ಬೆಂಗಳೂರು: ಚಿತ್ರದುರ್ಗದ ಮೂಲದ ರೇಣುಕಾ ಸ್ವಾಮಿ ಎಂಬುವರನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಬಂಧಿಸಿಟ್ಟಿರುವ (Actor darshan Arrested) ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಟೆಂಟ್ ಹಾಕಿ ಮುಚ್ಚಲಾಗಿದೆ! ಪೊಲೀಸರು ಟೆಂಟ್ ಹಾಕಿದ್ದಕ್ಕೆ ಕಾರಣ ಕೊಟ್ಟಿಲ್ಲ. ಹೀಗಾಗಿ ದರ್ಶನ್‌ಗೆ ‘ಸಕಲ ಸೇವೆಗಳನ್ನು’ ನೀಡಲು ಟೆಂಟ್ನ ಕವಚ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಬಂಧನವಾದ ದಿನದಿಂದಲೂ ದರ್ಶನ್ ಸರಿಯಾಗಿ ಊಟ ಮಾಡದೇ ಎಣ್ಣೆ ಕೊಡಿ, ಸಿಗರೇಟು ಕೊಡಿ ಎಂದಷ್ಟೇ ಕೇಳುತ್ತಿದ್ದಾರೆ ಎಂಬುದಾಗಿಯೂ ವರದಿಯಾಗಿತ್ತು. ಮೈ ನಡುಕ ಉಂಟಾಗಿದೆ. ಸಿಗರೇಟು ಬೇಕು, ಕುಡಿಯಲು ಎಣ್ಣೆ ಬೇಕು ಎಂದು ಅವರು ಡಿಮ್ಯಾಂಡ್ ಮಾಡುತ್ತಿದ್ದಾರೆ. ತೆರೆದ ಪೊಲೀಸ್ ಠಾಣೆಯಲ್ಲಿ ಅವರಿಗೆ ಇಂಥ ‘ಅಗತ್ಯ’ ವಸ್ತುಗಳನ್ನು ಕೊಟ್ಟರೆ ಸಾರ್ವಜನಿಕರಿಗೆ ಮತ್ತು ಮಾಧ್ಯಮದವರಿಗೆ ಗೊತ್ತಾದರೆ ಸಮಸ್ಯೆಯಾಗುತ್ತದೆ ಎಂದು ಪೊಲೀಸರು ಟೆಂಟ್ನ ಐಡಿಯಾ ಮಾಡಿದ್ದಾರೆ.
ಪೊಲೀಸ್ ಠಾಣೆಯ ಲಾಕ್ಅಪ್ನಲ್ಲಿರುವವರಿಗೆ ಕಾನೂನು ಪ್ರಕಾರ ಊಟ, ತಿಂಡಿ ಬಿಟ್ಟರೆ ಇನ್ಯಾವುದೂ ಇಲ್ಲ. ಆದರೆ, ಸೆಲೆಬ್ರಿಟಿಗಳು ಹಣ ಬಲ ಬಳಸಿ ಇಂಥದ್ದನ್ನೆಲ್ಲ ಪಡೆದುಕೊಳ್ಳುತ್ತಾರೆ. ಅಂತೆಯೇ ದರ್ಶನ್ ಬಳಗಕ್ಕೆ ಉಪಕಾರ ಮಾಡಲು ಐಡಿಯಾ ಮಾಡಿರಬಹುದು ಎನ್ನಲಾಗಿದೆ. ಇಲ್ಲದಿದ್ದರೆ ಸಾಮಾನ್ಯರಿಗಾಗಿ ಇರುವ ಪೊಲೀಸ್ ಠಾಣೆಯನ್ನು ಟೆಂಟ್ ಶಾಮಿಯಾನಗಳಿಂದ ಮುಚ್ಚುವ ಪ್ರಮೇಯ ಏನಿದೆ ಎಂದು ಜನ ಪ್ರಶ್ನಿಸಿದ್ದಾರೆ.
ಠಾಣೆಯ ಸುತ್ತಲೂ ಶಾಮಿಯಾನದ ಜತೆಗೆ ಹಾಕುವ ಸೈಡ್ವಾಲ್ (ಪರದೆಗಳನ್ನು) ಹಾಕಲಾಗಿದ್ದು, ಪೊಲೀಸ್ ಠಾಣೆಯನ್ನು ಯಾರಿಗೂ ಕಾಣದಂತೆ ಮಾಡಲಾಗಿದೆ. ಈ ಸ್ಟೇಷನ್ಗೆ ಯಾರಿಗೂ ಪ್ರವೇಶ ಇಲ್ಲದಂತೆ ಮಾಡಲಾಗಿದೆ. ಸಣ್ಣ ಪುಟ್ಟ ಅಹವಾಲುಗಳನ್ನು ತೆಗೆದುಕೊಂಡು ಬರುವ ಜನರನ್ನು ಶಾಮಿಯಾನದಿಂದ ಮುಚ್ಚಿದ ಗೇಟ್ನಿಂದಲೇ ಪೊಲೀಸರು ಮಾತನಾಡಿಸಿ ಕಳುಹಿಸುತ್ತಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕರ ಸೇವೆಗೆ ಇರುವ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ ದರ್ಶನ್ ಗ್ಯಾಂಗ್ಗೆ ರೆಸಾರ್ಟ್ ಆಗಿ ಪರಿವರ್ತನೆಗೊಂಡಿದೆ. ದರ್ಶನ್ ಬಳಗ ಆ ಠಾಣೆಯಲ್ಲಿ ಇರುವ ತನಕ ಸಾರ್ಜನಿಕರ ಸೇವೆಗೆ ದೊರೆಯುವುದು ಅನುಮಾನ.
ಬೋರ್ಡ್ ಕಾಣದ ಹಾಗೆ ಶಾಮಿಯಾನ
ಬೋರ್ಡ್ ಹಾಕಿದ ಅಂದಕ್ಕೆ ಠಾಣೆಯ ಬೋರ್ಡ್ ಕೂಡ ಕಾಣುತ್ತಿಲ್ಲ. ಅಗತ್ಯಕ್ಕಾಗಿ ಠಾಣೆಗೆ ಬರುವ ಮಂದಿಗೆ ಠಾಣೆ ಎಲ್ಲಿ ಎಂದು ಹುಡುಕುವ ಪರಿಸ್ಥಿತಿ ಶುರುವಾಗಿದೆ. ಹಾಗಾದರೆ ಜನಸಾಮಾನ್ಯರ ಪೊಲೀಸ್ ಠಾಣೆ ವಿಐಪಿ ಆರೋಪಿಗಳ ಅಡಗುದಾಣವಾಗಿರುವುದು ವಿಪರ್ಯಾಸ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಠಾಣೆಯ ಸುತ್ತ ಮುತ್ತ ನಿಷೇದಾಜ್ಞೆ
ದರ್ಶನ್ ಬಂಧಿಸಿಟ್ಟಿರುವ ಠಾಣೆಯ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಭಿಮಾನಿಗಳು ಹಾಗೂ ಮಾಧ್ಯಮಗಳ ಕ್ಯಾಮೆರಾಮನ್ಗಳು ತುಂಬಿಕೊಳ್ಳುತ್ತಿದ್ದ ಜಾಗದಲ್ಲಿ ಈಗ ನಾಲ್ಕು ಮಂದಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಗುರುವಾರ ನಗರ ಪೊಲೀಶ್ ಕಮಿಷನರ್ ದಯಾನಂದ್ ಅವರು ಠಾಣೆಗೆ ಭೇಟಿ ನೀಡಿದ್ದರು. ಆ ಬಳಿಕದಿಂದ ಠಾಣೆಯ ಸುತ್ತ ನಿಷೇದಾಜ್ಞೆ ಜಾರಿ ಮಾಡಿ ಪರದೆಯಿಂದ ಮುಚ್ಚಲಾಗಿದೆ.
ಜೂನ್ 13ರಿಂದ 17ನೇ ದಿನಾಂಕದವರೆಗೂ 144ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಠಾಣಾ ಸುತ್ತ ಮುತ್ತ 200 ಮೀಟರ್ ಸುತ್ತಲೂ ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ದರ್ಶನ್ ಅರೆಸ್ಟ್ ಹಿನ್ನೆಲೆ ಠಾಣೆ ಬಳಿ ಅಭಿಮಾನಿಗಳು ಮಿತಿಮೀರಿ ಜಮಾಯಿಸುತ್ತಿದ್ದರು. ಕೆಲವೊಂದು ಬಾರಿ ಲಾಠಿ ಚಾರ್ಜ್ ಮಾಡಿದ್ದರು. ಹೀಗಾಗಿ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ರಿಂದ ಆದೇಶ ಹೊರಡಿಸಿದ್ದಾರೆ.
ದರ್ಶನ್‌ಗೆ ನೆರವು ಕೊಟ್ಟ ಮತ್ತೊಬ್ಬ ಸ್ಯಾಂಡಲ್‌ವುಡ್ ನಟ ಅರೆಸ್ಟ್!
ನಟ ದರ್ಶನ್, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳನ್ನು ಪಟ್ಟಣಗೆರೆಯ ಶೆಡ್‌ಗೆ ಬುಧವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಆರೋಪಿಗಳನ್ನು ತಂಡಗಳಾಗಿ ವಿಂಗಡಿಸಿ, ಶೆಡ್‌ನ ಪ್ರತಿ ಮೂಲೆಯಲ್ಲೂ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಲಾಗಿದೆ. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಮತ್ತೊಬ್ಬ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಬಂಧಿತನನ್ನು ಪ್ರದೋಶ್ (Paradosh) ಎಂದು ಗುರುತಿಲಾಗಿದ್ದು, ಈತ ಕೂಡ ಸ್ಯಾಂಡಲ್ ವುಡ್ ನಟನಾಗಿದ್ದಾನೆ. ಕನ್ನಡದ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿರುವ ಈತ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ A14 ಆರೋಪಿಯಾಗಿದ್ದಾನೆ. ರೇಣುಕಾ ಸ್ವಾಮಿ ಮೃತಪಟ್ಟ ಬಳಿಕ ಗಾಬರಿಗೊಂಡ ದರ್ಶನ್ 30 ಲಕ್ಷ ರೂ. ನೀಡಿ ಬಾಡಿಯನ್ನು ಎಲ್ಲಾದರು ಬಿಸಾಕುವಂತೆ ಹೇಳುತ್ತಾರೆ. ಆಗ ತನ್ನ ಆಪ್ತ, ಹೋಟೆಲ್ ಉದ್ಯಮಿ ಪ್ರದೋಶ್ ದರ್ಶನ್ ಹೇಳಿದಾಗ ಪ್ರದೋಶ್ ಮತ್ತಿತರರು ದೇಹವನ್ನು ಸ್ಕಾರ್ಪಿಯೋ ಕಾರಿನಲ್ಲಿ ಒಯ್ದು ಸುಮ್ಮನಹಳ್ಳಿಯ ಅಪಾರ್ಟ್‌ಮೆಂಟ್ ಒಂದರ ಮುಂಭಾಗದ ಮೋರಿ ಬಳಿ ಎಸೆದು ಹೋಗಿದ್ದಾರೆ.