Site icon Vistara News

AAP VS Delhi LG: ಆಪ್‌ಗೆ ಹಿನ್ನಡೆ; ದಿಲ್ಲಿ ನಗರಸಭೆಗೆ ಸದಸ್ಯರನ್ನು ನೇಮಿಸುವ ಎಲ್‌ಜಿ ಅಧಿಕಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಬೆಂಗಳೂರು: ರಾಜ್ಯ ಸಚಿವ ಸಂಪುಟವನ್ನು (Cabinet) ಸಮಾಲೋಚಿಸದೆ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (Delhi Municipal Corporation- ಎಂಸಿಡಿ)ಗೆ ಹತ್ತು ಆಲ್ಡರ್‌ಮನ್‌ಗಳನ್ನು (ನಗರಸಭೆ ಸದಸ್ಯ) ನೇಮಿಸಿರುವ ಲೆಫ್ಟಿನೆಂಟ್ ಗವರ್ನರ್ (Leftinant Governor) ಕ್ರಮವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿಹಿಡಿದಿದೆ. ಹೀಗಾಗಿ, ಎಲ್‌ಜಿ (LG) ನಡೆಯನ್ನು ಪ್ರಶ್ನಿಸಿದ್ದ ಆಮ್ ಆದ್ಮಿ ಪಕ್ಷ (Aam Admi Party- ಎಎಪಿ) ನೇತೃತ್ವದ ದೆಹಲಿ ಸರ್ಕಾರಕ್ಕೆ (AAP VS Delhi LG) ಹಿನ್ನಡೆಯಾಗಿದೆ.

ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್, ನ್ಯಾ. ಜೆಬಿ ಪರ್ದಿವಾಲಾ, ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠ ತೀರ್ಪು ಪ್ರಕಟಿಸಿದೆ. ಈ ವಿಷಯದಲ್ಲಿ ರಾಜ್ಯ ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಎಲ್‌ಜಿ ಬದ್ಧರಾಗಿರಬೇಕಿಲ್ಲ. ಎಲ್‌ಜಿ ಅವರ “ಕಾನೂನುಬದ್ಧ ಕರ್ತವ್ಯ”ದ ಪ್ರಕಾರ ಆಲ್ಡರ್‌ಮೆನ್‌ಗಳ ನೇಮಕವಾಗಿದೆ ಎಂದು ನ್ಯಾಯಪೀಠ ಹೇಳಿದೆ.

1993ರಲ್ಲಿ ತಿದ್ದುಪಡಿ ಮಾಡಲಾದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಕಾಯಿದೆಯ ಸೆಕ್ಷನ್ 3(3)(ಬಿ)(ಐ) ಪ್ರಕಾರ ಎಲ್‌ಜಿಗೆ ಆಲ್ಡರ್‌ಮೆನ್‌ಗಳನ್ನು ನೇಮಿಸಲು ಅಧಿಕಾರ ಇರುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ. ಗವರ್ನರ್‌ಗೆ ನೀಡಲಾದ ಈ ಅಧಿಕಾರ ಸಾಂವಿಧಾನಿಕ ಅಧಿಕಾರದ ಅತಿಕ್ರಮಣವಲ್ಲ ಎಂದಿದೆ.

ಕಳೆದ ವರ್ಷ ಮೇ 17ರಂದು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಆಲ್ಡರ್‌ಮೆನ್‌ಗಳನ್ನು ನಾಮನಿರ್ದೇಶನ ಮಾಡಲು ಎಲ್‌ಜಿ ಅಧಿಕಾರವನ್ನು ನೀಡುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಂಸಿಡಿಯನ್ನು ಅಸ್ಥಿರಗೊಳಿಸಬಹುದು ಎಂದು ಅದು ಹಿಂದೆ ಎಚ್ಚರಿಸಿತ್ತು. ಎಂಸಿಡಿ 250 ಚುನಾಯಿತ ಮತ್ತು 10 ನಾಮನಿರ್ದೇಶಿತ ಸದಸ್ಯರನ್ನು ಹೊಂದಿದೆ.

“ಎಂಸಿಡಿಯಲ್ಲಿ ವಿಶೇಷ ವ್ಯಕ್ತಿಗಳ ನಾಮನಿರ್ದೇಶನದ ಅಧಿಕಾರವನ್ನು ಎಲ್‌ಜಿಗೆ ನೀಡುವುದು ಎಂದರೆ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಮುನ್ಸಿಪಲ್ ಸಮಿತಿಗಳನ್ನು ಅಸ್ಥಿರಗೊಳಿಸಿದಂತಾಗಬಹುದು. ಏಕೆಂದರೆ ಆಲ್ಡರ್‌ಮೆನ್ ಸಹ ಮತದಾನದ ಅಧಿಕಾರವನ್ನು ಹೊಂದಿರುತ್ತಾರೆ” ಎಂದು ಉನ್ನತ ನ್ಯಾಯಾಲಯ ಹಿಂದೆ ಹೇಳಿತ್ತು.

ಡಿಸೆಂಬರ್ 2022ರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) 134 ವಾರ್ಡ್‌ಗಳನ್ನು ಪೌರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸಿತ್ತು. ಎಂಸಿಡಿ ಮೇಲಿನ ಬಿಜೆಪಿಯ 15 ವರ್ಷಗಳ ನಿಯಂತ್ರಣವನ್ನು ಕೊನೆಗೊಳಿಸಿತು. ಬಿಜೆಪಿ 104 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ 9 ಸ್ಥಾನಗಳನ್ನು ಗಳಿಸಿದೆ.

ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, ನಾಮನಿರ್ದೇಶನ ಮಾಡುವವರು ನಗರಾಡಳಿತದ ಸಹಾಯ ಮತ್ತು ಸಲಹೆಯನ್ನು ಅನುಸರಿಸಬೇಕು, ಅದು 30 ವರ್ಷಗಳ ರೂಢಿ ಎಂದರು. ಆದರೆ ದೀರ್ಘಕಾಲದ ರೂಢಿ ಇದ್ದ ಮಾತ್ರಕ್ಕೆ ಅದು ಸರಿ ಎಂದಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಪ್ರತಿಪಾದಿಸಿದರು.

ಇದನ್ನೂ ಓದಿ: Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ

Exit mobile version