ಬಳ್ಳಾರಿ: ನಟ ದರ್ಶನ್ (Actor Darshan) ಇನ್ನು ಮುಂದೆ ಬಳ್ಳಾರಿ ಜೈಲಿನಲ್ಲಿ (bellary jail) ಮುದ್ದೆ ಮುರಿಯಲಿದ್ದಾರೆ. ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Chitradurga Renukaswamy murder case) ಆರೋಪಿಯಾಗಿರುವ ದರ್ಶನ್ ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara Jail) ಬುಧವಾರ ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಸ್ಥಳಾಂತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈಲು ಸುತ್ತಮುತ್ತ ಮತ್ತು ಜೈಲು ಸಂಪರ್ಕದ ರಸ್ತೆಗಳ ಬದಿ ಭಾರಿ ಭದ್ರತೆ ಕೈಗೊಳ್ಳಲಾಗುತ್ತಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಎ2 ಆರೋಪಿ ನಟ ದರ್ಶನಗೆ ರಾಜಾತಿಥ್ಯ ಹಿನ್ನೆಲೆಯಲ್ಲಿ ಕೊಲೆ ಪ್ರಕರಣದ ಆರೋಪಿಗಳನ್ನು ರಾಜ್ಯದ ಬೇರೆಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಬುಧವಾರ ಮಧ್ಯಾಹ್ನ ಬಳಿಕ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ದರ್ಶನ್ ನ್ಯಾಯಾಂಗ ಬಂಧನ ಅವಧಿ ಬುಧವಾರ ಮುಕ್ತಾಯವಾಗಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ನ್ಯಾಯಾಧೀಶರೆದುರು ಹಾಜರು ಪಡಿಸಲಾಗುತ್ತದೆ. ನ್ಯಾಯಾಂಗ ಬಂಧನ ಅವಧಿ 14 ದಿನ ವಿಸ್ತರಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಪರಾಹ್ನ 3 ಗಂಟೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಹೊರತರುವ ಸಾಧ್ಯತೆ ಇದೆ.
ಎರಡು ಎಫ್ ಐಆರ್ ನಲ್ಲಿ ದರ್ಶನ್ ಹೆಸರಿದ್ದು, ದರ್ಶನ್ ವಿರುದ್ದ ದಾಖಲಾಗಿರುವ ಎಫ್ಐಆರ್ ಗಳ ವಿಚಾರಣೆ ನಡೆಸಲಾಗುತ್ತಿದೆ. ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್
ನಟ ದರ್ಶನ್ ನನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಕರೆತರುತ್ತಿರುವ ಹಿನ್ನೆಲೆಯಲ್ಲಿ ಜೈಲು ಸಂಪರ್ಕದ ರಸ್ತೆಗಳ ಬದಿ ಬ್ಯಾರಿಕೇಡ್ ಹಾಕಲಾಗುತ್ತಿದೆ. ಬುಧವಾರ ಬಳ್ಳಾರಿಗೆ ದರ್ಶನ್ ನನ್ನು ಕರೆ ತರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದರೆ.
ದರ್ಶನ್ ನೋಡಲು ಜನ ಸೇರುವ ಸೂಚನೆ ಸಿಕ್ಕಿದ್ದರಿಂದ ಜನರ ನಿಯಂತ್ರಣಕ್ಕೆ ಎರಡು ರಸ್ತೆಗಳ ಬದಿಯಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗುತ್ತಿದೆ. ಜೈಲು ಸಂಪರ್ಕದ ರಸ್ತೆಗಳಾದ ಎಸ್ಪಿ ಸರ್ಕಲ್ ರಸ್ತೆ, ಕನಕ ದುರ್ಗಮ್ಮ ದೇಗಲ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸುತ್ತಿದ್ದಾರೆ.
ದರ್ಶನ್ ಮೇಲಿನ ಆರೋಪದ ಬಗ್ಗೆ ಗೊತ್ತಿಲ್ಲ
ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಕರೆ ತರುತ್ತಿರುವ ಸುದ್ದಿ ಕೇಳಿ ಬುಧವಾರ ಮುಂಜಾನೆಯಿಂದಲೇ ಅಭಿಮಾನಿಗಳು ಜೈಲು ಸಮೀಪ ಸೇರುತ್ತಿದ್ದಾರೆ. ದರ್ಶನ್ ನೋಡಲು ಜೈಲು ಬಳಿ ಬಂದ ಅಭಿಮಾನಿಗಳಿಗೆ ಆತನ ಮೇಲಿರುವ ಆರೋಪದ ಬಗ್ಗೆ ಗೊತ್ತಿಲ್ಲ, ನೆಚ್ಚಿನ ನಟನನ್ನು ನೋಡಲು ಮಾತ್ರ ಬಂದಿದ್ದೇವೆ ಎನ್ನುತ್ತಿದ್ದಾರೆ.
ನಮ್ಮ ನೆಚ್ಚಿನ ಹೀರೋಗಳನ್ನು ನೋಡಲು ಬೆಂಗಳೂರಿಗೂ ಹೋಗ್ತೇವೆ. ಇದೀಗ ದರ್ಶನ ಬಳ್ಳಾರಿಗೆ ಬರುತ್ತಿರುವುದರಿಂದ ಆತನನ್ನು ನೋಡಲು ಕಾತರರಾಗಿದ್ದೇವೆ. ಆತನ ಮೇಲಿರುವ ಆರೋಪದ ಬಗ್ಗೆ ಕೋರ್ಟ್, ಪೊಲೀಸರು ನೋಡಿಕೊಳ್ತಾರೆ. ದರ್ಶನ್ ನೋಡಲು ಸ್ವಲ್ಪ ಅವಕಾಶ ಸಿಕ್ಕರೇ ಸಾಕು ಎನ್ನುತ್ತಿದ್ದಾರೆ ಅಭಿಮಾನಿಗಳು.
ಬಳ್ಳಾರಿ ಜೈಲು ಇತಿಹಾಸ
1884ರಲ್ಲಿ ಆರಂಭವಾಗಿದ್ದ ಬಳ್ಳಾರಿ ಜೈಲಿಗೆ 140 ವರ್ಷಗಳ ಇತಿಹಾಸವಿದೆ. ಪನಿಷ್ ಮೆಂಟ್ ಜೈಲ್ ಎಂಬ ಖ್ಯಾತಿ ಇದು ಪಡೆದಿದೆ. ಎಲ್ಲಿ ಗಲಾಟೆಯಾದರೂ ಆರೋಪಿ ಮತ್ತು ಕೈದಿಗಳನ್ನು ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡುವ ವಾಡಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಶಾರ್ಪುಶೂಟರ್ ಬಚ್ಚಾಖಾನ್, ವಿಜಯಪುರದ ಮಹದೇವ ಸಾಹುಕಾರ್ ಸೇರಿಸಂತೆ ಇತರರನ್ನು ಬಂಧಿಸಿಟ್ಟಿದ್ದು ಇದೇ ಜೈಲಿನಲ್ಲಿ. ಮುನಿರಾಬಾದ್ ಬಾಂಬ್ ಇಡಲು ಬಂದ ಭಯೋತ್ಪಾದಕರನ್ನು ಇಲ್ಲಿಯೇ ಬಂಧಿಸಿಟ್ಟಿದ್ದರು.
ರಾಜ್ಯದ ಅತ್ಯಂತ ಹಳೆಯ ಜೈಲು ಆಗಿರುವ ಬಳ್ಳಾರಿ ಜೈಲಿನಲ್ಲಿ ಸದ್ಯ 385 ಖೈದಿಗಳಿದ್ದಾರೆ. 100 ಜನ ಕೊಲೆ ಆರೋಪಿಗಳಿದ್ದು, 38 ಜನ ರೌಡಿಶೀಟರ್ ಗಳಿದ್ದಾರೆ.
ಭೀಮಾತೀರದ ಹನುಮಂತ ನಾಯ್ಕ್ ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದಲ್ಲಿನ 80 ಆರೋಪಿಗಳು, ಹುಲಿಹೈದರ್ ಗಲಭೆ, ಕೊಲೆ ಪ್ರಕರಣದ ಆರೋಪಿಗಳು ಬಳ್ಳಾರಿ ಸೆಂಟ್ರರ್ ಜೈಲಿಗೆ ಶಿಫ್ಟ್ ಆಗಿದ್ದರು.
ಕೊಲೆ ಆರೋಪಿಗಳು, ರೇಫಿಸ್ಟ್ ಖೈದಿಗಳು ಇರುವ ಬಳ್ಳಾರಿ ಜೈಲಿನಲ್ಲಿ 80 ಸಿಸಿ ಕೆಮರಾ, 9 ಡಾನ್ ಮೆಟರಿಯಲ್ ಸೆಲ್, 16 ಸ್ಪೆಷಲ್ ಬ್ಯಾರಿಕೇಡ್ ವ್ಯವಸ್ಥೆ ಇದೆ.
ಪ್ರಖ್ಯಾತಿ , ಕುಖ್ಯಾತಿ ಎರಡನ್ನೂ ಹೊಂದಿರೋ ಬಳ್ಳಾರಿ ಜೈಲ್ ನಲ್ಲಿ ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧನದಲ್ಲಿ ಇರಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರ ರಾಜ ಗೋಪಾಲಾ ಚಾರ್ಯ, ಬಿಜೆಪಿ ಸರಕಾರದ ಗೃಹಸಚಿವರಾಗಿದ್ದ ದಿವಂಗತ ವಿ.ಎಸ್. ಅಚಾರ್ಯ ಅವರನ್ನು ಎಮರ್ಜೆನ್ಸಿ ಅವಧಿಯಲ್ಲಿ ಬಳ್ಳಾರಿ ಜೈಲಿನಲ್ಲಿ ಬಂಧಿಸಿಡಲಾಗಿತ್ತು. ಮಹದಾಯಿ ಹೋರಾಟಗಾರರ ರೈತರು ಇಲ್ಲಿ ಬಂಧನಕ್ಕೆ ಒಳಗಾಗಿದ್ದರು.
ನಟೋರಿಯಸ್ ಖೈದಿಗಳಿಂದ ಕುಖ್ಯಾತಿ ಹೊಂದಿರೋ ರೌಡಿಗಳು, ಭೀಮಾ ತೀರದ ಹಂತಕ ಹನುಮಂತ ನಾಯ್ಕ್, ಕುಖ್ಯಾತಿ ರೇಫಿಸ್ಟ್ ಉಮೇಶ್ ರೆಡ್ಡಿ, ಕುಖ್ಯಾತ ರೌಡಿ ಡೆಡ್ಲಿ ಸೋಮ, ಕುಖ್ಯಾತ ಕಳ್ಳ ಸಿಗ್ಲಿ ಬಸ್ಯಾ, ನಟೋರಿಯಸ್ ರೌಡಿ ಬಚ್ಚಾಖಾನ್, ಕೊರಂಗು ಕೃಷ್ಣ ಸೇರಿ ಹಲವಾರು ರೌಡಿಗಳು ಇಲ್ಲಿ ಜೈಲು ವಾಸ ಅನುಭವಿಸಿದ್ದರು.
ರಾಜಕಾರಣಿಗಳಾದ ಜನಾರ್ದನ ರೆಡ್ಡಿ ಕೂಡಾ ಒಂದು ದಿನ ಇದೇ ಜೈಲಿನಲ್ಲಿ ಕಾಲ ಕಳೆದಿದ್ದರು.
ಸಾಮಾನ್ಯ ಸೆಲ್ ನಲ್ಲಿ ದರ್ಶನ್ ?
ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ವಿಐಪಿ ಸೆಲ್ ಗಳು ಇಲ್ಲ. ಇಲ್ಲಿ ಎಲ್ಲವೂ ಸಾಮಾನ್ಯ ಸೆಲ್ ಗಳಾಗಿದೆ. ಹೀಗಾಗಿ ದರ್ಶನ್ ಕೂಡ ಇಲ್ಲಿರುವ ಎಲ್ಲ ಕೈದಿಗಳಂತೆಯೇ ಸಾಮಾನ್ಯ ಕೈದಿಯಾಗಿ ಮುಂದುವರಿಯಬೇಕಿದೆ.
ಕೇಂದ್ರ ಕಾರಾಗೃಹದ ಹೊರ ಭದ್ರತಾ ವಿಭಾಗದ ಸೆಲ್ ನಲ್ಲಿ ನಟ ದರ್ಶನ್ ಅವರನ್ನು ಇರಿಸಲಾಗುತ್ತದೆ. ಹೊರ ಭದ್ರತಾ ವಿಭಾಗದಲ್ಲಿ ಒಟ್ಟು 11 ಸೆಲ್ ಗಳಿದ್ದು, ಒಂದು ಸೆಲ್ ನಲ್ಲಿ ಇಬ್ಬರು ಕೈದಿಗಳು ಇರುವ ವ್ಯವಸ್ಥೆ ಇದೆ. ಪ್ರತಿಯೊಂದು ಸೆಲ್ 10/10 ಅಡಿ ಅಗಲವನ್ನು ಹೊಂದಿದೆ.
ಇಲ್ಲಿರುವ ಹನ್ನೊಂದು ಸೆಲ್ ಗಳಿಗೆ ದಿನದ 24 ಗಂಟೆಯೂ ಭದ್ರತೆ ವ್ಯವಸ್ಥೆ ಮಾಡಲಾಗುತ್ತದೆ. ಸೆಲ್ ಮುಂಭಾಗ 20 ಅಡಿ ಅಗಲ 60 ಅಡಿ ಉದ್ದದ ಜಾಗದಲ್ಲಿ ವಾಕಿಂಗ್ ಮಾಡಬಹುದು. ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು 15 ನಿಮಿಷ ಅವಕಾಶವಿದೆ.
ಈ ವೇಳೆ ಭದ್ರತೆ ಸಿಬ್ಬಂದಿ ಕೂಡ ಹಾಜರಿರುತ್ತಾರೆ. ಸೆಲ್ ನ ಒಳಗಡೆ ಬಾತ್ ರೂಂ, ಶೌಚಾಲಯದ ವ್ಯವಸ್ಥೆ ಇದ್ದು, ಸ್ನಾನ ಮಾಡಲು ತಣ್ಣೀರು ಮಾತ್ರ ಇರುತ್ತದೆ. ಈ ಸೆಲ್ ಗೆ ಎರಡು ಗೇಟ್ ಗಳಿರುತ್ತವೆ. ಇಲ್ಲಿರುವ ಹನ್ನೊಂದು ಸೆಲ್ ಗಳಲ್ಲಿ ಸದ್ಯ ಶಿವಮೊಗ್ಗ, ಹಾಸನ,ಬೆಂಗಳೂರು, ಮಂಗಳೂರು ಮೂಲದ ಕೈದಿಗಳಿದ್ದಾರೆ.
ಬಳ್ಳಾರಿಯಲ್ಲಿ ಹೈ ಅಲರ್ಟ್
ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್ ಶಿಫ್ಟ್ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹದಲ್ಲಿ ಅಧಿಕಾರಿಗಳು ಹೈ ಅಲಟ್೯ ಆಗಿದ್ದಾರೆ. ಮಂಗಳವಾರ ರಾತ್ರಿ ಸಿಬ್ಬಂದಿಯ ತುರ್ತು ಸಭೆ ನಡೆಸಿದ ಬಳ್ಳಾರಿ ಕೇಂದ್ರ ಕಾರಾಗೃಹ ಅಧೀಕ್ಷಕಿ ಲತಾ ಅವರು ಪೊಲೀಸ್ ಅಧಿಕಾರಿಗಳು ತೀವ್ರ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.
ಸಿಸಿ ಟಿವಿಗಳ ಕಾರ್ಯಾಚರಣೆ, ಸೆಲ್ ಗಳ ಸ್ಥಿತಿಗತಿ ಪರಿಶೀಲನೆ ನಡೆಸಿರುವ ಅವರು, ಜೈಲಿನ ಎಲ್ಲ ಸಿಬ್ಬಂದಿ ಜೊತೆ ಸಭೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ನಡೆದ ಘಟನೆ ಇಲ್ಲಿ ಮರುಕಳಿಸಬಾರದು ಮತ್ತು ಯಾವುದೇ ಸಿಬ್ಬಂದಿ ಖೈದಿಗಳ ಜತೆ ಕೈ ಮಿಲಾಯಿಸಿದ್ದು ಗೊತ್ತಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಭದ್ರತೆ ಹೆಚ್ಚಳ
ಜೈಲು ಬಳಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಜೈಲಿನಲ್ಲಿ ಸದ್ಯ 100 ಜನ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದಾರೆ. ಹೆಚ್ಚಿನ ಸಿಬ್ಬಂದಿ ನಿಯೋಜನೆಗೆ ಚಿಂತನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Actor Darshan : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ಡ್ರಿಲ್!
ಧಾರವಾಡ ಜೈಲಿಗೆ ಧನರಾಜ್
17 ಆರೋಪಿಗಳ ಪೈಕಿ ಎ9 ಆರೋಪಿ ಧನರಾಜ್ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಬುಧವಾರ ಸಂಜೆಯೊಳಗೆ ಶಿಫ್ಟ್ ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗುತ್ತಿದೆ.
ಶಿವಮೊಗ್ಗ ಜೈಲಿಗೆ ಎಸ್ಪಿ ತಂಡ ದಿಢೀರ್ ದಾಳಿ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಕೆಂದ್ರ ಕಾರಾಗೃಹದ ಮೇಲೆ ಎಸ್ಪಿ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದೆ. ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ 120 ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ ಜೈಲಿನಲ್ಲಿ ಕಾರ್ಯಾಚರಣೆಯನ್ನು ತಪಾಸಣೆ ನಡೆಸಿದ್ದಾರೆ. ಜೈಲಿನಲ್ಲಿರುವ ಬ್ಯಾರಕ್, ನಿಷೇಧಿತ ವಸ್ತುಗಳ ಬಗ್ಗೆ ತಪಾಸಣೆ ನಡೆಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಲಕ್ಷ್ಮಣ ಹಾಗೂ ಜಗದೀಶ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಸ್ಥಳಾಂತರ ನಡೆಸಲಿದ್ದಾರೆ.