Site icon Vistara News

K. Annamalai: ಬದುಕು ಬದಲಿಸಿದ ಮಾನಸ ಸರೋವರ ಯಾತ್ರೆ! ಕೆ.ಅಣ್ಣಾಮಲೈ ಕುರಿತ ಕುತೂಹಲಕರ ಸಂಗತಿಗಳಿವು

Annamalai

ಬೆಂಗಳೂರು: ಪೊಲೀಸ್ ಹುದ್ದೆಯಲ್ಲಿರುವಾಗ ತಮ್ಮ ಕಟ್ಟುನಿಟ್ಟಾದ ಕಾರ್ಯಶೈಲಿಯಿಂದ “ಸಿಂಗಂ ಅಣ್ಣ” ಎಂದು ಬಿರುದು ಪಡೆದ ನಿವೃತ್ತ ಪೊಲೀಸ್ ಅಧಿಕಾರಿ, ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ (k Annamalai) ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರ ಮೂಲಕ ಲೋಕಸಭಾ ಚುನಾವಣೆಗೆ ಪದಾರ್ಪಣೆ ಮಾಡಿದ್ದಾರೆ.

ಅಣ್ಣಾಮಲೈ ಅವರು ಈ ಹಿಂದೆ 2021ರಲ್ಲಿ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಡಿಎಂಕೆಯ ಆರ್ ಇಳಂಗೋವನ್‌ ವಿರುದ್ಧ ಸೋತಿದ್ದರು. ಉತ್ತಮ ಪೊಲೀಸ್ ಅಧಿಕಾರಿ ಎಂದು ಜನಪ್ರಿಯರಾದ ಕೆ. ಅಣ್ಣಾಮಲೈ ಅವರು ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ರಾಜಕೀಯ ರಂಗಕ್ಕೆ ಧುಮುಕುವ ಮೂಲಕ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅಣ್ಣಾಮಲೈ ಅವರ ಕುರಿತಾದ ಕೆಲವು ಕುತೂಹಲಕರ ಸಂಗತಿಗಳು ಇಲ್ಲಿವೆ.

  1. ಅಣ್ಣಾಮಲೈ ಅವರಿಗೆ ಈಗ ಕೇವಲ 39 ವರ್ಷ. 2021ರಲ್ಲಿ ಅವರು ತಮಿಳುನಾಡಿನ ಅತ್ಯಂತ ಕಿರಿಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದರು.
  2. ಕೆ. ಅಣ್ಣಾಮಲೈ ಅವರು 2020ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ತಮಿಳುನಾಡಿನಲ್ಲಿ ಅವರು ಯುವಜನತೆಯ ಅಪಾರ ಬೆಂಬಲ ಪಡೆದಿದ್ದಾರೆ. ಈ ಮೂಲಕ ಅವರು ತಮಿಳುನಾಡಿನಲ್ಲಿ ಬಿಜೆಪಿಗೆ ಶಕ್ತಿ ತುಂಬಿದ್ದಾರೆ. ಬಹಳ ವೇಗವಾಗಿ ಜನಪ್ರಿಯತೆ ಪಡೆಯುತ್ತಿದ್ದಾರೆ.
  3. ಕರ್ನಾಟಕ ಕೇಡರ್‌ನ 2011ರ ಬ್ಯಾಚ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಅಪಾರ ಜನಪ್ರಿಯತೆ ಪಡೆದಿದ್ದರು. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಅವರು ಜನರ ವಿಶ್ವಾಸ ಗಳಿಸಿದ್ದರು. ಬೆಂಗಳೂರು ದಕ್ಷಿಣ ಉಪ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.
  4. ಕೆ ಅಣ್ಣಾಮಲೈ ಅವರು ಸೆಪ್ಟೆಂಬರ್ 2019ರಲ್ಲಿ ಪೊಲೀಸ್ ಸೇವೆಯನ್ನು ತೊರೆದು ಅಚ್ಚರಿ ಮೂಡಿಸಿದ್ದರು.
  5. ಇವರು ಎಂಜಿನಿಯರಿಂಗ್ ಪದವೀಧರರಾಗಿದ್ದು, ಐಐಎಂ ಲಕ್ನೋದಲ್ಲಿ ಎಂಬಿಎ ಓದಿದ್ದರು.
  6. ಪೊಲೀಸ್ ಫೋರ್ಸ್‌ನಲ್ಲಿ ಕೆಲಸ ಮಾಡುವಾಗ ಕೆ ಅಣ್ಣಾಮಲೈ ಅವರ ಕಟ್ಟುನಿಟ್ಟಾದ ಕಾರ್ಯಶೈಲಿಯನ್ನು ಕಂಡು ಅವರನ್ನು “ಸಿಂಗಂ ಅಣ್ಣ” ಎಂದೇ ಕರೆಯಲಾಗಿತ್ತು.
  7. ಅಣ್ಣಾಮಲೈ ಅವರು ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಧಾರ್ಮಿಕ ಗ್ರಂಥಗಳ ತಪ್ಪು ವ್ಯಾಖ್ಯಾನವನ್ನು ತಪ್ಪಿಸಲು ಮತ್ತು ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇಸ್ಲಾಂ ಧರ್ಮದ ಬಗ್ಗೆ ಅಧ್ಯಯನ ಮಾಡಿದ್ದರು. ಧಾರ್ಮಿಕ ವಿದ್ವಾಂಸರ ಸಹಾಯದಿಂದ ಖುರಾನ್ ಮತ್ತು ಹದೀಸ್ ಅನ್ನು ಅಧ್ಯಯನ ಮಾಡಿದ್ದರು.
  8. 2019ರಲ್ಲಿ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವಾಗ ರಾಜೀನಾಮೆ ಪತ್ರದಲ್ಲಿ, ಇದು ನಾನು ತಕ್ಷಣ ತೆಗೆದುಕೊಂಡು ನಿರ್ಧಾರವಲ್ಲ. 2018ರಲ್ಲಿ ಕೈಗೊಂಡಿದ್ದ ಕೈಲಾಸ ಮಾನಸ ಸರೋವರ ಪ್ರವಾಸವು ನನ್ನ ಜೀವನವನ್ನು ಹಿಂತಿರುಗಿ ನೋಡುವಂತೆ ಮಾಡಿದೆ ಎಂದು ಬರೆದಿದ್ದರು.
  9. 2023ರಲ್ಲಿ ಅಣ್ಣಾಮಲೈ ಅವರು ‘ಎನ್‌ ಮನ್ ಎನ್ ಮಕ್ಕಳ್ (ನನ್ನ ಭೂಮಿ ನನ್ನ ಜನರು)’ ಯಾತ್ರೆಯನ್ನು ತಮಿಳುನಾಡು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಿದರು.
  10. ಅಣ್ಣಾಮಲೈ ಅವರನ್ನು ಬಿಜೆಪಿಯ ಭರವಸೆಯ ಉದಯೋನ್ಮುಖ ತಾರೆ ಎಂದು ವ್ಯಾಖ್ಯಾನಿಸಲಾಗಿದೆ. ಅವರು ವಾಕ್ಚಾತುರ್ಯಕ್ಕೆ ಹೆಸರುವಾಸಿಯಾದ ಕಾರಣ ಅವರ ಭಾಷಣಗಳು ಸಾಮಾನ್ಯವಾಗಿ ವೈರಲ್ ಆಗುತ್ತವೆ.

ಇದನ್ನೂ ಓದಿ: ಮಲೆನಾಡಿಗಷ್ಟೇ ಮಳೆ ಅಲರ್ಟ್‌; ಬೆಂಗಳೂರಿನಲ್ಲಿ ಹೇಗೆ?

Exit mobile version