Site icon Vistara News

BJP ಸರ್ಕಾರದ 40% ಜತೆಗೆ ಸಿದ್ದರಾಮಯ್ಯ ಸರ್ಕಾರದ 100% ಅವಧಿಯ ಚರ್ಚೆ: ಗುರುವಾರ ಜಂಗೀಕುಸ್ತಿ ನಿರೀಕ್ಷೆ

siddaramaiah and basavaraj bommai

ವಿಧಾನಸಭೆ: ರಾಜ್ಯ ಸರ್ಕಾರದ ವಿರುದ್ಧ ಈಗಾಗಲೆ ಬಹಿರಂಗವಾಗಿ ನಡೆಯುತ್ತಿರುವ 40% ಅಭಿಯಾನವನ್ನು ಸದನದೊಳಗೂ ನಡೆಸಲು ಕಾಂಗ್ರೆಸ್‌ ಮುಂದಾಗಿದೆ. ಆದರೆ ಇದೀಗ ಬಿಜೆಪಿ ಸರ್ಕಾರದ ಜತೆಗೆ ಸಿದ್ದರಾಮಯ್ಯ ಅವರ ಸರ್ಕಾರದ ಪೂರ್ಣ ಅವಧಿಯಲ್ಲಿ ನಡೆದಿರಬಹುದಾದ ಹಗರಣಗಳನ್ನೂ ಚರ್ಚೆಗೆ ಎತ್ತಿಕೊಳ್ಳಲು ನಿರ್ಧಾರ ಮಾಡಲಾಗಿದೆ.

ರಾಜ್ಯ ಗುತ್ತಿಗೆದಾರರ ಸಂಘದ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ 40% ಆರೋಪ ಹೊರಿಸಿತ್ತು. ಈ ಆರೋಪ ಅನೇಕ ತಿಂಗಳು ತಣ್ಣಗಾಗಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರತಿಪಕ್ಷ ಅಭಿಯಾನಗಳನ್ನು ನಡೆಸುತ್ತಿದೆ. ಈ ಆರೋಪವನ್ನು ಸದನದಲ್ಲಿ ಚರ್ಚೆ ಮಾಡಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಯಮ 60ರ ಅಡಿಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೇಳಿದರು.

ಇದನ್ನೂ ಓದಿ | 40% ಕಮಿಷನ್‌ | ಬಿಜೆಪಿ ಸರಕಾರದ ಮೇಲೆ 15,00,00,00,00,000 ರೂ. ಲೂಟಿ ಆರೋಪ, ಕಾಂಗ್ರೆಸ್‌ನಿಂದ ಲಂಚದ ಮೆನು!

ಈ ಕುರಿತು ಮಾತನಾಡಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವಿಚಾರ ನಿಯಮ 60ರಲ್ಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದೇನೆ ಎಂದರು. ಈ ಕುರಿತು ಮಾತನಾಡಿಡ ಸಿದ್ದರಾಮಯ್ಯ, ಅನೇಕ ದಿನಗಳಿಂದ ರಾಜ್ಯದಲ್ಲಿ 40% ವಿಚಾರ ಚರ್ಚೆ ಆಗುತ್ತಿದೆ. ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿಯವರು ಆಗಸ್ಟ್‌ 15ರ ಭಾಷಣದಲ್ಲಿ, ದೇಶದಿಂದ ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದ್ದಾರೆ. ಹೀಗಾಗಿ ಇದೊಂದು ಬರ್ನಿಂಗ್‌ ಇಶ್ಯೂ ಆಗಿದ್ದು, ಅವಕಾಶ ನೀಡಬೇಕು ಎಂದರು.

ಈ ವೇಳೆ ಕಾನೂನು ಉಲ್ಲೇಖಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಇಲ್ಲಿ ಪ್ರಸ್ತಾಪವಾಗಿರುವ ವಿಚಾರ ನಿರ್ದಿಷ್ಟವಾಗಿಲ್ಲ. ಈ ನಿಯಮದಲ್ಲಿ ಚರ್ಚೆಗೂ ಮುನ್ನ ಇದರ ಮಾಹಿತಿ ಸ್ಪೀಕರ್‌ ಅವರಿಗೆ ಇರಬೇಕು ಎಂದರು. ಹೋಗಲಿ 60ನ್ನು ಪರಿವರ್ತನೆ ಮಾಡಿ 69ರಲ್ಲಾದರೂ ಚರ್ಚೆಯಾಗಲಿ ಎಂದರು.

ಈ ಸಮಯದಲ್ಲಿ ಮಾತನಾಡಿದ ಸ್ಪೀಕರ್‌ ಕಾಗೇರಿ, ಈಗಾಗಲೆ ಶಾಸಕ ಪಿ. ರಾಜೀವ್‌ ಸೇರಿ ಅನೇಕರು ನಿಯಮ 69ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೇಳಿದ್ದಾರೆ. ರಾಜ್ಯದಲ್ಲಿ 2013ರಿಂದ 2018ರವರೆಗೆ ರಾಜ್ಯದಲ್ಲಿ ನಡೆದಿರುವ ವಿವಿಧ ನೇಮಕಾತಿ ಅಕ್ರಮಗಳ ಕುರಿತು ಚರ್ಚೆ ನಡೆಯಬೇಕು ಎಂದು ಕೋರಿದ್ದಾರೆ. ಹಾಗಾಗಿ ಈ ಎರಡೂ ವಿಚಾರಗಳನ್ನು ಒಟ್ಟಿಗೆ ಸೇರಿಸಿ ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು.

ಅಲ್ಲಿಗೆ, ಈಗಿನ ಸರ್ಕಾರದ ಮೇಲಿರುವ 40% ಭ್ರಷ್ಟಾಚಾರದ ಜತೆಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯ ನೇಮಕಾತಿಗಳನ್ನೂ ಒಟ್ಟಿಗೆ ಚರ್ಚಿಸಲು ಸಮ್ಮತಿ ನೀಡಿದಂತಾಗಿದೆ. ಗುರುವಾರ ಈ ಚರ್ಚೆ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುವ ಎಲ್ಲ ಸಾಧ್ಯತೆಯಿದೆ.

ಇದನ್ನೂ ಓದಿ | 40% ಭ್ರಷ್ಟಾಚಾರ ಆರೋಪ | ಕೆಂಪಣ್ಣ & 17 ಗುತ್ತಿಗೆದಾರರ ವಿರುದ್ಧ 2 ಮಾನನಷ್ಟ ಮೊಕದ್ದಮೆ

Exit mobile version