ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿಯೂ ಆಗಿದ್ದ ಅತೀಕ್ ಅಹ್ಮದ್‌ನಿಂದ ವಶಪಡಿಸಿಕೊಂಡ ಜಾಗದಲ್ಲಿ ಉತ್ತರ ಪ್ರದೇಶ ಸರ್ಕಾರವು ಬಡವರಿಗಾಗಿ ಮನೆಗಳನ್ನು ನಿರ್ಮಿಸಿ ಹಂಚಿದೆ. ಇತ್ತೀಚೆಗೆ ಹತ್ಯೆಗೀಡಾದ ಇವನಿಂದ ವಶಪಡಿಸಿಕೊಂಡ ಜಾಗದಲ್ಲಿ ಹಲವು ಫಲಾನುಭವಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫ್ಲ್ಯಾಟ್‌ಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದಾರೆ. ಪ್ರಯಾಗರಾಜ್‌ನ ಲುಕುವಾರ್‌ಗಂಜ್ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹೀಗೆ 76 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ. ಬಡವರನ್ನು ಗುರುತಿಸಿ, ಅವರಿಂದ ಕೇವಲ 3.5 ಲಕ್ಷ ರೂ. ಪಡೆದು ಫ್ಲ್ಯಾಟ್ ನೀಡಲಾಗಿದೆ. ಇದೊಂದು ಮಾದರಿ ನಡೆ.
ಗ್ಯಾಂಗ್‌ಸ್ಟರ್‌ಗಳು, ರೌಡಿಗಳು, ಸಾರ್ವಜನಿಕ ಶಾಂತಿಭಂಗ ಮಾಡುವವರನ್ನು ಹಿಡಿದು ಶಿಕ್ಷಿಸುವುದಕ್ಕೆ ಸಾಂಪ್ರದಾಯಿಕವಾದ ಮಾರ್ಗವೆಂದರೆ ಕಾನೂನು. ಆದರೆ ಕಾನೂನಿನ ಮಾರ್ಗ ಯಾವಾಗಲೂ ಸುದೀರ್ಘ; ನ್ಯಾಯಾಂಗದಲ್ಲಿ ಪ್ರಕರಣಗಳು ಯಾವಾಗ ಇತ್ಯರ್ಥವಾಗುತ್ತವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಪ್ರಕರಣ ಇತ್ಯರ್ಥವಾಗುವಷ್ಟರಲ್ಲಿ ಕಕ್ಷಿದಾರರೆಲ್ಲಾ ಪ್ರಾಣ ಬಿಟ್ಟಿರುವ ಪ್ರಕರಣಗಳು ಎಷ್ಟೋ ಇವೆ. ಬಲಿಷ್ಠರಾದ ಪಾತಕಿಗಳು ಬಡವರನ್ನು ನ್ಯಾಯಾಂಗಕ್ಕೆ ತೆರಳದಂತೆ ಕೂಡ ನಿರ್ಬಂಧಿಸಬಲ್ಲರು. ಇವರು ಪೊಲೀಸರಿಗೂ ಹೆದರುವವರಲ್ಲ. ಇಂಥ ಹೊತ್ತಿನಲ್ಲಿ ಪರಿಹಾರವೇನು? ಯೋಗಿ ಆದಿತ್ಯನಾಥ್ ಅವರು ಈಗ ಕಂಡುಕೊಂಡಿರುವ ದಾರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ಯಾಂಗ್‌ಸ್ಟರ್ ಜತೆಗೆ ರಾಜಕಾರಣಿಯೂ ಆಗಿದ್ದ ಅತೀಕ್ ಅಹ್ಮದ್ ಹಲವರ ಆಸ್ತಿ ಕಬಳಿಸಿದ್ದ. ಹಾಗಾಗಿ, ಆತನ ಅಕ್ರಮ ಆಸ್ತಿಯನ್ನು ಸರ್ಕಾರ ಜಪ್ತಿ ಮಾಡಿದೆ. ಇಲ್ಲಿ ಪಾತಕಿಯ ಭೂಮಿ ಸರ್ಕಾರ ವಶಪಡಿಸಿಕೊಂಡಿರುವುದಕ್ಕೆ ಸಮರ್ಥನೆ ಇದೆ.
ಉತ್ತರ ಪ್ರದೇಶ ಪೊಲೀಸರು 2018ರಿಂದೀಚಿಗೆ ಗ್ಯಾಂಗ್‌ಸ್ಟರ್ಸ್ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಸುಮಾರು 3,190 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇದುವರೆಗೆ ಜಪ್ತಿ ಮಾಡಿದ್ದಾರೆ. ಇವುಗಳಲ್ಲಿದ್ದ ಇದ್ದ ಅಕ್ರಮ ಕಟ್ಟಡಗಳನ್ನು ಕೆಡವಿದ್ದಾರೆ. ಅಕ್ರಮ ಕಸಾಯಿಖಾನೆ, ಮಾಫಿಯಾ ರಕ್ಷಣೆಯಲ್ಲಿ ನಡೆಯುತ್ತಿದ್ದ ಅಕ್ರಮ ಪಾರ್ಕಿಂಗ್ ಸ್ಟಾಂಡ್‌ಗಳು, ಸ್ಲಮ್‌ಗಳು, ಬಾಡಿಗೆ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಸರ್ಕಾರಿ ಭೂಮಿಯನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಅಕ್ರಮ ಕಲ್ಲಿದ್ದಲು ದಂಧೆಯಲ್ಲಿ ತೊಡಗಿರುವ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅವರ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಪೊಲೀಸ್ ದಾಖಲೆಯ ಪ್ರಕಾರ 62 ಮಾಫಿಯಾ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 30ಕ್ಕೂ ಅಧಿಕ ಮಾಫಿಯಾ ಪಾತಕಿಗಳು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ನ್ಯಾಷನಲ್ ಜಿಯೋಗ್ರಾಫಿಕ್ ಮುದ್ರಣ ಸ್ಥಗಿತ ವಿಷಾದನೀಯ
ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗುವ ಮುನ್ನ ಉತ್ತರಪ್ರದೇಶದಲ್ಲಿ ಪಾತಕಿಗಳ, ಗ್ಯಾಂಗ್‌ಸ್ಟರ್‌ಗಳ ಹಾವಳಿ ವ್ಯಾಪಕವಾಗಿ ಇತ್ತು. ಇವರನ್ನು ಯಾರೂ ಪ್ರಶ್ನಿಸುವವರೇ ಇರಲಿಲ್ಲ. ಯೋಗಿ ಅವರ ಆಡಳಿತ ಪಾತಕಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅಪರಾಧ ಎಸಗಿದವನು ಸಿಕ್ಕಿಬಿದ್ದರೂ ಜೈಲಿಗೆ ತೆರಳಿ ಅಲ್ಲಿ ಹಾಯಾಗಿರುತ್ತಾನೆ ಎಂಬ ಸನ್ನಿವೇಶ ಬದಲಾಗಿದೆ. ಪಾತಕಿಯ ಮನೆಗೆ, ಜಮೀನಿಗೆ ಕೂಡ ಸಂಕಷ್ಟ ಬಂದೊದಗಿದೆ. ಗಲಭೆಗಳಲ್ಲಿ ಭಾಗಿಯಾದವರನ್ನು ಹುಡುಕಿ ಹುಡುಕಿ, ಅವರ ಮನೆಗಳನ್ನು ಬುಲ್‌ಡೋಜ್ ಮಾಡುವ ಕ್ರಮ ಕೂಡ ಬಲು ಕಠಿಣವಾದದ್ದು ಹಾಗೂ ತುಂಬಾ ಅಸಾಂಪ್ರದಾಯಿಕ. ಹೀಗಾಗಿಯೇ ಪಾತಕಿಗಳು ಕೂಡ ಬೆಚ್ಚಿ ಬೀಳುವಂತಾಗಿದೆ. ಯಾವಾಗ ಗಲಭೆಗಳಲ್ಲಿ, ಗೂಂಡಾಗಿರಿಗಳಲ್ಲಿ ಭಾಗಿಯಾದವರ ಮನೆಗಳನ್ನು ಕೆಡವಲಾಗುತ್ತದೆ ಎಂದು ಗೊತ್ತಾಯಿತೋ ಆಗ ಅಂಥವರ ಸಂಖ್ಯೆಯೂ ಕಡಿಮೆಯಾಯಿತು. ಯಾಕೆಂದರೆ ತಮ್ಮ ಅಪರಾಧದ ದುಷ್ಫಲವನ್ನು ತಮ್ಮ ಕುಟುಂಬದವರು ಉಣ್ಣಬೇಕಾಗುತ್ತದೆ ಎಂಬುದು ನೇರವಾಗಿ ಇಲ್ಲಿ ಅನ್ವಯವಾಗುತ್ತಿತ್ತು. ತನಗೆ ಶಿಕ್ಷೆಯಾಗಲಿ ಎಂದೇ ಬಯಸುವ ಪಾತಕಿ ಕೂಡ ತನ್ನ ಮನೆ ಧ್ವಂಸವಾಗಲಿ ಎಂದು ಬಯಸುವುದಿಲ್ಲ.
ಇದೊಂದು ಅಸಾಂಪ್ರದಾಯಿಕ ಶಿಕ್ಷಾ ಕ್ರಮ. ಯೋಗಿಯವರು ಇದನ್ನು ಯೋಚಿಸಿ ಜಾರಿಗೊಳಿಸುವ ಮುನ್ನ, ಇನ್ಯಾರೂ ಈ ಮಾರ್ಗದಲ್ಲಿ ಯೋಚಿಸಿರಲಿಲ್ಲ. ಇಲ್ಲಿ ನ್ಯಾಯಾಂಗ ಮಾಡಬೇಕಾದ ಕೆಲಸವನ್ನೇನೂ ಶಾಸಕಾಂಗ ಅತಿಕ್ರಮಿಸಿಲ್ಲ. ಇದು ಪಾತಕಿ ಮಾಡಿದ ಅಪರಾಧಕ್ಕೆ ಶಿಕ್ಷೆಯಲ್ಲ; ಪಾತಕಿಯನ್ನು ಅಪರಾಧ ಜಗತ್ತಿನಿಂದ ದೂರ ಮಾಡುವ ಪ್ರತ್ಯಕ್ಷ- ನೇರ ವಿಧಾನ. ಇವೆಲ್ಲವೂ ಅಕ್ರಮ ಆಸ್ತಿಗಳು ಹಾಗೂ ಇಂಥ ಅಕ್ರಮ ಆಸ್ತಿಗಳಿಗೆ ಸಾರ್ವಜನಿಕರೇ ಹಕ್ಕುದಾರರು ಎಂದು ಯೋಗಿ ಸರ್ಕಾರ ತೋರಿಸಿಕೊಡುತ್ತಿದೆ. ಪಾತಕಿಗಳು ಸಾರ್ವಜನಿಕ ಆಸ್ತಿಗಳನ್ನು ಕಬಳಿಸುವ ಮುನ್ನ ಹಿಂದೆಮುಂದೆ ನೋಡುವಂತಾಗುತ್ತದೆ. ಇದು ಇತರ ರಾಜ್ಯಗಳಿಗೂ ಮಾದರಿಯಾಗಲಿ.