Site icon Vistara News

Swati Maliwal: ಆಪ್‌ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ನಡೆಸಿದ ಕೇಜ್ರಿವಾಲ್‌ ಆಪ್ತ ಕಾರ್ಯದರ್ಶಿ ಬಂಧನ

Swati Maliwal Case

ಹೊಸದಿಲ್ಲಿ: ಆಮ್‌ ಆದ್ಮಿ ಪಕ್ಷದ (Aam Admi Party) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ (Rajya Sabha MP Swati Maliwal) ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಆಪ್ತ ಕಾರ್ಯದರ್ಶಿ ಬಿಭವ್‌ ಕುಮಾರ್‌ (Bibhav Kumar) ಅನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮವಾರ ಸಿಎಂ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ದೆಹಲಿ ಮುಖ್ಯಮಂತ್ರಿಯ ಕಾರ್ಯದರ್ಶಿ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ತಮ್ಮ ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು. ಈ ಘಟನೆ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಕೇಜ್ರಿವಾಲ್ ಅವರ ಮೌನವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ದಾಳಿಯ ಸಮಯದಲ್ಲಿ ಸ್ಪಷ್ಟವಾಗಿ ನಿಷ್ಕ್ರಿಯರಾಗಿದ್ದುದಕ್ಕಾಗಿ ಕೇಜ್ರಿವಾಲ್ ಅವರನ್ನು “ಮುಖ್ಯ ಅಪರಾಧಿ” ಎಂದು ಕರೆದಿದ್ದಾರೆ.

ಮಲಿವಾಲ್‌ ಅವರು ದೆಹಲಿ ಮುಖ್ಯಮಂತ್ರಿ ಮನೆಯಿಂದ ಹೊರಬರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸಿಎಂ ನಿವಾಸದಲ್ಲಿ ನಿಯೋಜಿಸಲಾದ ಸಿಬ್ಬಂದಿ ಮತ್ತು ಎಎಪಿ ರಾಜ್ಯಸಭಾ ಸಂಸದೆ ನಡುವೆ ವಾಗ್ವಾದ ನಡೆಯುವುದನ್ನು ಕಾಣಬಹುದು.

“ನಾನು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇನೆ ಮತ್ತು ಸಹಾಯಕ್ಕಾಗಿ ಪದೇ ಪದೆ ಕಿರುಚುತ್ತಿದ್ದೆ. ನನ್ನನ್ನು ರಕ್ಷಿಸಿಕೊಳ್ಳಲೆಂದು ನಾನು ಅವನನ್ನು ನನ್ನ ಕಾಲುಗಳಿಂದ ದೂರ ತಳ್ಳಿದೆ. ಆ ಸಮಯದಲ್ಲಿ ಆತ ನನ್ನ ಮೇಲೆ ಎರಗಿ ಕ್ರೂರವಾಗಿ ಎಳೆದುಕೊಂಡು ಮತ್ತು ಉದ್ದೇಶಪೂರ್ವಕವಾಗಿ ನನ್ನ ಅಂಗಿಯನ್ನು ಮೇಲಕ್ಕೆ ಎಳೆದ” ಎಂದು ಎಫ್ಐಆರ್‌ನಲ್ಲಿ ಹೇಳಲಾಗಿದೆ. “ಬಿಭವ್ ಕುಮಾರ್ ಪಶ್ಚಾತ್ತಾಪ ಪಟ್ಟಿಲ್ಲ. ನನ್ನ ಎದೆ, ಹೊಟ್ಟೆ ಮತ್ತು ಸೊಂಟದ ಪ್ರದೇಶಕ್ಕೆ ತನ್ನ ಕಾಲುಗಳಿಂದ ಒದೆಯುವ ಮೂಲಕ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದು ಸ್ವಾತಿ ದೂರಿದ್ದಾರೆ.

 ಸ್ವಾತಿ ಮಾಲಿವಾಲ್‌ ಆರೋಪ ಸುಳ್ಳು ಎಂದು ಆಪ್‌ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದೆಹಲಿ ಸಿಎಂ ಕಚೇರಿಯಲ್ಲಿ ಗಲಾಟೆ ನಡೆದಿರುವ ಕುರಿತ ವಿಡಿಯೊವನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

“ಸ್ವಾತಿ ಮಾಲಿವಾಲ್‌ ಅವರು ನೀಡಿರುವ ಹೇಳಿಕೆಯು ಸಂಪೂರ್ಣವಾಗಿ ಸುಳ್ಳುಗಳಿಂದ ಕೂಡಿದೆ ಎಂಬುದು ಈ ವಿಡಿಯೊದಿಂದ ಬಯಲಾಗಿದೆ. ಸ್ವಾತಿ ಮಾಲಿವಾಲ್‌ ಅವರು ಹೇಳಿದ ಸುಳ್ಳುಗಳನ್ನು ದೇಶದ ಜನರ ಮುಂದಿಡುತ್ತಿದ್ದೇವೆ” ಎಂದು ಆಪ್‌ ನಾಯಕಿ, ಸಚಿವೆ ಆತಿಶಿ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮದೇ ಪಕ್ಷದ ನಾಯಕಿ ನೀಡಿರುವ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ. ಹಾಗೆಯೇ, ಅವರು ದೆಹಲಿ ಸಿಎಂ ಕಚೇರಿಯಲ್ಲಿ ನಡೆದ ಗಲಾಟೆ ಕುರಿತ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ.

ವಿಡಿಯೊದಲ್ಲಿ ಏನಿದೆ?

ದೆಹಲಿ ಸಿಎಂ ಕಚೇರಿಗೆ ಭೇಟಿ ನೀಡಿದ ವೇಳೆ ಸ್ವಾತಿ ಮಾಲಿವಾಲ್‌ ಅವರಿಗೆ ಭದ್ರತಾ ಸಿಬ್ಬಂದಿಯು ಹೊರಗೆ ತೆರಳಿ ಎಂಬುದಾಗಿ ಹೇಳಿದ್ದಾರೆ. ಆದರೆ, ನಾನು ಹೊರಗೆ ಹೋಗಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಭದ್ರತಾ ಸಿಬ್ಬಂದಿಯೊಬ್ಬರಿಗೆ ಬಾಂಡ್ಲಿ (ಬೊಕ್ಕ ತಲೆಯವರು) ಎಂಬುದಾಗಿ ಬೈದಿದ್ದಾರೆ. ನಾನು ಇದರ ಬಗ್ಗೆ ಎಲ್ಲರಿಗೂ ಹೇಳುತ್ತೇನೆ ಎಂದು ಸ್ವಾತಿ ಮಾಲಿವಾಲ್‌ ಅವರು ದೆಹಲಿ ಸಿಎಂ ಕಚೇರಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮಾಡಿ, ಆದರೆ ಇಲ್ಲಿಂದ ಹೊರಡಿ ಎಂದು ಸಿಬ್ಬಂದಿ ಸೂಚಿಸಿದ್ದಾರೆ. ಆಗ, ಸ್ವಾತಿ ಮಾಲಿವಾಲ್‌ ಅವರು ಭದ್ರತಾ ಸಿಬ್ಬಂದಿಗೆ ಅವಾಚ್ಯವಾಗಿ ಬೈದಿದ್ದಾರೆ. ಇಷ್ಟೆಲ್ಲ ಅಂಶಗಳು ವಿಡಿಯೊದಲ್ಲಿವೆ.

ಇದನ್ನೂ ಓದಿ: Swati Maliwal: ಸ್ವಾತಿ ಮಾಲಿವಾಲ್‌ ಕೇಸ್‌ಗೆ ಟ್ವಿಸ್ಟ್;‌ ತಮ್ಮ ಸಂಸದೆ ವಿರುದ್ಧವೇ ತಿರುಗಿಬಿದ್ದ ಆಪ್‌ ನಾಯಕರು!

Exit mobile version