Site icon Vistara News

Anti Valentine week: ಪ್ರೀತಿ ಮರೆತುಬಿಡಿ, ಹೊಸ ಲೈಫ್‌ ಶುರು ಮಾಡಿ: ಭಗ್ನ ಪ್ರೇಮಿಗಳಿಗೂ ಇದೆ ವಾರ!

anti valentine week

ಪ್ರೇಮಿಗಳ ದಿನ ಬಂತೆಂದರೆ, ಪ್ರೇಮಿಗಳ ಪಾಲಿಗೆ ಹಬ್ಬವಾದರೆ, ಈಗಾಗಲೇ ಭಗ್ನ ಪ್ರೇಮಿಗಳ ಹೃದಯ ಇನ್ನಷ್ಟು ಗಾಯವಾಗುತ್ತದೆ. ಸುತ್ತಮುತ್ತ ತಿರುಗಾಡುವ ಪ್ರೇಮಪಕ್ಷಿಗಳನ್ನು ನೋಡುತ್ತಾ, ಬೇಸರದಿಂದ ಹೊರಬಂದಿದ್ದೇನೆ ಎಂದುಕೊಳ್ಳುವ ಜೀವಗಳೂ ಗಾಯವನ್ನು ಕೆರೆದು ಮತ್ತೆ ಹುಣ್ಣುಗಳಾಗುವಂತೆ ಮಾಡಿಕೊಳ್ಳುತ್ತವೆ. ವಾರವಿಡೀ ಪ್ರೇಮಿಗಳ ದಿನವಾದರೆ ಇಂತಹ ಭಗ್ನ ಪ್ರೇಮಿಗಳಿಗೂ, ಪ್ರೇಮದ ಮೂಲಕ ಕಾಟ ಸಹಿಸಿಕೊಂಡಿರುವ ಮಂದಿಗೂ ಅವರಿಗೆಂದೇ ದಿನಗಳಿವೆಯಂಬುದು ನಿಮಗೆ ಗೊತ್ತಾ?

ಹೌದು. ವ್ಯಾಲೆಂಟೈನ್‌ ದಿನವನ್ನು ಎಂಜಾಯ್‌ ಮಾಡದ, ಅದರ ಮೇಲೆ ನಂಬಿಕೆ ಇರದ, ಪ್ರೀತಿ ಮುರಿದುಕೊಂಡಿರುವ, ಸಿಂಗಲ್‌ಗಳ ದಿನಗಳು ಪ್ರೇಮಿಗಳ ದಿನವಾದ ಫೆಬ್ರವರಿ ೧೪ ಮುಗಿಯುತ್ತಿದ್ದ ಹಾಗೇ ಆರಂಭವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಇಂಥವರಿಗಾಗಿಯೇ ಆಂಟಿ ವ್ಯಾಲಂಟೈನ್ಸ್‌ ವೀಕ್‌ (ಪ್ರೇಮಿಗಳ ವಿರೋಧಿ ವಾರ) ಎಂಬುದೂ ಹುಟ್ಟಿಕೊಂಡಿದೆ. ವ್ಯಾಲೆಂಟೈನ್‌ ವಾರ ಎಂಬ ಹೆಸರಿನಲ್ಲಿ ರೋಸ್‌ ಡೇ ಇಂದ ಕಿಸ್‌ ಡೇವರೆಗೆ ನಾನಾ ದಿನಗಳಿದ್ದಂತೆ ಇದರಲ್ಲೂ ವಾರವಿಡೀ ಒಂದೊಂದು ವಿಶೇಷವಿದೆ. ಇಲ್ಲಿ ಒಂದೊಂದು ದಿನಕ್ಕೂ ಒಂದೊಂದು ಹೆಸರಿದೆ. ಫೆಬ್ರವರಿ ೧೫ರಿಂ ಫೆಬ್ರವರಿ ೨೧ರವರೆಗೆ ಯಾವೆಲ್ಲ ದಿನಗಳಿವೆ ಎಂಬುದನ್ನು ನೋಡೋಣ.

ಫೆಬ್ರವರಿ ೧೫- ಸ್ಲ್ಯಾಪ್‌ ಡೇ: ಸ್ಲ್ಯಾಪ್‌ ಡೇ ಅಂದರೆ ಕಪಾಳಮೋಕ್ಷ ದಿನ ಹಲವರ ಪಾಲಿಗೆ ವರದಾನವೂ ಆಗಬಹುದು. ಇದು ತನಗೆ ಮೋಸ ಮಾಡಿದ ಹಳೆ ಪ್ರೇಮಿಗೊಂದು ಕಪಾಳಕ್ಕೆ ಬಾರಿಸಿಬಿಟ್ಟು ಬಂದು ಅವೆಲ್ಲ ನೆನಪುಗಳಿಗೆ ಬೆಂಕಿ ಹಚ್ಬೇಕೆಂದಿದ್ದವರು ಈ ದಿನವನ್ನು ಆಯ್ಕೆ ಮಾಡಬಹುದು.

ಫೆಬ್ರವರಿ ೧೬- ಕಿಕ್‌ ಡೇ: ಕಿಕ್‌ ಡೇ ಅಂದರೆ ಹಳೆಯ ಪ್ರೇಮಿಯನ್ನು ಬದುಕಿನಿಂದ ಒದ್ದೋಡಿಸುವ ದಿನ. ಎಲ್ಲವನ್ನು ಮರೆಯಬೇಕೆಂದು ಅಂದುಕೊಳ್ಳುವವರಿಗೆ ಸೂಕ್ತ ದಿನ. ಪ್ರೀತಿಗೆ ಗುಡ್‌ಬೈ ಹೇಳಿ, ಹಳೆಯ ಪ್ರೇಮಿಯನ್ನು ಒದ್ದೋಡಿಸಿ ಹೊಸ ಪಾಸಿಟಿವಿಟಿಯನ್ನು ಮೈಗೂಡಿಸಿ ಚಿಲ್‌ ಮಾಡುವ ದಿನ.

ಫೆಬ್ರವರಿ ೧೭-ಪರ್ಫ್ಯೂಮ್‌ ಡೇ: ಬೇರೆಯವರನ್ನು ಪ್ರೀತಿಸುವ ಮೊದಲು ನಿಮ್ಮನ್ನು ನೀವು ಪ್ರೀತಿಸಿ ಎಂಬುದು ಇತ್ತೀಚೆಗಿನ ಪೀಳಿಗೆ ಬಲವಾಗಿ ನಂಬುವ ಸಾಲು. ಬ್ರೇಕಪ್‌ ಆದ ಮೇಲೆ ನಾವ್ಯಾಕೆ ದೇವ್‌ದಾಸನಂತಿರಬೇಕು ಎನ್ನುವವರ ಕಾಲವಿದು. ಇಂಥವರು ನಂಬಿಕೆಯಿಡುವ ತತ್ವ ನಮ್ಮನ್ನು ನಾವು ಮೊದಲು ಖುಷಿಯಾಗಿಟ್ಟಿರಬೇಕು ಎಂಬುದು. ಅದಕ್ಕಾಗಿಯೇ ಇದೆ ಈ ದಿನ. ಹೊಸ ಪರ್‌ಫ್ಯೂಮ್‌ ಕೊಂಡುಕೊಂಡು ಹೊಸ ಜೀವನ ಶುರು ಮಾಡು ಎಂಬುದು ಈ ದಿನದ ಹಿನ್ನೆಲೆ.

ಇದನ್ನೂ ಓದಿ: Valentines Week Dresscode: ಪ್ರೇಮ ನಿವೇದನೆಗೂ ಉಂಟು ಡ್ರೆಸ್‌ಕೋಡ್‌ ರೂಲ್ಸ್!

ಫೆಬ್ರವರಿ ೧೮-ಫ್ಲರ್ಟಿಂಗ್‌ ಡೇ: ಆರೋಗ್ಯಕರ ಫ್ಲರ್ಟಿಂಗ್‌ ಒಳ್ಳೆಯದಂತೆ. ನಮ್ಮನ್ನು ಇಷ್ಟಪಡುವ ಮಂದಿಯ ಜೊತೆ ಕಾಡುಹರಟೆ ನಮ್ಮನ್ನು ಸಂತೋಷವಾಗಿರಿಸುತ್ತದೆ. ಹೊಸ ಜನರೊಂದಿಗೆ ಬೆರೆಯುವುದು, ಅವರ ಜೊತೆ ಓಡಾಟ, ಮಾತುಕತೆ, ತಮಾಷೆ, ನಗು, ಸಂತೋಷ ವಿನಿಮಯ ಒಳ್ಳೆಯದೇ.

ಫೆಬ್ರವರಿ ೧೯- ಕನ್‌ಫೆಷನ್‌ ಡೇ: ಎಷ್ಟುಕಾಲ ಸೀಕ್ರೆಟ್‌ ಕಾಪಾಡಿಕೊಂಡು ಯಾರಿಗೂ ಹೇಳದೆ ಒಳಗೊಳಗೇ ಬೇಸರವನ್ನು ಅದುಮಿಟ್ಟುಕೊಳ್ಳುತ್ತೀರಿ. ನಡೆದ ಘಟನೆಗಳನ್ನು ಯಾರ ಜೊತೆಗಾದರೂ ಹಂಚಿಕೊಳ್ಳಬೇಕೆನಿಸಿದರೆ ಹೇಳಿ ಹಗುರಾಗಲು ಹೇಳಿ ಮಾಡಿಸಿದ ದಿನ.

ಫೆಬ್ರವರಿ ೨೦- ಮಿಸ್ಸಿಂಗ್‌ ಡೇ: ಪ್ರೀತಿಸಿದವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಳ್ಳುವ ದಿನ. ಇದು ಪ್ರೇಮಿಯೇ ಆಗಬೇಕಿಲ್ಲ. ನಿಮ್ಮನ್ನು ಪ್ರೀತಿಸುವ, ನೀವು ಪ್ರೀತಿಸುವ ಮಂದಿಗೆ ಭಾವನೆಯನ್ನು ಹಂಚಿಕೊಳ್ಳಲಿರುವ ದಿನ. ಹಾಗಂತ ನಿಮ್ಮ ಮಾಜಿ ಪ್ರೇಮಿಗೆ ಇದರ ಪ್ರಯೋಗ ಮಾಡಿ, ಇಕ್ಕಟ್ಟಿಗೆ ಸಿಲುಕಬೇಡಿ!

ಫೆಬ್ರವರಿ ೨೧- ಬ್ರೇಕಪ್‌ ಡೇ: ಈ ದಿನದೊಂದಿಗೆ ಆಂಟಿ ವ್ಯಾಲೆಂಟೈನ್‌ ಡೇ ಮುಕ್ತಾಯವಾಗುತ್ತದೆ. ಒಂದು ಕೆಟ್ಟ ಸಂಬಂಧದಿಂದ ಹೊರಬರಲು ಇರುವ ಅವಕಾಶವಿದು. ಪ್ರೀತಿಸಿ ತಪ್ಪು ಮಾಡಿಬಿಟ್ಟೆ ಅನಿಸಿದರೆ ಅದರಿಂದ ಹೊರಬರಲು ಸೂಕ್ತ ದಿನವಿದು. ಈ ದಿನ ನಿಮಗೆ ಸ್ವಾತಂತ್ರ್ಯ ಸಿಕ್ಕಿದಂತೆ ಎಂದೇ ಭಾವಿಸಿ ಹೊಸ ಜೀವನ ಆರಂಭಿಸಿ, ಸಿಂಪಲ್!

ಇದನ್ನೂ ಓದಿ: Valentine’s Week : ಪ್ರೇಮಿಗಳ ದಿನದ ಹಿಂದಿನ ಮಹತ್ವವೇನು? ಆಚರಿಸೋದು ಹೇಗೆ?

Exit mobile version