Site icon Vistara News

ತತ್ತ್ವ ಶಂಕರ: ಶಂಕರ; ಲೋಕ ಕಲ್ಯಾಣಕ್ಕಾಗಿ ಬಂದ ಅವತಾರ ಪುರುಷ

Adi Shankara

| ತಪಸ್ವಿ
ಧರ್ಮದ ಅವನತಿಯ ಕ್ಷಣಗಳವು. ಬೌದ್ಧರು, ಜೈನರು, ಚಾರ್ವಾಕರು ಮೆರೆಯುತ್ತಿದ್ದ ಕಾಲದಲ್ಲಿ, ಸನಾತನ ಧರ್ಮವನ್ನು ದೂಷಿಸುತ್ತಿದ್ದ ಕಾಲದಲ್ಲಿ, ಭಾರತದ ದಕ್ಷಿಣದ ಪುಣ್ಯ ಭೂಮಿ ಕೇರಳದ ಕಾಲಟಿಯಲ್ಲಿ ನಂಬೂದರಿ ಬ್ರಾಹ್ಮಣ ವರ್ಗಕ್ಕೆ ಸೇರಿದವರಾದ ಶಿವಗುರು ಮತ್ತು ಆರ್ಯಾಂಬೆ ಎಂಬ ಆದರ್ಶ ದಂಪತಿ ಇದ್ದರು. ಅವರು ಸದಾಚಾರ ಸಂಪನ್ನರಾಗಿದ್ದರು. ಆದರೆ ಅವರಿಗೆ ಮಕ್ಕಳಿರಲಿಲ್ಲ. ಈ ಕಾರಣದಿಂದ ಅವರಿಬ್ಬರೂ ಬಹಳ ನೊಂದಿದ್ದರು. ಆಗಿನ ರಾಜನು ಕಾಲಟಿಯ ಸಮೀಪದಲ್ಲಿ ಚಂದ್ರಮೌಳೀಶ್ವರ ದೇವಾಲಯವನ್ನು ನಿರ್ಮಿಸಿದ್ದನು. ಈ ದಂಪತಿ ನಿತ್ಯವೂ ಅಲ್ಲಿಗೆ ತೆರಳಿ ಅನುಷ್ಠಾನ ಮಾಡುತ್ತಿದ್ದರು. ತಮಗೆ ಮಕ್ಕಳಾಲಿ ಎಂದು ಬೇಡಿಕೊಳ್ಳುತ್ತಿದ್ದರು. ಹೀಗಿರುವಾಗ ಒಮ್ಮೆ ಶಿವಗುರುವಿನ ಕನಸಿನಲ್ಲಿ ಶಿವನು ಪ್ರತ್ಯಕ್ಷವಾಗಿ ವರವನ್ನು ಕೇಳು ಎಂದನು. ಆಗ ಶಿವಗುರು ನಮ್ಮ ವಂಶ ಉದ್ಧಾರಕನಾದ ಪುತ್ರ ಸಂತತಿಯನ್ನು ಕೇಳಿದನು. ಆಗ ಶಿವನು ಮೂರ್ಖತನದ ದೀರ್ಘ ಆಯುಸ್ಸುಳ್ಳ ಪುತ್ರನು ಬೇಕೋ, ಮಹಾಜ್ಞಾನಿಯಾದ ಅಲ್ಪಾಯುಷಿಯಾದ ಪುತ್ರನು ಬೇಕೋ ಎಂದಾಗ ಮೂರ್ಖನಿಗಿಂತಲೂ ಅಲ್ಪಾಯುಷಿಯಾದರೂ ಜ್ಞಾನಿಯಾದ ಮಗನನ್ನು ಕರುಣಿಸು ಎಂದು ಬೇಡಿಕೊಂಡನು. ಅದಕ್ಕೆ ಶಿವನು ತಥಾಸ್ತು ಎಂದನು. ಅದಾದ ಬಳಿಕ ಕೆಲ ದಿನಗಳ ನಂತರ ಆರ್ಯಾಂಬೆ ಗರ್ಭಿಣಿಯಾದಳು. ಆಗ ಆ ಸಂತಸದ ಘಳಿಗೆ ಬಂದೇ ಬಿಟ್ಟಿತು. ಲೋಕಕ್ಕೆ ಅದ್ವೈತದ ಬೆಳಕು ಚೆಲ್ಲಿದ ಅವತಾರ ಪುರುಷರಾದ ಶ್ರೀ ಶಂಕರರು ( Sri Shankaracharya) ವೈಶಾಖ ಶುದ್ಧ ಪಂಚಮಿಯಂದು ಬಾಲ ಶಂಕರರಾಗಿ ಅವತರಿಸಿದರು.

ಶಂಕರ ಅವತರಿಸಿದಾಗ ಅವರನ್ನು ನೋಡಿದವರಿಗೆ ಹೇಳಲಾಗದ ಆನಂದವಾಯಿತು. ಆ ಮಂಗಳ ಸ್ವರೂಪವಾದ ಶಿಶುವನ್ನು ಕಂಡು ಎಲ್ಲರೂ ಮೂಕವಿಸ್ಮಿತರಾದರು. ಅದಕ್ಕೆ ಅವನ ಹೆಸರು ‘ಶಂಕರ’ “ಶಂ ಕರೋತಿ ಇತಿ ಶಂಕರʼ ಅಂದರೆ ಎಲ್ಲರ ಮನಸ್ಸನ್ನೂ ಮಂಗಳವಾಗಿಸುವವನು ಎಂದು. ಶಂಕರನು ಬಾಲ್ಯದಲ್ಲೇ ತುಂಬಾ ಮೇಧಾವಿಯಾಗಿದ್ದ. ಎಲ್ಲರಂತೆ ಅತೀ ಸಂತೋಷ ಭರಿತವಾದ ಬಾಲ್ಯ ಅವನದು. ಶಂಕರನು ಮೂರು ವರ್ಷದವನಿದ್ದಾಗಲೇ ಮಲಯಾಳವನ್ನು ಲೀಲಾಜಾಲವಾಗಿ ಮಾತನಾಡುತ್ತಿದ್ದ. ಅವನ ಪ್ರೌಢಿಮೆ ವಯಸ್ಸನ್ನು ಮೀರಿತ್ತು. ಇದನ್ನು ನೋಡಿ ಶಿವಗುರು ಶಂಕರನಿಗೆ ಉಪನಯನವನ್ನು ಮಾಡಬೇಕು ಎಂದು ಬಯಸಿದ. ಆದರೆ ಅವನ ಬಯಕೆಯು ಈಡೇರಲಿಲ್ಲ. ಅವನು ಮೃತ್ಯುವಿನ ಕರೆಗೆ ಓಗೊಟ್ಟು ಹೋಗಬೇಕಾಯಿತು. ಹೀಗೆ ಪತಿ ವಿಯೋಗದಿಂದ ದುಃಖಿತಳಾಗಿದ್ದ ಆರ್ಯಾಂಬೆಯು ಇತರರ ಸಹಾಯದಿಂದ ಶಂಕರನ ಐದನೇ ವಯಸ್ಸಿಗೆ ಉಪನಯನ ಸಂಸ್ಕಾರವನ್ನು ಮಾಡಿದಳು. ಬಾಲ ಬ್ರಹ್ಮಚಾರಿಯಾಗಿ ಶೋಭಿಸುತ್ತಿದ್ದ ಶಂಕರನು ವೇದ ಶಾಸ್ತ್ರಗಳ ಅಧ್ಯಯನಕ್ಕಾಗಿ ಗುರುಕುಲಕ್ಕೆ ಹೊರಟನು.

ಎಂದೂ ಗುರಿ ಬಿಡಬಾರದು

ಇದು ಅವತಾರ ಪುರುಷರ ಕತೆ ಇರಬಹುದು. ಆದರೆ ಇದು ನಮ್ಮೆಲ್ಲರಿಗೂ ಅನ್ವಯವಾಗುತ್ತದೆ. ನಮ್ಮವರು ನಮ್ಮ ಜೊತೆ ಇಲ್ಲದಿದ್ದಾಗ ಆಗುವ ದುಃಖವು ಸಹಿಸಲಾಗದ್ದು. ಆದರೂ ಶಂಕರನು ಅದನ್ನು ಸಹಿಸಿಕೊಂಡಿದ್ದರಿಂದಲೇ ಲೋಕಕ್ಕೆ ಬೆಳಕಾಗುವ ಶಂಕರಾಚಾರ್ಯರಾದದ್ದು. ನಮ್ಮ ಗುರಿಯನ್ನು ನಾವು ಎಂದಿಗೂ ಬಿಡಬಾರದು, ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಿ ಮುಂದೆ ಸಾಗಬೇಕು. ಈ ಮನುಷ್ಯ ಜನ್ಮವು ಸಿಗುವುದು ಕಷ್ಟ. ಅದು ನಮಗೀಗ ಸಿಕ್ಕಿದೆ. ನಾವು ಈ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಮತ್ತೆ ಇದೇ ಜನ್ಮ ಸಂಸಾರದ ದುಃಖವನ್ನು ಅನುಭವಿಸಲು ಜನನ ಮರಣ ಚಕ್ರಗಳ ಸುಳಿಯಲ್ಲಿ ಸಿಲುಕಬಾರದು. ಆ ಪರಮಾತ್ಮನ ಅನಂತ ಆನಂದ ಸ್ವರೂಪದಲ್ಲಿ ಒಂದಾಗಬೇಕು. ಮನುಷ್ಯನ ಗುರಿಯು ಹಣ ಸಂಪಾದಿಸಿ ಲೋಕದ ಭೋಗವನ್ನು ಪಡೆಯುವುದಲ್ಲ. ಆ ಅನಂತ ನಿತ್ಯ ಆನಂದವನ್ನು ಪಡೆಯುವುದು. ಅದು ಸಿಕ್ಕರೆ ಉಳಿದದ್ದು ಶೂನ್ಯ. ಇದು ನಮ್ಮ ಗುರಿಯಾಗಬೇಕು. ಹೀಗೆ ಆಚಾರ್ಯ ಶಂಕರರ ಬಾಲ್ಯವು ಕಳೆಯಿತು.

ಇದನ್ನೂ ಓದಿ | ತತ್ತ್ವ ಶಂಕರ : ಭಾರತದ ಮಣ್ಣನ್ನು ಪಾವನಗೊಳಿಸಿದ ಶಂಕರರು

ನಾವೇ ಧನ್ಯ

ಅವತಾರ ಪುರುಷರು ಲೋಕ ಕಲ್ಯಾಣಕ್ಕಾಗಿ ದೇಹವನ್ನು ಧರಿಸಿ ಧರೆಗೆ ದೇವರಾಗಿ ಇಳಿದು ಬರುತ್ತಾರೆ. ಹಾಗೆ ಅವರು ಬಂದಾಗ ಬಾಲ್ಯದಿಂದಲೇ ಅವರ ಅವತಾರ ಮಹಿಮೆಗಳನ್ನು ಲೋಕಕ್ಕೆ ತಿಳಿಯಪಡಿಸುತ್ತಾರೆ. ಹೀಗೆಯೇ ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿದ ಮಹಾತ್ಮರು ಶಂಕರಾಚಾರ್ಯರು. ಅವರು ಹುಟ್ಟಿದ ಪುಣ್ಯ ಭೂಮಿಯಲ್ಲಿ ಜನಿಸಿದ ನಾವುಗಳೇ ಧನ್ಯರು.

Exit mobile version