ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ (BBK SEASON 10) ರನ್ನರ್ ಅಪ್ ಡ್ರೋನ್ ಪ್ರತಾಪ್ (Drone Prathap) ವಿರುದ್ಧ ಸಾಲು ಸಾಲು ವಂಚನೆ ದೂರುಗಳು ದಾಖಲಾಗುತ್ತಿವೆ. ಲೈಸೆನ್ಸ್ ಪಡೆಯದೆ ಡ್ರೋನ್ ಹಾರಾಟ-ಮಾರಾಟದ ಹಿನ್ನೆಲೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಇದೀಗ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪದಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.
ಚಂದನ್ ಕುಮಾರ್ ಗೌಡ ಎಂಬುವವರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ಹಣ ಪಡೆದು ಪ್ರತಾಪ್ ವಂಚಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಪರಿಚಯವಿದೆ, ನಾನು ಆಗಾಗ ಕುಮಾರಸ್ವಾಮಿಯವರ ಫಾರ್ಮ್ ಹೌಸ್‌ಗೆ ಹೋಗಿ ಭೇಟಿಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ಪ್ರತಾಪ್ ವಂಚಿಸಿರುವ ಆರೋಪ ಕೇಳಿಬಂದಿದೆ. ಬಿಗ್ ಬಾಸ್‌ನಿಂದ ಹೊರಬಂದ ನಂತರ ಕರೆ ಸ್ವೀಕರಿಸದೇ ಹಣ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಚಂದನ್ ಕುಮಾರ್ ಗೌಡ ಮನವಿ ಮಾಡಿದ್ದಾರೆ.
ಪ್ರತಾಪ್ ಮಾತನಾಡಿರುವ ಆಡಿಯೊ ವೈರಲ್
ಡ್ರೋನ್ ಪ್ರತಾಪ್, ಚಂದನ್ ಕುಮಾರ್ ಗೌಡ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲಭ್ಯವಾಗಿದೆ. ನನ್ನನ್ನು ಕಾಂಗ್ರೆಸ್‌ಗೆ ಬನ್ನಿ, ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡುತ್ತೇವೆ ಎಂದಿದ್ದರು. ಆಗ ನಾನು ಕುಮಾರಸ್ವಾಮಿಯವರ ಜೊತೆ ಓಡಾಡುತ್ತಿದ್ದೆ. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತೇನೆ. ಆದರೆ, ಕುಮಾರಸ್ವಾಮಿಯವರ ಜೊತೆಗಿನ ಫೋಟೋ ಹಾಕಲ್ಲ.
ಇದನ್ನೂ ಓದಿ | Assault Case : ನಿಮ್ಮನ್ನ ಸುಮ್ನೆ ಬಿಡಲ್ಲ ಎಂದು ಹಿಂದೂ ರೈತನ ಥಳಿಸಿದ ಮುಸ್ಲಿಂ ವ್ಯಾಪಾರಸ್ಥರು!
ನನ್ನ ಜೊತೆ ಕುಮಾರಸ್ವಾಮಿಯವರ ತೋಟದ ಮನೆಗೆ ಬಾ ಪರಿಚಯ ಮಾಡಿಸುತ್ತೇನೆ. ಕುಮಾರಸ್ವಾಮಿ ಕೆಟ್ಟ ಪದ ಬೈಯಬಹುದು, ಆದರೆ ಒಳ್ಳೆಯ ಮನುಷ್ಯ. ಡಿ.ಕೆ. ಶಿವಕುಮಾರ್ ತರ ಪೇಪರ್ ಎಸೆಯೋದು ಮಾಡಲ್ಲ. ಕುಮಾರಸ್ವಾಮಿ ಯಾರೇ ಹೋದರೂ ದುಡ್ಡು ಕೊಡುತ್ತಾರೆ ಎಂದು ಪ್ರತಾಪ್ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ.
ಲೈಸೆನ್ಸ್ ಪಡೆಯದೆ ಡ್ರೋನ್ ಹಾರಾಟ-ಮಾರಾಟ
ಪ್ರತಾಪ್ ವಿರುದ್ಧ ಬಿಬಿಎಂಪಿ ಅಧಿಕಾರಿ (BBMP Officer) ಪ್ರಯಾಗ್ ಅವರು ಈ ಹಿಂದೆ ಮಾನನಷ್ಟ ಮೊಕದ್ದಮೆ ಹೂಡಿದ್ದರು. ನಂತರ ಡ್ರೋನ್ ಪ್ರತಾಪ್ ಅವರ ಬ್ಯುಸಿನೆಸ್ ಪಾರ್ಟನರ್ ಸಾರಂಗ್ ಮಾನೆಗೆ ಮೋಸ ಮಾಡಿರುವ ಸುದ್ದಿಯು ಬೆಳಕಿಗೆ ಬಂದಿತ್ತು. ಹಾಗೆಯೇ ಇತ್ತೀಚೆಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲಾಗಿತ್ತು.
ಬನಶಂಕರಿಯ ಪರಮೇಶ್ ಎಂಬುವವರು ಡ್ರೋನ್ ಪ್ರತಾಪ್ ವಿರುದ್ಧ ದೂರು ದಾಖಲಿಸಿದ್ದರು. ಪ್ರತಾಪ್ ಅವರ ʻಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಡಿಜಿಸಿಎ (ನಾಗರೀಕ ವಿಮಾನಯಾನ ಇಲಾಖೆ) ಅಧಿಕೃತವಾಗಿ ಪರವಾನಗಿ ಹೊಂದಿಲ್ಲ ಜತೆಗೆ ಹೆಸರು ಸಹ ಇಲ್ಲ. ಇದು ಡಿಜಿಸಿಎ ಅಧಿಕೃತ ವೆಬ್‌ಸೈಟ್‌ನಿಂದ ಸ್ಪಷ್ಟವಾಗಿದೆ. ಲೈಸೆನ್ಸ್ ಪಡೆಯದೇ ಡ್ರೋನ್ ಹಾರಿಸುವುದು ಹಾಗೂ ಪರವಾನಗಿ ಇಲ್ಲದ ಡ್ರೋನ್‌ಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ಡ್ರೋನ್ ಪ್ರತಾಪ್ ವಂಚಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪರಮೇಶ್ವರ್ ದೂರಿನಲ್ಲಿ ಉಲ್ಲೇಖಸಿದ್ದರು. ವಾರದ ಅಂತರದಲ್ಲಿ ಒಂದೇ ಠಾಣೆಯಲ್ಲಿ ಎರಡು ದೂರು ದಾಖಲಾಗಿದ್ದರಿಂದ, ಪೊಲೀಸರು ಡ್ರೋನ್ ಪ್ರತಾಪ್‌ರನ್ನು ಕರೆಸಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಡ್ರೋನ್ ನೀಡುವುದಾಗಿ ಒಪ್ಪಂದ; ಅಡ್ವಾನ್ಸ್ ಪಡೆದು ನಾಪತ್ತೆ
ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಎಂಬುವರು ಕೆಲ ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರಿಗೆ ಎಂಟು ಡ್ರೋನ್‌ಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದರು. ಪ್ರತಾಪ್ ಅವರ ಕಂಪನಿ ʻಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ʼ ಜತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದರು ಸಾರಂಗ್. ಎಂಟು ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರು ಬ್ಯೂಸಿನೆಸ್ ಪಾರ್ಟನರ್ ಸಾರಂಗ್ ಅವರನ್ನು ಮಹಾರಾಷ್ಟ್ರದ ದುಲೇನಲ್ಲಿ ಭೇಟಿ ಮಾಡಿದ್ದರು.
ಪ್ರತಾಪ್ ಅವರು ಸಾರಂಗ್ ಅವರಿಗೆ ಒಂಬತ್ತು ಡ್ರೋನ್ ನೀಡಬೇಕಿತ್ತು. ಹೀಗಾಗಿ ಸಾರಂಗ್ ಅವರು ಪ್ರತಾಪ್‌ಗೆ 35 ಲಕ್ಷದ 75 ಸಾವಿರ ನೀಡಿದ್ದರು. ಆದರೆ ಡ್ರೋನ್ ನೀಡಲು ಪ್ರತಾಪ್ ಎರಡುವರೆ ತಿಂಗಳು ಸಮಯ ತೆಗೆದುಕೊಂಡಿದ್ದರು. ಇದಾದ ಬಳಿಕ ಎರಡು ಡ್ರೋನ್ ಅನ್ನು ಸಾರಂಗ್ ಅವರಿಗೆ ಪ್ರತಾಪ್ ನೀಡಿದ್ದರು. ಇದಾದ ಮೇಲೆ ಇನ್ನರೆಡು ಡ್ರೋನ್‌ಗಳನ್ನು ಸಾರಂಗ್‌ಗೆ ಕಳುಹಿಸಿಕೊಟ್ಟಿದ್ದರು. ಆದರೀಗ ಸಾರಂಗ್ ಈ ಬಗ್ಗೆ ಧ್ವನಿ ಎತ್ತಿದ್ದು, ನಾಲ್ಕು ಡ್ರೋನ್‌ಗಳು ಈಗ ಕೆಲಸ ಮಾಡುತ್ತಿಲ್ಲ ಬ್ಯಾಟರಿಗಳ ಕ್ಯಾಲಿಟಿ ಸರಿಯಿಲ್ಲ. ಮತ್ತೊಂದು ಹಾರಬೇಕಾದರೆ, ಕೆಳಗಡೆ ಬಿದ್ದು ಹೋಯಿತು. ನಾವೀಗ ತುಂಬಾ ಲಾಸ್ ನಲ್ಲಿದ್ದೀವಿ ಎಂದು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: BBK SEASON 10: ಹೆದರೋ ಕಾಲ ಹೋಯ್ತು; ʻವಿನಯ್ʼ ಏಟಿಗೆ ತಿರುಗೇಟು ಕೊಟ್ಟ ಪ್ರತಾಪ್!
ಈ ಬಗ್ಗೆ ವಿಸ್ತಾರ ಜತೆ ಸಾರಂಗ್ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಸಾರಂಗ್ ಮಾತನಾಡಿ ʻʻನಾನು ಇ-ಮೇಲ್ ಮೂಲಕ ವಾರ್ನಿಂಗ್ ನೀಡಿದ್ದೇನೆ ಲೋನ್ ಮೂಲಕ ದುಡ್ಡು ತಂದು, ರೈತರ ಬಳಿ ದುಡ್ಡು ಪಡೆದು ಪ್ರತಾಪ್‌ಗೆ ಕೊಟ್ಟಿದ್ದೆ. ಆದರೆ ಇಲ್ಲಿಯವರೆಗೆ ಆತ ಹಣ ಕೊಟ್ಟಿಲ್ಲ. ಅವರ ಪಿಎ ಸಾಗರ್ ನನಗೆ ಹೇಳಿದ್ದಾರೆ. ಪ್ರತಾಪ್ ಕಾರ್ ಸೇಲ್ ಮಾಡಿದ್ದಾನೆ ಅವನ ಬಳಿ ಹಣವಿಲ್ಲ ಎಂದು. ಕಾರ್ ಇರೋದು ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ. ಅವರ ಜತೆ ನನಗೆ ಸಂಪರ್ಕ ಇಲ್ಲ. ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ ಬಂದು ಕೊಡ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಸುಮ್ಮನ್ನಿದ್ದೇ. ಪ್ರತಾಪ್‌ಗೆ ಕಿರಣ್ ಮಾಧವ್ ಬೆಂಬಲ ನೀಡುತ್ತಿದ್ದರು. ನನಗೆ ಅವರಿಬ್ಬರು ಸೇರಿ ಬೆಂಗಳೂರಿನಲ್ಲಿ 20 ಸಾವಿರದ ಹೋಟೆಲ್ ಫೆಸಿಲಿಟಿ ನೀಡಿ ಬ್ಯುಸಿನೆಸ್ ಮಾಡಿದ್ದರು. ಈಗ ನೋಡಿದ್ರೆ ಈ ರೀತಿ ಮಾಡ್ತಿದ್ದಾರೆ. ನನಗೀಗ ಬಡ್ಡಿ ಎಲ್ಲವೂ ಸೇರಿ 83 ಲಕ್ಷ ರೂ. ಖರ್ಚಾಗಿದೆ. ನಮ್ಮದು ಸ್ಟಾರ್ಟ್ ಅಪ್ ಕಂಪನಿ. ನಮಗೆ ತುಂಬ ಕಷ್ಟ ಆಗಿದೆ ಡ್ರೋನ್ ಪ್ರತಾಪ್ ನಿಂದʼʼ ಎಂದು ಸಾರಂಗ್ ಹೇಳಿಕೆ ನೀಡಿದ್ದರು.
ಮತ್ತೊಂದೆಡೆ ಪ್ರತಾಪ್ ವಿರುದ್ಧ ಪ್ರಯಾಗ್ ರಾಜ್ (Prayag Raj) 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮತ್ತೊಬ್ಬ ಅಧಿಕಾರಿ 2 ಕೋಟಿ ರೂ.ಗೆ ಮೊಕದ್ದಮೆ ಹೂಡಿದ್ದಾರೆ ಎಂದು ವಕೀಲರು ಸ್ಪಷ್ಟ ಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ