2014ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ 9 ವರ್ಷ ಪೂರೈಸಿದೆ. ಮೋದಿ ಆಡಳಿತದ ಈ 9 ವರ್ಷ ದೇಶದ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಘಟ್ಟ ಎನ್ನಬಹುದು. ಜಮ್ಮು ಕಾಶ್ಮೀರದ ಅಭಿವೃದ್ಧಿ ಸಾಧ್ಯವಾಗದಂತೆ ಮಾಡಿದ್ದ ಅಲ್ಲಿನ 370ನೇ ವಿಧಿ ರದ್ದು, ಎಂದೆಂದಿಗೂ ಬಗೆಹರಿಯಲಾರದು ಎಂದು ತಿಳಿಯಲಾದ ಅಯೋಧ್ಯೆ ಬಿಕ್ಕಟ್ಟು ಮುಕ್ತಾಯಗೊಂಡು ಅಲ್ಲಿ ರಾಮ ಮಂದಿರ ನಿರ್ಮಾಣ, ಎಲ್ಲರಿಗೂ ಕೊರೊನಾ ಲಸಿಕೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ಆವಾಸ್ ಯೋಜನಾ, ಬ್ರಿಟನನ್ನು ಹಿಂದಿಕ್ಕಿ ವಿಶ್ವದಲ್ಲಿ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದು, ಎಲ್ಲ ಬಡವರ ಮನೆಗಳಿಗೂ ಉಚಿತ ಎಲ್‌ಪಿಜಿ ಸಂಪರ್ಕ, ವಂದೇ ಭಾರತ್‌ನಂಥ ರೈಲುಗಳ ಕ್ರಾಂತಿ, ದಿಟ್ಟ ಸರ್ಜಿಕಲ್ ಸ್ಟ್ರೈಕ್‌ಗಳು ಹಾಗೂ ಯೋಧರ ಎದುರುತ್ತರಗಳ ಮೂಲಕ ಶತ್ರು ರಾಷ್ಟ್ರಗಳಲ್ಲಿ ಭಯ ಹುಟ್ಟಿಸಿದ್ದು….ಹೀಗೆ ಮೋದಿ ಸರ್ಕಾರದ ಸಾಧನೆಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು. ದೇಶಾದ್ಯಂತ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ನಿರ್ಮಾಣ, ಸುರಂಗ ನಿರ್ಮಾಣದಂಥ ಮೂಲಸೌಕರ್ಯಗಳ ಕ್ರಾಂತಿಯೂ ಪ್ರಶಂಸಾರ್ಹ.
ಯಾವುದೇ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಸಾಮಾನ್ಯ. ಒಂದೇ ಪಕ್ಷ ಎರಡು ಅವಧಿಗೆ ಆಡಳಿತ ನಡೆಸಿದಾಗ ಆಡಳಿತ ವಿರೋಧಿ ಅಲೆಯೊಂದು ಮೂಡುವುದನ್ನೂ ನಾವು ಕಾಣುತ್ತೇವೆ. ಆದರೆ ಕಳೆದ 9 ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲದಿರುವುದು ಗಮನಾರ್ಹ. ಆ ನಿಟ್ಟಿನಲ್ಲಿ ಮೋದಿಯವರ ʼನ ಖಾವೂಂಗಾ, ನ ಖಾನೇ ದೂಂಗಾʼ ಮಾತು ಸಾಕಾರವಾಗಿದೆ. ಹಿಂದೆಂದೋ ರಾಜೀವ್ ಗಾಂಧಿಯವರು ಹೇಳಿದ, ʼಒಂದು ರೂಪಾಯಿ ಬಿಡುಗಡೆಯಾದರೆ ಅದು ಫಲಾನುಭವಿಗೆ ತಲುಪುವಾಗ ಹದಿನೈದು ಪೈಸೆಯಾಗಿರುತ್ತದೆʼ ಎಂಬ ಮಾತು ಸುಳ್ಳಾಗಿ, ಅಷ್ಟೂ ಹಣವೂ ಫಲಾನುಭವಿಯನ್ನು ತಲುಪುವಂತೆ ಮಾಡುವ ಜನಧನ್, ನರೇಗಾ, ಮತ್ತಿತರ ನೇರ ಪಾವತಿ ಕಾರ್ಯಕ್ರಮಗಳು ಸಫಲವಾಗಿ ಕಾರ್ಯ ನಿರ್ವಹಿಸುತ್ತಿವೆ. ಜನಹಿತ ಯೋಜನೆಗಳು ಬಡವರನ್ನು ಪೂರ್ತಿಯಾಗಿ ತಲುಪುವುದೇ ಒಂದು ಸರ್ಕಾರದ ಆತ್ಯಂತಿಕ ಯಶಸ್ಸು.
ಮೋದಿಯವರ ಸರ್ಕಾರ ತಂದ ಇನ್ನೊಂದು ಮುಖ್ಯ ಬದಲಾವಣೆ ಎಂದರೆ ಪ್ರಮುಖ ಅಂಗಗಳಲ್ಲಿ ʼಭಾರತೀಯತೆʼಯನ್ನು ಸ್ಥಿರಗೊಳಿಸಲು ನಡೆಸಿದ ಪ್ರಯತ್ನ. ಅದು ರಾಮಮಂದಿರ ನಿರ್ಮಾಣವಿರಬಹುದು, ನೂತನ ಸಂಸತ್ ಭವನದ ನಿರ್ಮಾಣವಿರಬಹುದು, ಅಥವಾ ತಮ್ಮ ಮೊದಲ ವರ್ಷದಿಂದಲೇ ಆರಂಭಿಸಿದ ಗಾಂಧಿ ಪ್ರೇರಣೆಯ ʼಸ್ವಚ್ಛ ಭಾರತ್ʼ ಕಾರ್ಯಕ್ರಮವೇ ಇರಬಹುದು. ಬಜೆಟ್ ಮಂಡನೆಗೆ ಸೂಟ್‌ಕೇಸ್ ಬದಲಾಗಿ ʼವಹಿʼ ತಂದಂಥ ಸಣ್ಣ ಬದಲಾವಣೆಯೇ ಇರಬಹುದು. ಇವೆಲ್ಲವೂ ಭಾರತದ ಪ್ರಜಾತಂತ್ರಕ್ಕೆ ಹೊಸದೊಂದು ಹೊಳಪನ್ನು ನೀಡಿವೆ. ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾದಂಥ ಕಾರ್ಯಕ್ರಮಗಳು ಉದ್ಯೋಗ ಸೃಷ್ಟಿಯಲ್ಲಿ, ಉದ್ಯಮಕೌಶಲ ಬೆಳವಣಿಗೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನೇ ಮಾಡಿವೆ. ಪರಿಣಾಮಕಾರಿ ವಿದೇಶಾಂಗ ನೀತಿಗಾಗಿ ಬೃಹತ್ ದೇಶಗಳು, ವಿಶ್ವಸಂಸ್ಥೆಯ ಶ್ಲಾಘನೆಯೂ ದೊರೆತಿದೆ.
ಇದೇ ವೇಳೆ, ದಿಢೀರ್ ನೋಟ್ ಬ್ಯಾನ್ ಮತ್ತು ದಿನಕ್ಕೊಮ್ಮೆ ನೀತಿ ವ್ಯತ್ಯಾಸದಿಂದ ಆದ ಕಷ್ಟನಷ್ಟ, ಜಿಎಸ್‌ಟಿ ಜಾರಿಯಲ್ಲಿನ ಲೋಪದೋಷ, ಕೋವಿಡ್ ವೇಳೆ ಮಾಡಿದ ಲಾಕ್‌ಡೌನ್ ಎಡವಟ್ಟುಗಳು ಇತ್ಯಾದಿ ಲೋಪಗಳ ಪಟ್ಟಿಯನ್ನೂ ಮಾಡಬಹುದು. ಹಾಗೆಯೇ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ ಎಂಬ ಆಪಾದನೆಯೂ ಇದೆ. ಹಣದುಬ್ಬರದಿಂದ ಜನತೆ ಪಾಡು ಪಡುತ್ತಿರುವುದೂ ನಿಜ. ಎಲ್‌ಪಿಜಿ ಸಿಲಿಂಡರ್ ಬೆಲೆ 1000 ರೂ. ದಾಟಿದೆ. ಪೆಟ್ರೋಲ್, ಖಾದ್ಯತೈಲ, ದಿನಸಿ ಬೆಲೆಯೂ ಹೆಚ್ಚಾಗಿದ್ದು, ಇದು ಜನಸಾಮಾನ್ಯರನ್ನು ಬಳಲಿಸಿದೆ. ವಿಪಕ್ಷೀಯರನ್ನು ಹಣಿಯಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪವೂ ಇದೆ.
ಒಂದು ಸರ್ಕಾರವೆಂದ ಮೇಲೆ ಸಾಫಲ್ಯಗಳಿದ್ದಂತೆ ವೈಫಲ್ಯಗಳೂ ಇರುವುದು ಸಹಜ. ಎಲ್ಲ ಪ್ರಜೆಗಳಿಗೂ ಸುಖಜೀವನ ಕಲ್ಪಿಸುವ ಹಾದಿ ಸದಾ ಸುದೀರ್ಘವಾಗಿಯೇ ಇರುತ್ತದೆ. ಹಣದುಬ್ಬರಕ್ಕೆ ತಡೆಹಾಕಬೇಕು. ಆರ್ಥಿಕತೆಯನ್ನು ಹಳಿತಪ್ಪದಂತೆ ಕಾಯಬೇಕು. ಯುವ ಜನತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಸವಾಲು ಮೋದಿ ಸರ್ಕಾರದ ಮುಂದಿದೆ. ಹಾಗೆಯೇ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮೋದಿಯವರ ಘೋಷಣೆಯೂ ನಿಜಾರ್ಥದಲ್ಲಿ ಸಾಕಾರಗೊಳ್ಳಬೇಕಿದೆ.