ಅಲಕಾ ಕೆ, ಮೈಸೂರು
ಚಿನ್ನ-ಬೆಳ್ಳಿ ಮುಂತಾದ (Akshaya Tritiya 2024) ಹೊಸ ವಸ್ತುಗಳ ಖರೀದಿ, ಆಸ್ತಿ ಹೂಡಿಕೆ, ಉದ್ದಿಮೆ ಪ್ರಾರಂಭ, ವಿವಾಹದಂಥ ಶುಭ ಕಾರ್ಯಗಳು- ಎಲ್ಲವಕ್ಕೂ ಅಕ್ಷಯ ತೃತೀಯ ಪ್ರಶಸ್ತ ಎಂಬುದು ಬಹುಜನರ ನಂಬಿಕೆ. ಅಂದು ನೆರವಿನ ಅಗತ್ಯ ಇರುವವರಿಗೆ ಬೇಕಾದ ನೆರವು ನೀಡುವುದರಿಂದ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ. ಅಂದು ಪೂಜೆಗೆ ಪ್ರಶಸ್ತ್ರ ಸಮಯ ಯಾವುದು?
ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯ… ಹೆಸರು ಯಾವುದಾದರೂ ಅರ್ಥ ಮಾತ್ರ ಒಂದೇ- ಎಂದಿಗೂ ಕಡಿಮೆಯಾಗದ್ದು ಎಂಬುದು. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ, ಯಶಸ್ಸು, ಆರೋಗ್ಯ, ಐಶ್ವರ್ಯ ಮುಂತಾದ ಸಮೃದ್ಧಿಗಳು ಕ್ಷಯವಾಗುವುದಿಲ್ಲ, ಅಂದರೆ ಕಡಿಮೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಭಾರತದೆಲ್ಲೆಡೆ ಈ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.
ಮಂಗಳಕಾರ್ಯಗಳಿಗೆ ಪ್ರಶಸ್ತ:
ಈ ದಿನ ಯಾವುದೇ ಮಂಗಳಕಾರ್ಯಗಳಿಗೆ ಪ್ರಶಸ್ತವಾಗಿದೆ ಎಂಬ ನಂಬಿಕೆ ಇದೆ. ಹೊಸ ಉದ್ದಿಮೆಗಳ ಪ್ರಾರಂಭ, ವಿವಾಹ, ಚಿನ್ನ, ಭೂಮಿಯಂಥ ಆಸ್ತಿ ಖರೀದಿ, ಹೂಡಿಕೆ ಮುಂತಾದ ಕೆಲಸಗಳನ್ನು ಜನ ಈ ದಿನದಂದು ಇರಿಸಿಕೊಳ್ಳುತ್ತಾರೆ. ಹಾಗಾಗಿ ದೇಶದ ಉದ್ದಗಲಕ್ಕೆ ಚಿನಿವಾರ ಪೇಟೆಗೆ ಅಂದು ಬಿಡುವಿಲ್ಲದ ಕೆಲಸ. ಈ ಬಾರಿ ಅಕ್ಷಯ ತೃತೀಯ ಮೇ 10ರಂದು ಆಚರಣೆಯಾಗಲಿದ್ದು, ಬೆಳಗಿನ 5.33ರಿಂದ ಮಧ್ಯಾಹ್ನ 12.18ರವರೆಗೆ ಪೂಜೆಗೆ ಸೂಕ್ತ ಎನ್ನಲಾಗಿದೆ. ತದಿಗೆಯ ತಿಥಿಯು ಮೇ 10ರಂದು ಬೆಳಗಿನ 4.17ಕ್ಕೆ ಪ್ರಾರಂಭವಾದರೆ, ಮೇ 11ರ ಬೆಳಗಿನ ಜಾವ 2.50ರವರೆಗೆ ಇರಲಿದೆ. ಬಂಗಾರ ಖರೀದಿಗೆ ಬೆಳಗಿನ ಜಾವ 4.17ರಿಂದ ತದಿಗೆ ಮುಗಿಯುವರೆಗೂ ಸಕಾಲ.
ಲಕ್ಷ್ಮಿ ಮತ್ತು ಕುಬೇರ ಪೂಜೆ:
ಅಂದಿನ ದಿನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಮತ್ತು ಕುಬೇರನನ್ನು ಪೂಜಿಸುವ ಸಂಪ್ರದಾಯವಿದೆ. ಇದಲ್ಲದೆ, ದಾನ-ದಕ್ಷಿಣೆಗಳನ್ನು ನೀಡಲು ಪ್ರೋತ್ಸಾಹಿಸಲಾಗುತ್ತದೆ. ನೆರವಿನ ಅಗತ್ಯ ಉಳ್ಳವರಿಗೆ ದಾನ ಮಾಡಿದಷ್ಟೂ ಸಮೃದ್ಧಿ ಹೆಚ್ಚು ಎನ್ನುವ ಪ್ರತೀತಿಯೂ ಇದೆ. ಮೊಳಕೆ ಕಾಳುಗಳು, ಹಣ್ಣುಗಳು ಮತ್ತು ಸಿಹಿ ತಿಂಡಿಗಳನ್ನು ವಿತರಿಸುವ ವಾಡಿಕೆ ಕೆಲವೆಡೆಗಳಲ್ಲಿ ಇದೆ. ಕೆಲವರು ಅನ್ನದಾನವನ್ನೂ ನಡೆಸಿ ಕೊಡುತ್ತಾರೆ.
ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?
ಪೌರಾಣಿಕ ಹಿನ್ನೆಲೆ:
ಅಕ್ಷಯ ತೃತೀಯದ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಪಾಂಡವರು ವನವಾಸದಲ್ಲಿದ್ದಾಗ ದೂರ್ವಾಸರ ಕೋಪಕ್ಕೆ ತುತ್ತಾಗುವುದನ್ನು ತಪ್ಪಿಸಿದ್ದು ಅಕ್ಷಯ ಪಾತ್ರೆ. ಸಾವಿರಾರು ಶಿಷ್ಯಂದಿರ ಜೊತೆಗೆ ದೂರ್ವಾಸರು ಪಾಂಡವರ ಆಶ್ರಮಕ್ಕೆ ಆಗಮಿಸುತ್ತಾರೆ. ಅವರೆಲ್ಲರನ್ನೂ ಸತ್ಕರಿಸಬೇಕಾದ ಪರಿಸ್ಥಿತಿ ಪಾಂಡವರ ಪಾಲಿಗೆ ಒದಗುತ್ತದೆ. ಆದರೆ ಅಕ್ಷಯಪಾತ್ರೆಯಲ್ಲಿ ದ್ರೌಪದಿಯೂ ಉಂಡು ಮಗುಚಿದ ಮೇಲೆ, ಆ ದಿನಕ್ಕೆ ಆಹಾರ ದೊರೆಯುವುದಿಲ್ಲ. ಮುಂದಿನ ದಾರಿ ಕಾಣದೆ ಅವರು ಕೃಷ್ಣನನ್ನು ಕರೆಯುತ್ತಾರೆ. ಅಲ್ಲಿಗೆ ಆಗಮಿಸುವ ಕೃಷ್ಣ, ಅದರಲ್ಲಿದ್ದ ಅಗುಳೊಂದನ್ನು ಸೇವಿಸಿದಾಗ, ದೂರ್ವಾಸರು ಮತ್ತವರ ಶಿಷ್ಯರ ಹೊಟ್ಟೆಯೆಲ್ಲ ಭರ್ತಿಯಾದ ಕಥೆಯನ್ನು ಕೇಳಿಯೇ ಇರುತ್ತೇವೆ. ಒಂದೇ ಅಗುಳು ಅಕ್ಷಯವಾಗಿ ಎಲ್ಲರ ಹೊಟ್ಟೆ ತುಂಬಿಸಿದ್ದ ಕಥೆಯು ಈ ದಿನಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ.
ಇದಲ್ಲದೆ, ಇಂದಿನ ದಿನ ದ್ವಾರಕೆಯಲ್ಲಿದ್ದ ಕೃಷ್ಣನನ್ನು ಆತನ ಮಿತ್ರ ಸುಧಾಮ ಭೇಟಿ ಮಾಡಿ, ಸಂಪತ್ತು ಹೆಚ್ಚಿಕೊಂಡ ಘಟನೆಯ ನಂಟೂ ಇರುವುದಾಗಿ ಕಥೆಗಳು ಹೇಳುತ್ತವೆ. ವಿಷ್ಣವಿನ ಅವತಾರವಾದ ಪರಶುರಾಮನ ಜನ್ಮದಿನವೆಂದು ನಂಬಲಾಗುತ್ತದೆ. ಪರಶುರಾಮ ದೇಗುಲಗಳಲ್ಲಿ ಅಂದು ಆತನ ಪೂಜೆಯೂ ವಿಜೃಂಭಣೆಯಿಂದ ಜರುಗುತ್ತದೆ. ಗಣಪತಿಗೆ ಬರೆಯುವುದಕ್ಕೆಂದು ಮಹಾಭಾರತವನ್ನು ವ್ಯಾಸರು ಕಥಿಸಲು ಪ್ರಾರಂಭಿಸಿದ ದಿನ ಎಂಬ ದಂತಕಥೆಯೂ ಈ ದಿನದೊಂದಿಗೆ ತಳುಕು ಹಾಕಿಕೊಂಡಿದೆ. ಗಂಗೆಯು ಭುವಿಗೆ ಅವತರಿಸಿದ ದಿನವಿದು ಎಂಬ ಪ್ರತೀತಿಯೂ ಅಕ್ಷಯ ತದಿಗೆಗೆ ಇದೆ. ಚಾರ್‌ಧಾಮ್ ಪುಣ್ಯ ಕ್ಷೇತ್ರಗಳನ್ನು ಯಾತ್ರಿಕರಿಗೆ ತೆರೆಯುವುದು ಸಾಮಾನ್ಯವಾಗಿ ಈ ಶುಭ ಸಂದರ್ಭದಲ್ಲೇ.