ನವದೆಹಲಿ: ಮೂರು ಬಾರಿಯ ಕಾಂಗ್ರೆಸ್ (Congress) ಸಂಸದ ರವ್ನೀತ್ ಸಿಂಗ್ ಬಿಟ್ಟು (Ravneet Singh Bittu) ಮಂಗಳವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಅವರು ಕೈ ಪಕ್ಷ ತೊರೆದು ಕೇಸರಿ ಪಾಳಯ ಸೇರಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಮತ್ತೆ ಅಧಿಕಾರಕ್ಕೆ ತರಲು ಜನ ಮನಸ್ಸು ಮಾಡಿದ್ದಾರೆ. ಅದಕ್ಕೆ ಬೆಂಬಲ ನೀಡಲು ಬಿಜೆಪಿ (BJP) ಸೇರಿದ್ದೇನೆ ಎಂದು ಅವರು ಹೇಳಿದ್ದಾರೆ. ʼಬಿಟ್ಟುʼ ಅವರು ಪಂಜಾಬ್ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಮೊಮ್ಮಗ. ಬಿಯಾಂತ್ ಸಿಂಗ್ ಅಧಿಕಾರವಧಿಯಲ್ಲೇ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಗೀಡಾಗಿದ್ದರು.
ರವ್ನೀತ್ ಬಿಟ್ಟು ಪ್ರಸ್ತುತ ಲೋಕಸಭೆಯಲ್ಲಿ ಲುಧಿಯಾನವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಜೆಪಿಗೆ ಸೇರಿದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರರನ್ನು ಶ್ಲಾಘಿಸಿದ್ದಾರೆ. ಮೋದಿಯವರು ಪಂಜಾಬ್ ಬಗ್ಗೆ ಸಾಕಷ್ಟು ಪ್ರೀತಿ ಹೊಂದಿದ್ದಾರೆ. ರಾಜ್ಯವನ್ನು ಅಭಿವೃದ್ಧಿ ಮಾಡಲು ಬಯಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಮತದಾರರ ಬಯಕೆಯಾಗಿದೆ. ಪಂಜಾಬ್ ಇತರ ರಾಜ್ಯಗಳಿಗಿಂತ ಹಿಂದುಳಿದಿದೆ. ಈ ಅಂತರವನ್ನು ತುಂಬುವ ಅವಶ್ಯಕತೆಯಿದೆ ಎಂಬುದಾಗಿ ಅವರು ಪ್ರತಿಪಾದಿಸಿದರು.
ಇದನ್ನೂ ಓದಿ : Narendra Modi : ಸಂದೇಶ್ಖಾಲಿ ಸಂತ್ರಸ್ತೆಯನ್ನು ‘ಶಕ್ತಿ ಸ್ವರೂಪ’ ಎಂದು ಕರೆದ ಪ್ರಧಾನಿ ಮೋದಿ
“ನಾವು ರೈತರು, ಕಾರ್ಮಿಕರು ಮತ್ತು ಉದ್ಯಮದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇವೆ” ಎಂದು ಅವರು ಹೇಳಿದರು. ರಾಜ್ಯದಲ್ಲಿ ಭಯೋತ್ಪಾದನೆಯ ಕರಾಳ ದಿನಗಳನ್ನು ನೆನಪಿಸಿಕೊಂಡ ಅವರು, ಶಾಂತಿಗಾಗಿ ಕೆಲಸ ಮಾಡುವಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಪಾತ್ರವನ್ನು ಶ್ಲಾಘಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ರವ್ನೀತ್ ಸೇರ್ಪಡೆ ಕುರಿತು ಮಾತನಾಡಿ, ಬಿಟ್ಟು ಅವರು ಪಕ್ಷಕ್ಕೆ ಸೇರುವುದರಿಂದ ರಾಜ್ಯದಲ್ಲಿ ಬಿಜೆಪಿ ಬಲಗೊಳ್ಳಲಿದೆ ಎಂದು ಹೇಳಿದರು.
ತನ್ನ ಹಳೆಯ ಮಿತ್ರಪಕ್ಷಗಳಲ್ಲಿ ಒಂದಾದ ಅಕಾಲಿ ದಳದೊಂದಿಗಿನ ಸಂಬಂಧವನ್ನು ಮುರಿದುಕೊಂಡ ನಂತರ ಇತ್ತೀಚಿನ ದಶಕಗಳಲ್ಲಿ ಮೊದಲ ಬಾರಿಗೆ ಪಂಜಾಬ್ನಲ್ಲಿ ಬಿಜೆಪಿ ಸ್ವಂತವಾಗಿ ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿದೆ. ತಮ್ಮ ಹಳೆಯ ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಉಭಯ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ, ಅದು ಫಲಪ್ರದವಾಗಿಲ್ಲ.