Site icon Vistara News

Karnataka MP’s : 23 ಸಂಸದರ ಆಸ್ತಿ ದೊಡ್ಡ ಮಟ್ಟಿಗೆ ಏರಿಕೆ: ಕರ್ನಾಟಕದವರು ಎಷ್ಟಿದ್ದಾರೆ?

Sadananda Gowda

ಬೆಂಗಳೂರು : ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವೇಳೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಸಿಕ್ಕಾಪಟ್ಟೆ ಆಸ್ತಿ ಮಾಡಿಕೊಂಡ ಸಂಸದರ ಪಟ್ಟಿ ಬಹಿರಂಗವಾಗಿದೆ. ಅದರಲ್ಲಿ 2004ರಿಂದ ಪುನರಾಯ್ಕೆಗೊಳ್ಳುತ್ತಿರುವ 23 ಸಂಸದರ (Karnataka MP’s) ಒಟ್ಟಾರೆ ಆಸ್ತಿ ಮೌಲ್ಯವು ರೂ. 35.18 ಕೋಟಿಯಿಂದ ರೂ. 402.79 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿಯ ಪ್ರಕಾರ ಕರ್ನಾಟಕ ಸಂಸದರ ಆಸ್ತಿಯ ಪ್ರಮಾಣವೂ ಹಿಗ್ಗಿದೆ. ವಿಜಯಪುರ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಯವರ ಆಸ್ತಿ ಮೌಲ್ಯ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ. 9,098ರಷ್ಟಾಗಿದೆ. 2004ರಲ್ಲಿ ರೂ. 54.8 ಲಕ್ಷದಷ್ಟಿದ್ದ ಇವರ ಆಸ್ತಿ ಮೌಲ್ಯವು 2019ರ ವೇಳೆಗೆ ರೂ. 50.41 ಕೋಟಿ ಗಳಿಸಿದೆ.

ವರದಿಯ ಪ್ರಕಾರ ಕರ್ನಾಟಕದ ಒಟ್ಟು ಆರು ಸಂಸದರ ಆಸ್ತಿ ಏರಿಕೆಯಾಗಿದೆ.

ರಮೇಶ್ ಜಿಗಜಿಣಗಿ(ವಿಜಯಪುರ)- 54.8 ಲಕ್ಷದಷ್ಟಿದ್ದ ಆಸ್ತಿ ಮೌಲ್ಯ 50.41 ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ ಡಿ.ವಿ.ಸದಾನಂದ ಗೌಡ (ಬೆಂಗಳೂರು ಉತ್ತರ) ಆಸ್ತಿ ಮೌಲ್ಯವು ರೂ. 46.39 ಲಕ್ಷದಿಂದ ರೂ. 20.93 ಕೋಟಿಗೆ ಏರಿಕೆಯಾಗಿದೆ. ಸಂಸದ ಜಿ.ಎಂ.ಸಿದ್ದೇಶ್ವರ್ (ದಾವಣಗೆರೆ) ಆಸ್ತಿ ಮೌಲ್ಯವು ರೂ. 5.02 ಕೋಟಿಯಿಂದ ರೂ. 38.01 ಕೋಟಿಗೆ ಏರಿಕೆಯಾಗಿದೆ. ಕೇಂದ್ರ ಸಚಿವ ಪಹ್ಲಾದ್ ಜೋಶಿ (ಧಾರವಾಡ) ಆಸ್ತಿ ಮೌಲ್ಯ ರೂ. 77.60 ಲಕ್ಷದಿಂದ ರೂ. 11.13 ಕೋಟಿಗೆ ಏರಿಕೆಯಾಗಿದೆ.

ಅನಂತ್‌ ಕುಮಾರ್ ಹೆಗಡೆ (ಉತ್ತರ ಕನ್ನಡ) ಆಸ್ತಿ ಮೌಲ್ಯವು ರೂ. 12.06 ಲಕ್ಷದಿಂದ ರೂ. 8.47 ಕೋಟಿಗೆ ಏರಿಕೆಯಾಗಿದೆ. ಪಿ.ಸಿ. ಗದ್ದಿಗೌಡರ್ (ಬಾಗಲಕೋಟೆ) ಆಸ್ತಿ ಮೌಲ್ಯವು ರೂ. 53.75 ಲಕ್ಷದಿಂದ ರೂ. 4.39 ಕೋಟಿಗೆ ಏರಿಕೆಯಾಗಿದೆ.

2004ರಿಂದ ಪುನರಾಯ್ಕೆಗೊಂಡಿರುವ 23 ಸಂಸದರ ಪೈಕಿ 17 ಸಂಸದರು ಬಿಜೆಪಿಗೆ ಸೇರಿದ್ದರೆ, ಮೂವರು ಸಂಸದರು ಕಾಂಗ್ರೆಸ್ ಪಕ್ಷಕ್ಕೆ, ಎಐಎಂಐಎಂ, ಶಿವಸೇನೆ ಹಾಗೂ ಬಿಜೆಡಿಗೆ ಸೇರಿದ ತಲಾ ಒಬ್ಬ ಸಂಸದರಿದ್ದಾರೆ. ಈ ಎಲ್ಲಾ ಸಂಸದರ ಸರಾಸರಿ ಆಸ್ತಿ ಮೌಲ್ಯವು 2004ರಲ್ಲಿ 1.52 ಕೋಟಿಯಾಗಿದ್ದರೆ, 2009ರಲ್ಲಿ 3.46 ಕೋಟಿಗೆ, 2014ರಲ್ಲಿ 9.85 ಕೋಟಿಗೆ ಹಾಗೂ 2019ರಲ್ಲಿ ರೂ. 17.51 ಕೋಟಿಗೆ ಏರಿಕೆಯಾಗಿದೆ.

ಇದನ್ನೂ ಓದಿ: Paytm Crisis: ಪೇಟಿಎಂನ ಥರ್ಡ್ ಪಾರ್ಟಿ ಆ್ಯಪ್ ಮನವಿಯನ್ನು ಎನ್‌ಪಿಸಿಐ ಪರಿಶೀಲಿಸಲಿ ಎಂದ ಆರ್‌ಬಿಐ

ಸಂಸದರ ಸರಾಸರಿ ಆಸ್ತಿ ಮೌಲ್ಯದ ಏರಿಕೆ ರೂ. 15.98 ಕೋಟಿ ಅಥವಾ ಶೇ. 1,045ರಷ್ಟಾಗಿದೆ ಎಂಬ ವಿಷಯವನ್ನು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ. ರಾಹುಲ್ ಗಾಂಧಿ ಆಸ್ತಿ ಏರಿಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯ 2004 ರಲ್ಲಿ ರೂ. 55.38 ಲಕ್ಷದಿಂದ 2009 ರಲ್ಲಿ ರೂ. 2.32 ಕೋಟಿಗೆ, 2014 ರಲ್ಲಿ ರೂ. 9.4 ಕೋಟಿ ಮತ್ತು 2019ರಲ್ಲಿ ರೂ. 15.88 ಕೋಟಿಗೆ ಏರಿಕೆಯಾಗಿದೆ.

ಕಳೆದ 15 ವರ್ಷಗಳಲ್ಲಿ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯದಲ್ಲಿ ಶೇ. 2,769ರಷ್ಟು ಏರಿಕೆ ಕಂಡಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆಸ್ತಿ ಮೌಲ್ಯ ರೂ. 85.68 ಲಕ್ಷದಿಂದ ರೂ.11.82 ಕೋಟಿಗೆ (ಶೇ.1,280ರಷ್ಟು) ಏರಿಕೆ ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Exit mobile version