ಜಾಗತಿಕ ಭಯೋತ್ಪಾದಕ ಸಂಸ್ಥೆ ಅಲ್ ಕೈದಾ ಮತ್ತೆ ಭಾರತದ ವಿಚಾರದಲ್ಲಿ ಮೂಗು ತೂರಿಸಲು ಯತ್ನಿಸಿದೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಕರೆ ಕೊಟ್ಟಿದೆ. ಹಿಂದೂಗಳನ್ನು ಉದ್ಯೋಗದಿಂದ ತೆಗೆಯುವಂತೆ ಇಸ್ಲಾಮಿಕ್ ರಾಷ್ಟ್ರಗಳಿಗೆ ಕರೆ ನೀಡಿದೆ. ಭಾರತದ ಜತೆಗಿನ ಭದ್ರತೆ, ವ್ಯಾಪಾರ ಸೇರಿ ಹಲವು ಕ್ಷೇತ್ರಗಳಲ್ಲಿ ಮಾಡಿಕೊಂಡ ಒಪ್ಪಂದಗಳನ್ನು ಮೊಟಕುಗೊಳಿಸಬೇಕು. ಪ್ರತೀ ಮುಸ್ಲಿಂ ದೇಶವೂ ಭಾರತವನ್ನು ಬಾಯ್ಕಾಟ್ ಮಾಡಬೇಕು, ಭಾರತದ ಉತ್ಪನ್ನಗಳನ್ನು ಬ್ಯಾನ್ ಮಾಡಬೇಕು ಎಂದಿದೆ. ಪ್ರಧಾನಿ ಮೋದಿ ವಿರುದ್ಧ ಸಿಟ್ಟು ಕಾರಿಕೊಂಡಿರುವ ಅದು, ಮೋದಿ ಆಡಳಿತದಲ್ಲಿ ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ ಎಂದು ಹಸಿಹಸಿ ಸುಳ್ಳು ಹೇಳಿದೆ.
ಅಲ್ ಕೈದಾ ಭಾರತದ ಒಳಗಿನ ಸಂಗತಿಗಳಲ್ಲಿ ಮೂಗು ತೂರಿಸುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೆ ಅದು ಕರ್ನಾಟಕದಲ್ಲಿ ಸೃಷ್ಟಿಯಾದ ಹಿಜಾಬ್ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿತ್ತು. ವ್ಯಂಗ್ಯವೆಂದರೆ, ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಗಳ ಬಗ್ಗೆ ಅದು ಚಕಾರ ತೆಗೆದಂತಿಲ್ಲ. ಚೀನಾದಲ್ಲಿ ಉಯಿಗುರ್ ಮುಸ್ಲಿಮರ ಜನಾಂಗೀಯ ಹತ್ಯೆ ಸದ್ದಿಲ್ಲದೇ ನಡೆಯುತ್ತಿದೆ. ಅದರ ಬಗ್ಗೆಯೂ ಅಲ್ ಕೈದಾ ಮಾತನಾಡುವುದಿಲ್ಲ. ಭಾರತದ ವಿಚಾರದಲ್ಲಿ ಮಾತ್ರ ಅದರ ರೋಷಾವೇಶ. ಭಾರತೀಯರ ಬಗ್ಗೆ ಏನು ಬೇಕಿದ್ದರೂ ಮಾತನಾಡಿ ದಕ್ಕಿಸಿಕೊಳ್ಳಬಹುದು ಎಂದು ಅದು ತಿಳಿದಂತಿದೆ. ಅಲ್ ಕೈದಾವನ್ನು ಜಾಗತಿಕ ಉಗ್ರ ಸಂಘಟನೆ ಎಂದು ಈಗಾಗಲೇ ವಿಶ್ವಸಂಸ್ಥೆ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು ಒಪ್ಪಿಕೊಂಡಿವೆ. ಆದ್ದರಿಂದ ಈ ಸಂಘಟನೆಯ ಮಾತುಗಳಿಗೆ ಯಾರೂ ಬೆಲೆ ಕೊಡುವುದಿಲ್ಲ ಎಂಬುದು ಬೇರೆ ಮಾತು. ಹಾಗಿದ್ದರೂ ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಬೇಕಾಗುತ್ತದೆ.
ಮೊದಲನೆಯದಾಗಿ, ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿಲ್ಲ. ಪಾಕಿಸ್ತಾನದಲ್ಲಿ, ಅಫಘಾನಿಸ್ತಾನದಲ್ಲಿ ಹಿಂದುಗಳು ಅಸುರಕ್ಷಿತರಾಗಿದ್ದಾರೆ ಎನ್ನಬಹುದು, ಆದರೆ ಭಾರತದ ಮುಸ್ಲಿಮರ ಬಗ್ಗೆ ಈ ಮಾತು ಹೇಳುವಂತಿಲ್ಲ. ಭಾರತದ ಜನಸಂಖ್ಯೆಯ ಸುಮಾರು 14%ದಷ್ಟು, ಅಂದರೆ 20 ಕೋಟಿ ಮಂದಿ ಮುಸ್ಲಿಮರು ಇಲ್ಲಿ ಇದ್ದಾರೆ. ಇದು ದೇಶದ ಎರಡನೇ ಅತಿ ದೊಡ್ಡ ಧಾರ್ಮಿಕ ಸಮುದಾಯ. ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ಬಳಿಕ ಅತಿ ಹೆಚ್ಚು ಮುಸ್ಲಿಮರು ಇರುವ ದೇಶ ಎಂದರೆ ಭಾರತ. ಇನ್ನುಳಿದ ಇಸ್ಲಾಮಿಕ್ ದೇಶಗಳೆನಿಸಿಕೊಂಡವು ಕೂಡ ಭಾರತದಷ್ಟು ಸಂಖ್ಯೆಯ ಮುಸ್ಲಿಮರನ್ನು ಹೊಂದಿಲ್ಲ. ಭಾರತದಲ್ಲಿ ಎರಡೂ ಧರ್ಮಗಳೂ ಸಾಕಷ್ಟು ಕೊಡುಕೊಳ್ಳುವಿಕೆ ಮಾಡಿಕೊಂಡು ಸಾಮರಸ್ಯದಿಂದ ಬಾಳುತ್ತಿವೆ. ಅಲ್ಲಿ ಇಲ್ಲಿ ಕೆಲವು ಕೋಮು ಸಂಘರ್ಷಗಳು ಅಲ್ ಕೈದಾದಂಥ ದುರುಳ ಹಿತಾಸಕ್ತಿಗಳ ಕಾರಣದಿಂದ ಆಗಿರಬಹುದು ಎಂಬುದನ್ನು ಹೊರತುಪಡಿಸಿದರೆ, ಒಟ್ಟಾರೆ ಶಾಂತಿಯುತ ಸಹಬಾಳ್ವೆ ನಮ್ಮದಾಗಿದೆ.
ಪಾಕಿಸ್ತಾನ, ಇರಾನ್ ಮುಂತಾದ ಅಪ್ಪಟ ಮುಸ್ಲಿಂ ದೇಶಗಳಿಗಿಂತ ಭಾರತೀಯ ಮುಸ್ಲಿಮರು ಹೆಚ್ಚು ಸ್ವಾತಂತ್ರ್ಯ ಮತ್ತು ಸೌಕರ್ಯ ಹೊಂದಿದ್ದಾರೆ. ಸೌದಿ ಅರೇಬಿಯಾ ಸೇರಿದಂತೆ ಹಲವಾರು ಮುಸ್ಲಿಂ ದೇಶಗಳು ಭಾರತದ ಜತೆ ಹೆಚ್ಚಿನ ಸ್ನೇಹದಿಂದಿವೆ. ಮುಕ್ತ ವ್ಯಾಪಾರ ಸಂಬಂಧ ಹೊಂದಿವೆ. ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಅರಬ್ ದೇಶಗಳ ಜತೆಗಿನ ಸ್ನೇಹ ಸಂಬಂಧ ಹಿಂದೆಂದೂ ಕಾಣದಷ್ಟು ಎತ್ತರಕ್ಕೆ ಹೋಗಿದೆ. ಬಾಂಗ್ಲಾ, ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಆಗ್ನೇಯ ಏಷ್ಯಾ ದೇಶಗಳು ಕೂಡ ಮೋದಿ ಸರ್ಕಾರದ ʼಲುಕ್ ಈಸ್ಟ್ʼ ಪಾಲಿಸಿಯ ಪರಿಣಾಮ ಇನ್ನಷ್ಟು ನಿಕಟವಾಗಿವೆ.
ಭಾರತಕ್ಕಿರುವ ಸಮಸ್ಯೆ ಏನೆಂದರೆ, ಈ ಆಣಿಮುತ್ತುಗಳನ್ನು ಉದುರಿಸಿರುವ ಅಲ್ ಕೈದಾದಂಥ ಭಯೋತ್ಪಾದಕ ಸಂಘಟನೆಗಳು ಹಾಗೂ ಅದನ್ನು ಪೋಷಿಸುತ್ತಿರುವ ಪಾಕಿಸ್ತಾನದ ಐಎಸ್‌ಐನಂಥ ಬೇಹುಗಾರಿಕೆ ಸಂಸ್ಥೆಗಳು. ಕಾಶ್ಮೀರ, ಪಂಜಾಬ್ ಸೇರಿದಂತೆ ಭಾರತದ ನೆಲದಲ್ಲಿ ರಕ್ತದೋಕುಳಿ ಹರಿಸುವ ಈ ವಿಚ್ಛಿದ್ರಕಾರಿಗಳ ಕೃತ್ಯಗಳನ್ನು ಭಾರತ ಸಮರ್ಥವಾಗಿ ಬಗ್ಗು ಬಡಿಯುತ್ತ ಬಂದಿದೆ. ಅಲ್ ಕೈದಾ, ಐಸಿಸ್ ಬೆದರಿಕೆಯನ್ನೂ ಎದುರಿಸುವ ತಾಕತ್ತು ಭಾರತಕ್ಕಿದೆ. ಬಾಹ್ಯ ಬೆದರಿಕೆ ಮತ್ತು ಆಕ್ರಮಣವನ್ನು ಇಲ್ಲಿಯ ಹಿಂದೂ ಮತ್ತು ಮುಸ್ಲಿಮರು ಒಂದಾಗಿ ಹಲವು ಬಾರಿ ಎದುರಿಸಿ ದೇಶವನ್ನು ಗೆಲ್ಲಿಸಿದ್ದಾರೆ. ಭಾರತದ ಮುಸ್ಲಿಮರು ಅಲ್ ಕೈದಾದ ಪ್ರಚೋದನೆ, ಪುಸಲಾಯಿಸುವಿಕೆಗೆ ಒಳಗಾಗಲಾರರು. ಆದರೂ ಕೇಂದ್ರ ಸರ್ಕಾರ ಅಲ್ ಕೈದಾ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಕಟ್ಟೆಚ್ಚರ ವಹಿಸಬೇಕು. ಕೆಲ ಮುಸ್ಲಿಂ ಮೂಲಭೂತವಾದಿಗಳು ಭಾರತದದ ಒಳಗೂ ಇದ್ದಾರೆ; ಇವರನ್ನು ಭಾರತದ ವಿರುದ್ಧ ಅಲ್ ಕೈದಾ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು. ಅಂಥ ವಿಷ ಬೀಜ ಬಿತ್ತುವ ಯತ್ನಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು.
ಇದನ್ನೂ ಓದಿ | Al-Qaeda Targets India | ಇಸ್ಲಾಂ ರಾಷ್ಟ್ರಗಳು ಭಾರತವನ್ನು ಬಾಯ್ಕಾಟ್ ಮಾಡಲಿ, ಹಿಂದುಗಳನ್ನು ಓಡಿಸಲಿ: ಅಲ್‌ಕೈದಾ ಮತ್ತೆ ಕುತಂತ್ರ