ನವ ದೆಹಲಿ: ಭಾರತದ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕವಾದ ಏಪ್ರಿಲ್-ಜೂನ್ ಅವಧಿಯ ಜಿಡಿಪಿ ಅಂಕಿ ಅಂಶಗಳು ಇಂದು ಸಂಜೆ ಪ್ರಕಟವಾಗಲಿದೆ. (GDP) ಎರಡಂಕಿಯ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.
ದೇಶದ ಆರ್ಥಿಕ ಅಭಿವೃದ್ಧಿಯನ್ನು ಬಿಂಬಿಸುವ ಜಿಡಿಪಿ ಬೆಳವಣಿಗೆಯ ತ್ರೈಮಾಸಿಕ ಫಲಿತಾಂಶ ಕುತೂಹಲ ಮೂಡಿಸಿದೆ. ಇದು ನಾಳೆ ಷೇರು ಮಾರುಕಟ್ಟೆಯ ಮೇಲೆ ಕೂಡ ಪ್ರಭಾವ ಬೀರುವ ನಿರೀಕ್ಷೆ ಇದೆ.
ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ (ಎನ್‌ಎಸ್‌ಒ) ಈ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಲಿದ್ದು, ಕೃಷಿ, ಉತ್ಪಾದನೆ ಕ್ಷೇತ್ರದಲ್ಲಿ ಗಣನೀಯ ಚೇತರಿಕೆ ನಿರೀಕ್ಷಿಸಲಾಗಿದೆ. ಬೇಸ್ ಎಫೆಕ್ಟ್ ಹಾಗೂ ಆರ್ಥಿಕ ವಲಯಗಳ ಚೇತರಿಕೆಯ ಪರಿಣಾಮ ಎರಡಂಕಿಯ ಬೆಳವಣಿಗೆ ಸಾಧ್ಯತೆ ಇದೆ.
ಆರ್ಥಿಕ ತಜ್ಞರ ಪ್ರಕಾರ ೨೦೨೨ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ೧೩% ಜಿಡಿಪಿ ಬೆಳವಣಿಗೆ ದಾಖಲಾಗಿರುವ ಸಾಧ್ಯತೆ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ೧೫.೭%, ಆರ್‌ಬಿಐ ೧೬.೨% ಪ್ರಗತಿ ನಿರೀಕ್ಷಿಸಿದೆ. ಕಳೆದ ವರ್ಷ ಏಪ್ರಿಲ್-ಜೂನ್ ಅವಧಿಯಲ್ಲಿ ೨೦.೧% ಜಿಡಿಪಿ ಬೆಳವಣಿಗೆ ದಾಖಲಾಗಿತ್ತು.