Site icon Vistara News

Actor Dwarakish: ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಟ ದ್ವಾರಕೀಶ್ ಅಂತಿಮ ದರ್ಶನ ಬಳಿಕ ಅಂತ್ಯಸಂಸ್ಕಾರ; ಪ್ರಧಾನಿ ಮೋದಿ ಸಂತಾಪ

actor dwarakish death

ಬೆಂಗಳೂರು: ಕನ್ನಡ ಚಿತ್ರರಂಗದ ಸಾಹಸಿ ನಿರ್ದೇಶಕ, ನಿರ್ಮಾಪಕ, ನಟ ದ್ವಾರಕೀಶ್‌ (Actor Dwarakish Death) ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಮಧ್ಯಾಹ್ನ 11.30ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಳಿಕ ಚಾಮರಾಜಪೇಟೆಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು, ದ್ವಾರಕೀಶ್‌ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್​ ನೀಡಿದ ಕೊಡುಗೆಯನ್ನು ಸ್ಮರಿಸಿರುವ ಮೋದಿ, “ದಶಕಗಳ ಕಾಲ ನೆನಪುಳಿಯುವ ಅಭಿನಯ ಹಾಗು ಸಿನಿಮಾಗಳನ್ನು ದ್ವಾರಕೀಶ್‌ ನೀಡಿದ್ದಾರೆ. ವೀಕ್ಷಕರನ್ನು ಹಿಡಿದಿಡುವ ಅವರ ಸಾಮರ್ಥ್ಯ ಹಾಗೂ ಯುವ ಪ್ರತಿಭೆಗಳನ್ನು ಬೆಳೆಸಿ ಪೋಷಿಸಿದ ಗುಣಗಳು ಕನ್ನಡ ಸಿನಿಮಾವನ್ನು ಬೆಳೆಸಿವೆ. ಅವರ ನಿಧನದಿಂದ ದುಃಖವಾಗಿದೆ. ಅವರ ವಿಶೇಷವಾದ ಜೀವನ ಪಯಣದ ಮೂಲಕ ನೆನಪಿನಲ್ಲುಳಿಯುತ್ತಾರೆ. ಅವರ ನಿಧನದಿಂದ ದುಃಖಿತರಾಗಿರುವ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಹಾಗು ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ, ಓಂ ಶಾಂತಿ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ

11.30ರವರೆಗೆ ಅಂತಿಮ ದರ್ಶನ

ಬೆಳಿಗ್ಗೆ 7:30ಕ್ಕೆ ರವೀಂದ್ರ ಕಲಾಕ್ಷೇತ್ರಕ್ಕೆ ದ್ವಾರಕೀಶ್ ಪಾರ್ಥಿವ ಶರೀರ ರವಾನೆಯಾಗಲಿದೆ. ಅಲ್ಲಿ 11:30ರವರೆಗೂ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದರ್ಶನದ ಬಳಿಕ ಬೆಂಗಳೂರಿನ ಚಾಮರಾಜನಗರ ಟಿಆರ್ ಮಿಲ್ ಪಕ್ಕದ ಸಾರ್ವಜನಿಕ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಬ್ರಾಹ್ಮಣ ಸಂಪ್ರದಾಯದಂತೆ ವಿಧಿವಿಧಾನ ನೆರವೇರಲಿದೆ. ದುಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಮಗ ಸಂತೋಷ್ ಚಿತೆಗೆ ಅಗ್ನಿಸ್ಪರ್ಶ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರೋದ್ಯಮದ ಗೌರವ ಸಲ್ಲಿಕೆ

ಪ್ರಚಂಡ ಕುಳ್ಳನಿಗೆ ಚಿತ್ರೋದ್ಯಮದಿಂದ ಗೌರವ ಸಲ್ಲಿಕೆಯಾಗಿ, ಇಂದು ಬೆಳಗ್ಗೆ 10.30ರ ಶೋ ಬಂದ್ ಮಾಡಲು ಪ್ರದರ್ಶಕರ ವಲಯದಿಂದ ಕರೆ ನೀಡಲಾಗಿದೆ. ಪ್ರದರ್ಶಕರ ವಲಯದ ಕರೆಗೆ ಚಿತ್ರೋದ್ಯಮ‌ ಸಾಥ್ ನೀಡಿದೆ. ಮಧ್ಯಾಹ್ನ 1 ಗಂಟೆ ನಂತರ ಚಿತ್ರಮಂದಿರಗಳಲ್ಲಿ ಶೋ ಆರಂಭ ಆಗಲಿವೆ. ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಎಲ್ಲವೂ ಒಂದು ಶೋ ಬಂದ್ ಆಗಲಿದೆ. ಶೂಟಿಂಗ್‌ಗೆ ಬ್ರೇಕ್ ಹಾಕುವ ಕುರಿತು ಯಾವುದೇ ಸಂದೇಶವನ್ನು ಫಿಲ್ಮ್ ಚೇಂಬರ್ ನೀಡಿಲ್ಲ. ಆದರೆ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.

Actor Dwarakish

ಇಂದು ಬಹುತೇಕ ಚಿತ್ರರಂಗದ ಕಲಾವಿದರು, ರಾಜಕೀಯ ಧುರೀಣರು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆ ಇದೆ. ಸಿಎಂ‌‌ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಂತಿಮ ದರ್ಶನ ಪಡೆಯುವ ಸಾಧ್ಯತೆ ಇದೆ. ದ್ವಾರಕೀಶ್ ನಿಧನಕ್ಕೆ ನಿನ್ನೆಯಷ್ಟೇ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದ ಸುದೀಪ್ ಇಂದು ಚೆನ್ನೈಯಿಂದ ದ್ವಾರಕೀಶ್ ಅಂತಿಮ ದರ್ಶನಕ್ಕೆ ಆಗಮಿಸಲಿದ್ದಾರೆ. 2011ರಲ್ಲಿ ತೆರೆ ಕಂಡಿದ್ದ ʼವಿಷ್ಣುವರ್ಧನʼ ಚಿತ್ರದಲ್ಲಿ ಸುದೀಪ್ ಹಾಗು ದ್ವಾರಕೀಶ್ ತೆರೆ ಹಂಚಿಕೊಂಡಿದ್ದರು.

ದ್ವಾರಕೀಶ್ ಅವರ ಅಂತಿಮ ದರ್ಶನವನ್ನು ಇಂದು ಮುಂಜಾನೆ ನಟ ಶಿವರಾಜ್ ಕುಮಾರ್ ಪಡೆದರು. ಶಿವಮೊಗ್ಗದಲ್ಲಿ ಪತ್ನಿಯ ಚುನಾವಣೆ ಪ್ರಚಾರದಲ್ಲಿದ್ದ ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ದ್ವಾರಕೀಶ್‌ ಅವರ ಮನೆಗೆ ಬಂದು ಪಾರ್ಥಿವ ಶರೀರದ ದರ್ಶನ ಪಡೆದರು. ಪುತ್ರ ಯೋಗಿ ಹಾಗೂ ಹಿರಿಯ ನಿರ್ದೇಶಕ ಭಾರ್ಗವಗೆ ಸಾಂತ್ವನ ಹೇಳಿದರು.

“ನಾವು ಚಿಕ್ಕವರಿದ್ದಾಗಿಂದಲೂ ಅವರನ್ನು ನೋಡುತ್ತಿದ್ದೇವೆ. ನಾವು ಒಂದು ಫ್ಯಾಮಿಲಿ ಇದ್ದಂತೆ ಇದ್ದೆವು. ಮೇಯರ್ ಮುತ್ತಣ್ಣ ಅವರ ಹಾಗೂ ಅಪ್ಪಾಜಿ ಮೊದಲ‌ ಸಿನಿಮಾ. ಅಪ್ಪಾಜಿ ಜೊತೆ ತುಂಬಾ ಒಡನಾಟ ಇತ್ತು. ಅವರು ಇಲ್ಲ ಅಂತ ಅನಿಸಿಕೊಳ್ಳೋದು ಸಾಧ್ಯವಿಲ್ಲ. ಇಂಡಸ್ಟ್ರಿಯ ಟಾಪ್ ಪ್ರೊಡ್ಯೂಸರ್ ಆಗಿದ್ದ ಅವರಿಲ್ಲ ಅಂತ ನೆನಪಿಸಿಕೊಳ್ಳೋಕೆ ಕಷ್ಟ ಆಗ್ತಿದೆ” ಎಂದು ಅವರು ನುಡಿದರು.

ಇದನ್ನೂ ಓದಿ: Actor Dwarakish: ಪತ್ನಿ, ಮಕ್ಕಳಿದ್ದರೂ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು ದ್ವಾರಕೀಶ್​​

Exit mobile version