Site icon Vistara News

Anand Mahindra: ತಂದೆ ಸಾವಿನ ಬಳಿಕ ಕಷ್ಟದಲ್ಲಿದ್ದ ಬಾಲಕನ ಶಿಕ್ಷಣಕ್ಕೆ ಆನಂದ್‌ ಮಹೀಂದ್ರಾ ನೆರವು!

Anand Mahindra

Anand Mahindra extends support to 10-year-old boy selling food on street after father’s demise

ನವದೆಹಲಿ: ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರಾ (Anand Mahindra) ಅವರು ಉದ್ಯಮಿಯಾಗಿ, ಸ್ಫೂರ್ತಿದಾಯಕ ಮಾತುಗಳಿಂದ ಜನರಿಗೆ ಪ್ರೇರೇಪಣೆ ನೀಡುವ ಜತೆಗೆ ಸಮಾಜಮುಖಿ ಕಾರ್ಯಗಳಿಂದಲೂ ಖ್ಯಾತಿ ಗಳಿಸಿದ್ದಾರೆ. ದೇಶಕ್ಕಾಗಿ ಸೇವೆ ಸಲ್ಲಿಸಿದವರು, ಕಷ್ಟದಲ್ಲಿರುವವರು ಸೇರಿ ಹಲವರಿಗೆ ಅವರು ಆಗಾಗ ಸಹಾಯ ಮಾಡುತ್ತಲೇ ಇರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ (Delhi) ತಂದೆ ತೀರಿಕೊಂಡ ಬಳಿಕ ಶಿಕ್ಷಣ ತೊರೆದು, ಬೀದಿ ಬದಿ ಗೂಡಂಗಡಿ ಇಟ್ಟಿದ್ದ ಬಾಲಕನಿಗೆ ಆನಂದ್‌ ಮಹೀಂದ್ರಾ ನೆರವಿನ ಹಸ್ತ ಚಾಚಿದ್ದಾರೆ.

ಹೌದು, ಜಸ್‌ಪ್ರೀತ್‌ ಎಂಬ ಬಾಲಕನು ತನ್ನ ತಂದೆ ತೀರಿಕೊಂಡ ಬಳಿಕ ಕುಟುಂಬಕ್ಕೆ ನೆರವಾಗಲಿ ಎಂದು ಶಾಲೆ ಬಿಟ್ಟು, ಬೀದಿ ಬದಿ ಊಟ, ತಿಂಡಿಯ ಅಂಗಡಿ ಇಟ್ಟುಕೊಂಡಿದ್ದ. ಈ ವಿಡಿಯೊ ವೈರಲ್‌ ಆಗುತ್ತಲೇ ಆತನ ನೆರವಿಗೆ ಧಾವಿಸುವ ಮೂಲಕ ಆನಂದ್‌ ಮಹೀಂದ್ರಾ ಮಾನವೀಯತೆ ಮೆರೆದಿದ್ದಾರೆ. “ಧೈರ್ಯಕ್ಕೆ ಇನ್ನೊಂದು ಹೆಸರೇ ಜಸ್‌ಪ್ರೀತ್.‌ ಆದರೆ, ಈತನ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು. ಈತ ದೆಹಲಿಯ ತಿಲಕ್‌ ನಗರದಲ್ಲಿ ಇದ್ದಾನೆ ಎಂದು ಅನಿಸುತ್ತಿದೆ. ಯಾರಿಗಾದರೂ ಈತನ ಕಾಂಟ್ಯಾಕ್ಟ್‌ ನಂಬರ್‌ ಸಿಕ್ಕರೆ ನನಗೆ ಕೊಡಿ. ಈತನ ಶಿಕ್ಷಣಕ್ಕೆ ಮಹೀಂದ್ರಾ ಫೌಂಡೇಷನ್‌ ಸಹಾಯ ಮಾಡಲಿದೆ” ಎಂದು ಬಾಲಕನ ವಿಡಿಯೊ ಸಮೇತ ಆನಂದ್‌ ಮಹೀಂದ್ರಾ ಅವರು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದಲ್ಲಿ ಕೆಲ ದಿನಗಳ ಹಿಂದಷ್ಟೇ ಅಮೆಜಾನ್‌ನ ಅಲೆಕ್ಸಾ (Alexa) ವಾಯ್ಸ್‌ ಅಸಿಸ್ಟಂಟ್‌ ಬಳಸಿ ಮಂಗಗಳ ದಾಳಿಯಿಂದ ತನ್ನನ್ನು ಹಾಗೂ ತನ್ನ ಅಕ್ಕನ ಮಗಳನ್ನು ರಕ್ಷಿಸಿದ 13 ವರ್ಷದ ಚಾಣಾಕ್ಷ ಬಾಲಕಿಗೆ ಈಗ ಆನಂದ್‌ ಮಹೀಂದ್ರಾ ಅವರು ಉದ್ಯೋಗ ನೀಡುವ ಆಫರ್‌ ಕೊಟ್ಟಿದ್ದರು. ತಂತ್ರಜ್ಞಾನವನ್ನು ಬಳಸಿ ಮಂಗಗಳಿಂದ ಬಚಾವಾದ 13 ವರ್ಷದ ಬಾಲಕಿ ನಿಕಿತಾಗೆ ಉದ್ಯೋಗ ಕೊಡುವ ಕುರಿತು ಆನಂದ್‌ ಮಹೀಂದ್ರಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. “ಆಧುನಿಕ ಕಾಲದಲ್ಲಿ ನಾವು ತಂತ್ರಜ್ಞಾನದ ಗುಲಾಮರಾಗುತ್ತೇವೋ ಎಂಬ ಆತಂಕ ಕಾಡುತ್ತಿದೆ. ಆದರೆ, ಈ ಬಾಲಕಿಯು ಜಗತ್ತಿನಲ್ಲಿ ಮನುಷ್ಯನ ದಕ್ಷತೆಯನ್ನು ತಂತ್ರಜ್ಞಾನವು ಹೆಚ್ಚಿಸುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾಳೆ” ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

“ಬಾಲಕಿಯ ಕ್ಷಿಪ್ರ ಯೋಚನಾಶಕ್ತಿಯು ಅತ್ಯದ್ಭುತವಾಗಿದೆ. ಅನಿರೀಕ್ಷಿತ ಜಗತ್ತಿನಲ್ಲಿ ಹೇಗೆ ಯೋಚಿಸಬೇಕು, ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಈಕೆಯು ಸಾಬೀತುಪಡಿಸಿದ್ದಾಳೆ. ಈ ಬಾಲಕಿಯು ಶಿಕ್ಷಣ ಮುಗಿಸಿ, ಕಾರ್ಪೊರೇಟ್‌ ಜಗತ್ತಿಗೆ ಕಾಲಿಡಲು ತೀರ್ಮಾನಿಸಿದರೆ, ಮಹೀಂದ್ರಾ ಕಂಪನಿಯಲ್ಲಿ ಅವಳಿಗೊಂದು ಕುರ್ಚಿ ಕಾಯುತ್ತಿರುತ್ತದೆ” ಎಂಬುದಾಗಿ ಆನಂದ್‌ ಮಹೀಂದ್ರಾ ಅವರು ನಿಕಿತಾಗೆ ಉದ್ಯೋಗದ ಆಫರ್‌ ನೀಡಿದ್ದಾರೆ. ಆನಂದ್‌ ಮಹೀಂದ್ರಾ ಅವರ ಕುರಿತೂ ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಇದನ್ನೂ ಓದಿ: Anand Mahindra: ಸರ್ಫರಾಜ್ ಖಾನ್ ತಂದೆಗೆ ಥಾರ್ ಎಸ್‌ಯುವಿ ಗಿಫ್ಟ್​ ಕೊಟ್ಟ ಮಹೀಂದ್ರಾ

Exit mobile version