ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲಾಗಿರುವ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಸಂಬಂಧಿಸಿದಂತೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿ ಕುರಿತು ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಘೋಷಣೆ ಮಾಡದಿರುವುದರಿಂದ ಆಕ್ರೋಶಗೊಂಡಿರುವ ರಾಜ್ಯ ಸರ್ಕಾರಿ ನೌಕರರು ಫೆಬ್ರವರಿ 23ರಿಂದ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಮೊದಲ ಹಂತದಲ್ಲಿ ಕರ್ತವ್ಯಕ್ಕೆ ಗೈರುಹಾಜರಾಗುವುದು, ಇದಕ್ಕೆ ಸರ್ಕಾರ ಮಣಿಯದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನೌಕರರು ಉದ್ದೇಶಿಸಿದ್ದಾರೆ. ಮುಷ್ಕರ ಶುರುವಾದರೆ ಚುನಾವಣೆಯ ಹೊಸ್ತಿಲಲ್ಲಿ ಸರ್ಕಾರ ಮತ್ತೊಂದು ಇಕ್ಕಟ್ಟಿನಲ್ಲಿ ಸಿಲುಕುವ ಸಾಧ್ಯತೆಗಳಿವೆ. ಸರ್ಕಾರಿ ಯಂತ್ರ ಸ್ತಬ್ಧವಾದರೆ ಇಡೀ ರಾಜ್ಯಕ್ಕೆ ಇದರ ಪರಿಣಾಮ ತಟ್ಟಬಹುದು. ಇದನ್ನು ನಿವಾರಿಸಿಕೊಳ್ಳಲು ಸರ್ಕಾರ ನೌಕರರ ಅಹವಾಲುಗಳತ್ತ ಗಮನ ಕೊಡಬೇಕಿದೆ.
ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚಿಸಿತ್ತು. ಈ ಕುರಿತು ಶಿಫಾರಸುಗಳನ್ನು ಮಾಡುವ ಮುನ್ನ ಸರ್ಕಾರಿ ನೌಕರರ ಬೇಡಿಕೆಗಳ ಬಗ್ಗೆ ಅರಿಯುವುದಕ್ಕಾಗಿ, ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿ ವೇತನ ಆಯೋಗ ಪ್ರಶ್ನಾವಳಿಗಳನ್ನು ಬಿಡುಗಡೆಗೊಳಿಸಿ ಸರ್ಕಾರಿ ನೌಕರರ ಸಂಘದಿಂದ ಸಲಹೆಗಳನ್ನು ಕೇಳಿತ್ತು. ಅದರಂತೆ ಸಂಘವು 65 ಪುಟಗಳ ವರದಿಯನ್ನು ತಯಾರಿಸಿ ಕೊಟ್ಟಿದೆ. ಆದರೆ ಈ ಬಗ್ಗೆ ಯಾವುದೇ ಘೋಷಣೆಗಳನ್ನು ಸರ್ಕಾರವು ಆಯವ್ಯಯದಲ್ಲಿ ಪ್ರಸ್ತಾಪಿಸದೇ ಇರುವುದರಿಂದ ನೌಕರರಲ್ಲಿ ನಿರಾಶೆ ಮೂಡಿರುವುದು ಸಹಜ.
ಹಾಗಾದರೆ ನೌಕರರ ಬೇಡಿಕೆಗಳೇನು? ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವಿದ್ಯಾರ್ಹತೆ, ಜವಾಬ್ದಾರಿಯ ಗುಣಮಟ್ಟ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ, ಜೊತೆಗೆ ನೆರೆ ರಾಜ್ಯ ಮತ್ತು ಕೇಂದ್ರ ವೇತನ ಮತ್ತು ಭತ್ಯೆಗಳ ಹೋಲಿಕೆ ಮಾಡಿ ಅದಕ್ಕನುಗುಣವಾಗಿ ವೇತನ ನಿಗದಿ ಮಾಡಬೇಕು. ಕನಿಷ್ಠ 40% ಫಿಟ್‌ಮೆಂಟ್‌ನೊಂದಿಗೆ ಹಾಗೂ ಜೀವನ ನಿರ್ವಹಣೆಯನ್ನಾಧರಿಸಿ ವೇತನ ಏರಿಕೆ ಮಾಡಬೇಕು. ವೇತನ ಪರಿಷ್ಕರಣೆಗೆ ಅನುಕೂಲವಾಗುವ ಕೇಂದ್ರ ಮತ್ತು ಕೇರಳ ರಾಜ್ಯ ನೌಕರರ ವೇತನ-ಭತ್ಯೆಗಳನ್ನು ಪರಿಗಣಿಸುವುದು. ಕಚೇರಿ ವೇಳೆಯನ್ನು ಹೆಚ್ಚಿಸಿ, ವಾರದ ಕರ್ತವ್ಯದ ದಿನಗಳನ್ನು ಕಡಿಮೆ ಮಾಡಬೇಕು. ಒಬ್ಬ ಸರ್ಕಾರಿ ನೌಕರನಿಗೆ ಸೇವಾವಧಿಯಲ್ಲಿ ಕನಿಷ್ಠ 3-4 ಮುಂಬಡ್ತಿ ಅವಕಾಶ ಲಭ್ಯವಾಗಬೇಕು. ವಿಶೇಷ ಭತ್ಯೆ ದ್ವಿಗುಣಗೊಳಿಸಬೇಕು, ತುಟ್ಟಿಭತ್ಯೆಯನ್ನು ಕೇಂದ್ರ ನೌಕರರಿಗೆ ಸರಿಸಮಾನವಾಗಿ ನೀಡಬೇಕು. ವಾರ್ಷಿಕ ವೇತನ ಬಡ್ತಿ ದರ 3.04%ರಷ್ಟು ಏರಿಸಬೇಕು. ಇನ್ನು ಪಿಂಚಣಿಗೆ ಸಂಬಂಧಿಸಿ, ಕೆಲವು ರಾಜ್ಯಗಳು ಈಗಾಗಲೇ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿರುವ ಮಾದರಿಯಂತೆ ರಾಜ್ಯದಲ್ಲೂ ಅದನ್ನು ರದ್ದುಗೊಳಿಸಿ 2006ರಿಂದಲೇ ಅನ್ವಯವಾಗುವಂತೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು- ಎಂಬಿತ್ಯಾದಿ ಬೇಡಿಕೆಗಳು ನೌಕರರ ವತಿಯಿಂದ ಬಂದಿವೆ.
ಇದನ್ನೂ ಓದಿ: Karnataka Budget 2023 : ಬಜೆಟ್‌ನಲ್ಲಿ ಪ್ರಸ್ತಾಪವಾಗದ 7ನೇ ವೇತನ ಆಯೋಗ; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಈ ಎಲ್ಲ ಬೇಡಿಕೆಗಳನ್ನು ಪರಿಗಣಿಸಿ ಇವುಗಳಲ್ಲಿ ನ್ಯಾಯಯುತವಾದುದು ಯಾವುದು ಎಂಬುದನ್ನು ಪರಿಗಣಿಸಿ ನೌಕರರಿಗೆ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಕೈಯಲ್ಲಿದೆ. ಸಕಾಲಿಕ ವೇತನ ಪರಿಷ್ಕರಣೆ ಈ ಹಣದುಬ್ಬರದ ಕಾಲದಲ್ಲಿ ಅಗತ್ಯವಾಗಿದೆ. ಮಾರುಕಟ್ಟೆಯಲ್ಲಿ ಎಲ್ಲದರ ದರಗಳೂ ಏರುತ್ತಿರುವಾಗ, ತೆರಿಗೆ ಹಾಗೂ ಸಾಲದ ಬಡ್ಡಿದರಗಳೂ ಹೆಚ್ಚುತ್ತಿರುವಾಗ, ಜೀವನವೆಚ್ಚವೂ ಹೆಚ್ಚುತ್ತದೆ ಹಾಗೂ ಅದಕ್ಕನುಗುಣವಾಗಿ ವೇತನವೂ ಹೆಚ್ಚದೇ ಗತ್ಯಂತರವಿಲ್ಲ. ಆದರೆ ರಾಜ್ಯದಲ್ಲಿ ಸುಮಾರು 5.3 ಲಕ್ಷದಷ್ಟು ಸರ್ಕಾರಿ ನೌಕರರಿದ್ದಾರೆ. ಇಷ್ಟು ಮಂದಿಗೆ ವೇತನ ಮತ್ತಿತರ ಭತ್ಯೆಗಳ ಹೆಚ್ಚಳದಿಂದ ಖಜಾನೆಗೆ ಎಷ್ಟು ಹೊರೆಯಾಗಲಿದೆ ಎಂಬುದನ್ನೂ ಪರಿಗಣಿಸಬೇಕು. ಆರ್ಥಿಕ ಹೊರೆಯನ್ನೂ ಸಮತೋಲನ ಮಾಡಿಕೊಂಡು ನೌಕರರ ಬೇಡಿಕೆ ಈಡೇರಿಸುವತ್ತ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು, ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಿಸುವುದು, ನೌಕರರಿಗೆ ತರಬೇತಿಯ ಮೂಲಕ ದಕ್ಷತೆ ಮತ್ತು ನೈಪುಣ್ಯ ಹೆಚ್ಚಿಸುವತ್ತ ಗಮನ ಹರಿಸಬೇಕು. ನೌಕರರು ಮುಷ್ಕರದ ಹಾದಿ ಹಿಡಿದು ಆಡಳಿತ ಯಂತ್ರ ಸ್ತಬ್ಧವಾಗದಂತೆ ಸರ್ಕಾರ ಈಗಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.