Site icon Vistara News

ವಿಸ್ತಾರ ಸಂಪಾದಕೀಯ: ಕ್ರಿಮಿನಲ್‌ ಕಾನೂನುಗಳಿಗೆ ಐತಿಹಾಸಿಕ ಕಾಯಕಲ್ಪ

IPC

ದೇಶದಲ್ಲಿ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳ (Criminal Laws) ಸಂಪೂರ್ಣ ತಿದ್ದುಪಡಿ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಭಾರತೀಯ ದಂಡ ಸಂಹಿತೆ (IPC-1860), ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆ (CrPC-1973) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು (Indian Evidence Act-1872) ತಿದ್ದುಪಡಿಗೊಳಿಸಿ, ಹೊಸ ಹೆಸರುಗಳೊಂದಿಗೆ ಕಾಯ್ದೆಯಾಗಿ ಜಾರಿಗೆ ತರುವ ದಿಸೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮೂರು ವಿಧೇಯಕಗಳನ್ನು ಸಂಸತ್‌ನಲ್ಲಿ ಮಂಡಿಸಿದ್ದಾರೆ. ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗುತ್ತಿದ್ದು, ಇವುಗಳನ್ನು ಸಂಸದೀಯ ಸಮಿತಿಯ ಪರಿಶೀಲನೆಗಾಗಿ ಕಳುಹಿಸಲಾಗುತ್ತಿದೆ.

ಹೊಸ ಪ್ರಸ್ತಾವಿತ ಕಾನೂನುಗಳ ಮುಖ್ಯ ಅಂಶಗಳನ್ನು ಇಲ್ಲಿ ಉಲ್ಲೇಖಿಸಬಹುದು. ಬ್ರಿಟಿಷರ ಕಾಲದಲ್ಲಿ ಜಾರಿಗೆ ತಂದ ದೇಶದ್ರೋಹದ ಕಾನೂನು ನೂತನ ಕ್ರಿಮಿನಲ್‌ ಕಾನೂನಿನಲ್ಲಿ ಇರುವುದಿಲ್ಲ. ದೇಶದ್ರೋಹ ಕಾನೂನಿನಲ್ಲಿ ಬಂಧಿತರಾದವರಿಗೆ ಮೂರು ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ನೀಡಬಹುದಾಗಿದ್ದು, ಈ ಕಾನೂನು ರದ್ದುಗೊಳಿಸಲಾಗುತ್ತದೆ. ಇದರ ಬದಲಾಗಿ ಹೊಸ ನಿಯಮಗಳು ಜಾರಿಗೆ ಬರಲಿವೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗಾಗಿ ಹೊಸ ಕಾನೂನುಗಳ ಅಡಿಯಲ್ಲಿ ಅತ್ಯಾಚಾರಿಗಳಿಗೆ ಗರಿಷ್ಠ 20 ವರ್ಷ ಅಥವಾ ಅವರು ಜೀವಿತಾವಧಿವರೆಗೆ ಜೈಲಿನಲ್ಲಿ ಕಾಲ ಕಳೆಯುವ ರೀತಿ ಶಿಕ್ಷೆ ವಿಧಿಸಲಾಗುತ್ತದೆ. ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರಿಗೆ ಗಲ್ಲು ಶಿಕ್ಷೆ ವಿಧಿಸುವ, ಅತ್ಯಾಚಾರ ಸಂತ್ರಸ್ತೆಯರ ಮಾಹಿತಿ ಬಹಿರಂಗಪಡಿಸಿದವರಿಗೂ ಶಿಕ್ಷೆ ವಿಧಿಸುವ ಕಾನೂನು ಇರಲಿದೆ. ಗುಂಪು ಹತ್ಯೆಗಳ (Mob Lynching) ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಮುಂದಾಗಿದ್ದು, ಅದರಲ್ಲಿ ಭಾಗಿಯಾದವರಿಗೆ ಕನಿಷ್ಠ ಏಳು ವರ್ಷ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲೂ ಹೊಸ ಕಾನೂನಿನಲ್ಲಿ ಪ್ರಸ್ತಾವಿಸಲಾಗಿದೆ.

ಈ ತಿದ್ದುಪಡಿಗಳು, ಮಾರ್ಪಾಡುಗಳು ಬಹುಕಾಲದಿಂದ ಅಗತ್ಯವಾಗಿದ್ದವು. ದಂಡ ಸಂಹಿತೆಯ ಕಾನೂನುಗಳಲ್ಲಿ ಸುಧಾರಣೆ ಮಾಡಲು ಯಾವ ಶಾಸಕಾಂಗವೂ ಅಂಜಬೇಕಿಲ್ಲ. ಇದರ ಉದ್ದೇಶ ಪಾರದರ್ಶಕವಾಗಿರುವುದರಿಂದ ಯಾರೂ ಇದನ್ನು ಪ್ರಶ್ನಿಸಿ ಕೋರ್ಟಿಗೆ ಹೋಗಲಾರರು. ಆದರೆ ವಸಾಹತು ಕಾಲದ ಕಾನೂನುಗಳು ಹಾಗೇ ನಡೆದುಕೊಂಡು ಬಂದಿವೆ. ಕೆಲವೊಮ್ಮೆ ಕೆಲವು ಶಾಸನಗಳ ಪರಿಣಾಮ ಅವುಗಳು ರದ್ದಾದ ಮೇಲೂ ಬಹುಕಾಲ ಜನಮಾನಸದಲ್ಲಿ ಉಳಿದುಬಿಡುತ್ತವೆ. ಇದಕ್ಕೆ ಒಂದು ಉದಾಹರಣೆಯೆಂದರೆ ಬ್ರಿಟಿಷರು 1871ರಲ್ಲಿ ಜಾರಿಗೆ ತಂದಿದ್ದ ಅಪರಾಧಿ ಬುಡಕಟ್ಟುಗಳ ಕಾಯಿದೆ. ನೂರಾರು ಬುಡಕಟ್ಟುಗಳನ್ನು ಹುಟ್ಟಾ ಅಪರಾಧ ಪ್ರವೃತ್ತಿಯವರು ಎಂದೇ ಸಾರುವ ಈ ಕಾಯಿದೆಯನ್ನು 1949ರಲ್ಲಿ ರದ್ದುಗೊಳಿಸಲಾಯಿತಾದರೂ, ಈ ಪಟ್ಟಿಯಲ್ಲಿದ್ದ ಹಲವು ಬುಡಕಟ್ಟುಗಳ ಮೇಲೆ ಇಂದಿಗೂ ಅದರ ಕರಾಳ ನೆರಳು ಉಳಿದೇ ಇದೆ. ಆಧುನಿಕ ಕಾನೂನು, ಸಂವಿಧಾನ ಇಂಥ ಪ್ರವೃತ್ತಿಯನ್ನು ಮಾನ್ಯ ಮಾಡುವುದಿಲ್ಲ. ಕಾಲ ಸರಿದಂತೆ ಅಪರಾಧ ಮತ್ತು ಶಿಕ್ಷೆಯ ಬಗ್ಗೆ ನಮ್ಮ ನಿಲುವುಗಳು ಸುಧಾರಿಸುತ್ತ ಹೋಗಬೇಕು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನೇ ಇಟ್ಟಿದೆ. ಇದು ಗಮನಾರ್ಹ ಸುಧಾರಣೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಭ್ರಷ್ಟ ಅಧಿಕಾರಿಗಳ ಕಡ್ಡಾಯ ನಿವೃತ್ತಿ ಉತ್ತಮ ನಿರ್ಧಾರ

ದೇಶದ್ರೋಹದ ಕಾಯಿದೆ ಬಹಳಷ್ಟು ಸಲ ದುರ್ಬಳಕೆಯಾಗಿರುವ ಕಾಯಿದೆ. ಸರ್ಕಾರವನ್ನು, ರಾಜಕೀಯ ನಾಯಕರ ತಪ್ಪು ನಡೆಗಳನ್ನು ಟೀಕಿಸುವವರನ್ನೂ ದೇಶದ್ರೋಹಿಗಳು ಎಂಬಂತೆ ಚಿತ್ರಿಸಿ ಜೈಲಿಗೆ ತಳ್ಳಿದ ಪ್ರಕರಣಗಳನ್ನು ನೋಡಿದ್ದೇವೆ. ಇದು ಬದಲಾಗಬೇಕಿದೆ. ಈ ಕುರಿತ ಸುಧಾರಣೆಯಲ್ಲಿ ಏನಿದೆ ಎಂಬುದನ್ನು ಕೂಲಂಕಷವಾಗಿ ನೋಡಬೇಕಿದೆ. ಇನ್ನು ಅತ್ಯಾಚಾರ ಎಲ್ಲ ಸಮಾಜಗಳಲ್ಲಿ ಎಲ್ಲ ಕಾಲಗಳಲ್ಲಿ ಇರುವ ಪಿಡುಗು. ಇದನ್ನೂ ಕಠಿಣ ರೀತಿಯಲ್ಲಿ ಶಿಕ್ಷಿಸುವ ಕಾನೂನು ಇರಬೇಕು. ಆದರೆ ಈ ಪ್ರಕರಣಗಳನ್ನು ನಿಭಾಯಿಸುವ ರೀತಿ ಇನ್ನಷ್ಟು ಸೂಕ್ಷ್ಮವಾಗಬೇಕಿದೆ. ಗುಂಪು ಹತ್ಯೆಗಳ ಸಂದರ್ಭದಲ್ಲಿ ಮನುಷ್ಯ ಸ್ವತಂತ್ರ ಚಿಂತನೆಯನ್ನೇ ಕಳೆದುಕೊಳ್ಳುತ್ತಾನೆ. ಕೋಮು ಗಲಭೆಗಳ ಹೊತ್ತಿನಲ್ಲಿ ನಡೆಯುವುದು ಇದೇ. ಹೆಚ್ಚುತ್ತಿರುವ ಕೋಮು ಗಲಭೆಗಳನ್ನು ನಿಭಾಯಿಸಲು ಇದು ಇನ್ನಷ್ಟು ಪರಿಣಾಮಕಾರಿಯಾದ ಕಾಯಿದೆಯಾಗಲಿದೆ. ಈ ಕಾಯಿದೆಗಳಿಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಿ, ಕಾನೂನಾತ್ಮಕ ಸುಧಾರಣೆಗೆ ಹಾದಿಯಲ್ಲಿ ಕೈಗೂಡಿಸಬೇಕಿದೆ.

Exit mobile version