Site icon Vistara News

ವಿಸ್ತಾರ ಸಂಪಾದಕೀಯ: ಕೇಂದ್ರೀಯ ತನಿಖಾ ದಳಗಳ ದುರುಪಯೋಗ ಆರೋಪ; ಪಾರದರ್ಶಕತೆ ಅಗತ್ಯ

Alleged misuse of the Central Bureau of Investigation; Transparency is essential

#image_title

ಕೇಂದ್ರದ ಬಿಜೆಪಿ ಸರ್ಕಾರ ಸಿಬಿಐ, ಇಡಿ ಮುಂತಾದ ಕೇಂದ್ರೀಯ ತನಿಖಾ ದಳಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು 14 ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಇತ್ತೀಚೆಗಷ್ಟೇ 9 ಪ್ರತಿಪಕ್ಷಗಳ ಹಿರಿಯ ಮುಖಂಡರು ಈ ಬಗ್ಗೆ ನೇರವಾಗಿ ಪ್ರಧಾನಿಗೇ ಪತ್ರ ಬರೆದು ದೂರು ನೀಡಿದ್ದರು. 2014ರಿಂದ ಈಚೆಗೆ ಕೇಂದ್ರೀಯ ತನಿಖಾ ದಳಗಳು ಪ್ರತಿಪಕ್ಷಗಳ ಮುಖಂಡರನ್ನು ಮಾತ್ರ ಟಾರ್ಗೆಟ್ ಮಾಡುತ್ತಿರುವುದೇಕೆ ಎನ್ನುವುದು ಪ್ರತಿಪಕ್ಷಗಳ ಪ್ರಶ್ನೆಯಾಗಿದೆ. ಮೇಲ್ನೋಟಕ್ಕೆ ಹಲವು ಪ್ರಕರಣಗಳು ಜನಸಾಮಾನ್ಯರಲ್ಲೂ ಈ ಪ್ರಶ್ನೆ ಏಳುವಂತೆ ಮಾಡಿದೆ.

ಪ್ರತಿಪಕ್ಷಗಳ ದೂರಿನಲ್ಲಿ ಅನೇಕ ನಿಜಾಂಶಗಳಿವೆ. 2014ರಿಂದ ಪ್ರತಿಪಕ್ಷ ನಾಯಕರ ವಿರುದ್ಧದ ದಾಳಿಗಳು, ಪ್ರಕರಣಗಳು ಮತ್ತು ಬಂಧನಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಲಾಲು ಪ್ರಸಾದ್ ಯಾದವ್ (ರಾಷ್ಟ್ರೀಯ ಜನತಾ ದಳ), ಸಂಜಯ್ ರಾವುತ್ (ಶಿವಸೇನೆ), ಅಜಮ್ ಖಾನ್ (ಸಮಾಜವಾದಿ ಪಕ್ಷ), ನವಾಬ್ ಮಲಿಕ್, ಅನಿಲ್ ದೇಶಮುಖ್ (ಎನ್‌ಸಿಪಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ) ಅವರ ಮೇಲಿನ ದಾಳಿಗಳು, ದೆಹಲಿ ಸರ್ಕಾರದ ಮಂತ್ರಿಯಾಗಿದ್ದ ಮನೀಶ್‌ ಸಿಸೋಡಿಯಾ ಅವರ ತನಿಖೆ ಹಾಗೂ ಬಂಧನ ಇತ್ಯಾದಿಗಳಿಂದಾಗಿ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿವೆ ಎಂಬ ಅನುಮಾನ ನಿಜವಾಗುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ. ಆದರೆ ಇದೇ ಅವಧಿಯಲ್ಲಿ ಬಿಜೆಪಿ ನಾಯಕರ ಮೇಲೂ ಸಾಕಷ್ಟು ಭ್ರಷ್ಟಾಚಾರ ಆರೋಪಗಳಿವೆ, ಹಗರಣಗಳಿವೆ. ಆದರೆ ಅವರ ಮೇಲೆ ತನಿಖಾ ಸಂಸ್ಥೆಗಳು ಕ್ರಮ ಕೈಗೊಂಡಿರುವುದು ಅತ್ಯಲ್ಪವೆಂದು ಪ್ರತಿಪಕ್ಷಗಳು ದೂರಿವೆ. ತನಿಖಾ ಸಂಸ್ಥೆಗಳು ತಮ್ಮ ಪಾಡಿಗೆ ಕೆಲಸ ಮಾಡಲಿ; ಇವರು ತಪ್ಪಿತಸ್ಥರು ಎಂದು ಕಂಡುಬಂದರೆ ಸಾಕ್ಷ್ಯಾಧಾರ ಕಲೆಹಾಕಿ ಶಿಕ್ಷೆಯನ್ನೂ ಕೊಡಿಸಲಿ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಪರ ಕೇಂದ್ರೀಯ ತನಿಖಾ ದಳಗಳು ಪಕ್ಷಪಾತದಿಂದ ಇರುವ ಆರೋಪ ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೂ ಸಿಬಿಐ ಮತ್ತು ಇಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪ ಕೇಳಿ ಬಂದಿತ್ತು. ಇಂದಿರಾ ಗಾಂಧಿಯವರು ತನಿಖಾ ಸಂಸ್ಥೆಗಳನ್ನು ಪ್ರತಿಪಕ್ಷಗಳ ನಾಯಕರ ವಿರುದ್ಧ ನಿರ್ದಯವಾಗಿ ಬಳಸಿಕೊಂಡಿದ್ದರು. ಆದರೆ ಅವರು ಬಳಸಿಕೊಂಡಿದ್ದರು ಎಂದ ಮಾತ್ರಕ್ಕೆ ಇವರೂ ಬಳಸುವುದು ಸರಿ ಎಂದಲ್ಲ. ಇಂದು ಆಡಳಿತದಲ್ಲಿರುವವರು ತಮ್ಮ ವಿರೋಧಿಗಳ ಮೇಲೆ ಇವುಗಳನ್ನು ಛೂಬಿಟ್ಟರೆ, ನಾಳೆ ವಿರೋಧಿಗಳೇ ಆಡಳಿತಕ್ಕೆ ಬಂದರೆ ಇವರ ವಿರುದ್ಧ ದಾಳಿ ಮಾಡಿಸದೇ ಇರಲಾರರು. ಅಂದರೆ ಇವರೇ ಅದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಂತಾಗುತ್ತದೆ. ಯಾರೇ ಆಗಲಿ ತನಿಖಾ ಸಂಸ್ಥೆಗಳನ್ನು ಹೀಗೆ ಬಳಸುವುದು ತಪ್ಪು. ಇವು ಸ್ವಾಯತ್ತವಾಗಿಯೇ ಕೆಲಸ ಮಾಡಬೇಕು. ಇಲ್ಲವಾದರೆ, ಇವುಗಳ ವಿಶ್ವಾಸಾರ್ಹತೆ ಕುಂದುತ್ತದೆ. ಜನ ಇವುಗಳ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ತನಿಖಾ ಸಂಸ್ಥೆಗಳ ಮೇಲೆ ಅನುಮಾನ ಮೂಡುವುದೆಂದರೆ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯೇ ಕುಸಿಯುವುದು ಎಂದರ್ಥ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಾಹುಲ್ ಗಾಂಧಿಗೆ ಜೈಲು ಶಿಕ್ಷೆ: ಬೇಕಾಬಿಟ್ಟಿ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಎಚ್ಚರಿಕೆಯ ಪಾಠ

ಕೇಂದ್ರದಲ್ಲಿ ಯಾವ ಪಕ್ಷವೇ ಅಧಿಕಾರದಲ್ಲಿರಲಿ, ಕೇಂದ್ರೀಯ ತನಿಖಾ ದಳಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಖಚಿತವಾಗುವಂಥ ವ್ಯವಸ್ಥೆ ನಿರ್ಮಾಣ ಆಗಬೇಕು. ಎಲ್ಲಕ್ಕಿಂತ ಮೊದಲು ಇಂಥ ಸಂಸ್ಥೆಗಳ ಮುಖ್ಯಸ್ಥರ ನೇಮಕ ಪಾರದರ್ಶಕವಾಗಿರಬೇಕು. ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕಕ್ಕೆ ಸಮಿತಿಯ ರಚನೆಗೆ ಕೋರ್ಟ್‌ ನಿರ್ದೇಶಿಸಿದಂತೆ, ಇವುಗಳ ಮುಖ್ಯಸ್ಥರ ನೇಮಕಕ್ಕೂ ಸರ್ವಸಮ್ಮತಿಯ ನೇಮಕ ಆಗಬೇಕು. ಹಾಗೆಯೇ ಸೇಡಿನ ರಾಜಕಾರಣ ಎಂದು ಕಾಣಿಸಬಹುದಾದ ದಾಳಿಗಳಿಗೆ ಕಡಿವಾಣ ಹಾಕಬೇಕು. ಹಾಗೆಯೇ ತನಿಖಾ ದಳಗಳನ್ನು ಕೇಂದ್ರದಲ್ಲಿರುವ ಪಕ್ಷಗಳು ರಾಜಕೀಯ ಅಸ್ತ್ರದಂತೆ ಬಳಕೆ ಮಾಡುವುದನ್ನು ತಡೆಯುವಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡುವುದು ಕೂಡ ಸೂಕ್ತವಾಗಿದೆ.

Exit mobile version