Site icon Vistara News

Actor Darshan : ದರ್ಶನ್​ಗೆ ಮರಣದಂಡನೆ ಶಿಕ್ಷೆಯಾಗಲಿ! ನಟಿ ರಮ್ಯಾ ಟ್ವೀಟ್‌

Actor Darshan

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್​ಗೆ (Actor Darshan) ಮರಣದಂಡನೆಯಾಗಲಿ ಎಂಬ ಆಶಯವನ್ನು ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ವ್ಯಕ್ತಪಡಿಸಿದ್ದಾರೆ! ಕೊಲೆ ಪ್ರಕರಣದ ಕುರಿತು ಎಕ್ಸ್​ನಲ್ಲಿ ಪೋಸ್ಟ್​​ ಮಾಡಿರುವ ರಮ್ಯಾ ಐಪಿಸಿ ಸೆಕ್ಷನ್​ 302ರನ್ನು ಉಲ್ಲೇಖಿಸಿ ಅದರ ಅನ್ವಯ ದರ್ಶನ್​ಗೆ ಕಠಿಣ ಶಿಕ್ಷೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಲೆಯಾಗಿರುವ ವ್ಯಕ್ತಿಯ ಪರವಾಗಿ ನಿಂತಿರುವ ರಮ್ಯಾ, ದರ್ಶನ್​ಗೆ ಇಂಡಿಯನ್ ಪಿನಲ್​ ಕೋಡ್​ 302ರ ಪ್ರಕಾರ ಯಾವ ಪ್ರಕಾರಣದ ಶಿಕ್ಷೆಯಾಗುತ್ತದೆ ಎಂಬ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಸೆಕ್ಷನ್​ 302ರಲ್ಲಿ ಕೊಲೆ ಆರೋಪ ಸಾಬೀತಾದರೆ ಅವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಮಾಹಿತಿ ಇರುವ ಪೋಸ್ಟ್‌ ಅನ್ನು ರಮ್ಯಾ ರೀಟ್ವೀಟ್‌ ಮಾಡಿದ್ದಾರೆ.

ಸೆಕ್ಷನ್ 302 ರ ಅಡಿಯಲ್ಲಿ ನಟ ದರ್ಶನ್​ಗೆ ಜೀವಾವಧಿ ಶಿಕ್ಷೆ ಅಥವಾ ಶಿಕ್ಷೆಯಾಗಬೇಕು. ಬೇರೆ ಯಾವುದೇ ಹಣದ ಪ್ರಭಾವ ಮತ್ತು ಭಾರತೀಯ ಕಾನೂನು ವ್ಯವಸ್ಥೆಯನ್ನು ಅಣಕಿಸುವಂತಾಗಬಾರದು. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಟ್ವೀಟ್‌ ಅನ್ನು ರಮ್ಯಾ ಮರು ಪೋಸ್ಟ್‌ ಮಾಡಿದ್ದಾರೆ.

ರಮ್ಯಾ ಈ ಹಿಂದೆಯೂ ಸ್ಟಾರ್ ನಟರ ನಡವಳಿಕೆಯ ಬಗ್ಗೆ ಆಕ್ಷೇಪ ಎತ್ತಿದ್ದರು. ಹಿಂದೆ ದರ್ಶನ್​ಗೆ ಚಪ್ಪಲಿ ಎಸೆತ ಪ್ರಕರಣ ನಡೆದಾಗ ಸ್ಪಂದಿಸಿದ್ದ ಅವರು, ಅಭಿಮಾನಿಗಳು ಹಾಗೂ ನಟರಿಗೆ ಬುದ್ಧಿ ಹೇಳಬೇಕಾಗಿದೆ ಎಂದು ಹೇಳಿದ್ದರು.

ನಟ ದರ್ಶನ್‌ ಅರೆಸ್ಟ್‌; ಪೊಲೀಸರು ಹೇಳಿದ್ದೇನು?

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (28) ಎಂಬವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಸ್ಯಾಂಡಲ್‌ವುಟ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನಲ್ಲಿರುವ (Mysore) ದರ್ಶನ್‌ ಅವರ ತೋಟದ ಮನೆಯಲ್ಲಿ ಬೆಂಗಳೂರಿನ ಪೊಲೀಸರು ದರ್ಶನ್‌ ಅವರನ್ನು ಬಂಧಿಸಿದ್ದಾರೆ. ನಟನನ್ನು ಬಂಧಿಸಿರುವ (Actor Darshan Arrested) ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ಹಿನ್ನೆಲೆಯಲ್ಲಿ ದರ್ಶನ್‌ ಆಪ್ತರು ಜೂನ್‌ 8ರಂದು ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಬಳಿಕ ಶವವನ್ನು ಎಸೆದು ಹೋಗಿದ್ದರು. ಬೆಂಗಳೂರಿನ ಆರ್‌.ಆರ್‌.ನಗರದ ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ಜೂನ್‌ 9ರಂದು ಬೀದಿ ನಾಯಿಗಳು ಕಸ ಎಳೆದಾಡುವಾಗ ಶವ ಪತ್ತೆಯಾಗಿತ್ತು. ಇದಾದ ಬಳಿಕ ಅದೇ ದಿನ ರಾಮ್‌ ದೋರ್‌ ಎಂಬ ಸೆಕ್ಯುರಿಟಿ ಗಾರ್ಡ್‌ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆಗಮಿಸಿದ ವೇಳೆ ಶವದ ಮುಖ, ತಲೆ, ಕಿವಿಗೆ ರಕ್ತಗಾಯವಾಗಿರುವುದು ಕಂಡು ಬಂದಿತ್ತು. ಯಾರೋ‌ ಕೊಲೆ ಮಾಡಿ ತಂದು ಬಿಸಾಡಿರೋ ಅನುಮಾನದ ಮೇಲೆ ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಇದು ರೇಣುಕಾಸ್ವಾಮಿ ಶವ ಎನ್ನುವುದು ತಿಳಿದು ಬಂದಿತ್ತು.

ಇದನ್ನೂ ಓದಿ: Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಈ ಪ್ರಕರಣದಲ್ಲಿ ಸೋಮವಾರ ಗಿರಿನಗರ ಮೂಲದ ಮೂವರು ಆರೋಪಿಗಳು ಸರೆಂಡರ್ ಆಗಿದ್ದರು. ಹಣಕಾಸು ವಿಚಾರವಾಗಿ ಕೊಲೆ ಮಾಡಿದ್ದಾಗಿ ಹೇಳಿದ್ದರು. ಪೊಲೀಸರಿಗೆ ಅನುಮಾನ ಬಂದು ತೀವ್ರ ವಿಚಾರಣೆ ಮಾಡಿದ್ದರ ಈ ವೇಳೆ ದರ್ಶನ್ ಹೆಸರು ಬಾಯಿ ಬಿಟ್ಟಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ದರ್ಶನ್‌ ಅವರ ಪಾತ್ರದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವ ಜಿ.ಪರಮೇಶ್ವರ್‌ ಮಾಹಿತಿ ಕಲೆ ಹಾಕುತ್ತಿದ್ದಾರೆ. ʼʼತನಿಖೆ ನಡೆಸಿದ ಬಳಿಕ ಕೊಲೆಯಲ್ಲಿ ದರ್ಶನ್‌ ಪಾತ್ರದ ಬಗ್ಗೆ ತಿಳಿದು ಬರಲಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಏನನ್ನೂ ಹೇಳಲು ಆಗುವುದಿಲ್ಲʼʼ ಎಂದು ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಕೊಲೆಗೆ ಕಾರಣ

ರೇಣುಕಾಸ್ವಾಮಿ ಪವಿತ್ರಗೌಡಗೆ ಮೆಸೇಜ್ ಮಾಡುತ್ತಿದ್ದ. ಈ ವಿಷಯ ತಿಳಿದು ದರ್ಶನ್ ಆಪ್ತರು ನಕಲಿ ಅಕೌಂಟ್ ತೆರೆದಿದ್ದರು. ಬಳಿಕ ರೇಣುಕಾಸ್ವಾಮಿ ಜತೆ ಚಾಟಿಂಗ್ ನಡೆಸಲಾಗಿತ್ತು. ಬಳಿಕ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಹಲ್ಲೆ ನಡೆಸಲಾಗಿತ್ತು. ಈ ವೇಳೆ ಆತ ಸಾವನ್ನಪ್ಪಿದ್ದ. ಆತ ಮೃತಪಟ್ಟಿರುವುದು ಗೊತ್ತಾಗುತ್ತಿದ್ದಂತೆ ದರ್ಶನ್‌ ಆಪ್ತರು ಸ್ಕಾರ್ಪಿಯೋ ಕಾರಿನಲ್ಲಿ ಶವವನ್ನು ತಂದು ಬಿಸಾಡಿ ಹೋಗಿದ್ದರು. ಬಳಿಕ ಪೊಲೀಸರಿಗೆ ಕಾಲ್‌ ಮಾಡಿ ತಪ್ಪಾಗಿದೆ ಸರ್ ಅಂದಿದ್ದರು. ಬಳಿಕ ಬಂದು ಮೂವರು ಪೊಲೀಸರ ಮುಂದೆ ಶರಣಾಗಿದ್ದರು ಎನ್ನಲಾಗಿದೆ.

ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ನಟ ದರ್ಶನ್‌ ಅವರ ಗೆಳತಿಯೂ ಆದ ನಟಿ (Pavithra Gowda) ಅವರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಹಿಂದೆ ಒಳಸಂಚು ರೂಪಿಸಿದ ಆರೋಪದಲ್ಲಿ ಬೆಂಗಳೂರಿನ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರೇಣುಕಾಸ್ವಾಮಿ ಯಾರು?

ಚಿತ್ರದುರ್ಗ ಮೂಲದವನಾದ ರೇಣುಕಾಸ್ವಾಮಿ ಎಂಬ 28 ವರ್ಷದ ಯುವಕನು ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈತನು ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದರ್ಶನ್‌ ಹಾಗೂ ಅವರ ಆಪ್ತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ್‌ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿಗೆ ಕಳೆದ ವರ್ಷವೇ ಸಹನಾ ಎಂಬ ಯುವತಿ ಜತೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ. ರೇಣುಕಾಸ್ವಾಮಿ ಕೂಡ ದರ್ಶನ್‌ ಅಭಿಮಾನಿಯಾಗಿದ್ದ ಎನ್ನಲಾಗಿದೆ.

Exit mobile version