Site icon Vistara News

ವಿಸ್ತಾರ ಸಂಪಾದಕೀಯ: ಚುನಾವಣೆ ಆಯುಕ್ತರ ನೇಮಕ: ಸುಪ್ರೀಂ ಕೋರ್ಟ್ ಆದೇಶ ಸ್ವಾಗತಾರ್ಹ

Appointment of Election Commissioner: Supreme Court order is welcome

#image_title

ಮುಖ್ಯ ಚುನಾವಣೆ ಆಯುಕ್ತರ ನೇಮಕ ರಾಷ್ಟ್ರಪತಿಗಳ ಅಂಕಿತ ಪಡೆಯುವ ಮೊದಲು ಅವರ ಆಯ್ಕೆಯನ್ನು ಒಂದು ಉನ್ನತ ಸಮಿತಿ ಅಂತಿಮಗೊಳಿಸಬೇಕು; ಪ್ರಧಾನ ಮಂತ್ರಿ, ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಆ ಸಮಿತಿಯಲ್ಲಿ ಇರಬೇಕು ಎಂದು ಸುಪ್ರೀಂ ಕೋರ್ಟ್ ಪಂಚ ಪೀಠ ಸರ್ವಾನುಮತದಿಂದ ತೀರ್ಪು ಪ್ರಕಟಿಸಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇದು ಮಹತ್ವದ ಆದೇಶವಾಗಿದೆ. ನ್ಯಾಯಮೂರ್ತಿ ಕೆ.ಎಂ ಜೋಸೆಫ್‌ ಅವರ ನೇತೃತ್ವದ ನ್ಯಾಯಪೀಠ, ಈ ಕುರಿತು ಸಂಸತ್ತು ಕಾಯಿದೆಯನ್ನು ರೂಪಿಸುವವರೆಗೂ ಈ ಪದ್ಧತಿ ಮುಂದುವರಿಯಬೇಕು, ಒಂದು ವೇಳೆ ಪ್ರತಿಪಕ್ಷ ನಾಯಕರ ಅನುಪಸ್ಥಿತಿ ಇದ್ದರೆ, ಅಂಥ ಸಂದರ್ಭದಲ್ಲಿ ಅತಿ ದೊಡ್ಡ ಪ್ರತಿಪಕ್ಷದ ನಾಯಕರು ಸಮಿತಿಯಲ್ಲಿರಬೇಕು ಎಂದಿದೆ. ಚುನಾವಣಾ ಆಯೋಗ ಹೆಚ್ಚು ಸ್ವತಂತ್ರವಾಗಿರಲು, ಅದರ ಕಾರ್ಯವೈಖರಿಯಲ್ಲಿ ಯಾವುದೇ ಬಗೆಯ ಹಸ್ತಕ್ಷೇಪ ತಡೆಯಲು ಸಿಬಿಐ ನೇಮಕದಂಥ ಒಂದು ವ್ಯವಸ್ಥೆ ಅಗತ್ಯ ಎಂದು ಸುಪ್ರೀಂ ಕೋರ್ಟ್‌ ಗಮನಿಸಿದೆ. ಇದೊಂದು ಮಹತ್ವದ, ಐತಿಹಾಸಿಕ ಹಾಗೂ ಸ್ವಾಗತಾರ್ಹ ತೀರ್ಪು.

ಚುನಾವಣಾ ಆಯೋಗದ ಹುದ್ದೆಗಳ ನೇಮಕಕ್ಕೆ ಕೊಲಿಜಿಯಂ ಮಾದರಿಯ ವ್ಯವಸ್ಥೆ ಬೇಕು ಎಂದು ವಾದಿಸಿರುವ ಹಲವು ಪ್ರಕರಣಗಳ ವಿಚಾರಣೆಯ ಹಂತದಲ್ಲಿ ಈ ತೀರ್ಪು ಬಂದಿದೆ. ಚುನಾವಣೆ ಆಯೋಗ ಆಡಳಿತ ಪಕ್ಷದ ಪರ ಸಹಾನುಭೂತಿ ಹೊಂದಿದೆ. ಅದು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಪಕ್ಷಗಳು ನಿರಂತರವಾಗಿ ಆರೋಪಿಸುತ್ತ ಬಂದಿದ್ದವು. ಇದರಲ್ಲಿ ಸತ್ಯವಿದೆ ಎಂಬಂತೆಯೂ ಚುನಾವಣಾ ಆಯುಕ್ತರು ನಡೆದುಕೊಂಡದ್ದು ಉಂಟು. ಬಹು ಹಂತಗಳ ಮತದಾನಕ್ಕೆ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅವಕಾಶ ಕಲ್ಪಿಸಿದ್ದು ಆಡಳಿತ ಪಕ್ಷಕ್ಕೂ ಪ್ರಧಾನಿಯವರ ರ್ಯಾಲಿಗಳಿಗೂ ಅನುಕೂಲವಾಗುವಂತೆ ಎಂಬ ಆರೋಪವೂ ಬಂದಿತ್ತು. ಯಾವುದೇ ಮಹತ್ವದ ವಿಚಾರಣೆ- ತೀರ್ಪುಗಳ ಸಂದರ್ಭದಲ್ಲಿ ನ್ಯಾಯಪೀಠದಲ್ಲಿ ಒಂದಾದರೂ ಭಿನ್ನ ಅಭಿಪ್ರಾಯವನ್ನು ನಾವು ಕಂಡದ್ದುಂಟು. ಆದರೆ ಈ ತೀರ್ಪಿನ ಸಂದರ್ಭದಲ್ಲಿ ಐವರೂ ನ್ಯಾಯಮೂರ್ತಿಗಳು ಏಕಮತವನ್ನು ಹೊಂದಿದ್ದರು ಎಂಬುದೂ ವಿಶೇಷವೇ. ʼಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಒಂದು ನಿರ್ದಿಷ್ಟ ಕಾನೂನನ್ನು ರೂಪಿಸುವ ಹೊಣೆಯನ್ನು ಸರ್ಕಾರಕ್ಕೇ ಸಂವಿಧಾನ ನಿರ್ಮಾತೃಗಳು ಬಿಟ್ಟುಕೊಟ್ಟಿದ್ದರು. ಆದರೆ ಆ ನಂಬಿಕೆಗೆ ರಾಜಕೀಯ ನೇತಾರರು ಕಳೆದ ಏಳು ದಶಕಗಳಲ್ಲಿ ದ್ರೋಹ ಬಗೆದಿದ್ದಾರೆ. ಪ್ರಜಾಪ್ರಭುತ್ವ ನಾಜೂಕಾದದ್ದು, ಕಾನೂನಿನ ಆಳ್ವಿಕೆಗೆ ಅವಕಾಶ ಕೊಡದಿದ್ದರೆ ಅದು ಕುಸಿಯುತ್ತದೆʼ ಎಂದೂ ಕೋರ್ಟ್‌ ಹೇಳಿದೆ.

ಈ ಪ್ರಕರಣದ ಹಿಂದಿನ ವಿಚಾರಣೆಯನ್ನು ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮಾಡಿತ್ತು. ಆ ಸಂದರ್ಭದಲ್ಲಿ ಅರುಣ್‌ ಗೋಯಲ್‌ ಅವರನ್ನು ತರಾತುರಿಯಲ್ಲಿ ಚುನಾವಣಾ ಆಯಕ್ತರನ್ನಾಗಿ ಮಾಡಿದ ಕ್ರಮವನ್ನು ಕೋರ್ಟ್‌ ಮುಂದೆ ಪ್ರಶ್ನಿಸಲಾಗಿತ್ತು. ಆಯುಕ್ತರ ನೇಮಕಕ್ಕೆ ಕಾನೂನಿನ ಅಗತ್ಯವನ್ನು ಪ್ರತಿಪಾದಿಸಲಾಗಿತ್ತು. ಆ ವಿಚಾರಣೆ ಸಂದರ್ಭದಲ್ಲಿ ʼ24 ಗಂಟೆಗಳಲ್ಲೇ ನೂತನ ಆಯುಕ್ತರನ್ನು ಮಿಂಚಿನ ವೇಗದಲ್ಲಿ ನೇಮಕ ಮಾಡಲು ಅಷ್ಟೊಂದು ಆತುರವೇಕೆ?ʼ ಎಂದು ಕೋರ್ಟ್‌ ಪ್ರಶ್ನಿಸಿತ್ತು. ಅದರ ಮುಂದುವರಿದ ಭಾಗವೇ ಈ ತೀರ್ಪು.

ಚುನಾವಣಾ ಆಯುಕ್ತರ ನೇಮಕದ ಪ್ರಕ್ರಿಯೆಯ ವಿಚಾರದಲ್ಲಿ ಸಂವಿಧಾನ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ. ಸಂವಿಧಾನದ ಆರ್ಟಿಕಲ್‌ 324ರಲ್ಲಿ ತಿಳಿಸಿರುವಂತೆ, ಅವರನ್ನು ರಾಷ್ಟ್ರಪತಿಗಳು ನೇಮಿಸಬೇಕು ಎಂದಿದೆ. ಸಾಮಾನ್ಯವಾಗಿ ಅವರನ್ನು ಸಚಿವ ಸಂಪುಟದ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ. ಉಳಿದ ಸಂದರ್ಭಗಳಲ್ಲಿ ನಿಷ್ಕ್ರಿಯವಾಗಿರುವಂತೆ ತೋರುವ ಚುನಾವಣಾ ಆಯೋಗ, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಎಲ್ಲಿಲ್ಲದ ಅಧಿಕಾರವನ್ನು ಪಡೆದುಬಿಡುತ್ತದೆ. ಚುನಾವಣೆಯ ದಿನಾಂಕಗಳನ್ನು ಘೋಷಿಸಿ ನೀತಿಸಂಹಿತೆ ಜಾರಿ ಮಾಡಿದ ಬಳಿಕವಂತೂ ಚುನಾವಣಾ ಆಯೋಗವೇ ಸುಪ್ರೀಂ. ರಾಷ್ಟ್ರ- ರಾಜ್ಯ ಚುನಾವಣೆಗಳ ಸಂಪೂರ್ಣ ಹೊಣೆಯನ್ನು ಅದು ಹೊತ್ತಿದ್ದು, ಇಡೀ ವ್ಯವಸ್ಥೆ ಅದರ ಅಡಿಯಾಳಾಗಿ ಕೆಲಸ ಮಾಡುತ್ತದೆ. ಇಂಥ ಸಂದರ್ಭದಲ್ಲಿ, ಚುನಾವಣಾ ಆಯುಕ್ತರೂ ಅಷ್ಟೇ ಬಲಿಷ್ಠರು, ಸಂವಿಧಾನದ ಆಶಯಗಳನ್ನು ಅರಿತು ಕೆಲಸ ಮಾಡುವವರು, ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುವವರು ಆಗಿರಬೇಕಾದುದು ಅಗತ್ಯ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಉಗ್ರರ ವಿರುದ್ಧ ಕಾಶ್ಮೀರಿ ಮುಸ್ಲಿಮರ ಪ್ರತಿಭಟನೆ ಮಹತ್ವದ ಬೆಳವಣಿಗೆ

ಆದರೆ ಸರ್ಕಾರ ನಡೆಸುವ ಆಡಳಿತ ಪಕ್ಷಗಳು ತಮಗನುಗುಣವಾಗಿ ಕೆಲಸ ಮಾಡುವಂತೆ ಚುನಾವಣಾ ಆಯುಕ್ತರನ್ನು ತಮ್ಮ ಕೈಗೊಂಬೆಗಳಾಗಿ ಮಾಡಿಕೊಳ್ಳಲು ನೋಡುತ್ತವೆ. ಈ ಪ್ರಕ್ರಿಯೆ 1980ರ ದಶಕದಲ್ಲಿ ಆರಂಭವಾಯಿತು. ಅಲ್ಲಯವರೆಗೂ ಒಬ್ಬರೇ ಚುನಾವಣಾ ಆಯುಕ್ತರು ಇರುತ್ತಿದ್ದರು. ಇವರನ್ನು ದುರ್ಬಲಗೊಳಿಸಲು ರಾಜೀವ್‌ ಗಾಂಧಿ ಸರ್ಕಾರ ಇನ್ನಿಬ್ಬರು ಸಹ ಆಯುಕ್ತರನ್ನು ಅಲ್ಲಿಗೆ ಕೂರಿಸತೊಡಗಿತು. ಆದರೆ 1990ರಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ಬಂದ ಟಿ.ಎನ್ ಶೇಷನ್‌ ಅವರು ಪೂರ್ಣ ಸ್ವತಂತ್ರರಾಗಿ, ನಿರ್ಭೀತತೆಯಿಂದ ಕೆಲಸ ಮಾಡಿ ಸರ್ಕಾರಕ್ಕೂ ರಾಜಕೀಯ ಪಕ್ಷಗಳಿಗೂ ನಡುಕ ಹುಟ್ಟಿಸಿದರು. ಇದರಿಂದ ಬೆಚ್ಚಿಬಿದ್ದ ಆಗಿನ ಪಿವಿಎನ್‌ ಸರ್ಕಾರ ಮತ್ತೆ 1993ರಲ್ಲಿ ಇಬ್ಬರು ಸಹ ಆಯುಕ್ತರಿಗೂ ಮುಖ್ಯ ಆಯುಕ್ತರಷ್ಟೇ ಅಧಿಕಾರ ನೀಡಿತು. ಹೀಗೆ ಚುನಾವಣಾ ಆಯೋಗವನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಲೇ ಬಂದಿದೆ.

ಪ್ರಜಾಪ್ರಭುತ್ವ ವ್ಯವಸ್ಥೆ ಪಾರದರ್ಶಕವಾಗಿ ಮತ್ತು ಜೀವಂತವಾಗಿ ಇರುವಲ್ಲಿ ಚುನಾವಣೆ ಆಯೋಗದ ಪಾತ್ರ ಅತಿ ಮುಖ್ಯ. ಮುಖ್ಯ ಚುನಾವಣೆ ಆಯುಕ್ತರು, ಆಯುಕ್ತರು ಕಳಂಕರಹಿತವಾಗಿ ಮತ್ತು ವಿಶ್ವಾಸಾರ್ಹತೆಯಿಂದ ಇರುವುದು ಅತೀ ಅಗತ್ಯ. ಇದು ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯ ಘನತೆಯನ್ನು ಹೆಚ್ಚಿಸುತ್ತದೆ; ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನೂ ಎತ್ತಿ ಹಿಡಿಯುತ್ತದೆ. ಹಾಗೆಯೇ ಸರ್ಕಾರದ ಪ್ರಾಮಾಣಿಕತೆಯನ್ನೂ ಪರೀಕ್ಷಿಸಿ ನೋಡುವ ಒರೆಗಲ್ಲಾಗಿ ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಮತ್ತು ಸ್ವಾಗತಾರ್ಹವಾಗಿದೆ

Exit mobile version