Site icon Vistara News

Anchor Aparna: ಅಗಲಿದ ಅಪರ್ಣಾಗೆ ಸಿಎಂ, ಡಿಸಿಎಂ, ವಿಜಯೇಂದ್ರ ಮುಂತಾದ ಗಣ್ಯರ ಸಂತಾಪ

anchor aparna death condolence

ಬೆಂಗಳೂರು: ನಿರೂಪಕಿ ಅಪರ್ಣಾ (Anchor Aparna) ಅವರ ಸಾವಿಗೆ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar), ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

“ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸಲ್ಲಿಸಿದ್ದಾರೆ.

“ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ಸಾವಿನಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಾಂತ್ವನಗಳು. ಓಂ ಶಾಂತಿ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

“ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಹಾಗೂ ಕಲಾವಿದೆ ಅಪರ್ಣಾ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ ಕೂಡ ಗುರುತಿಸಿಕೊಂಡು, ಕಿರುತೆರೆಯಲ್ಲಿ ಮೂಡಿಬಂದ ‘ಮೂಡಲಮನೆ’, ‘ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ಕಲಾವಿದೆ ಅಪರ್ಣಾ ಅವರು ಬಹುಬೇಗ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ. ಮೃತ ಅರ್ಪಣಾ ಅವರ ಕುಟುಂಬ ವರ್ಗದವರಿಗೆ ಭಗವಂತನು ಅಗಲಿಕೆಯ ನೋವು ಸಹಿಸುವ ಶಕ್ತಿ ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ” ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ಹೇಳಿದ್ದಾರೆ.

“1984ರಲ್ಲಿ ಖ್ಯಾತ ನಿರ್ದೇಶಕ ಪುಟ್ಟಣ ಕಣಗಾಲ್ ಅವರ ಮಸಣದ ಹೂ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಪ್ರವೇಶ ಮಾಡಿದ್ದ ಅಪರ್ಣಾ ಅವರು ತಮ್ಮ ಅಚ್ಚ ಕನ್ನಡದ ಶೈಲಿಯ ನಿರೂಪಣೆ ಮೂಲಕ ರಾಜ್ಯದ ಜನತೆಯ ಮನ ಗೆದ್ದಿದ್ದರು. ಸರ್ಕಾರಿ ಕಾರ್ಯಕ್ರಮ ಅಥವಾ ಯಾವುದೇ ಪ್ರಮುಖ ಕಾರ್ಯಕ್ರಮವಾದರೆ ಅಲ್ಲಿ ಅಪರ್ಣಾ ಅವರೇ ನಿರೂಪಕಿಯಾಗಿರುತ್ತಿದ್ದರು. ರೇಡಿಯೋ‌ ಜಾಕಿಯಾಗಿ, ಧಾರವಾಹಿ, ಟಿ.ವಿ.ಶೋ ಗಳಲ್ಲಿ ಅಭಿನಯಿಸಿ ಖ್ಯಾತಿಗಳಿಸಿದ್ದ ಅಪರ್ಣಾ ಅವರು ಕಿರಿಯ ವಯಸ್ಸಿನಲ್ಲೇ ನಮ್ಮನ್ನು ಅಗಲಿರುವುದು ದುಃಖ ತರಿಸಿದೆ. ಅಪರ್ಣ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸಂತಾಪ ವ್ಯಕ್ತಪಡಿಸಿದ್ದಾರೆ.‌

“ಕನ್ನಡದ ಖ್ಯಾತ‌ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ಅತ್ಯಂತ ನೋವಾಯಿತು. ಸರಳ ಕನ್ನಡದಲ್ಲಿ ಸುಂದರವಾಗಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದ್ದರು.‌ ಅವರ ಅಗಲಿಕೆಯಿಂದ ಕನ್ನಡ ನಾಡು ಒಬ್ಬ ಸಜ್ಜನಿಕೆಯ ನಿರೂಪಕಿಯನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Anchor Aparna: 6 ತಿಂಗಳು ಎಂದರೂ 2 ವರ್ಷ ಲವಲವಿಕೆಯಿಂದ ಬದುಕಿದ ಜೀವ! ಅಪರ್ಣಾ ಕೊನೆ ದಿನಗಳು ಹೀಗಿದ್ದವು

Exit mobile version