ಲಖನೌ: ಗಂಡನ ವಿರುದ್ಧವೇ ಹೆಂಡತಿ ಯಾವಾಗ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾಳೆ? ಗಂಡನಾದವನು ಕಿರುಕುಳ ಕೊಟ್ಟಾಗ, ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹಲ್ಲೆ ನಡೆಸಿದಾಗ, ಮಾನಸಿಕವಾಗಿ, ದೈಹಿಕವಾಗಿ ಹಿಂಸೆ (Domestic Violence) ನೀಡಿದಾಗ, ಅವಾಚ್ಯ ಶಬ್ದಗಳಿಂದ ಬೈದಾಗ, ಕುಡಿದು ಬಂದು ಹೊಡೆದಾಗ ಪತ್ನಿಯು ಪೊಲೀಸ್ ಠಾಣೆ ಮೆಟ್ಟಿಲೇರುತ್ತಾಳೆ. ಆದರೆ, ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ಮಹಿಳೆಯೊಬ್ಬರು, ‘ಪತಿ ನನಗೆ ಮೋಮೋಸ್ (Momos) ತಂದು ಕೊಡುತ್ತಿಲ್ಲ’ ಎಂದು ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದಾರೆ.
ಹೌದು, 8 ತಿಂಗಳ ಹಿಂದೆ ಮಾಲ್ಪುರದ ಯುವತಿ ಹಾಗೂ ಪಿನಾಹತ್‌ನ ಯುವಕ ಮದುವೆಯಾಗಿದ್ದರು. ಮದುವೆಯಾದ ಹೊಸತರಲ್ಲಿ ಪತಿಯು ನಿತ್ಯ ಮೋಮೋಸ್ ತಂದು ಕೊಡುತ್ತಿದ್ದ. ಮೋಮೋಸ್ ಎಂದರೆ ಪತ್ನಿಗೆ ಪಂಚಪ್ರಾಣ ಎಂಬುದನ್ನು ಅರಿತ ಆತ ನಿತ್ಯ ತಂದು ಕೊಡುತ್ತಿದ್ದ. ಆದರೆ, ಕೆಲಸದ ಒತ್ತಡವೋ ಏನೋ, ಕೆಲ ದಿನಗಳಿಂದ ಮೋಮೋಸ್ ತಂದುಕೊಡುವುದನ್ನು ಆತ ನಿಲ್ಲಿಸಿದ್ದ. ಇದರಿಂದ ಕುಪಿತಗೊಂಡ ಪತ್ನಿಯು ಪತಿಯ ಜತೆ ಜಗಳವಾಡಿದ್ದಾರೆ. ಮುನಿಸಿಕೊಂಡು ತವರು ಮನೆಗೂ ಹೋಗಿದ್ದಾಳೆ.
ಸಿಟ್ಟಿನಲ್ಲಿ ತವರು ಮನೆಗೆ ಹೋಗಿದ್ದಾಳೆ, ಒಂದಷ್ಟು ದಿನ ಬರುತ್ತಾಳೆ ಬಿಡು ಎಂದು ಪತಿಯು ಸುಮ್ಮನಾಗಿದ್ದಾನೆ. ಪತಿಯ ವಿರುದ್ಧ ಕೆರಳಿ ಕೆಂಡವಾಗಿದ್ದ ಮಹಿಳೆಯು ಗಂಡನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪತಿ ನನಗೆ ಮೋಮೋಸ್ ತಂದು ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಪೊಲೀಸರು ಪ್ರಕರಣವನ್ನು ಕೌಟುಂಬಿಕ ಸಮಾಲೋಚನೆ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ. ಆ ಕೇಂದ್ರದಲ್ಲಿ ಗಂಡ-ಹೆಂಡತಿಯ ಜಗಳ ಬಗೆಹರಿದಿದ್ದು, ಕೊನೆಗೆ ಪತಿಯು ನಿತ್ಯ ಮೋಮೋಸ್ ತಂದುಕೊಡುವುದಾಗಿ ಒಪ್ಪಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ; ಇನ್‌ಸ್ಟಾಗ್ರಾಂನಲ್ಲಿ ಲಕ್ಷ ಫಾಲೋವರ್ಸ್ ಇದ್ದಿದ್ದೇ ಕಾರಣ?
ಗಂಡನೇಕೆ ಮೋಮೋಸ್ ತಂದುಕೊಡುತ್ತಿಲ್ಲ?
ನೀವೇಕೆ ಪತ್ನಿಗೆ ನಿತ್ಯ ಮೋಮೋಸ್ ತಂದುಕೊಡುತ್ತಿಲ್ಲ ಎಂದು ಸಮಾಲೋಚನೆ ಕೇಂದ್ರದ ಸಿಬ್ಬಂದಿಯು ಆತನಿಗೆ ಕೇಳಿದ್ದಾರೆ. “ಆಫೀಸ್‌ನಲ್ಲಿ ತುಂಬ ಕೆಲಸ ಇರುತ್ತದೆ. ಇತ್ತೀಚೆಗಂತೂ ಕೆಲಸದ ಒತ್ತಡ ಜಾಸ್ತಿಯಾಗಿದೆ. ಕೆಲವೊಮ್ಮೆ ಮೋಮೋಸ್ ತೆಗೆದುಕೊಂಡು ಹೋಗುವುದನ್ನು ಮರೆತುಬಿಡುತ್ತೇನೆ. ಇನ್ನೂ ಕೆಲವೊಮ್ಮೆ ಮನೆಗೆ ಬೇಗ ಹೋಗಬೇಕು ಎಂದು ತಗೆದುಕೊಂಡು ಹೋಗುವುದಿಲ್ಲ” ಎಂದು ಸಮಜಾಯಿಷಿ ನೀಡಿದ್ದಾರೆ. ಇಷ್ಟಾದರೂ ಮೋಮೋಸ್ ಪ್ರಿಯ ಮಹಿಳೆಯು ಒಪ್ಪಿಕೊಂಡಿಲ್ಲ. ಕೊನೆಗೆ ವಿಧಿಯಿಲ್ಲದೆ, ಪತಿಯು ದಿನಾಲೂ ಮೋಮೋಸ್ ತಂದುಕೊಡುವೆ ನಡಿಯೇ ಮಾರಾಯ್ತಿ ಎಂದು ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಗೆ, ಗಂಡ-ಹೆಂಡತಿ ಜಗಳವು ಗಂಡ ಸೋಲುವುದರೊಂದಿಗೆ ಸುಖಾಂತ್ಯ ಕಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ