Site icon Vistara News

ವಿಸ್ತಾರ Explainer: ಸೇನಾ ನೇಮಕಾತಿಯಲ್ಲಿ ‘ಅಗ್ನಿ’ ಕ್ರಾಂತಿ

Agneepath

ಕೇಶವ್ ಪ್ರಸಾದ್ ಬಿ, ಬೆಂಗಳೂರು
ಭಾರತೀಯ ಸೇನೆಯ ಮೂರೂ ವಿಭಾಗಗಳಲ್ಲಿ ಬರಲಿದ್ದಾರೆ ಅಗ್ನಿ ವೀರರ! ಲಕ್ಷಾಂತರ ಮಂದಿಗೆ ನಾಲ್ಕು ವರ್ಷಗಳ ಕಾಲ ಅಗ್ನಿವೀರರಾಗಿ ಸೇವೆ ಸಲ್ಲಿಸಲು ಸಿಗಲಿದೆ ಸುವರ್ಣಾವಕಾಶ! ನಾಲ್ಕು ವರ್ಷಗಳ ಬಳಿಕ ಆಕರ್ಷಕ ಸೇವಾ ನಿಧಿಯ ಪ್ಯಾಕೇಜ್! 25 ಪರ್ಸೆಂಟ್‌ ಅಗ್ನಿವೀರರಿಗೆ ಕಾಯಂ ಆಗಿ ಸೇನೆಗೆ ಸೇರ್ಪಡೆಯಾಗುವ ಅವಕಾಶ!
ಆದರೆ ಇದರಿಂದ ಸೇನೆಯ ನೇಮಕಾತಿ ನೀತಿ ದುರ್ಬಲವಾಗಲಿದೆಯೇ? ಯುದ್ಧ ಮಾಡಲು ಅರಿಯದ ಅನನುಭವಿ ಯೋಧರ ಸಂಖ್ಯೆ ಹೆಚ್ಚಲಿದೆಯೇ? ನಾಲ್ಕು ವರ್ಷಗಳ ಬಳಿಕ ಸಿಗುವ ಹಣಕಾಸು ನೆರವು ಏನು? ಬೇರೆ ಉದ್ಯೋಗ ಸಿಗಬಹುದೇ?
ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ವಿಸ್ತೃತ ಉತ್ತರ.

ಅಗ್ನಿವೀರರಾಗಲು ಎಸ್ಸೆಸ್ಸೆಲ್ಸಿ ಆಗಿದ್ದರೂ ಸಾಕು!

ಸೇನೆಯಲ್ಲಿ ಸೇರಿ ದೇಶ ಸೇವೆ ಮಾಡಬೇಕು ಎಂಬ ಕನಸು ಬಹುತೇಕ ಎಲ್ಲ ಭಾರತೀಯರಲ್ಲೂ ಅವರ ಸಣ್ಣ ವಯಸ್ಸಿನಲ್ಲಿ ಒಂದಿಲ್ಲೊಂದು ಸಲ ಬಂದಿರುತ್ತದೆ. ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಠಾಕುಠೀಕಾಗಿ ನಮ್ಮ ಹೆಮ್ಮೆಯ ಯೋಧರು ಪಥಸಂಚಲನ ನಡೆಸುವುದನ್ನು ಕಂಡಾಗ, ಸೈನಿಕರ ಅತ್ಯದ್ಭುತ ಸಾಹಸ-ತ್ಯಾಗ ಬಲಿದಾನಗಳ ಕಥೆಯನ್ನು ಒಳಗೊಂಡಿರುವ ಸಿನಿಮಾಗಳನ್ನು ನೋಡಿದಾಗ, ಸೇನಾ ಸಿಬ್ಬಂದಿಗೆ ಸಮಾಜದಲ್ಲಿ ಸಿಗುವ ಗೌರವ, ಪ್ರೀತಿ, ವಿಶ್ವಾಸ, ಪುರಸ್ಕಾರಗಳನ್ನು ಅರಿತುಕೊಂಡಾಗ, ಎಸ್ಸೆಸ್ಸೆಲ್ಸಿ-ಪಿಯುಸಿ ಓದುವ ಹುಡುಗ-ಹುಡುಗಿಯರಲ್ಲಿ ತಾವೂ ಸೇನೆಯನ್ನು ಸೇರಿಕೊಳ್ಳಬೇಕು ಅನ್ನಿಸದೆ ಇರದು.

ಆದರೆ ಆ ಕನಸನ್ನು ನನಸಾಗಿಸುವುದು ಸುಲಭವಲ್ಲ, ಲಕ್ಷಗಟ್ಟಲೆ ಜನ ಸೇನೆಯಲ್ಲಿ ದುಡಿಯುವ ಅವಕಾಶ ಸಿಗದೆ ಬೇಸರಪಡುವುದು ಸಾಮಾನ್ಯ. ಮತ್ತೆ ಹಲವರು ಅಮೆರಿಕದಲ್ಲೋ, ಇಸ್ರೇಲಿನಲ್ಲೋ ಸೇನೆಗೆ ಸೇರಲು ಅನೇಕ ಮಂದಿಗೆ ಸಿಗುವ ಅವಕಾಶಗಳನ್ನು ಕಂಡು ನಮ್ಮಲ್ಲೂ ಅಂಥ ಅವಕಾಶ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಾರೆ.

ಇದೀಗ ಕೇಂದ್ರ ಸರ್ಕಾರ 2022ರ ಜೂ.15ರಿಂದ ಸಶಸ್ತ್ರ ಪಡೆಗಳಿಗಾಗಿ ಟೂರ್‌ ಆಫ್‌ ಡ್ಯೂಟಿ ಅಥವಾ ಅಗ್ನಿಪಥ್‌ ಎಂಬ ಐತಿಹಾಸಿಕ ನೇಮಕಾತಿ ಯೋಜನೆಯನ್ನು ಪ್ರಾರಂಭಿಸಿದೆ. ಕನಿಷ್ಠ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದವರಿಗೂ ಸೇನೆಯಲ್ಲಿ ಅಗ್ನಿವೀರರು ಎಂಬ ಹೆಸರಿನಲ್ಲಿ ಯೋಧರಾಗಿ ಸೇವೆ ಸಲ್ಲಿಸಲು ಇದರಲ್ಲಿ ಅವಕಾಶ ಇದೆ. ಇದಕ್ಕೆ ಬೇಕಾದ ವಯೋಮಿತಿಯ ಅರ್ಹತೆ 17.5ರಿಂದ 21 ವರ್ಷ ವಯಸ್ಸು. ಇದರಲ್ಲಿ 6 ತಿಂಗಳಿನ ತರಬೇತಿ ಸೇರಿದಂತೆ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಬಹುದು. ಇದು ಸೇನೆಯಲ್ಲಿ ಅಧಿಕಾರಿಗಳ ಪದವಿಗಿಂತ ಕೆಳಗಿನ ಹಂತದ ಹುದ್ದೆಗಳಾಗಿವೆ. ಎಸ್ಸೆಸೆಲ್ಸಿ ಆಗಿರುವ ಅಗ್ನಿವೀರರಿಗೆ 12ನೇ ತರಗತಿಯ ಸರ್ಟಿಫಿಕೇಟ್‌ ನೀಡುವ ಬಗ್ಗೆಯೂ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಸೇನೆಯ ಸಮವಸ್ತ್ರ, ವಿಶಿಷ್ಟ ಚಿಹ್ನೆ ದೊರೆಯಲಿದೆ.

ವೇತನ ಪ್ಯಾಕೇಜ್‌ ಹೇಗೆ?

ಸಶಸ್ತ್ರ ಪಡೆಯ ಮೂರೂ ವಿಭಾಗಗಳಿಗೆ ಸೇರುವ ಅಗ್ನಿವೀರರಿಗೆ ನಾಲ್ಕು ವರ್ಷಗಳ ಸೇವಾ ಅವಧಿಯಲ್ಲಿ ಮಾಸಿಕ ವೇತನ ನೀಡಲಾಗುತ್ತದೆ. ಪಿಎಫ್‌, ಪಿಪಿಎಫ್‌ ವ್ಯವಸ್ಥೆ ಒದಗಿಸಲಾಗುತ್ತದೆ. ಮೊದಲ ವರ್ಷ ಪ್ರತಿ ತಿಂಗಳು 30,000 ರೂ.ಗಳ ವೇತನ ನೀಡಲಾಗುತ್ತದೆ. ಇದರಲ್ಲಿ 9,000 ರೂ. ಅಗ್ನಿವೀರರ ಸೇವಾನಿಧಿ ಪ್ಯಾಕೇಜ್‌ಗೆ ಜಮೆಯಾಗುತ್ತದೆ. ಸರ್ಕಾರ ಕೂಡ 9,000 ರೂ.ಗಳನ್ನು ಅದಕ್ಕೆ ಸೇರಿಸುತ್ತದೆ. ಒಟ್ಟು 18,000 ರೂ. ಆಗುತ್ತದೆ. ಇದರ ಜತೆಗೆ ಉದ್ಯೋಗಿಗಳ ಭವಿಷ್ಯನಿಧಿ ಅಥವಾ ಇಪಿಎಫ್‌ ಹಾಗೂ ಸಾರ್ವಜನಿಕ ಭವಿಷ್ಯನಿಧಿ (ಪಿಪಿಎಫ್)‌ ಸೌಲಭ್ಯ ಸಿಗಲಿದೆ. ಇದಕ್ಕೆ ಮೊದಲ ವರ್ಷ ಸುಮಾರು 4.76 ಲಕ್ಷ ರೂ. ಸಿಗಲಿದೆ.

ಅಗ್ನಿವೀರರಿಗೆ ನಾಲ್ಕನೇ ವರ್ಷದ ವೇಳೆಗೆ ಮಾಸಿಕ 40,000 ರೂ. ವೇತನ ಸಿಗಲಿದೆ. ಈ ಅವಧಿಯಲ್ಲಿ ವೇತನ ವೆಚ್ಚ ವಾರ್ಷಿಕ 6.92 ಲಕ್ಷ ರೂ.ಗೆ ಏರಿಕೆಯಾಗಲಿದೆ. ನಾಲ್ಕನೇ ವರ್ಷ ಪೂರ್ಣಗೊಳಿಸಿದ ಬಳಿಕ ನಿವೃತ್ತಿ ನಿಧಿಯೂ ಸಿಗಲಿದೆ.

11.71 ಲಕ್ಷ ರೂ. ಮತ್ತು ಬಡ್ಡಿಯ ಸೇವಾ ನಿಧಿ

ನಾಲ್ಕು ವರ್ಷಗಳ ಬಳಿಕ ಶೇ.75 ಮಂದಿ ಅಗ್ನಿವೀರರು ಸೇನೆಯಿಂದ ಸಾಮಾನ್ಯ ಜನ ಜೀವನಕ್ಕೆ ಮರಳುತ್ತಾರೆ. ಆಗ ಅವರಿಗೆ ಆರ್ಥಿಕ ನೆರವಿನ ಸೇವಾ ನಿಧಿ ಪ್ಯಾಕೇಜ್‌ ನೀಡಲಾಗುತ್ತದೆ. ಇದರಲ್ಲಿ 11.71 ಲಕ್ಷ ರೂ. ಮತ್ತು ಬಡ್ಡಿ ಇರುತ್ತದೆ. ಇದಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಈ ನಿಧಿಯನ್ನು ತಮ್ಮ ಮುಂದಿನ ಭವಿಷ್ಯಕ್ಕಾಗಿ ಅಗ್ನಿವೀರರು ಬಳಸಿಕೊಳ್ಳಬಹುದು. ಈ ಸೇವಾ ನಿಧಿಯ ಆಧಾರದಲ್ಲಿ 18.2 ಲಕ್ಷ ರೂ. ಬ್ಯಾಂಕ್‌ ಸಾಲವನ್ನೂ ಪಡೆಯಬಹುದು. ಅಗ್ನಿವೀರ್‌ ಸ್ಕಿಲ್‌ ಸರ್ಟಿಫಿಕೇಟ್‌ ದೊರೆಯಲಿದ್ದು, ಭವಿಷ್ಯದಲ್ಲಿ ಅವರ ಕರಿಯರ್‌ಗೆ ಅನುಕೂಲವಾಗಲಿದೆ.

1 ಕೋಟಿ ರೂ. ವಿಮೆ ಪರಿಹಾರ

ಸೇನೆಯಲ್ಲಿ ಕರ್ತವ್ಯ ನಿರತರಾಗಿರುವ ವೇಳೆ ಅಗ್ನಿ ವೀರರು ಪರಮೋಚ್ಛ ಬಲಿದಾನಗೈದರೆ, ವಿಕಲಚೇತನರಾದರೆ, ವಿಮೆ ಪರಿಹಾರ ದೊರೆಯಲಿದೆ. 1 ಕೋಟಿ ರೂ. ತನಕದ ವಿಮೆ ಪರಿಹಾರ ಸಿಗಲಿದೆ. ಈ ವಿಮೆಗೆ ಅಗ್ನಿವೀರರು ಪ್ರೀಮಿಯಂ ಪಾವತಿಸಬೇಕಿಲ್ಲ.

ಶೇ.25 ಅಗ್ನಿವೀರರು ಸೇನೆಗೆ ಕಾಯಂ ಸೇರ್ಪಡೆ

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಮತ್ತು ಕೇಂದ್ರ ಸಚಿವ ಸಂಪುಟ ಜಂಟಿಯಾಗಿ ಈ ಯೋಜನೆಗೆ ಅನುಮೋದನೆ ನೀಡಿದೆ. ಸೇನೆ ಸೇರಬೇಕೆಂಬ ಮಹದಾಸೆ ಇಟ್ಟುಕೊಂಡ ಯುವಜನರಿಗೆ ಇದೊಂದು ಸುವರ್ಣಾವಕಾಶ. ಅಗ್ನಿಪಥ್‌ ನೇಮಕಾತಿ ಯೋಜನೆಯಡಿ ನಾಲ್ಕು ವರ್ಷಗಳ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ, ವೃತ್ತಿಪರರು ಎನಿಸಿಕೊಂಡ ಶೇ.25ರಷ್ಟು ಅಗ್ನಿವೀರರು (ಅಗ್ನಿಪಥ್‌ ವಿಭಾಗಕ್ಕೆ ನೇಮಕಗೊಂಡು ಅಲ್ಲಿ ಕೆಲಸ ಮಾಡುವವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ) ಮಾತ್ರ ಸೇನೆಯಲ್ಲಿ ಶಾಶ್ವತ ಸೇವೆಗೆ ಅಂದರೆ 15 ವರ್ಷಗಳ ಸೇವೆಗೆ ಅರ್ಹರಾಗುತ್ತಾರೆ. ಅಗತ್ಯ ಕೌಶಲದ ತರಬೇತಿಯನ್ನೂ ನೀಡಲಾಗುತ್ತದೆ.
ಈ ಯೋಜನೆಯ ಅಧಿಕೃತ ಘೋಷಣೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಅಗ್ನಿಪಥ್‌ ನೇಮಕಾತಿ ಯೋಜನೆ ಜಾರಿಗೆ ಬಂದರೆ ಸಾವಿರಾರು ಯುವಕರ ಸೇನೆ ಸೇರುವ ಆಸೆ ನೆರವೇರುತ್ತದೆ. ಈಗ ರಕ್ಷಣಾ ಬಜೆಟ್‌ನಲ್ಲಿ ಶೇ.50ರಷ್ಟು ಹಣ ಸೇನಾ ಸಿಬ್ಬಂದಿ ವೇತನ ಮತ್ತು ಪಿಂಚಣಿಗೆ ಹೋಗುತ್ತಿದೆ. ಇದನ್ನು ಕಡಿತಗೊಳಿಸಿ, ಉಳಿತಾಯದ ಹಣವನ್ನು ರಕ್ಷಣಾ ಕ್ಷೇತ್ರದ ಇನ್ನಿತರ ಸುಧಾರಣೆ, ಆಧುನೀಕರಣಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಈ ಟೂರ್‌ ಆಫ್‌ ಡ್ಯೂಟಿ ಅಥವಾ ಅಗ್ನಿಪಥ್‌ ನೇಮಕಾತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಗ್ನಿಪಥ್‌ ವಿಭಾಗಕ್ಕೆ ಸೇರುವವರ ಸೇವಾ ಅವಧಿ ನಾಲ್ಕು ವರ್ಷವಾಗಿರುತ್ತದೆ. ನಿವೃತ್ತರಾದ ಬಳಿಕ ಅವರಿಗೆ ಪಿಂಚಣಿ ನೀಡುವ ಅಗತ್ಯವಿರುವುದಿಲ್ಲ. ಹೀಗಾಗಿ ಸಹಜವಾಗಿಯೇ ಹಣ ಉಳಿತಾಯವಾಗುತ್ತದೆ ಎನ್ನುವುದು ಸರಕಾರದ ಲೆಕ್ಕಾಚಾರವಾಗಿದೆ.

ಯುವತಿಯರಿಗೂ ಅಗ್ನಿವೀರರಾಗಲು ಇದೆ ಅವಕಾಶ

ಸೇನೆಯಲ್ಲಿ ಅಗ್ನಿಪಥ್‌ ಯೋಜನೆಯಡಿಯಲ್ಲಿ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆ- ಈ ಮೂರು ವಿಭಾಗಗಳಲ್ಲಿ ಅವಕಾಶವಿದೆ. ಆಯಾ ಅಭ್ಯರ್ಥಿಯ ಆಸಕ್ತಿ, ಕೌಶಲದ ಆಧಾರದ ಮೇಲೆ, ಯಾವ ವಿಭಾಗಕ್ಕೆ ಸೂಕ್ತ ಎಂಬುದನ್ನು ನೋಡಿಕೊಂಡು ನೇಮಕ ಮಾಡಲಾಗುತ್ತದೆ. ಮಹಿಳೆಯರೂ ಅಗ್ನಿವೀರರಾಗಿ ಅರ್ಜಿ ಸಲ್ಲಿಸಬಹುದು.

ಅಗ್ನಿವೀರರು ಸೇನೆಯ ಮುಖ್ಯ ಯೋಧರು ಎಂದು ಎನಿಸಿಕೊಳ್ಳದೆ ಇದ್ದರೂ ಅವರೂ ಸಹ ಅಪಾಯವನ್ನು ಮೈಮೇಲೆ ಎಳೆದುಕೊಂಡೇ ಕೆಲಸ ಮಾಡುತ್ತಿರುತ್ತಾರೆ. ಹಾಗಾಗಿ ಅವರು ಸೇವೆ ಸಲ್ಲಿಸುವ ನಾಲ್ಕು ವರ್ಷಗಳ ಅವಧಿಯಲ್ಲಿ ಅವರಿಗೆ ಆಕರ್ಷಕ ವೇತನದ ಜತೆ ಕಷ್ಟ ಪರಿಹಾರ ಭತ್ಯೆಯನ್ನು ನೀಡಲಾಗುತ್ತದೆ. ಈಗ ಸುಮಾರು 1.25 ಲಕ್ಷ ಅಗ್ನಿವೀರರ ಅವಶ್ಯಕತೆ ಇದೆ. ಈ ವರ್ಷ 46 ಸಾವಿರ ಜನರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಸಶಸ್ತ್ರಪಡೆಯ ಭವಿಷ್ಯದ ಅಗತ್ಯಗಳಿಗೆ ಯುವಜನರ ಪಡೆ ಸಜ್ಜು

ಅಗ್ನಿಪಥ ಯೋಜನೆಯಡಿಯಲ್ಲಿ ಭವಿಷ್ಯದಲ್ಲಿ ಯುದ್ಧಕ್ಕೆ ಸನ್ನದ್ಧರಾಗಿರುವ ಪಡೆಯನ್ನು ಸೇನೆ ಅಭಿವೃದ್ಧಿಪಡಿಸಲಿದೆ. ಬದಲಾದ ಪರಿಸ್ಥಿತಿಯಲ್ಲಿ ಇದು ಸೇನೆಯ ಅಗತ್ಯವೂ ಆಗಲಿದೆ. ಯುವಕ-ಯುವತಿಯರಿಗೆ ಸೇನೆಯ ಒಳ ಜಗತ್ತಿನ ಶಿಸ್ತು, ಸಂಯಮ, ಶೌರ್ಯ-ಸಾಹಸಗಳ ಹತ್ತಿರದ ಪರಿಚಯವೂ ಆಗಲಿದೆ ಎನ್ನುತ್ತಾರೆ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ.

ಅಗ್ನಿಪಥ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಸೇನಾಪಡೆಯ ಅಗತ್ಯಗಳಿಗೆ ಸಹಾಯಕವಾಗಲಿದೆ. ಜತೆಗೆ ಸೇನೆಗೆ ಸೇರಬೇಕು ಎಂಬ ಯುವಜನತೆಯ ಕನಸೂ ಈಡೇರಲಿದೆ ಎನ್ನುತ್ತಾರೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಆರ್‌ ಹರಿ ಕುಮಾರ್.‌

ವಾಯುಪಡೆಯಲ್ಲಿ ಅತ್ಯಾಧುನಿಕ ಆಯುಧಗಳು, ಗ್ರೌಂಡ್‌ ಸಿಸ್ಟಮ್‌ಗಳು ಇವೆ. ಇವುಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ಸ್ವತಃ ಬಳಸುವ ಅಪೂರ್ವ ತರಬೇತಿಯ ಅವಕಾಶ ಯುವ ಅಗ್ನಿವೀರರಿಗೆ ದೊರೆಯಲಿದೆ. ದೇಶ ಸೇವೆ ಸಲ್ಲಿಸಲು ಇದು ಸುವರ್ಣಾವಕಾಶ ಎನ್ನುತ್ತಾರೆ ಏರ್‌ ಚೀಫ್‌ ಮಾರ್ಶಲ್‌ ವಿಆರ್‌ ಚೌಧುರಿ.

ವಿದೇಶಗಳಲ್ಲಿ ಅಗ್ನಿಪಥ ಮಾದರಿ ಇದೆಯೇ?

ಕೆಲವು ದೇಶಗಳಲ್ಲಿ ವಿಕಲಚೇತನರು ಮತ್ತು ಮಾನಸಿಕ ಅಸ್ವಸ್ಥರು ಹೊರತುಪಡಿಸಿ ಪ್ರತಿಯೊಬ್ಬರೂ ನಿರ್ದಿಷ್ಟ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮಗಳಿವೆ. ಆದರೆ ಭಾರತದ ಅಗ್ನಿಪಥ ಕಡ್ಡಾಯವಲ್ಲ.
ಸೇನೆಯ ಸೇವೆ ಕಡ್ಡಾಯ ಇರುವ ದೇಶಗಳಲ್ಲಿ ಪುರುಷರಿಗೆ ಮುಖ್ಯವಾಗಿ ಕಡ್ಡಾಯವಾಗಿದೆ. ಆದರೆ ನಾರ್ವೆ, ಸ್ವೀಡನ್‌, ಉತ್ತರ ಕೊರಿಯಾ, ಇಸ್ರೇಲ್‌ ಮತ್ತು ಎರಿಟ್ರಿಯಾದಲ್ಲಿ ಪುರುಷರು ಮತ್ತು ಮಹಿಳೆಯರು ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಇಸ್ರೇಲ್‌, ಬರ್ಮುಡಾ, ಬ್ರೆಜಿಲ್‌, ಸೈಪ್ರಸ್‌, ಗ್ರೀಸ್‌, ಇರಾನ್‌, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಮೆಕ್ಸಿಕೊ, ರಷ್ಯಾ, ಸಿಂಗಾಪುರ, ಥಾಯ್ಲೆಂಡ್‌, ಟರ್ಕಿ, ಯುಎಇಯಲ್ಲಿ ಸೇನೆಯಲ್ಲಿ ಸೇವೆ ಕಡ್ಡಾಯವಾಗಿದೆ.
ಇಸ್ರೇಲಿನಲ್ಲಿ ಎಲ್ಲ ಪರುಷರೂ ಎರಡೂವರೆ ವರ್ಷ ಸೇನೆಯ ಸೇವೆ ಕಡ್ಡಾಯವಾಗಿ ಮಾಡಬೇಕು. ಮಹಿಳೆಯರಿಗೆ ಎರಡು ವರ್ಷ ಕಡ್ಡಾಯ. ಬರ್ಮುಡಾದಲ್ಲಿ 38 ತಿಂಗಳ ಸೇವೆ ಅಗತ್ಯ. ಬ್ರೆಜಿಲ್‌ನಲ್ಲಿ ಒಂದು ವರ್ಷ ಕಡ್ಡಾಯವಾಗಿ ಮಿಲಿಟರಿ ಕರ್ತವ್ಯ ಮಾಡಬೇಕು. ಗ್ರೀಸ್‌ನಲ್ಲಿ 19 ಮತ್ತು 45 ವರ್ಷ ವಯಸ್ಸಿನವರು ಕೆಲ ಕಾಲ ಸೇನೆಯಲ್ಲಿ ಸೇವೆ ಮಾಡಿರಬೇಕು. ರಷ್ಯಾದಲ್ಲಿ 18ರಿಂದ 27 ವರ್ಷ ವಯಸ್ಸಿನ ಪುರುಷರು ಕನಿಷ್ಠ 18 ತಿಂಗಳು ಮಿಲಿಟರಿಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ.

ಸರಕಾರಕ್ಕೆ ಏನು ಲಾಭ?

ಕೇಂದ್ರ ಸರಕಾರಕ್ಕೆ ಸೇನಾ ಪಡೆಯ ಬೃಹತ್‌ ವೆಚ್ಚದ ಬಜೆಟ್‌ ಒತ್ತಡ ಸೃಷ್ಟಿಸುತ್ತದೆ. ಮೂರೂ ಸೇನಾ ಪಡೆಗಳ ಸಿಬ್ಬಂದಿಗೆ ವೇತನ ಹಾಗೂ ನಿವೃತ್ತರಾದವರಿಗೆ ಪಿಂಚಣಿಯ ಬಾಬ್ತು ದೊಡ್ಡ ಮೊತ್ತ ವೆಚ್ಚವಾಗುತ್ತದೆ. ಉದಾಹರಣೆಗೆ 2022-23ರ ರಕ್ಷಣಾ ಬಜೆಟ್‌ 5,25,166 ಕೋಟಿ ರೂ.ಗಳಾಗಿದೆ. ಇದರಲ್ಲಿ 1,19,696 ಕೋಟಿ ರೂ.ಗಳು ಪಿಂಚಣಿಗೆ ಬೇಕಾಗುತ್ತದೆ. ಅಗ್ನಿವೀರರ ಸೇರ್ಪಡೆಯಿಂದ ಪಿಂಚಣಿ ವೆಚ್ಚದ ಒಟ್ಟಾರೆ ಹೊರೆ ತಗ್ಗಲಿದೆ. ಹೀಗೆ ಉಳಿತಾಯವಾಗುವ ಹಣವನ್ನು ಸೇನೆಯ ಮೂಲಸೌಕರ್ಯ ಹೆಚ್ಚಿಸಲು ಬಳಸಬಹುದು. ಅಗ್ನಿವೀರರಿಗೆ 4 ವರ್ಷಗಳ ಸೇವೆಯ ಬಳಿಕ ನಿವೃತ್ತ ಯೋಧರ ಸ್ಥಾನಮಾನ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ ಪಿಂಚಣಿ ಮತ್ತು ಗ್ರಾಚ್ಯುಯಿಟಿ ದೊರೆಯುವುದಿಲ್ಲ. ಸದ್ಯ ಸೇನೆಯಲ್ಲಿ ಸಿಬ್ಬಂದಿಯ ಸರಾಸರಿ ವಯಸ್ಸು 32. ಅಗ್ನಿವೀರರ ಆಗಮನದಿಂದ ಇದು 27ಕ್ಕೆ ಇಳಿಯಲಿದೆ.

ಯುವಜನತೆಗೆ ಏನು ಲಾಭ?

ಕಿರಿಯ ವಯಸ್ಸಿನಲ್ಲೇ ಅಗ್ನಿವೀರರಾಗಿ ಸೇನೆಯನ್ನು ಹತ್ತಿರದಿಂದ ನೋಡುವ, ಮಿಲಿಟರಿ ಪಡೆಯ ಶಿಸ್ತುಬದ್ಧ ಬದುಕನ್ನು ಸ್ವತಃ ರೂಢಿಸಿಕೊಳ್ಳಲು ಹಾಗೂ ದೇಶ ಸೇವೆ ಸಲ್ಲಿಸಲು ಅತ್ಯುತ್ತಮ ಅವಕಾಶ. ನಿರುದ್ಯೋಗ ಸಮಸ್ಯೆಯನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲೂ ಸಹಕಾರಿ. ಪ್ರತಿಭಾವಂತರು ಕಾಯಂ ಆಗಿ ಸೇನೆಗೆ ಸೇರಲೂ ರಹದಾರಿಯಾಗುತ್ತದೆ.

ಅಗ್ನಿವೀರರ ನೇಮಕದಿಂದ ಸೇನೆ ದುರ್ಬಲವಾಗಲಿದೆಯೇ?

ಸೇನೆಗೆ ಅಗ್ನಿ ವೀರರ ಸೇರ್ಪಡೆಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಅಗ್ನಿವೀರರು ಎಂಥ ಗುಣಮಟ್ಟದ ಸೇವೆ ಸಲ್ಲಿಸಿಯಾರು? ಸೇನೆಯಲ್ಲಿ 15 ವರ್ಷಗಳ ಸುದೀರ್ಘ ಅನುಭವ ಅಗತ್ಯ. ಅನನುಭವಿ ಅಗ್ನಿವೀರರ ನೇಮಕಾತಿಯಿಂದ ಪ್ರಯೋಜನ ಇಲ್ಲ. ಇದು ಸೇನೆಯ ಗುಣಮಟ್ಟವನ್ನು ಕಡಿಮೆ ಮಾಡಬಹುದು ಎಂಬ ಚರ್ಚೆ ನಡೆಯುತ್ತಿದೆ. ಎರಡನೆಯದಾಗಿ 4 ವರ್ಷಗಳ ಸೇವೆಯ ಬಳಿಕ 25% ಮಂದಿಯನ್ನು ಸೇನೆಗೆ ಯಾವ ಮಾನದಂಡದಲ್ಲಿ ಸೇರಿಸಲಾಗುವುದು ಮತ್ತು ಅದು ಯಾರ ಕೆಲಸ ಎಂಬುದೂ ಸ್ಪಷ್ಟವಾಗಿಲ್ಲ ಎಂಬ ಆರೋಪ ಇದೆ. ಈ ನಿರ್ಣಾಯಕ ಯೋಜನೆಯ ಜಾರಿಗೆ ಮೊದಲು ಸಂಬಂಧಪಟ್ಟವರೊಡನೆ ವ್ಯಾಪಕ ಸಮಾಲೋಚನೆಯನ್ನು ಸರಕಾರ ಮಾಡಿಲ್ಲ. ನಿವೃತ್ತ ಯೋಧರ, ಸೇನಾಧಿಕಾರಿಗಳ ಅಭಿಪ್ರಾಯಗಳನ್ನು ಸರಕಾರ ಕಿವಿಗೆ ಹಾಕಿಕೊಂಡಿಲ್ಲ ಎಂಬ ಆರೋಪಗಳೂ ಇವೆ.

“ಅಗ್ನಿಪಥ ಯೋಜನೆ ಸಶಸ್ತ್ರ ಸೇನಾಪಡೆಗೆ ಮಾರಕವಾಗಲಿದೆ. ಇದರ ಸಾಧ್ಯಾಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆದಿಲ್ಲ. ವರ್ಷಕ್ಕೆ ಸುಮಾರು 40,000 ಯುವಜನತೆ ಸೇನೆಗೆ ಕಾಯಂ ಆಗಿ ಸೇರಿಕೊಳ್ಳಲು ಆಗದೆ ಹೊರಬರಲಿದ್ದಾರೆ. ಅವರಿಗೆ ಉದ್ಯೋಗ ಕೊಡುವವರು ಯಾರು? ಅರ್ಧಂಬರ್ಧ ಸೇನಾ ತರಬೇತಿ ಪಡೆಯುವ ಯುವಜನರ ಸಂಖ್ಯೆ ಹೆಚ್ಚಲಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎನ್ನುತ್ತಾರೆ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ವಿನೋದ್‌ ಭಾಟಿಯಾ.

ಆದರೆ ಸೇನೆಯ ವರಿಷ್ಠರು ತಿಳಿಸಿರುವ ಪ್ರಕಾರ, ದೀರ್ಘಾವಧಿಯ ಕಾಯಂ ನೇಮಕಾತಿಯೂ ಮುಂದುವರಿಯಲಿದೆ. ಅದರ ಜತೆಗೆ ಹೆಚ್ಚುವರಿಯಾಗಿ ಅಗ್ನಿವೀರರ ಸೇರ್ಪಡೆಯಾಗಲಿದೆ.
ಕೊನೆಯದಾಗಿ, ಭಾರತ ವಿಶ್ವದಲ್ಲಿಯೇ ಸಕ್ರಿಯ ಸಿಬ್ಬಂದಿ ಬಲದ ಸೃಷ್ಟಿಯಿಂದ ಅತಿ ದೊಡ್ಡ ಸೇನಾಪಡೆಯಾಗಿದೆ. 14 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಹಣಕಾಸು ಹೊರೆ ಇಳಿಸುವ ಹಾಗೂ ಹೆಚ್ಚು ಯುವಜನತೆಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವ ವಿನೂತನ ಪ್ರಯೋಗಕ್ಕೆ ಮುಕ್ತವಾಗಿ ತೆರೆದುಕೊಳ್ಳುವುದು ತಪ್ಪಲ್ಲ ಎನ್ನುತ್ತಾರೆ ತಜ್ಞರು. ಸೇನಾ ನೇಮಕಾತಿಯಲ್ಲಿ ಉಂಟಾಗಿರುವ ಈ ಹೊಸ ಕ್ರಾಂತಿಕಾರಕ ಪರಿಕಲ್ಪನೆಯ ಫಲಶ್ರುತಿ ಮುಂಬರುವ ವರ್ಷಗಳಲ್ಲಿ ಗೊತ್ತಾಗಲಿದೆ. ಅಲ್ಲಿಯತನಕ ಕಾಯುವುದು ಸೂಕ್ತ.

ಇದನ್ನೂ ಓದಿ | Agnipath : ಸೇನೆ ಸೇರಲು ಯುವಕರಿಗೆ ಸುವರ್ಣ ಅವಕಾಶ; ಅಗ್ನಿಪಥ್‌ ಯೋಜನೆಗೆ ಕೇಂದ್ರದ ಅನುಮೋದನೆ

Exit mobile version