Site icon Vistara News

Arshad Nadeem : ಒಲಿಂಪಿಕ್ಸ್ ದಾಖಲೆಯೊಂದಿಗೆ ಬಂಗಾರ ಗೆದ್ದ ಅರ್ಷದ್ ನದೀಮ್​ಗೆ ಪಾಕ್​ ಪ್ರಧಾನಿ ಕೊಟ್ಟ ಬಹುಮಾನ ಕೇವಲ 3 ಲಕ್ಷ ರೂಪಾಯಿ!

Arshad Nadeem

ನವದೆಹಲಿ: ಒಲಿಂಪಿಕ್ ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಪಾಕಿಸ್ತಾನ ಜಾವೆಲಿನ್ ಎಸೆತಗಾರ ಅರ್ಷದ್​ ನದೀಮ್​ಗೆ (Arshad Nadeem) ಅಲ್ಲಿನ ಪ್ರಧಾನಿ ಘೋಷಿಸಿರುವ ಬಹುಮಾನ ಮೊತ್ತ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಪ್ರಧಾನಿ ಶೆಹಬಾಜ್ ಷರೀಫ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಪುರುಷರ ಫೈನಲ್ನಲ್ಲಿ ನದೀಮ್ 92.97 ಮೀಟರ್ ಜಾವೆಲಿನ್ ಎಸೆತದಲ್ಲಿ ದಾಖಲೆ ನಿರ್ಮಿಸುವ ಮೂಲಕ 32 ವರ್ಷಗಳ ನಂತರ ಪಾಕಿಸ್ತಾನದ ಮೊದಲ ಒಲಿಂಪಿಕ್ ಚಿನ್ನದ ಪದಕವನ್ನು ನದೀಮ್ ತಂದುಕೊಟ್ಟಿದ್ದರು. ಆದರೂ ಅವರಿಗೆ ಕೊಟ್ಟಿರುವುದು ಕೇವಲ 3 ಲಕ್ಷ ಭಾರತೀಯ ರೂಪಾಯಿ.

ಗೆಲುವಿನೊಂದಿಗೆ ಪಾಕಿಸ್ತಾನ ಒಲಿಂಪಿಕ್ಸ್​ನಲ್ಲಿ ತನ್ನ ಮೊದಲ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಈ ಹಿಂದೆ ಪಾಕಿಸ್ತಾನ 1960, 1968 ಮತ್ತು 1984ರಲ್ಲಿ ಹಾಕಿಯಲ್ಲಿ ಕೇವಲ ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದಿತ್ತು. ನದೀಮ್ ಅವರ ಗೆಲುವು ಆಟಗಾರ ಮತ್ತು ಪಾಕಿಸ್ತಾನ ಎರಡಕ್ಕೂ ಮಹತ್ವದ ಮೈಲಿಗಲ್ಲಾಗಿದೆ.

ಪಾಕ್ ಪ್ರಧಾನಿಯಿಂದ ಅವಮಾನ; ಡ್ಯಾನಿಶ್ ಕನೇರಿಯಾ

ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ವಿಜಯದ ಹೊರತಾಗಿಯೂ, ನದೀಮ್​​ಗೆ ಪ್ರಧಾನಿಯವರು 10 ಲಕ್ಷ ಪಾಕಿಸ್ತಾನ ರೂಪಾಇ (ಸುಮಾರು 3 ಲಕ್ಷ ಭಾರತ ರೂಪಾಯಿ) ನೀಡಿದರು. ಅಷ್ಟು ಕಡಿಮೆ ಮೊತ್ತ ಕೊಟ್ಟ ಹೊರತಾಗಿಯೂ ಚೆಕ್​ ನೀಡುವ ಚಿತ್ರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಶರೀಫ್ ತಮ್ಮ ಅಭಿನಂದನಾ ಪೋಸ್ಟ್​ನಲ್ಲಿ “ಶಹಬ್ಬಾಸ್​ ಅರ್ಷದ್​ ಇತಿಹಾಸ ಸೃಷ್ಟಿ ಮಾಡಿದ್ದೀರಿ. ಪಾಕಿಸ್ತಾನದ ಮೊದಲ ಒಲಿಂಪಿಕ್ ಜಾವೆಲಿನ್ ಚಾಂಪಿಯನ್​ ನೀವು. ದೇಶಕ್ಕೆ ಹೆಮ್ಮೆ ತಂದಿದ್ದಿರಿ ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನ ಪ್ರಧಾನಿ ನದೀಮ್​​ ನೀಡಿದ ಗೌರವದ ಬಗ್ಗೆ ಪ್ರತಿಕ್ರಿಯಿಸಿದ ಕನೇರಿಯಾ, ಈ ಮೊತ್ತವನ್ನು ಒಲಿಂಪಿಕ್ ಚಿನ್ನದ ಪದಕ ವಿಜೇತ ಮತ್ತು ಅವರ ಗಮನಾರ್ಹ ಸಾಧನೆಗೆ ಅಗೌರವ ಎಂದು ಕರೆದಿದ್ದಾರೆ. ಇತರ ದೇಶಗಳು ತಮ್ಮ ಒಲಿಂಪಿಕ್ ಹೀರೋಗಳಿಗೆ ನೀಡುವ ಬಹುಮಾನದ ಮೊತ್ತಕ್ಕೆ ಹೋಲಿಸಿದರೆ ಬಹುಮಾನದ ಮೊತ್ತ ಏನೂ ಅಲ್ಲ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಹೇಳಿದ್ದಾರೆ.

ನದೀಮ್​​ಗೆ ಉತ್ತಮ ಮಾನ್ಯತೆ ನೀಡುವಂತೆ ಕನೇರಿಯಾ ಆಗ್ರಹ

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ನದೀಮ್ ಕೂಡ ಸುಮಾರು 42 ಲಕ್ಷ ರೂ.ಗಳನ್ನು ಬಹುಮಾನವಾಗಿ ಪಡೆಯುತ್ತಾರೆ. ಅಂಥದ್ದರಲ್ಲಿ ಕೇವಲ 10 ಲಕ್ಷ ರೂಪಾಯಿ ಘೋಷಿಸಿದ್ದೀರಿ. ಅದರಲ್ಲಿ 243,069 ರೂಪಾಯಿ ಪ್ಯಾರಿಸ್​ಗೆ ಹೋಗುವ ವಿಮಾನದ ಟಿಕೆಟ್​ಗೆ ಇದೆ ಎಂದು ಕನೇರಿಯಾ ಹೇಳಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆಗಾಗಿ ನದೀಮ್ ಅವರಿಗೆ ಹೆಚ್ಚು ಬಹುಮಾನವನ್ನು ನೀಡುವಂತೆ ಅವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಕನೇರಿಯಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. “ಮಾನ್ಯ ಪ್ರಧಾನ ಮಂತ್ರಿಯವರೇ, ಕನಿಷ್ಠ ಆಕರ್ಷಕ ಅಭಿನಂದನೆಗಳನ್ನು ಸಲ್ಲಿಸಿ. ನೀವು ನೀಡಿದ ಸಣ್ಣ ಮೊತ್ತದ ಚಿತ್ರವನ್ನು ತೆಗೆಯಿರಿ. ಈ ಮೊತ್ತವು ತುಂಬಾ ಸಣ್ಣದು. ಅವರಿಗೆ ವಿಮಾನ ಟಿಕೆಟ್ ಗಳನ್ನು ಸಹ ಖರೀದಿಸಲು ಸಾಧ್ಯವಿಲ್ಲ. ಅರ್ಷದ್ ಅವರ ಶ್ರಮವನ್ನು ಪರಿಗಣಿಸಿದರೆ ಇದು ಅವರಿಗೆ ಮತ್ತು ರಾಷ್ಟ್ರಕ್ಕೆ ಮಾಡಿದ ಅವಮಾನ” ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕಂಚಿನ ಪದಕ ಗೆದ್ದಿರುವ ಸ್ಪರ್ಧಿಗಳಿಗೆ ಆಯಾ ರಾಜ್ಯಗಳೇ ಕೋಟಿ ಕೋಟಿ ರೂಪಾಯಿ ಬಹುಮಾನ ನೀಡುತ್ತಿದೆ. ಅಂಥದ್ದರಲ್ಲಿ ಪಾಕಿಸ್ತಾನದ ಪ್ರಧಾನಿ ಕೇವಲ 10 ಲಕ್ಷ ರೂಪಾಯಿ ಕೊಟ್ಟು ಟೀಕೆಗೆ ಒಳಗಾಗಿದ್ದಾರೆ.

Exit mobile version