ತರ ಪತ್ರಿಕೆ ಸ್ಕ್ಯಾನ್ಡ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲು ಏಪ್ರಿಲ್ 14ರಿಂದ ಏಪ್ರಿಲ್ 19ರವರೆಗೆ ಅವಕಾಶ
ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಏಣಿಕೆಗಾಗಿ ಅರ್ಜಿ ಸಲ್ಲಿಸಲು ಏಪ್ರಿಲ್ 14ರಿಂದ ಏಪ್ರಿಲ್ 20ರವರೆಗೆ ಅವಕಾಶ
ಸ್ಕ್ಯಾನ್ಡ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಶುಲ್ಕ
ಮರುಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1670 ರೂ. ಶುಲ್ಕ

ಇದನ್ನೂ ಓದಿ: 2nd PUC Result: ದ್ವಿತೀಯ ಪಿಯುಸಿಯಲ್ಲಿ ಶೇ.84.59 ಮಂದಿ ಪಾಸ್;‌ ದ.ಕ, ಉಡುಪಿ ಮೊದಲೆರಡು ಸ್ಥಾನ; ಫಲಿತಾಂಶ ಇಲ್ಲಿದೆ ನೋಡಿ

Exit mobile version