ಇಪ್ಪತ್ತು ವರ್ಷಗಳ ಕಾಲ ಅಮೆರಿಕ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ನೆರಳಿನಲ್ಲಿದ್ದ ಅಫಘಾನಿಸ್ತಾನ 2021ರ ಆಗಸ್ಟ್‌ನಲ್ಲಿ ಮತ್ತೊಮ್ಮೆ ತಾಲಿಬಾನ್ ತೆಕ್ಕೆಗೆ ಬಂತು. ಒಂದೂವರ್ಷ ಕಳೆಯುತ್ತಿದ್ದಂತೆ ತಾಲಿಬಾನ್ ಆಡಳಿತದ ಕ್ರೌರ್ಯಗಳು ಹೊರ ಜಗತ್ತಿಗೆ ನಿಧಾನವಾಗಿ ಗೊತ್ತಾಗುತ್ತಿವೆ. ನಿರೀಕ್ಷೆಯಂತೆ ಕಟ್ಟರ್ ಷರಿಯಾ ಆಡಳಿತವನ್ನೇ ನಡೆಸುತ್ತಿರುವ ತಾಲಿಬಾನ್ ರಾಜ್ಯಭಾರದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳು ಹದಗೆಟ್ಟಿವೆ. ಜನಜೀವನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ನಿರುದ್ಯೋಗ ತಾಂಡವಾಡುತ್ತಿದೆ. ತುತ್ತು ಅನ್ನಕ್ಕಾಗಿ ಅಲ್ಲಿನ ಜನರು ಪರದಾಡುತ್ತಿದ್ದಾರೆಂಬ ವರದಿಗಳಿವೆ. ಧರ್ಮವೇ ಆಡಳಿತದ ಕೇಂದ್ರ ಬಿಂದುವಾದರೆ, ದೇಶವೊಂದು ಹೇಗೆ ಅಧಃಪತನಕ್ಕೆ ಇಳಿಯುತ್ತದೆ ಎಂಬುದಕ್ಕೆ ಇಡೀ ಜಗತ್ತಿಗೇ ಆಫಘಾನಿಸ್ತಾನ ಜೀವಂತ ಉದಾಹರಣೆಯಾಗಿದೆ. ಮಹಿಳೆಯರ ವಿರುದ್ಧದ ನೀತಿಗಳು ಈ ಹಿಂದಿನ ತಾಲಿಬಾನ್ ಆಡಳಿತ(2001 ಮೊದಲು)ಕ್ಕಿಂತಲೂ ಹಾಲಿ ತಾಲಿಬಾನ್ ಆಡಳಿತದಲ್ಲಿ ಹೆಚ್ಚು ಕ್ರೂರ ಸ್ವರೂಪದಲ್ಲಿವೆ ಎಂದು ವಿಶ್ವ ಸಂಸ್ಥೆಯ ಕಳವಳವು ಗಾಂಧಾರ ನಾಡಿನಲ್ಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಸಾಕ್ಷಿಯಾಗಿದೆ.
ಹಸಿವಿನಿಂದ ಮಕ್ಕಳು ಅಳಲಾರಂಭಿಸಿದರೆ, ಅವರಿಗೆ ಊಟ ಕೊಡುವ ಬದಲಿಗೆ ಪೋಷಕರು ನಿದ್ರೆ ಗುಳಿಗೆ ನೀಡಿ ಮಲಗಿಸುವಂಥ ಪರಿಸ್ಥಿತಿಯು ಅಫಘಾನಿಸ್ತಾನದಲ್ಲಿದೆ. ಆಹಾರಕ್ಕಾಗಿ ಮಾಡಿದ ಸಾಲವನ್ನು ತೀರಿಸುವುದಕ್ಕಾಗಿ ಜನರು ತಮ್ಮ ಕಿಡ್ನಿಗಳನ್ನು ಮಾರಾಟ ಮಾಡುತ್ತಿರುವ ಘಟನೆಗಳು ಇತ್ತೀಚೆಗೆ ಸಾಮಾನ್ಯವಾಗುತ್ತಿವೆ. ಮತ್ತೊಂದೆಡೆ, ಕುಟುಂಬವನ್ನು ನಿರ್ವಹಣೆ ಮಾಡಲು ತೋಚದೇ ಕೆಲವರು ತಮ್ಮ ಹೆಣ್ಣು ಮಕ್ಕಳನ್ನೇ ಮಾರಾಟ ಮಾಡುತ್ತಿದ್ದಾರಂತೆ! ರೋಗ ರುಜಿನಗಳಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೂ ಸಿಗದಂಥ ಪರಿಸ್ಥಿತಿಯು ಸೃಷ್ಟಿಯಾಗಿದೆ. ಈ ತರಹದ ಬೆಳವಣಿಗೆಗಳನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ. ಆದರೆ, ಅಫಘಾನಿಸ್ತಾನದಲ್ಲಿ ಇದೆಲ್ಲವೂ ನಡೆಯುತ್ತಿದೆ ಎಂಬುದೂ ಅಷ್ಟೇ ಸತ್ಯ. ಅಮೆರಿಕ 2021ರಲ್ಲಿ ಸಂಪೂರ್ಣವಾಗಿ ತನ್ನ ಸೇನೆಯನ್ನು ಹಿಂತೆಗೆದುಕೊಂಡಾಗಲೇ ಅರಾಜಕತೆ ಪರಿಸ್ಥಿತಿ ಜತೆಗೇ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗುವ ನಿರೀಕ್ಷೆಗಳಿದ್ದವು. ಅದೆಲ್ಲವೂ ಅಕ್ಷರಶಃ ನಿಜವಾಗುತ್ತಿದೆ. ಆದರೆ, ಈ ಸಂಗತಿಗಳನ್ನು ತಾಲಿಬಾನ್ ಆಡಳಿತವು ಸಾರಾಸಗಟವಾಗಿ ತಳ್ಳಿ ಹಾಕಿದ್ದು, ಅಫಘಾನಿಸ್ತಾನದಲ್ಲಿ ಎಲ್ಲವೂ ಚೆನ್ನಾಗಿದೆ. ಪಾಶ್ಚಿಮಾತ್ಯ ಮಾಧ್ಯಮಗಳು ಸೃಷ್ಟಿಸುತ್ತಿರುವ ಸುಳ್ಳು ಎಂದು ಹೇಳುತ್ತಿದೆ.
ಅಫಘಾನಿಸ್ತಾನದ ಮಾನವೀಯ ಬಿಕ್ಕಟ್ಟಿನ ಇಂದಿನ ಪರಿಸ್ಥಿತಿಗೆ ಕಾರಣವೇನು ಎಂಬ ಪ್ರಶ್ನೆ ಸಹಜ. ಮೊದಲನೆಯದ್ದಾಗಿ- ತಾಲಿಬಾನ್ ಅನುಸರಿಸುತ್ತಿರುವ ಕಟ್ಟರ್ ಷರಿಯಾ ಆಡಳಿತ. ಧರ್ಮಾಚರಣೆಯೇ ಮುಖ್ಯವಾದಾಗ ಉಳಿದೆಲ್ಲವೂ ಗೌಣವಾಗುತ್ತದೆ. ಪರಿಣಾಮ ಬೆಳವಣಿಗೆಯು ಕುಂಠಿತವಾಗಿ, ನಿರುದ್ಯೋಗ ಹೆಚ್ಚಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಅರ್ಥಾತ್, ಇದು ತಾಲಿಬಾನ್ ಮಾಡಿಕೊಳ್ಳುತ್ತಿರುವ ಸ್ವಯಂಕೃತ ಅಪರಾಧ. ಎರಡನೆಯದು- ನೆರವು ನೀಡದ ಅಂತಾರಾಷ್ಟ್ರೀಯ ಸಮುದಾಯ. ಈ ಎರಡನೇ ಸಂಗತಿ ಸ್ವಲ್ಪ ಟ್ರಿಕ್ಕಿಯಾಗಿದೆ. ಏನೆಂದರೆ, ಯಾವುದೇ ದೇಶವಿರಲಿ. ಮಾನವೀಯ ಬಿಕ್ಕಟ್ಟು ಸೃಷ್ಟಿಯಾದಾಗ ಇಡೀ ಅಂತಾರಾಷ್ಟ್ರೀಯ ಸಮುದಾಯವು ನೆರವಿಗೆ ನಿಲ್ಲುತ್ತದೆ. ಆದರೆ, ಅಫಘಾನಿಸ್ತಾನದ ವಿಷಯದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ತಾಲಿಬಾನ್ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಸಮುದಾಯವು ಮಾನ್ಯತೆಯನ್ನೇ ನೀಡಿಲ್ಲ. ಪರಿಣಾಮ ಆ ರಾಷ್ಟ್ರದ ಜತೆಗೆ ವ್ಯಾಪಾರ ವಹಿವಾಟು ನಡೆಸುವುದಾಗಲೀ, ಹಣಕಾಸಿನ ನೆರವು ನೀಡುವುದು ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಿದರೆ, ಉಗ್ರರಿಗೆ ಮಣೆ ಹಾಕಿದಂತಾಗುತ್ತದೆ. ಇದೊಂದು ಸಂದಿಗ್ಧ ಸ್ಥಿತಿ. ಈ ಸಮಸ್ಯೆಗೆ ಅಂತಾರಾಷ್ಟ್ರೀಯ ಸಮುದಾಯವು ಶೀಘ್ರವೇ ಪರಿಹಾರ ಕಂಡುಕೊಳ್ಳದೇ ಹೋದರೆ ದೊಡ್ಡ ಅನಾಹುತಕ್ಕೆ ಪ್ರಪಂಚವು ಸಾಕ್ಷಿಯಾಗಬಹುದು. ಇಷ್ಟಾಗಿಯೂ, ಕೆಲವು ರಾಷ್ಟ್ರಗಳು, ಸರ್ಕಾರೇತರ ಸಂಸ್ಥೆಗಳು ಮಾನವೀಯ ನೆಲೆಯಲ್ಲಿ ನೆರವು ನೀಡುತ್ತಿವೆ. ಅದು ಯಾವುದಕ್ಕೂ ಸಾಕಾಗುತ್ತಿಲ್ಲ. ಈ ಮಾನವೀಯ ಬಿಕ್ಕಟ್ಟಿನ ಸಂಕಟಗಳ ಕುರಿತು ಯುರೋಪಿಯನ್ ಕಮಿಷನ್‌ನ ಡೆವೆಕ್ಸ್ ರಿಪೋರ್ಟ್ ಬೆಳಕು ಚೆಲ್ಲಿದೆ.
ಅಫಘಾನಿಸ್ತಾನದಲ್ಲಿ ತಾಲಿಬಾನ್ ಎಂಬ ಉಗ್ರರ ಆಡಳಿತವಿರಬಹುದು. ಅದರಾಚೆಗೂ ಜನಸಾಮಾನ್ಯರು, ಮಕ್ಕಳು, ಮಹಿಳೆಯರು ಹಸಿವಿನಿಂದ ಸಾಯುವ ಪರಿಸ್ಥಿತಿಯನ್ನು ನೋಡಿಕೊಂಡು ಅಂತಾರಾಷ್ಟ್ರೀಯ ಸಮುದಾಯ ಸುಮ್ಮನೆ ಕುಳಿತು ಕೊಳ್ಳುವಂತಿಲ್ಲ. ಮಾನವೀಯ ನೆಲೆಯಲ್ಲಿ ಅಲ್ಲಿನ ಜನರಿಗೆ ಅಗತ್ಯ ನೆರವು ಒದಗಿಸುವುದಕ್ಕಾಗಿ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮುಂದಾಗಬೇಕು. ಒಂದೊಮ್ಮೆ ಮಾನವೀಯ ಕಾರ್ಯ ಕೈಗೊಳ್ಳದೇ ಹೋದರೆ ಇತಿಹಾಸ ಕ್ಷಮಿಸಲಾರದು ಎಂಬುದನ್ನು ಮರೆಯಬಾರದು.