Site icon Vistara News

Pakistan Terrorist : ಪಾಕಿಸ್ತಾನದಲ್ಲಿ ಭಾರತದ ವಾಂಟೆಡ್​ ಲಿಸ್ಟ್​ನಲ್ಲಿರುವ ಉಗ್ರನ ಹತ್ಯೆ; ಯಾರಿವ ಉಗ್ರಗಾಮಿ?

Terrorist murder

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿರುವ ಪಾಕಿಸ್ತಾನಿಗಳು ಅವರ ನೆಲದಲ್ಲಿಯೇ ಮಣ್ಣು ಮುಕ್ಕುತ್ತಿದ್ದಾರೆ. ಒಬ್ಬೊಬ್ಬರನ್ನೇ ಹತ್ಯೆ (Pakistan Terrorist) ಮಾಡಿ ಅವರ ಉಪಟಳಕ್ಕೆ ಅಂತ್ಯ ಹಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಕುಖ್ಯಾತ ಉಗ್ರ ಶೇಖ್ ಜಮೀಲ್-ಉರ್-ರೆಹಮಾನ್ ಶನಿವಾರ (ಮಾರ್ಚ್ 2ರಂದು) ಪಾಕಿಸ್ತಾನದಲ್ಲಿ ‘ನಿಗೂಢ ರೀತಿ’ಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆಯು ಪಾಕಿಸ್ತಾನವು ಉನ್ನತ ಮಟ್ಟದ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂಬ ಆರೋಪಕ್ಕೆ ಮಗದೊಂದು ಸಾಕ್ಷಿ ಕೊಟ್ಟಂತಾಗಿದೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಕಮಾಂಡರ್ ಖೈಬರ್ ಪಖ್ತುಖ್ವಾದ ಅಬೋಟಾಬಾದ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಯುನೈಟೆಡ್ ಜಿಹಾದ್ ಕೌನ್ಸಿಲ್ (ಯುಜೆಸಿ) ನ ಸ್ವಯಂ ಘೋಷಿತ ಪ್ರಧಾನ ಕಾರ್ಯದರ್ಶಿ ರೆಹಮಾನ್ ಮೂಲತಃ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಸೇರಿದವರು.

ಶೇಖ್ ಜಮೀಲ್-ಉರ್-ರೆಹಮಾನ್ ಯಾರು?

ಶೇಖ್ ಜಮೀಲ್-ಉರ್-ರೆಹಮಾನ್ ಮೂಲತಃ ಪುಲ್ವಾಮಾದವನಾಗಿದ್ದ, ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳನ್ನು ಸಂಘಟಿಸಿದ್ದಾನೆ. ಬಳಿಕ ತನಗೆ ಬೆಂಬಲ ಕೊಡುತ್ತಿದ್ದ ಪಾಕಿಸ್ತಾನ ಸೇರಿಕೊಂಡಿದ್ದ, ಪಾಕ್​ನಲ್ಲಿ ಯುನೈಟೆಡ್ ಜಿಹಾದ್ ಕೌನ್ಸಿಲ್ (ಯುಜೆಸಿ) ಸಂಘಟಿಸಿ ಅದರ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ತಹ್ರೀಕ್-ಉಲ್-ಮುಜಾಹಿದ್ದೀನ್ (ಟಿಯುಎಂ) ನ ಎಮಿರ್ ಆಗಿ ಸೇವೆ ಸಲ್ಲಿಸಿದ್ದಾನೆ. ಅಕ್ಟೋಬರ್ 2022 ರಲ್ಲಿ ಭಾರತ ಸರ್ಕಾರದಿಂದ ಭಯೋತ್ಪಾದಕ ಎಂದು ಹೆಸರಿಸಲ್ಪಟ್ಟ ರೆಹಮಾನ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನೊಂದಿಗೆ ನಿಕಟ ಸಂಪರ್ಕದಲ್ಲಿದ್ದ.

ಆತನ ಉದ್ದೇಶವೇನು?

ಪ್ಯಾನ್-ಇಸ್ಲಾಮಿಕ್ ಎಂಬ ಗುಪ್ತ ಸೂಚಿಯನ್ನು ಹೊಂದಿದ್ದ ರೆಹಮಾನ್​ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವ ಗುರಿಯೊಂದಿಗೆ ಉಗ್ರ ಸಂಘಟನೆ ಆರಂಭಿಸಿದ್ದ ವಿಶೇಷವಾಗಿ 1991 ರ ಎನ್​ಕೌಂಟರ್​ನಲ್ಲಿ ಅದರ ತೆಹ್ರಿಕ್​ ಉಲ್​ ಮುಜಾಹಿದಿನ್​ ಸಂಘಟನೆಯ (ಟಿಯುಎಂ) ಸಂಸ್ಥಾಪಕ ಯೂನುಸ್ ಖಾನ್ ಮೃತಪಟ್ಟಾಗ ಪಾಕಿಸ್ತಾನ ಮೂಲದ ಜಿಹಾದಿ ಗುಂಪುಗಳ ಒಕ್ಕೂಟವಾಗಿರುವ ಯುಜೆಸಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ವಿವಿಧ ಭಯೋತ್ಪಾದಕ ಸಂಘಟನೆಗಳನ್ನು ಟಿಯುಎಂ ಜತೆ ಸೇರಿಸುವ ಗುರಿ ಹೊಂದಿತ್ತು. ಈ ಮೈತ್ರಿಕೂಟವು ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಅಲ್ ಬದರ್, ಹಿಜ್ಬುಲ್ ಮುಜಾಹಿದ್ದೀನ್ ಮುಂತಾದ ಗುಂಪುಗಳನ್ನು ಒಳಗೊಂಡಿತ್ತು. ಇಲ್ಲೆಲ್ಲ ಸಕ್ರಿಯನಾಗಿದ್ದ ರೆಹಮಾನ್​, ಉಗ್ರರ ತರಬೇತಿ ಮತ್ತು ಒಳನುಸುಳುವಿಕೆ ಸೇರಿದಂತೆ ಅವರ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.

ಇದನ್ನೂ ಓದಿ : Narendra Modi : ಭಾರತ್​ ಶಕ್ತಿಯಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ; ಏನಿದು ಮಿಲಿಟರಿ ಶಕ್ತಿ ಪ್ರದರ್ಶನ

ಮಸಣ ಸೇರಿದ ಭಾರತ ವಿರೋಧಿಗಳು

ಇದೇ ರೀತಿಯಾಗಿ ಲಷ್ಕರ್-ಎ-ತೈಬಾಗೆ ಸಂಬಂಧಿಸಿದ ಭಯೋತ್ಪಾದಕ ಹಬೀಬುಲ್ಲಾ 2023 ರ ಡಿಸೆಂಬರ್ 17 ರಂದು ಖೈಬರ್ ಪಖ್ತುನ್ಖ್ವಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಗೆ ಬಲಿಯಾಗಿದ್ದ. ಏತನ್ಮಧ್ಯೆ ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಅಪರಿಚಿತ ವ್ಯಕ್ತಿಗಳಿಂದಾಗಿವು ವಿಷಪ್ರಾಶನದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ವರದಿಗಳು ಹೇಳಿವೆ.

Exit mobile version