Site icon Vistara News

Actor Darshan Arrested: ರೇಣುಕಾಸ್ವಾಮಿಗೆ ದರ್ಶನ್‌ ಗ್ಯಾಂಗ್‌ನಿಂದ ಕ್ರೂರ ಹಿಂಸೆ; ಪೋಸ್ಟ್‌ಮಾರ್ಟಂ ವರದಿಯಲ್ಲಿದೆ ಭಯಾನಕ ಡಿಟೇಲ್ಸ್‌

Actor Darshan Arrested

ಬೆಂಗಳೂರು: ದರ್ಶನ್ ಮತ್ತು ಆತನ ಗ್ಯಾಂಗ್​ನ(Actor Darshan Arrested ) ಕೈಗೆ ಸಿಕ್ಕಿ ಅಮಾನುಷವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಿದೆ. ವರದಿಯ ಪ್ರಕಾರ ಆರೋಪಿಗಳು ಅತ್ಯಂತ ಹೀನಾಯವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ರೇಣುಕಾ ಸ್ವಾಮಿಯ ದೇಹದ ಸರ್ವ ಅಂಗಗಳ ಮೇಲೂ ಕೊಲೆಗಾರರ ಗ್ಯಾಂಗ್​ ಪ್ರಹಾರ ಮಾಡಿದೆ. ಕೈಗೆ ಸಿಕ್ಕಿದ್ದ ವಸ್ತುಗಳಿಂದೆಲ್ಲ ಹೊಡೆದು ಆಘಾತ ಮಾಡಿದ್ದಾರೆ. ರಕ್ತ ಹೆಪ್ಪುಗಟ್ಟಿಸಿ ಕೊಲೆ ಮಾಡಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಪೊಲೀಸರು ತನಿಖಾ ವರದಿ ರಚಿಸಲಿದ್ದಾರೆ. ಆರೋಪಿಗಳ ಬಾಯಿ ಬಿಡಿಸಲಿದ್ದಾರೆ. ಆರೋಪಿಗಳು ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೇಳಬಹುದಾದ ಸುಳ್ಳುಗಳನ್ನು ಆ ಕ್ಷಣದಲ್ಲೇ ಭೇದಿಸಲಿದ್ದಾರೆ. ಸಾಂದರ್ಭಿಕ ಪ್ರಶ್ನೆಗಳನ್ನು ಹಾಕುವ ಮೂಲಕ ಆರೋಪಿಗಳಿಂದ ನೈಜ ಉತ್ತರವನ್ನು ಕಕ್ಕಿಸಲಿದ್ದಾರೆ. ಇವೆಲ್ಲವೂ ತನಿಖೆಯ ಪ್ರಗತಿಗೆ ನೆರವಾಗಲಿದೆ.

ರೇಣುಕಾಸ್ವಾಮಿ ದೇಹದ ಎಲ್ಲೆಲ್ಲಿ ಗಾಯವಾಗಿತ್ತು?

ಮರಣೋತ್ತರ ಪರಿಕ್ಷೆ ವರದಿಯ ಆಧಾರದಲ್ಲಿ ರೇಣುಕಾ ಸ್ವಾಮಿಯ ಮರ್ಮಾಂಗದ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಇದು ಮನುಷ್ಯನಿಗೆ ಅತೀವವಾದ ನೋವು ತರುವ ಆಘಾತವಾಗಿದೆ. ಕೊಲೆಗಾರರ ಹೊಡೆತಕ್ಕೆ ರೇಣುಕಾ ಅವರ ಮರ್ಮಾಂಗದಲ್ಲಿ ಆಂತರಿಕ ಹಾಗೂ ಬಾಹ್ಯ ರಕ್ತ ಸ್ರಾವ ಉಂಟಾಗಿದೆ.

ರೇಣುಕಾ ಅವರ ಹೊಟ್ಟೆ ಭಾಗದಲ್ಲೂ ರಕ್ತ ಸೋರಿಕೆಯಾಗಿದೆ. ಒಳ ಭಾಗದಲ್ಲೂ ರಕ್ತ ಹೆಪ್ಪುಗಟ್ಟಿದೆ. ಹೊರಗಿನಿಂದ ಅಪ್ಪಳಿಸಿರುವ ಬಾಹ್ಯ ವಸ್ತುಗಳಿಂದ ಈ ಗಾಯಗಳು ಉಂಟಾಗಿವೆ. ಅಂದರೆ ಮರದ ದೊಣ್ಣೆಗಳಿಂದ ಅವರ ಮುಖ, ಮೂತಿ ನೋಡದೆ ಹಲ್ಲೆ ಮಾಡಿರುವುದು ಖಾತರಿಯಾಗಿದೆ.

ರೇಣುಕಾ ಅವರ ತಲೆ ಭಾಗಕ್ಕೆ ಒಳಗಿನಿಂದ ಗಂಭೀರವಾಗಿ ಪೆಟ್ಟು ಬಿದ್ದಿದೆ. ತಲೆ ಭಾಗದಲ್ಲಿ ರಕ್ತ ಸೋರಿಕೆ ಆಗಿಲ್ಲ. ಆದರೆ, ಯಾವುದೋ ವಸ್ತುವಿನಿಂದ ಅಪ್ಪಳಿಸಿರುವ ಆಘಾತ ತಲೆಗೆ ಆಗಿದೆ.

ಇದನ್ನೂ ಓದಿ: Renuka Swamy Murder Case: ಚಿತ್ರದುರ್ಗದಲ್ಲಿ ಮೌನ ಪ್ರತಿಭಟನೆ; ದರ್ಶನ್‌ ಸೇರಿ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆಗೆ ಆಗ್ರಹ

ಕೈ ಮತ್ತು ಕಾಲುಗಳು ಹಾಗೂ ಬೆನ್ನಿನಲ್ಲಿ ಸಿಕ್ಕಾಪಟ್ಟೆ ರಸ್ತ ಸ್ರಾವ ಉಂಟಾಗಿದೆ. ಪದೇ ಪದೇ ಆಗಿರುವ ಪ್ರಹಾರದಿಂದ ಚರ್ಮ ಕಿತ್ತು ಬಂದು ರಕ್ತ ಸ್ರಾವ ಉಂಟಾಗಿದೆ. ರೇಣುಕಾ ಅವರ ಸಾವಿನ ಆರ್ತನಾದವನ್ನೂ ಕೇಳದೆ ಆರೋಪಿಗಳು ಹಲ್ಲೆ ಮಾಡಿರುವುದು ಈ ವರದಿಯಿಂದ ಖಚಿತವಾಗಿದೆ. ಎದೆ ಭಾಗಕ್ಕೂ ಪೆಟ್ಟು ಬಿದ್ದಿದ್ದು ಹೃದಯ ಹಾಗೂ ಶ್ವಾಸಕೋಶಗಳಿರುವ ಪ್ರದೇಶಗಳು ಜರ್ಜರಿತಗೊಂಡಿದೆ.

ಹಲ್ಲೆಗೆ ಬಳಸಿರಬಹುದಾದ ವಸ್ತುಗಳು


ಮರದ ಪೀಸ್​ಗಳಿಂದಲೇ ಹಲ್ಲೆ ಮಾಡಿರುವುದು ಗಾಯದ ಆಳ ಮತ್ತು ತೀವ್ರತೆಯಿಂದ ಗೊತ್ತಾಗಿದೆ. ಚರ್ಮ ಸುಲಿದು ಹೋಗುವ ರೀತಿಯಲ್ಲಿ ಬಾರಿಸಿದ್ದನ್ನು ಗಮನಿಸಿದ್ದರೆ ಚರ್ಮದ ಬೆಲ್ಟ್ ಕೂಡ ಬಳಸಿರಬಹುದು. ಗಂಟೆಗಟ್ಟೆ ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸಲಾಗಿದ್ದು ಏಟಿನ ಆಘಾತಕ್ಕೆ ಅವರು ಮೂರ್ಛೆ ತಪ್ಪಿರಬಹುದು. ಅದೇ ರೀತಿ ಅವರ ತಲೆಯನ್ನು ಹಿಡಿದು ಯಾವುದೇ ಗಟ್ಟಿ ವಸ್ತುವಿಗೆ ಅಪ್ಪಳಿಸಿದ ಸೂಚನೆಯೂ ಇದೆ. ದೇಹದಲ್ಲಿ ಒಟ್ಟಾರೆಯಾಗಿ ಕೊಲೆಗಾರರ ಗ್ಯಾಂಗ್​ 15 ಕಡೆ ಗಾಯ ಮಾಡಿದೆ. ಶವವನ್ನು ಎಸೆದು ಹೋದ ಬಳಿಕ ಮುಖ ಹಾಗೂ ದವಡೆಯನ್ನು ನಾಯಿಗಳು ಕಿತ್ತು ಎಳೆದಿರುವುದು ಕೂಡ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.

ಲಾರಿಗೆ ತಲೆ ಅಪ್ಪಳಿಸಿದ್ದನ್ನು ಒಪ್ಪಿಕೊಂಡ ಕೊಲೆಗಾರರು

ದರ್ಶನ್ ಗ್ಯಾಂಗ್​ನ (Actor Darshan) ಅಮಾನುಷ ಕೃತ್ಯಕ್ಕೆ ಬಲಿಯಾದ ರೇಣುಕಾ ಸ್ವಾಮಿ ಪ್ರಕರಣ ಥೇಟ್‌ ಸಿನಿಮಾ ಮಾದರಿಯಲ್ಲಿಯೇ ನಡೆದಿದೆ. ಪೊಲೀಸರ ಮುಂದೆ ಆರೋಪಿಗಳು ಕೊಲೆ ಮಾಡಿದ್ದು ಹೇಗೆ ಎಂಬುದನ್ನು ವಿವರಸಿದ್ದಾರೆ. ಪೊಲೀಸರು ಸತತ ಪ್ರಶ್ನೆಗಳು ಹಾಗೂ ಕೆಂಗಣ್ಣನ್ನು ಎದುರಿಸಲಾಗದ ಆರೋಪಿಗಳು ಕೊಲೆ ಮಾಡಿರುವ ಪ್ರತಿ ಕ್ಷಣವನ್ನೂ ವಿವರಿಸಿದ್ದಾರೆ.

ಪೊಲೀಸರ ಲಾಠಿ ಏಟು ರುಚಿ ತಿನ್ನುತ್ತಿದ್ದಂತೆ ಆರೋಪಿಗಳು ಹೇಳಿಕೆ ನೀಡಿದ್ದು ಹೀಗೆ. ʻʻಮೊದಲಿಗೆ ದರ್ಶನ್‌ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ದರ್ಶನ್‌ ಅವರು ರೇಣುಕಾ ಸ್ವಾಮಿಯನ್ನು ಜೋರಾಗಿ ತಳ್ಳಿದ್ದರು. ಇದರಿಂದಾಗಿ ಶೆಡ್‌ನಲ್ಲಿದ್ದ ಲಾರಿಗೆ ರೇಣುಕಾಸ್ವಾಮಿ ತಲೆ ತಾಗಿ ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆಗ ದರ್ಶನ್‌ ಹಾಗೂ ಪವಿತ್ರಾ ಇಬ್ಬರೂ ಅಲ್ಲಿದ್ದರು. ಆ ಬಳಿಕ ದರ್ಶನ್‌ ಮತ್ತು ಪವಿತ್ರಾ ಮನೆಗೆ ಹೋಗಿದ್ದರು. ನಾವು ಮತ್ತೆ ರೇಣುಕಾ ಸ್ವಾಮಿಗೆ ಹೊಡೆದೆವು. ರೇಣುಕಾ ಸ್ವಾಮಿ ಕಾಲು ಹಿಡಿದು ಕಾಂಪೌಂಡ್‌ಗೆ ಬಡಿದೆವು. ಆಗ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟರು. ತಕ್ಷಣ ನಮ್ಮ ದರ್ಶನ್‌ ಅವರಿಗೆ ಕರೆ ಮಾಡಿದೆವು. ಬಾಡಿನ ಏನಾದ್ರು ಮಾಡಿ ಮುಚ್ಚಾಕಿ ಅಂದರು. ಭಯದಲ್ಲಿ ಏನ್ಮಾಡಬೇಕು ಅಂತಾ ಗೊತ್ತಾಗದೆ ಮೋರಿಗೆ ಬಿಸಾಕಿ ಮನೆಗೆ ಹೋಗಿದ್ವಿʼʼಎಂದು ಹೇಳಿಕೆ ನೀಡಿದ್ದಾರೆ.

Exit mobile version