Site icon Vistara News

ವಿಸ್ತಾರ ಸಂಪಾದಕೀಯ: ಹಿಂದುಳಿದ ವರ್ಗಗಳ ಸ್ವಾತಂತ್ರ್ಯದ ಕನಸು ನನಸಾಗುವತ್ತ ಹೆಜ್ಜೆ

Modi news

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣವನ್ನು ಕೆಂಪು ಕೋಟೆಯ ಮೇಲಿನಿಂದ ಮಾಡಿದ್ದಾರೆ. ಈ ಸಲ ಅವರು ಹೆಚ್ಚು ಒತ್ತು ನೀಡಿರುವುದು ಹೊಸ ಯೋಜನೆಗಳ ಬಗ್ಗೆ. 15 ಸಾವಿರ ಕೋಟಿ ರೂಪಾಯಿ ವೆಚ್ಚದ ‘ವಿಶ್ವಕರ್ಮ ಯೋಜನೆ’ಯನ್ನು ಅವರು ಘೋಷಿಸಿದ್ದಾರೆ. ಈ ಯೋಜನೆಗಳು ಕೌಶಲಯುಕ್ತ, ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ, ಮುಖ್ಯವಾಗಿ ಇತರೆ ಹಿಂದುಳಿದ ಸಮುದಾಯಗಳಿಗೆ ನೆರವಾಗಲಿದೆ. ನೇಕಾರರು, ಅಕ್ಕಸಾಲಿಗರು, ಕಂಬಾರರು, ಅಗಸರು, ಕ್ಷೌರಿಕರು ಮತ್ತಿತರ ವಿವಿಧ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣ ವಿಶ್ವಕರ್ಮ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯನ್ನು ಸೆಪ್ಟೆಂಬರ್ 17, 2023ರಂದು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ ತರಬೇತಿ ನೀಡುವ ಯೋಜನೆಯಡಿ 15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ನೀಡುವ, ಡ್ರೋನ್‌ನ ನಿರ್ವಹಣೆ ಮತ್ತು ದುರಸ್ತಿ ಕುರಿತು ತರಬೇತಿ ನೀಡುವ ಮಾಹಿತಿ ನೀಡಿದರು. ಇದರೊಂದಿಗೆ ಮಧ್ಯಮ ವರ್ಗದ ಕುಟುಂಬಗಳಿಗಾಗಿ ವಸತಿ ಯೋಜನೆ ಜಾರಿಗೊಳಿಸುವ ತೀರ್ಮಾನ ಪ್ರಕಟಿಸಿದ್ದಾರೆ.

ವಿಶ್ವಕರ್ಮ ಯೋಜನೆಯ ಘೋಷಣೆ ಅಗತ್ಯವಾಗಿತ್ತು. ವಿಶ್ವಕರ್ಮನೆಂದರೆ ಪುರಾಣದಲ್ಲಿ ಕುಶಲಿಯಾದ ಶಿಲ್ಪಿ ಮಾತ್ರವಲ್ಲ, ಆತನೇ ಈ ಜಗತ್ತಿನ ಶಿಲ್ಪಿ ಎಂದು ಕೂಡ ಕೆಲವು ಪುರಾಣಗಳಲ್ಲಿ ಉಲ್ಲೇಖವಿದೆ. ಅದೇನೇ ಇರಲಿ, ನೇಕಾರರು, ಅಕ್ಕಸಾಲಿಗರು, ಕಂಬಾರರು, ಅಗಸರು, ಕ್ಷೌರಿಕರು ಮುಂತಾದವರು ತಮ್ಮ ಕೌಶಲ್ಯದಿಂದ ನಮ್ಮ ಬಾಳಿಗೆ ಅಗತ್ಯವಾದ ಪೋಷಣೆಯನ್ನು ನೀಡುತ್ತಾರೆ. ಅವರ ಸಾಂಪ್ರದಾಯಿಕ ಕುಶಲತೆಯಿಂದ, ಪರಂಪರಾಗತ ವಿನ್ಯಾಸಗಾರಿಕೆಯಿಂದ ಮೂಡಿಬಂದ ವಸ್ತುವೈವಿಧ್ಯಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಆದರೆ ಆಧುನಿಕತೆ ಮುಂದುವರಿದಂತೆ ಇವರಲ್ಲಿ ಹಲವರ ಕೌಶಲ ಮೂಲೆಗುಂಪಾಗುತ್ತ ನಡೆದಿದೆ. ಚೀನಾ ನಿರ್ಮಿತ ಆಟಿಕೆಗಳು ಬಂದಾಗ ಚೆನ್ನಪಟ್ಟಣದ ಮರದ ಗೊಂಬೆಗಳನ್ನು ಮಾಡುವವರು ಹೇಗೆ ಮೂಲೆಗುಂಪಾದರೋ, ಹಾಗೆಯೇ ಹಲವು ಕುಶಲಕರ್ಮಿಗಳು ಆಧುನಿಕ ಕೈಗಾರಿಕಾ ನಿರ್ಮಿತ ಸಾಧನಗಳ ಜಗತ್ತಿನಲ್ಲಿ ನೆಲೆ ಕಳೆದುಕೊಳ್ಳುತ್ತ ನಡೆದಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ತಮ್ಮ ಸಾಂಪ್ರದಾಯಿಕ ಕಸುಬುಗಳನ್ನು ಹೊರತುಪಡಿಸಿದರೆ ಬೇರೆ ವೃತ್ತಿಗಳು ತಿಳಿಯವು. ಇನ್ನೊಂದು ಸಮಸ್ಯೆಯೆಂದರೆ, ಇವರಲ್ಲಿ ಹೊಸ ತಲೆಮಾರು ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದು, ನಗರಜೀವನ ಸೃಷ್ಟಿಸುತ್ತಿರುವ ಯಾಂತ್ರಿಕ ಕೆಲಸಗಳ ಕಡೆಗೆ ಮುಖ ಮಾಡಿದೆ. ಹೀಗಾಗಿ ಪರಂಪರಾಗತ ಕೌಶಲ್ಯಗಳು, ನಯನಾಜೂಕಿನ ವೈಖರಿಗಳು, ಸಾಂಪ್ರದಾಯಿಕ ಕೆತ್ತನೆ- ಕೆಲಸಗಾರಿಕೆ ಇತ್ಯಾದಿಗಳು ವಿಸ್ಮೃತಿಗೆ ಸರಿಯುತ್ತಿವೆ. ನಮ್ಮ ಪರಂಪರೆಯನ್ನು ರಕ್ಷಿಸುವುದು ಎಂದರೆ ಇಂಥ ವೃತ್ತಿಗಳನ್ನು ರಕ್ಷಿಸುವುದು. ಈ ವೃತ್ತಿಯಲ್ಲಿ ಇರುವವರಿಗೆ ಸಾಕಷ್ಟು ಆದಾಯದ ಮೂಲವನ್ನು ಅವರ ಕೌಶಲ್ಯದಲ್ಲಿಯೇ ಕಲ್ಪಿಸಿದಾಗ ಮಾತ್ರ ಇವು ಉಳಿಯಲು ಸಾಧ್ಯ. ವಿಶ್ವಕರ್ಮ ಯೋಜನೆ ಹಾಗೂ ಇಂಥ ಇತರ ಯೋಜನೆಗಳಿಂದ ಇದು ಸಾಧ್ಯವಾಗಬೇಕು. ಇಂಥ ಕುಶಲಕರ್ಮಿಗಳಲ್ಲಿ ಹಿಂದುಳಿದವರೇ ಹೆಚ್ಚು. ಹೀಗಾಗಿ ಇದು ಹಿಂದುಳಿದವರ ಕಲ್ಯಾಣವನ್ನು ಉದ್ದೇಶವಾಗಿಟ್ಟುಕೊಂಡು ಕಾರ್ಯಕ್ರಮವೂ ಆಗಿರಲಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಬೆಳೆದಿದೆ ಭಾರತ, ಬೆಳೆಯುವುದಿದೆ ಇನ್ನೂ ಸತತ

ಇನ್ನು ಮಹಿಳೆಯರಿಗೆ ಮೀಸಲಾದ ಸ್ವಸಹಾಯ ಸಂಘಗಳ ರಚನೆ ಹಾಗೂ ಡ್ರೋನ್‌ ಮೂಲಕ ನೀಡುವ ತರಬೇತಿಗಳ ಕಾರ್ಯಕ್ರಮ ಕುತೂಹಲಕಾರಿಯಾಗಿದೆ. ಮಹಿಳಾ ಸ್ವಸಹಾಯ ಸಂಘಗಳು ಇಂದು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿವೆ. ಕೆಳ- ಕೆಳಮಧ್ಯಮ- ಮಧ್ಯಮ ವರ್ಗದ ಅನೇಕ ಕುಟುಂಬಗಳಲ್ಲಿ ಮನೆಯೊಡತಿಯೇ ಮನೆಯ ಏಕೈಕ ಹೊಟ್ಟೆಪಾಡಿನ ದುಡಿಮೆಯುಳ್ಳವಳೂ ಆಗಿರುವುದುಂಟು. ದುಡಿಮೆಯ ಪರಿಶ್ರಮದ ಜತೆಗೆ ಉಳಿತಾಯದ ಮಾದರಿಗಳನ್ನೂ ಮಹಿಳೆ ಚೆನ್ನಾಗಿ ಬಲ್ಲಳು. ಆದ್ದರಿಂದಲೇ ಮಹಿಳಾ ಸ್ವಸಹಾಯ ಸಂಘಗಳು ಇಂದು ಗ್ರಾಮೀಣ ಉಳಿತಾಯ ವ್ಯವಸ್ಥೆಗೆ ಮಹಾ ಪೋಷಕಗಳಾಗಿವೆ. ಹೊಣೆಗೇಡಿಗಳಾಗಿರುವ ಗಂಡಸರಿದ್ದಲ್ಲಂತೂ ಇದು ಇನ್ನಷ್ಟು ನಿಜ. ಇದನ್ನು ಪ್ರಧಾನಿ ಚೆನ್ನಾಗಿ ಅರ್ಥ ಮಾಡಿಕೊಂಡಿರುವಂತಿದೆ. ಮಹಿಳೆಯರಿಗೆ ನೀಡಿದ ಸಾಲ ಹಿಂದಿರುಗಿ ಬರಲಾರದು ಎಂಬ ತಕರಾರಿಲ್ಲ; ವ್ಯರ್ಥವಾಗಿ ಹೋಗಬಹುದು ಎಂಬ ಭಯವಿಲ್ಲ; ಒಳ್ಳೆಯ ರೀತಿಯಲ್ಲಿ ವಿನಿಯೋಗವಾಗುತ್ತದೆ ಹಾಗೂ ಮುಂದಿನ ತಲೆಮಾರಿಗೂ ಇದರ ಸತ್ಫಲ ದೊರೆಯುತ್ತದೆ ಎಂಬುದು ಖಚಿತ. ಹೀಗಾಗಿ ಸ್ತ್ರೀ ಸ್ವಸಹಾಯ ಸಂಘಗಳು ಹೊಸ ಯೋಜನೆಯ ನೆರವು ಪಡೆದರೆ ಇನ್ನಷ್ಟು ಬಲಿಷ್ಠವಾಗಲಿವೆ.

ಇವುಗಳೊಂದಿಗೆ ಪ್ರಧಾನಿ ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಣ, ವಸತಿ ಯೋಜನೆ ಇತ್ಯಾದಿ ವಿಚಾರಗಳನ್ನೂ ಪ್ರಸ್ತಾಪಿಸಿದ್ದಾರೆ. ಮುಂದಿನ ಲೋಕಸಭೆ ದೃಷ್ಟಿಯಿಂದ ಕೆಲವು ಮಾತುಗಳನ್ನೂ ಆಡಿದ್ದಾರೆ. ಆದರೆ ದೇಶ ಕಟ್ಟುವ ಕುರಿತ ಕಾಳಜಿ ಹೊಂದಿದ ಅವರ ಮಾತುಗಳು, ನೂತನ ಕಾರ್ಯಕ್ರಮಗಳು ಮೆಚ್ಚುಗೆಗೆ ಅರ್ಹವಾಗಿವೆ

Exit mobile version