Site icon Vistara News

Asaduddin Owaisi : ಪ್ರಮಾಣ ವಚನ ಸ್ವೀಕರಿಸಿ ‘ಜೈ ಪ್ಯಾಲೆಸ್ತೀನ್​’ ಘೋಷಣೆ ಕೂಗಿದ ಅಸಾದುದ್ದೀನ್ ಒವೈಸಿ, ಕೇಸ್​ ದಾಖಲು

Asaduddin Owaisi

ನವದೆಹಲಿ: ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ (Asaduddin Owaisi) ಮಂಗಳವಾರ 18 ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ “ಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗಿದ್ದಾರೆ. ಇದು ದೊಡ್ಡ ಪ್ರಮಾಣದ ವಿವಾದಕ್ಕೆ ಕಾರಣವಾಗಿದ್ದು ಆಡಳಿತಾರೂಢ ಬಿಜೆಪಿ ಪ್ರಬಲ ಪ್ರತಿರೋಧ ವ್ಯಕ್ತಪಡಿಸಿದೆ. ಜತೆಗೆ ಒವೈಸಿ ವಿರುದ್ಧ ದೂರು ಕೂಡ ದಾಖಲಾಗಿದೆ.

ಐದನೇ ಬಾರಿಗೆ ಲೋಕಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಓವೈಸಿ, ನಂತರ ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದು. ಭಾರತದಲ್ಲಿ ಸಮಸ್ಯೆಗಳ ಅಂಚಿನಲ್ಲಿರುವವರ ಪರ ಪ್ರಾಮಾಣಿಕವಾಗಿ ಧ್ವನಿ ಎತ್ತುವುದಾಗಿ ಹೇಳಿದ್ದಾರೆ. ಅಸಾದುದ್ದೀನ್ ಓವೈಸಿ ಪ್ರಮಾಣ ವಚನ ಸ್ವೀಕರಿಸಲು ತೆರಳುತ್ತಿದ್ದಂತೆ ಬಿಜೆಪಿ ಸಂಸದರು ಜೈ ಶ್ರೀರಾಮ್ ಘೋಷಣೆ ಕೂಗಲು ಆರಂಭಿಸಿದ್ದರು. ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಓವೈಸಿ, ‘ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗುವ ಮೂಲಕ ಮುಕ್ತಾಯಗೊಳಿಸಿದರು.

2019 ರಲ್ಲಿ, ಓವೈಸಿ ತಮ್ಮ ಪ್ರಮಾಣವಚನವನ್ನು “ಜೈ ಭೀಮ್, ಅಲ್ಲಾ-ಒ-ಅಕ್ಬರ್ ಮತ್ತು ಜೈ ಹಿಂದ್” ಎಂಬ ಪದಗಳೊಂದಿಗೆ ಮುಕ್ತಾಯಗೊಳಿಸಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಓವೈಸಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹಿಂದೂ ಫೈರ್ ಬ್ರಾಂಡ್​ ಮಾಧವಿ ಲತಾ ವಿರುದ್ಧ ಗೆಲುವು ಸಾಧಿಸಿದ್ದರು.

ಒವೈಸಿಯವರ ಘೋಷಣೆಯ ಬಗ್ಗೆ ವಿವಾದ ಸೃಷ್ಟಿಯಾದ ಬಳಿಕ ಅವರು ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. , ‘ಜೈ ಪ್ಯಾಲೆಸ್ತೀನ್​’ ಎಂದು ಹೇಳುವುದನ್ನು ನಿರ್ಬಂಧಿಸಲು ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ ಎಂದು ಓವೈಸಿ ಹೇಳಿದ್ದಾರೆ

ಓವೈಸಿ ನೀಡಿರುವ ‘ಜೈ ಪ್ಯಾಲೆಸ್ತೀನ್​ ‘ ಘೋಷಣೆ ಕೂಗಿರುವುದು ಸಂಪೂರ್ಣ ತಪ್ಪು ಮತ್ತು ಸಂವಿಧಾನಕ್ಕೆ ವಿರುದ್ಧ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: Bomb Threat : ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಿದೆ ಸುಹೈಬ್​ ಎಂಬಾತನ ಬಂಧನ

“ಒವೈಸಿ ಒಂದೆಡೆ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಮತ್ತೊಂದೆಡೆ ಸಂವಿಧಾನದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಓವೈಸಿಯ ನಿಜವಾದ ಮುಖ ಬಯಲಾಗಿದೆ. ಪ್ರತಿದಿನ ಅವರು ದೇಶ ಮತ್ತು ಸಂವಿಧಾನದ ವಿರುದ್ಧ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ” ಎಂದು ರೆಡ್ಡಿ ಹೇಳಿದರು.

ಓವೈಸಿ ಅವರ ಘೋಷಣೆಗೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ನಾವು ಯಾವುದೇ ದೇಶವನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ, ಆದರೆ ಸದನದಲ್ಲಿ ಯಾವುದೇ ದೇಶದ ಹೆಸರನ್ನು ತೆಗೆದುಕೊಳ್ಳುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ, ಇಸ್ರೇಲ್ ಮತ್ತು ಗಾಜಾ ನಡುವೆ ಯುದ್ಧ ಪ್ರಾರಂಭವಾದಾಗ, ಪ್ಯಾಲೆಸ್ತೀನ್​ ಪರಿಸ್ಥಿತಿ ಕೇವಲ ಮುಸ್ಲಿಮರಿಗೆ ಸಂಬಂಧಿಸಿದ ವಿಷಯವಲ್ಲ, ಆದರೆ ಮಾನವೀಯತೆಯ ವಿಷಯವಾಗಿದೆ ಎಂದು ಓವೈಸಿ ಹೇಳಿದ್ದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ‘ದೆವ್ವ’ ಎಂದು ಟೀಕಿಸಿದ್ದರು. ಪ್ಯಾಲೆಸ್ತೀನ್​ ಸಂಘಟನೆ ಹಮಾಸ್ ವಿರುದ್ಧದ ಇಸ್ರೇಲ್​​ನ ಯುದ್ಧವು ಜೂನ್​ಗೆ ಎಂಟನೇ ತಿಂಗಳಿಗೆ ಕಾಲಿಟ್ಟಿದೆ. ಈ ದಾಳಿಯಲ್ಲಿ 40,000 ಜನರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ.

Exit mobile version