Site icon Vistara News

Arvind Kejriwal: ಕೇಜ್ರಿವಾಲ್‌ಗೆ 14×8 ಅಳತೆಯ ಕೋಣೆ; ಪತ್ನಿ ಭೇಟಿಗೆ ಅವಕಾಶ; ವಿಐಪಿ ಟ್ರೀಟ್‌ಮೆಂಟ್‌ ಇದೆಯಾ?

arvind kejriwal in tihar jail

ಹೊಸದಿಲ್ಲಿ: ತಿಹಾರ್‌ ಜೈಲಿನಲ್ಲಿರುವ (Tihar Jail) ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರಿಗೆ ಮನೆಯಲ್ಲಿ ತಯಾರಿಸಿದ ಊಟ, ಬಾಟಲಿಗಳಲ್ಲಿ ಕುಡಿಯುವ ನೀರು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ ಕುಸಿದರೆ ಅಂಥ ಸಂದರ್ಭದಲ್ಲಿ ನೀಡಲು ಟೋಫಿಗಳನ್ನು ಪೂರೈಸಬಹುದು ಎಂದು ದೆಹಲಿ ನ್ಯಾಯಾಲಯ (Delhi Court) ಸೋಮವಾರ ಹೇಳಿದೆ.

ಕೇಜ್ರಿವಾಲ್‌ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಸೋಮವಾರದಿಂದ ಆರಂಭವಾಗಿದ್ದು, ತಿಹಾರ್ ಜೈಲಿನಲ್ಲಿದ್ದಾರೆ. 14×8 ಅಳತೆಯ ಕೋಣೆಯಲ್ಲಿರುವ ಅವರನ್ನು ಅವರ ಪತ್ನಿ ಸುನೀತಾ ಕೇಜ್ರಿವಾಲ್ (Sunitha Kejriwal) ಅವರನ್ನು ಭೇಟಿಯಾಗಬಹುದಾಗಿದೆ. ಮನೆಯಿಂದ ದಿಂಬುಗಳು, ಗಾದಿ ಮತ್ತು ಬೆಡ್ ಲಿನೆನ್‌ ಕೊಡಲಾಗಿದೆ. ಅವರು ಮಧುಮೇಹ ರೋಗಿಯಾಗಿರುವುದರಿಂದ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಕಾರಣ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ವೈದ್ಯಕೀಯ ಉಪಕರಣಗಳನ್ನು ಸಹ ಒದಗಿಸಲಾಗುತ್ತದೆ.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿ, ತಿಹಾರ್‌ನ ಜೈಲು ಸಂಖ್ಯೆ 2ರಲ್ಲಿರುತ್ತಾರೆ. ಅವರ ಮಾಜಿ ಡೆಪ್ಯೂಟಿ ಮನೀಶ್ ಸಿಸೋಡಿಯಾ ಮತ್ತು ಭಾರತ್ ರಾಷ್ಟ್ರ ಸಮಿತಿಯ ಕೆ. ಕವಿತಾ ಅವರು ಈ ಪ್ರಕರಣದಲ್ಲಿ ಕಂಬಿ ಹಿಂದೆ ಇರುವ ಇತರ ರಾಜಕೀಯ ನಾಯಕರು.

ನಿನ್ನೆ ಮಧ್ಯಾಹ್ನ ಜಾರಿ ನಿರ್ದೇಶನಾಲಯದ ವಿಸ್ತೃತ ಕಸ್ಟಡಿ ಮುಗಿದ ನಂತರ ಕೇಜ್ರಿವಾಲ್ ಅವರನ್ನು ಜೈಲಿಗೆ ಕರೆದೊಯ್ಯಲಾಯಿತು. ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿಯನ್ನು ಇಡಿ “ಕಿಂಗ್‌ಪಿನ್” ಎಂದಿದೆ. ಎಎಪಿ ನಾಯಕ “ಹಾರಿಕೆಯ ಉತ್ತರ” ನೀಡುತ್ತಿದ್ದಾರೆ ಮತ್ತು ತನಿಖೆಗೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

ಅರವಿಂದ್ ಕೇಜ್ರಿವಾಲ್ ತಮಗೆ ಭಗವದ್ಗೀತೆ, ರಾಮಾಯಣದ ಪ್ರತಿ ಮತ್ತು ಪತ್ರಕರ್ತೆ ನೀರಜಾ ಚೌಧರಿ ಬರೆದ “How Prime Ministers Decide” ಎಂಬ ಪುಸ್ತಕವನ್ನು ಒದಗಿಸುವಂತೆ ಜೈಲು ಅಧಿಕಾರಿಗಳನ್ನು ಕೇಳಿದ್ದಾರೆ. ಅವರು ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಭೇಟಿ ಮಾಡಬಹುದು.

ಲೋಕಸಭೆ ಚುನಾವಣೆಗೆ ವಾರಗಳ ಮುಂಚೆ EDಯ ಆರೋಪಗಳ ವಿರುದ್ಧದ ಹೋರಾಟದಲ್ಲಿ ಸುನೀತಾ ಕೇಜ್ರಿವಾಲ್ ತೊಡಗಿದ್ದಾರೆ ಹಾಗೂ ಮತದಾರರು ಮತ್ತು ಆಪ್‌ ನಡುವಿನ ಕೊಂಡಿಯಾಗಿ ಹೊರಹೊಮ್ಮಿದ್ದಾರೆ. ಈ ವಾರಾಂತ್ಯದಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅವರು ಮಾಡಿದ ಭಾಷಣದ ನಂತರ ಅವರು ಪ್ರಬಲ ಸಾರ್ವಜನಿಕ ಧ್ವನಿಯಾಗಿ ಹೊರಹೊಮ್ಮಿದ್ದಾರೆ. ಇದರಲ್ಲಿ ಅವರು ಮಾಜಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯಂತಹ ಹೆವಿವೇಯ್ಟ್‌ಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಕೇಜ್ರಿವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿಯೇ ಉಳಿದಿದ್ದಾರೆ. ಆದರೆ ಸರ್ಕಾರಿ ಅಧಿಕಾರಿಗಳು ಮತ್ತು ಮಂತ್ರಿಗಳೊಂದಿಗೆ ಸಿಎಂ ನಡೆಸಬೇಕಾದ ಸಭೆಗಳಿಗೆ ಅನುಮತಿ ಇದೆಯೇ ಎಂಬುದು ಅಸ್ಪಷ್ಟವಾಗಿದೆ. ಪ್ರಸ್ತುತ ಜೈಲು ನಿಯಮಗಳು ಇದಕ್ಕೆ ಅವಕಾಶ ನೀಡುವುದಿಲ್ಲ. ಇದು ಎಎಪಿ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಭಾವ್ಯ ಸ್ಫೋಟಕ ಘರ್ಷಣೆಯನ್ನು ಉಂಟುಮಾಡಲಿದೆ.

ಬಿಜೆಪಿಯು ಕೇಜ್ರಿವಾಲ್ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿದೆ. ಆದರೆ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಎಎಪಿ ದೃಢವಾಗಿ ಹೇಳಿದೆ. ಅವರ ಮೇಲೆ ಕೇವಲ ಆರೋಪ ಹೊರಿಸಲಾಗಿದೆ ಮತ್ತು ದೋಷಿ ಎಂದು ರುಜುವಾತಾವಗಿಲ್ಲ. ಕೇಜ್ರಿವಾಲ್ ಅವರ ವೈದ್ಯಕೀಯ ಸ್ಥಿತಿಯನ್ನು ಗಮನಿಸಿದರೆ- ಅವರ ದುರ್ಬಲಗೊಂಡ ರೋಗನಿರೋಧಕ ಶಕ್ತಿ, ಜೊತೆಗೆ ಅವರು ತೀವ್ರವಾದ ಅಲರ್ಜಿಯ ಪ್ರತಿಕ್ರಿಯೆಗಳ ಅಪಾಯದಲ್ಲಿದ್ದಾರೆ. ಹೀಗಾಗಿ ಅವರು ಮನೆಯಿಂದಲೇ ಬೆಡ್ ಲಿನೆನ್ ಅನ್ನು ಬಳಸಬಹುದು ಎಂದು ನ್ಯಾಯಾಲಯ ಹೇಳಿದೆ.

ಅವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದು ಸೇರಿದಂತೆ ಅಗತ್ಯ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಯನ್ನು ಸಹ ಪಡೆಯುತ್ತಾರೆ. ಕೇಜ್ರಿವಾಲ್ ಅವರು ವಿಶೇಷ ಡಯಟ್‌ ಹೊಂದಿರುವುದರಿಂದ ಮನೆಯಲ್ಲಿ ಬೇಯಿಸಿದ ಆಹಾರವನ್ನು ಸಹ ನೀಡಲಾಗುತ್ತದೆ. ಸಾಮಾನ್ಯವಾಗಿ, ತಿಹಾರ್ ಜೈಲಿನಲ್ಲಿ ಇರಿಸಲಾಗಿರುವ ಖೈದಿಗಳು ಜೈಲು ನಿಯಮಗಳ ಭಾಗವಾಗಿ ಬೆಳಿಗ್ಗೆ ಮತ್ತು ಸಂಜೆ ಒಂದು ಕಪ್ ಚಹಾದ ಜೊತೆಗೆ ದಿನಕ್ಕೆ ಎರಡು ಬಾರಿ ದಾಲ್, ಸಬ್ಜಿ ಮತ್ತು ಐದು ರೊಟ್ಟಿಗಳು ಅಥವಾ ಅನ್ನವನ್ನು ಪಡೆಯುತ್ತಾರೆ. ಕೇಜ್ರಿವಾಲ್ ಅವರು ಧಾರ್ಮಿಕ ಮಹತ್ವವನ್ನು ಹೊಂದಿರುವ ತಮ್ಮ ಲಾಕೆಟ್ ಧರಿಸುವುದನ್ನು ಮುಂದುವರಿಸಬಹುದಾಗಿದೆ.

ಜೈಲಿನಲ್ಲಿ ಏನೇನು ದಿನಚರಿ?

ಕೇಜ್ರಿವಾಲ್ ಮತ್ತು ತಿಹಾರ್ ಜೈಲು ಸಂಖ್ಯೆ 2ರಲ್ಲಿರುವ ಇತರ ಕೈದಿಗಳು ತಮ್ಮ ದಿನವನ್ನು 6:30ರ ಸುಮಾರಿಗೆ ಸೂರ್ಯೋದಯದೊಂದಿಗೆ ಪ್ರಾರಂಭಿಸುತ್ತಾರೆ. ಕೈದಿಗಳಿಗೆ ಅವರ ಉಪಹಾರವಾಗಿ ಚಹಾ ಮತ್ತು ಬ್ರೆಡ್ ಸಿಗುತ್ತದೆ. ಬೆಳಗಿನ ಸ್ನಾನದ ನಂತರ ಕೇಜ್ರಿವಾಲ್ ನ್ಯಾಯಾಲಯಕ್ಕೆ ಹೊರಡುತ್ತಾರೆ ಅಥವಾ ಅವರ ಕಾನೂನು ತಂಡದೊಂದಿಗೆ ಮೀಟಿಂಗ್‌ ನಡೆಸುತ್ತಾರೆ. ಊಟವು 10:30ರಿಂದ 11 ರವರೆಗೆ ಇರುತ್ತದೆ.

ನಂತರ ಮಧ್ಯಾಹ್ನ 3 ಗಂಟೆಯವರೆಗೆ ಕೈದಿಗಳನ್ನು ಅವರ ಸೆಲ್‌ಗಳಲ್ಲಿ ಲಾಕ್ ಮಾಡಲಾಗುತ್ತದೆ, ನಂತರ ಅವರಿಗೆ ಒಂದು ಕಪ್ ಚಹಾ ಮತ್ತು ಎರಡು ಬಿಸ್ಕತ್ತುಗಳು ಸಿಗುತ್ತವೆ. ಡಿನ್ನರ್ ಸಂಜೆ 5:30 ಕ್ಕೆ. ನಂತರ ರಾತ್ರಿ 7 ಗಂಟೆಗೆ ಕೈದಿಗಳನ್ನು ಕೋಣೆಗಳಿಗೆ ಹಾಕಲಾಗುತ್ತದೆ. ಕೇಜ್ರಿವಾಲ್ ಅವರು ಊಟ ಮತ್ತು ಲಾಕ್-ಅಪ್‌ನಂತಹ ನಿಗದಿತ ಜೈಲು ಚಟುವಟಿಕೆಗಳನ್ನು ಹೊರತುಪಡಿಸಿ ದೂರದರ್ಶನವನ್ನು ವೀಕ್ಷಿಸಬಹುದು. ಸುದ್ದಿ, ಮನರಂಜನೆ ಮತ್ತು ಕ್ರೀಡೆ ಸೇರಿದಂತೆ 18- 20 ಚಾನಲ್‌ಗಳನ್ನು ಅನುಮತಿಸಲಾಗಿದೆ.

ಇದನ್ನೂ ಓದಿ: Aravind Kejriwal : ತಿಹಾರ್ ಜೈಲು ಸೇರಿದ ಕೇಜ್ರಿವಾಲ್​, ಕಂಬಿಯ ಹಿಂದೆ ಅವರ ದಿನಚರಿ ಹೀಗಿದೆ

Exit mobile version