ಲಂಡನ್: ಎಂತಹದ್ದೇ ಕೆಟ್ಟ ಬೌಲರ್ ಆದರೂ, ಎಂತಹ ಕೆಟ್ಟ ಎಸೆತಗಳನ್ನೇ ಎಸೆದರೂ, ಒಬ್ಬ ಬೌಲರ್ ಒಂದು ಓವರ್‌ನಲ್ಲಿ ಎಷ್ಟು ರನ್ ಬಿಟ್ಟುಕೊಡಲು ಸಾಧ್ಯ? ಆರಕ್ಕೆ ಆರು ಎಸೆತಗಳಿಗೆ ಸಿಕ್ಸರ್ ಬಾರಿಸಿದರೂ ಗರಿಷ್ಠ 36 ರನ್ ಬಿಟ್ಟುಕೊಡಬಹುದು. ಭಾರತದ ಯುವರಾಜ್ ಸಿಂಗ್ (Yuvraj Singh) ಸೇರಿ ಜಗತ್ತಿನಲ್ಲಿ ಕೆಲವೇ ಕೆಲವು ಬ್ಯಾಟ್ಸ್‌ಮನ್‌ಗಳು ಮಾತ್ರ ಒಂದೇ ಓವರ್‌ನ ಆರಕ್ಕೆ ಆರೂ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ್ದಾರೆ. ಆದರೆ, ಇಂಗ್ಲೆಂಡ್‌ನ ವೇಗದ ಬೌಲರ್ ಒಲೀ ರಾಬಿನ್‌ಸನ್ (Ollie Robinson) ಅವರು ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಅನಗತ್ಯ ದಾಖಲೆ ಬರೆದಿದ್ದಾರೆ.
ಹೌದು, ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಒಲೀ ರಾಬಿನ್‌ಸನ್ ಅವರು ಒಂದೇ ಓವರ್‌ಗೆ 43 ರನ್ ಕೊಟ್ಟಿದ್ದಾರೆ. ಸಸೆಕ್ಸ್ ಪರವಾಗಿ ಬೌಲಿಂಗ್ ಮಾಡುತ್ತಿರುವಾಗ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳು (3 ನೋಬಾಲ್‌ಗಳಿಗೆ ಸಿಕ್ಸರ್), ಮೂರು ಬೌಂಡರಿ ಹಾಗೂ ಒಂದು ಸಿಂಗಲ್ ರನ್ ಬಿಟ್ಟುಕೊಂಡಿದ್ದಾರೆ. ಲೀಸೆಸ್ಟರ್‌ಶೈರ್ ತಂಡದ ಲೂಯಿಸ್ ಕಿಂಬರ್ ಅವರು ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ಬಾರಿಸುವ ಮೂಲಕ ವಿಶಿಷ್ಟ ದಾಖಲೆ ಬರೆದಿದ್ದಾರೆ.
LOUIS KIMBER HAS TAKEN 43 OFF AN OVER pic.twitter.com/kQ4cLUhKN9
— Vitality County Championship (@CountyChamp) June 26, 2024
ಒಲೀ ರಾಬಿನ್‌ಸನ್ ಎಸೆದ ಮೊದಲ ಎಸೆತವನ್ನು ಲೂಯಿಸ್ ಕಿಂಬರ್ ಸಿಕ್ಸರ್‌ಗೆ ಅಟ್ಟಿದರು. ಎರಡನೇ ಎಸೆತವು ನೋ ಬಾಲ್ ಆದರೆ, ಅದಕ್ಕೂ ಸಿಕ್ಸರ್ ಬಾರಿಸಿದರು. ನಂತರ ಬೌಂಡರಿ, ಸಿಕ್ಸರ್, ಬೌಂಡರಿ, ಸಿಕ್ಸರ್ (ನೋ ಬಾಲ್), ಬೌಂಡರಿ, ಸಿಕ್ಸರ್ (ನೋ ಬಾಲ್) ಹಾಗೂ ಕೊನೆಯ ಎಸೆತದಲ್ಲಿ ಒಂದು ರನ್ ಬಾರಿಸಿದರು. 30 ವರ್ಷದ ರಾಬಿನ್‌ಸನ್ ಅವರು ಇಂಗ್ಲೆಂಡ್ ಪರವಾಗಿ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಸಾಕಷ್ಟು ಅನುಭವ ಇದ್ದರೂ ಒಂದೇ ಒಂದು ಡಾಟ್ ಬಾಲ್ ಎಸೆಯಲು ಆಗಲಿಲ್ಲ.
2ನೇ ಅತಿ ದುಬಾರಿ ಓವರ್
ಒಲೀ ರಾಬಿನ್‌ಸನ್ ಅವರು ಒಂದೇ ಓವರ್‌ನಲ್ಲಿ 43 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಪ್ರಥಮ ದರ್ಜೆ ಇತಿಹಾಸದಲ್ಲಿಯೇ ಎರಡನೇ ಅತಿ ದುಬಾರಿ ಓವರ್ ಎಸೆದ ಬೌಲರ್ ಎನಿಸಿದರು. 1990ರಲ್ಲಿ ನ್ಯೂಜಿಲ್ಯಾಂಡ್‌ನ ಬರ್ಟ್ ವ್ಯಾನ್ಸ್ ಅವರು ಶೆಲ್ ಟ್ರೋಫಿ ಪಂದ್ಯದಲ್ಲಿ 77 ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಇತಿಹಾಸವಾಗಿದೆ. 1998ರಲ್ಲಿ ಇಂಗ್ಲೆಂಡ್‌ನ ಅಲೆಕ್ಸ್ ಟುಡೋರ್ ಅವರು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 38 ರನ್ ಬಿಟ್ಟುಕೊಟ್ಟಿದ್ದು ಇದುವರೆಗಿನ ಎರಡನೇ ದಾಖಲೆ ಆಗಿತ್ತು. ಈಗ ಆ ಅನಗತ್ಯ ದಾಖಲೆಯು ಒಲೀ ರಾಬಿನ್‌ಸನ್ ಅವರದ್ದಾಗಿದೆ.
ಇದನ್ನೂ ಓದಿ: WI vs AFG: ಒಂದೇ ಓವರ್‌ನಲ್ಲಿ 36 ರನ್ ಗಳಿಸಿ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ನಿಕೋಲಸ್ ಪೂರನ್