Site icon Vistara News

Election Commission : ಶೀಘ್ರದಲ್ಲೇ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ; ಚುನಾವಣಾ ಆಯೋಗ

election commission

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಗರಿಷ್ಠ ಪ್ರಮಾಣದ ಮತದಾನದ ಆಗಿರುವುದರಿಂದ ಚೈತನ್ಯ ಪಡೆದಿರುವ ಚುನಾವಣಾ ಆಯೋಗವು (Election Commission) ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಪ್ರಕ್ರಿಯೆ ಆರಂಭಿಸಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮದೇ ಸರ್ಕಾರದ ವ್ಯಾಪ್ತಿಗೆ ಸೇರಲು ಅರ್ಹರು ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಲೋಕಸಭಾ ಚುನಾವಣೆ ಪ್ರಕ್ರಿಯೆಗಳು ಮತ್ತು ವಿಧಾನಸಭಾ ಚುನಾವಣೆ ಎಂದು ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಚುನಾವಣಾ ಆಯುಕ್ತ ಕುಮಾರ್, ಲೋಕಸಭಾ ಚುನಾವಣೆಯಲ್ಲಿ ಜನರ ಭಾಗವಹಿಸುವಿಕೆಯಿಂದ ಚುನಾವಣಾ ಆಯೋಗವು ತುಂಬಾ ಪ್ರೇರಣೆಗೊಂಡಿದೆ. ಅವರ ಉತ್ಸಾಹ ನಮಗೆ ಖುಷಿಯ ವಿಚಾರ. ಯುವಕರು, ಮಹಿಳೆಯರು ಸಂತೋಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ. ಪ್ರಜಾಪ್ರಭುತ್ವದ ಬೇರುಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಜನರು ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಜಮ್ಮು ಕಾಶ್ಮೀರದ ಮಂದಿ ತಮ್ಮ ಸರ್ಕಾರಕ್ಕೆ ಅರ್ಹರು. ನಾವು ಶೀಘ್ರದಲ್ಲೇ ಆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ. ಮತದಾನಕ್ಕಾಗಿ ತುಂಬಾ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.

ಮಾರ್ಚ್​ನಲ್ಲಿ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸುವಾಗ ಭದ್ರತಾ ಕಾರಣಗಳಿಂದಾಗಿ ವಿಧಾನಸಭಾ ಮತ್ತು ಸಂಸದೀಯ ಚುನಾವಣೆಗಳನ್ನು ಜಮ್ಮು ಕಾಶ್ಮೀರದಲ್ಲಿ ಏಕಕಾಲದಲ್ಲಿ ನಡೆಸುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ಕುಮಾರ್ ಅವರು ಬಹಿರಂಪಡಿಸಿದರು.

ಆಗಸ್ಟ್ 2019 ರಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ನಡೆಯುತ್ತಿರುವ ಮೊದಲ ಚುನವಾಣೆ ಇದಾಗಿದೆ. ಇಲ್ಲಿನ ಭಾಗವಹಿಸುವಿಕೆಯನ್ನು ನೋಡಿದ ಬಳಿಕ ಇದೀಗ ವಿಧಾನಸಭಾ ಚುನಾವಣೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election: 6ನೇ ಹಂತದಲ್ಲಿ 59% ಮತದಾನ ; ಬಂಗಾಳದಲ್ಲಿ ವೋಟಿಂಗ್‌ ಹೆಚ್ಚು, ಹಿಂಸೆಯ ಕಿಚ್ಚು

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಕ್ರಿಯೆಯು ಸಾಮಾನ್ಯವಾಗಿ ಒಂದು ತಿಂಗಳ ಕಾಲ ನಡೆಯುತ್ತದೆ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯ ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನಿಗದಿಪಡಿಸಿದ ಸ್ಥಾನಗಳನ್ನು ಹೊರತುಪಡಿಸಿ ವಿಧಾನಸಭಾ ಸ್ಥಾನಗಳ ಸಂಖ್ಯೆ 83 ರಿಂದ 90 ಕ್ಕೆ ಏರಿಕೆಯಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 30 ರೊಳಗೆ ವಿಧಾನಸಭಾ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್​ ಡಿಸೆಂಬರ್​ನಲ್ಲಿ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

Exit mobile version