Site icon Vistara News

ವಿಸ್ತಾರ ಸಂಪಾದಕೀಯ: ಪ್ರಶಸ್ತಿ ವಾಪಸ್ ಮಾಡದಂತೆ ಸಮ್ಮತಿ ಪತ್ರ ಸೂಕ್ತ

Award

ಕೇಂದ್ರ ಸರ್ಕಾರದ ಉನ್ನತ ಅಕಾಡೆಮಿಗಳಿಂದ ಇನ್ನು ಮುಂದೆ ಪ್ರಶಸ್ತಿಗಳನ್ನು ಸ್ವೀಕರಿಸುವವರು ಅವನ್ನು ಪಡೆಯುವ ಮೊದಲು ತಾವು ಮುಂದೆ ಎಂದಾದರೂ ರಾಜಕೀಯ ಕಾರಣಗಳನ್ನು ನೀಡಿ ʻಅವಾರ್ಡ್‌ ವಾಪ್ಸಿʼ ಮಾಡುವುದಿಲ್ಲ ಎಂದು ಘೋಷಿಸುವ ಲಿಖಿತ ಪತ್ರಕ್ಕೆ ಸಹಿ ಹಾಕುವ ಪದ್ಧತಿಯನ್ನು ರೂಢಿಗೆ ತರಬೇಕು ಎಂದು ಸಂಸದೀಯ ಸಮಿತಿ ಸಂಪುಟಕ್ಕೆ ಶಿಫಾರಸು ಮಾಡಿದೆ. ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕುರಿತ ಸಂಸದೀಯ ಸಮಿತಿಯು ನೀಡಿದ ‘ರಾಷ್ಟ್ರೀಯ ಅಕಾಡೆಮಿಗಳು ಮತ್ತು ಇತರ ಸಾಂಸ್ಕೃತಿಕ ಸಂಸ್ಥೆಗಳ ಕಾರ್ಯನಿರ್ವಹಣೆ’ ಕುರಿತ ವರದಿಯಲ್ಲಿ ಈ ಸೂಚನೆಯಿದೆ. ಈ ಬಗ್ಗೆ ದೇಶದ ಸಾಂಸ್ಕೃತಿಕ ವಲಯದಲ್ಲಿ ಮೆಚ್ಚುಗೆಯೂ, ವಿರೋಧವೂ ವ್ಯಕ್ತವಾಗಿದೆ. ಈ ಶಿಫಾರಸು ವಿರೋಧಕ್ಕಿಂತಲೂ ಮೆಚ್ಚುಗೆಗೇ ಹೆಚ್ಚು ಅರ್ಹವಾದುದು.

2015ರ ಆಗಸ್ಟ್‌ನಲ್ಲಿ ಕರ್ನಾಟಕದ ಹೆಮ್ಮೆಯ ಸಂಶೋಧಕ ಎಂ.ಎಂ ಕಲಬುರ್ಗಿ ಅವರು ದುಷ್ಕರ್ಮಿಗಳಿಂದ ಕೊಲ್ಲಲ್ಪಟ್ಟರು. ಇದರ ತನಿಖೆ ನಡೆದು, ಆರೋಪಿಗಳ ವಿಚಾರಣೆ ಸದ್ಯ ಕೋರ್ಟ್‌ನಲ್ಲಿದೆ. ಇದರ ಬಳಿಕ, ಕೊಲೆಗಾರರ ಬಗ್ಗೆ ಸಾಂಸ್ಕೃತಿಕ ವಲಯದಲ್ಲಿ ಮೂಡಿದ ಆಕ್ರೋಶ, ನಂತರ ಕೇಂದ್ರ ಸರ್ಕಾರ ಹಾಗೂ ಕೇಂದ್ರದ ಉನ್ನತ ಅಕಾಡೆಮಿಗಳ ಕಡೆಗೆ ತಿರುಗಿತು. ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿರಬೇಕಿದ್ದ ಇದನ್ನು ಒಂದು ಸಾಂಸ್ಕೃತಿಕ ಪ್ರಶ್ನೆಯಾಗಿ ಅನೇಕರು ಎತ್ತಿಕೊಂಡರು. ಇವರೆಲ್ಲರೂ ಬಿಜೆಪಿ ಸರ್ಕಾರದ ಬಗ್ಗೆ ಅಸಹನೆ ಹೊಂದಿದ್ದವರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಾಹಿತ್ಯ ಅಕಾಡೆಮಿ, ಲಲಿತಕಲಾ ಅಕಾಡೆಮಿಗಳನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸಿ, ಅವುಗಳು ಹಿಂದೆ ಎಂದೋ ನೀಡಿದ ಪ್ರಶಸ್ತಿಗಳನ್ನು ವಾಪಸ್‌ ನೀಡುವ ಪ್ರಕ್ರಿಯೆ ಶುರುವಾಯಿತು. ಉದಯ್ ಪ್ರಕಾಶ್, ನಯನತಾರಾ ಸೆಹಗಲ್ ಮತ್ತು ಅಶೋಕ್ ವಾಜಪೇಯಿ ಮುಂತಾದ ಸಾಹಿತಿಗಳು ಸೇರಿದಂತೆ 33ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕೃತರು ಪ್ರತಿಭಟನಾರ್ಥವಾಗಿ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದರು. ಕನ್ನಡದಲ್ಲೂ ಹಲವು ಸಾಹಿತಿಗಳು ಪ್ರಶಸ್ತಿಗಳನ್ನು ಮರಳಿಸಿದ್ದಾರೆ.

ಇದೊಂದು ವಿಫಲ, ಅರ್ಥಹೀನ ಪ್ರತಿಭಟನೆಯಾಗಿತ್ತು. ಇವರಿಗೆ ಈ ಪ್ರಶಸ್ತಿಗಳನ್ನು ನೀಡಿದ್ದೂ ಬಿಜೆಪಿ ಸರ್ಕಾರ ಆಗಿರಲಿಲ್ಲ. ಪ್ರಶಸ್ತಿ ಹಿಂದಿರುಗಿಸಿದರೆ, ಅದನ್ನು ತಮಗೆ ನೀಡಿದ ಸಂಸ್ಥೆಗಳಿಗೆ ಮುಖಭಂಗವಾಗಲಿದೆ ಎಂಬುದು ಈ ಕ್ರಿಯೆಯ ಹಿಂದಿನ ತರ್ಕವಾಗಿತ್ತು. ಹೀಗೆ ಮಾಡುವ ಮೂಲಕ ಇವರು ತಮಗೆ ಕೊಡಲಾದ ಪ್ರಶಸ್ತಿಗಳಿಗೆ ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡಿಕೊಂಡರು. ಪ್ರಶಸ್ತಿಯ ಜೊತೆಗೆ ಬಂದ ಫಲಕಗಳನ್ನು ಹಿಂದಿರುಗಿಸಿದರು. ಆದರೆ ಇವುಗಳ ಜತೆಗೆ ಬಂದ ಲಕ್ಷಾಂತರ ರೂಪಾಯಿ ಹಣವನ್ನು ಹಿಂದಿರುಗಿಸಿದರೋ ಅಥವಾ ತಾವೇ ಇಟ್ಟುಕೊಂಡರೋ ಕೊನೆಯವರೆಗೂ ಗೊತ್ತೇ ಆಗಲಿಲ್ಲ. ಹೆಚ್ಚಿನವರು ಹಣ ಮರಳಿ ಕೊಟ್ಟಿಲ್ಲ. ಇದೆಂಥ ಆಷಾಢಭೂತಿತನ! ಪ್ರಶಸ್ತಿಯನ್ನು ನೀಡಿದ್ದು ಇವರ ಪ್ರತಿಭೆ, ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆಗಾಗಿ. ಅದನ್ನು ಹಿಂದಿರುಗಿಸುವ ಮೂಲಕ ಇವರು ಏನು ಹೇಳಿದ ಹಾಗಾಯಿತು? ಪ್ರಶಸ್ತಿಗಳಿಗೂ ಸಾಹಿತಿಗಳ ಕೊಲೆಯಂಥ ಸಂಗತಿಗೂ ಏನು ಸಂಬಂಧ? ಕೊಲೆಗಾರರಿಗೂ ಅಕಾಡೆಮಿಗೂ ಸಂಬಂಧವಿದೆಯೇ?

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮರಾಠಿ ಗ್ರಾಮಗಳ ಕನ್ನಡ ವಿಲೀನ ನಿರ್ಣಯ, ಗಡಿ ತಂಟೆ ಮಾಡುವ ಮಹಾರಾಷ್ಟ್ರಕ್ಕೆ ಮುಖಭಂಗ

ಇದರಿಂದ ಆದ ಇನ್ನೂ ಒಂದು ಮುಜುಗರದ ಸಂಗತಿ ಎಂದರೆ ಇವರಂತೆಯೇ ಪ್ರಶಸ್ತಿ ಪಡೆದುಕೊಂಡ ಇನ್ನೂ ಸಾವಿರಾರು ಮಂದಿಗೆ ಆದ ಮುಜುಗರ. ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ತಾವು ಪ್ರತಿಭಟನೆಯನ್ನು ವ್ಯಕ್ತ ಮಾಡುತ್ತಿದ್ದೇವೆ ಎಂದು ಇವರು ಹೇಳುವಾಗ, ಹಾಗೆ ಪ್ರಶಸ್ತಿ ಹಿಂದಿರುಗಿಸದ ಇತರರು ಪ್ರತಿಭಟಿಸುತ್ತಿಲ್ಲ ಎಂದು ಸೂಚ್ಯವಾಗಿ ಹೇಳಿದಂತಾಯಿತು. ಅವರ ಪ್ರಾಮಾಣಿಕತೆಯನ್ನು ಶಂಕಿಸಿದ ಹಾಗಾಯಿತು. ಕಲ್ಬುರ್ಗಿ ಕೊಲೆಯನ್ನು ಯಾರೂ ಸಮರ್ಥಿಸಲಾರರು. ಆದರೆ ಇದರ ಕುರಿತ ಆಕ್ರೋಶ ಪ್ರಕಟಣೆಗೆ ಅವಾರ್ಡ್‌ ವಾಪ್ಸಿಯೊಂದೇ ದಾರಿಯಾಗಿರಲಿಲ್ಲ. ತೀವ್ರ ಖಂಡನೆ, ಪತ್ರಿಕಾ ಹೇಳಿಕೆ, ಜನಾಭಿಪ್ರಾಯ ರೂಪಣೆ, ಧರಣಿ ಮುಷ್ಕರಗಳ ಮೂಲಕ ಸರ್ಕಾರ- ತನಿಖಾ ಸಂಸ್ಥೆಗಳ ಮೇಲೆ ಹಕ್ಕೊತ್ತಾಯ, ನ್ಯಾಯಾಂಗ ಹೋರಾಟ ಮುಂತಾದ ಎಲ್ಲ ದಾರಿಗಳೂ ಇದ್ದವು. ಆದರೆ ಈ ಪ್ರಶಸ್ತಿ ಭೂಷಿತರು ಅದನ್ನೆಲ್ಲ ಬಿಟ್ಟು, ಅವಾರ್ಡ್‌ ವಾಪ್ಸಿಯ ದಾರಿ ಹಿಡಿದರು. ಇದು ಈ ಅಕಾಡೆಮಿಗಳಿಗೆ ಮಾಡುವ ಅವಮಾನ. ಆ ಮೂಲಕ ದೇಶಕ್ಕೂ ಮಾಡುವ ಅವಮಾನ.

ಈ ದೇಶದಲ್ಲಿ ರಾಜಕೀಯ ಸನ್ನಿವೇಶ ಬದಲಾಗಬಹುದು; ಬಿಜೆಪಿ- ಕಾಂಗ್ರೆಸ್‌ಗಳ ನಡುವೆ ಅಧಿಕಾರ ಉಯ್ಯಾಲೆಯಾಡಬಹುದು. ಆದರೆ ಒಮ್ಮೆ ನೀಡಲಾದ ಪ್ರಶಸ್ತಿ ವೈಯಕ್ತಿಕ ಪ್ರತಿಭೆಗೆ, ಸಾಧನೆಗೆ, ಕೊಡುಗೆಗೆ ಸಲ್ಲುವಂಥದು. ರಾಜಕೀಯ ಬದಲಾದರೆ ಇದೇನೂ ಬದಲಾಗುವುದಿಲ್ಲ. ಅವರು ನೀಡಿದ ಕೊಡುಗೆ, ಅವರ ನೀತಿನಿಲುವು ಬದಲಾಗುವುದಿಲ್ಲ. ಹೀಗಾಗಿ ಪ್ರಶಸ್ತಿಗಳನ್ನು ಪಡೆದ ಇತರರ ಸಾಧನೆಗಳನ್ನು ಅವಮಾನಿಸುವ, ಪ್ರಶಸ್ತಿಗಳ ಒಟ್ಟಾರೆ ಘನತೆಯನ್ನು ಹಾಳುಮಾಡುವ ಇಂಥ ನಡೆಗಳಿಗೆ ತಡೆ ಹಾಕಲು ಕೈಗೊಳ್ಳುವ ಉಪಕ್ರಮವನ್ನು ನಾವು ಸ್ವಾಗತಿಸಬಹುದಾಗಿದೆ.

Exit mobile version