Site icon Vistara News

Uniform Civil Code: ʻಹಿಂದೂಗಳಿಗೆ ಯಾಕಿಲ್ಲ?ʼ ಏಕರೂಪ ನಾಗರಿಕ ಸಂಹಿತೆ ವಿರುದ್ಧ ಓವೈಸಿ ಕಿಡಿ

Kanwar Yatra

ಹೊಸದಿಲ್ಲಿ: ಉತ್ತರಾಖಂಡದಲ್ಲಿ (Uttarakhand) ಏಕರೂಪ ನಾಗರಿಕ ಸಂಹಿತೆ (Uniform Civil Code) ವಿಧೇಯಕ ಮಂಡನೆ ಕುರಿತು ಪ್ರತಿಕ್ರಿಯಿಸಿರುವ ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) , ʼಇದು ಇತರ ಧರ್ಮಗಳ ಮೇಲೆ ಹೇರಲಾಗಿರುವ ಹಿಂದೂ ಕಾನೂನುʼ ಎಂದು ಕಿಡಿ ಕಾರಿದ್ದಾರೆ.

“ಉತ್ತರಾಖಂಡದ ಯುಸಿಸಿ ಮಸೂದೆಯು ಇತರ ಎಲ್ಲರಿಗೂ ಅನ್ವಯಿಸುವ ಹಿಂದೂ ಕೋಡ್ ಹೊರತು ಬೇರೇನೂ ಅಲ್ಲ. ಮೊದಲನೆಯದಾಗಿ, ಹಿಂದೂ ಅವಿಭಕ್ತ ಕುಟುಂಬವನ್ನು ಅದು ಮುಟ್ಟಿಲ್ಲ. ಏಕೆ? ಉತ್ತರಾಧಿಕಾರಕ್ಕಾಗಿ ಏಕರೂಪದ ಕಾನೂನು ಬಯಸಿದರೆ, ಹಿಂದೂಗಳನ್ನು ಅದರಿಂದ ಏಕೆ ದೂರವಿಡಲಾಗುತ್ತದೆ? ರಾಜ್ಯದ ಬಹುಪಾಲು ಜನರಿಗೆ ಕಾಯಿದೆ ಅನ್ವಯಿಸದಿದ್ದರೆ ಏನು ಪ್ರಯೋಜನ?ʼʼ ಎಂದು ಅವರು Xನಲ್ಲಿ ಬರೆದಿದ್ದಾರೆ.

ಉದ್ದೇಶಿತ ಕಾನೂನು ಎಲ್ಲ ಸಮುದಾಯಗಳಿಗೂ ಅನ್ವಯವಾಗುವ ‘ಹಿಂದೂ ಕೋಡ್’ ಹೊರತು ಬೇರೇನೂ ಅಲ್ಲ, ಹಿಂದೂಗಳು ಮತ್ತು ಬುಡಕಟ್ಟು ಜನಾಂಗದವರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಮಸೂದೆಯಲ್ಲಿ ಮುಸ್ಲಿಮರು ಬೇರೆ ಧರ್ಮ ಮತ್ತು ಸಂಸ್ಕೃತಿಯನ್ನು ಅನುಸರಿಸಲು ಕೋಡ್ ಒತ್ತಾಯಿಸುತ್ತದೆ, ಇದು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯಲ್ಲಿ ದ್ವಿಪತ್ನಿತ್ವ, ಹಲಾಲಾ, ಲಿವ್-ಇನ್ ಸಂಬಂಧಗಳ ನಿಯಮಗಳ ಬಗ್ಗೆ ಹೆಚ್ಚು ಪರಿಶೀಲಿಸಲಾಗಿದೆ. ಆದರೆ ಹಿಂದೂ ಅವಿಭಕ್ತ ಕುಟುಂಬವನ್ನು ಹೊರಗಿಡಲಾಗಿದೆ ಎಂಬ ಅಂಶದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಜತೆಗೆ ಇದರಲ್ಲಿ ಇನ್ನಿತರ ಸಾಂವಿಧಾನಿಕ ಮತ್ತು ಕಾನೂನು ಸಮಸ್ಯೆಗಳಿವೆ. ಬುಡಕಟ್ಟು ಸಮುದಾಯಗಳನ್ನು ಏಕೆ ಹೊರಗಿಡಲಾಗಿದೆ? ಒಂದು ಸಮುದಾಯವನ್ನ ಆಚೆಗಿಟ್ಟರೆ ಅದು ಏಕರೂಪ ಎನಿಸಲು ಸಾಧ್ಯವೇ” ಎಂದು ಅವರು ಕೇಳಿದ್ದಾರೆ.

“ಮೂಲಭೂತ ಹಕ್ಕುಗಳ ಪ್ರಶ್ನೆಯೂ ಇಲ್ಲಿದೆ. ನನ್ನ ಧರ್ಮ ಮತ್ತು ಸಂಸ್ಕೃತಿಯನ್ನು ಆಚರಿಸಲು ನನಗೆ ಹಕ್ಕಿದೆ. ಆದರೆ ಈ ಮಸೂದೆಯು ನನ್ನನ್ನು ಬೇರೆ ಧರ್ಮ ಮತ್ತು ಸಂಸ್ಕೃತಿಯನ್ನು ಅನುಸರಿಸಲು ಒತ್ತಾಯಿಸುತ್ತದೆ. ನಮ್ಮ ಧರ್ಮದಲ್ಲಿ, ಉತ್ತರಾಧಿಕಾರ ಮತ್ತು ವಿವಾಹವು ಧಾರ್ಮಿಕ ಆಚರಣೆಯ ಭಾಗವಾಗಿದೆ. ಸಂವಿಧಾನದ 25 ಮತ್ತು 29ನೇ ವಿಧಿಗಳ ಉಲ್ಲಂಘನೆಯಾಗಿದೆ. ಅದು ನನ್ನನ್ನು ವಿಭಿನ್ನ ಧಾರ್ಮಿಕ ವ್ಯವಸ್ಥೆಯನ್ನು ಅನುಸರಿಸಲು ಒತ್ತಾಯಿಸುತ್ತದೆ” ಎಂದಿದ್ದಾರೆ ಓವೈಸಿ.

“ಷರಿಯಾ ಕಾಯ್ದೆ, ಹಿಂದೂ ವಿವಾಹ ಕಾಯ್ದೆ, ಎಸ್‌ಎಂಎ, ಐಎಸ್‌ಎಗೆ ವಿರುದ್ಧವಾಗಿರುವ ಈ ವಿಧೇಯಕವನ್ನು ಸಂಸತ್ತಿನಲ್ಲಿ ಮಾತ್ರ ಜಾರಿಗೊಳಿಸಬಹುದು. ಸ್ವಯಂಪ್ರೇರಿತ UCC ಈಗಾಗಲೇ SMA, ISA, JJA, DVA ಇತ್ಯಾದಿ ರೂಪದಲ್ಲಿ ಅಸ್ತಿತ್ವದಲ್ಲಿದೆ. ಅಂಬೇಡ್ಕರ್ ಅವರೇ ಅದನ್ನು ಕಡ್ಡಾಯ ಎಂದು ಕರೆಯದಿರುವಾಗ ಅದನ್ನು ಏಕೆ ಕಡ್ಡಾಯಗೊಳಿಸಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನು ಮಂಡಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿರುದ್ಧವೂ ಓವೈಸಿ ವಾಗ್ದಾಳಿ ನಡೆಸಿದ್ದಾರೆ. “ಇದು ಈಗ ಯಾಕೆ ಬೇಕು ಎಂದು ಯಾರೂ ಕೇಳುತ್ತಿಲ್ಲ. ಉತ್ತರಾಖಂಡ ರಾಜ್ಯವು ಪ್ರವಾಹದಿಂದ 1000 ಕೋಟಿ ನಷ್ಟವನ್ನು ಎದುರಿಸಿದೆ. 17000 ಹೆಕ್ಟೇರ್ ಕೃಷಿ ಭೂಮಿ ಮುಳುಗಿದೆ. ₹2 ಕೋಟಿಗೂ ಹೆಚ್ಚು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಉತ್ತರಾಖಂಡದ ಆರ್ಥಿಕತೆ ಡೋಲಾಯಮಾನವಾಗಿದೆ. ಇಂತ ಹೊತ್ತಿನಲ್ಲಿ ಗಮನ ತಪ್ಪಿಸಲು ಮುಖ್ಯಮಂತ್ರಿ ಧಾಮಿ ಇದನ್ನು ಮಂಡಿಸಿದ್ದಾರೆ” ಎಂದು ಅವರು ಹೇಳಿದರು.

ಉತ್ತರಾಖಂಡ ಚುನಾವಣೆಯ 2022ರ ಪ್ರಣಾಳಿಕೆಯಲ್ಲಿ, ಭಾರತೀಯ ಜನತಾ ಪಕ್ಷವು ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದ ಭರವಸೆಯನ್ನು ನೀಡಿತ್ತು. ಪ್ರಸ್ತಾವಿತ ಕಾನೂನು ವಿವಾಹ ಸಂಬಂಧಗಳು, ಉತ್ತರಾಧಿಕಾರ ಇತ್ಯಾದಿಗಳನ್ನು ನಿಯಂತ್ರಿಸುವ ಧಾರ್ಮಿಕ ವೈಯಕ್ತಿಕ ಕಾನೂನುಗಳನ್ನು ಬದಲಿಸಲು ಪ್ರಯತ್ನಿಸುತ್ತದೆ.

ಇದನ್ನೂ ಓದಿ: Uniform Civil Code: ‌6 ತಿಂಗಳೊಳಗೆ ನೋಂದಾಯಿಸದಿದ್ದರೆ ಲಿವ್ ಇನ್‌ ಜೋಡಿ ಜೈಲಿಗೆ; ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ

Exit mobile version