Site icon Vistara News

Award Ceremony: ಸಾಧಕರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ಸೇರಿ ವಿವಿಧ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ

Award ceremony

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ, 2021 ರಿಂದ 2024ನೇ ಸಾಲಿನ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳನ್ನು ಸಿಎಂ ಸಿದ್ದರಾಮಯ್ಯ ಅವರು ಪ್ರದಾನ ಮಾಡಿ ಗೌರವಿಸಿದರು.

2020-21 ರಿಂದ 2023-24ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ, ಪಂಪ ಪ್ರಶಸ್ತಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಅಕ್ಕಮಹಾದೇವಿ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಶ್ರೀ ನಿಜಗುಣ ಪುರಂದರ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ, ಶಾಂತಲಾನಾಟ್ಯ ರಾಣಿ ಪ್ರಶಸ್ತಿ, ಸಂತ ಶಿಶುನಾಳ ಷರೀಫ ಪ್ರಶಸ್ತಿ, ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಬಿ.ವಿ.ಕಾರಂತ ಪ್ರಶಸ್ತಿ, ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ, ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಪುರಸ್ಕೃತರಾದ ಒಟ್ಟು 75 ಮಂದಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿ ನಿರ್ಣಯವೇ ಅಂತಿಮ: ಸಿದ್ದರಾಮಯ್ಯ

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಪ್ರಶಸ್ತಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿ ನಿರ್ಣಯವೇ ಅಂತಿಮ. ನಾವು ಮೂಗು ತೂರಿಸುವುದಿಲ್ಲ. ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಉತ್ತೇಜನ ನೀಡುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿ. ನಮ್ಮ ಸರ್ಕಾರ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ | Sunday Read: ಹೊಸ ಪುಸ್ತಕ: ಕೆ.ಎನ್.‌ ಗಣೇಶಯ್ಯನವರ ʼಹೊಕ್ಕಳ ಮೆದುಳುʼ ಕಥಾಂಬರಿ

ಪ್ರಶಸ್ತಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿ ನಿರ್ಣಯವೇ ಅಂತಿಮ. ನಾವು ಮೂಗು ತೂರಿಸುವುದಿಲ್ಲ. ಈ ವಿಚಾರದಲ್ಲಿ ನಾನು ಬಹಳ ನಿಷ್ಠುರವಾಗಿ ವರ್ತಿಸುತ್ತೇನೆ. ನನ್ನ ಮೇಲೆ ಒತ್ತಡ ಹಾಕುವ ಎಲ್ಲರಿಗೂ ನಾನು ಅಷ್ಟೆ ನಿಷ್ಠುರವಾಗಿ ಹೇಳಿಬಿಡುತ್ತೇನೆ ಎಂದರು.

ದೇವಸ್ಥಾನಕ್ಕೆ ಇಷ್ಟದ ಉಡುಪು ಧರಿಸಿ ಹೋಗಬಹುದು

ನಮ್ಮ ಸರ್ಕಾರ ಜನರ ನಂಬಿಕೆಗಳನ್ನು ಗೌರವಿಸುತ್ತದೆ. ಬಸವಣ್ಣನವರು ಮೌಢ್ಯ ಮುಕ್ತ, ಜಾತಿ ಮುಕ್ತ, ವರ್ಗ ಮುಕ್ತ ಸಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಅದಕ್ಕೆ ದೇಹವೇ ದೇಗುಲ ಎಂದು ವಚನಕಾರರು ಪ್ರತಿಪಾದಿಸಿದ್ದಾರೆ. ಆದರೆ ಕೆಲವರು ದೇವಸ್ಥಾನದಲ್ಲಿ ಮಾತ್ರ ದೇವರಿದ್ದಾನೆ ಎಂಬುವ ನಂಬಿಕೆಯಿಂದ ಹೋಗುತ್ತಾರೆ. ಅವರ ನಂಬಿಕೆಯನ್ನೂ ಗೌರವಿಸುತ್ತೇವೆ. ದೇವಸ್ಥಾನಕ್ಕೆ ಹೋಗುವವರು ಅವರ ಇಷ್ಟದ ಉಡುಪು ಧರಿಸಿ ಹೋಗಬಹುದು. ಈ ವಿಚಾರದಲ್ಲೂ ನಮ್ಮದೇನೂ ಅಭ್ಯಂತರ ಇಲ್ಲ ಎಂದರು.

ದೇವರು, ಧರ್ಮದ ಬಗ್ಗೆ ಯಾರ ನಂಬಿಕೆ ಏನೇ ಇದ್ದರೂ ಎಲ್ಲರೂ ಮೊದಲು ಮನುಷ್ಯರಾಗಬೇಕು. ಮನುಷ್ಯ ಮನುಷ್ಯರನ್ನು ದ್ವೇಷಿಸಬಾರದು. ಇದೇ ಅತ್ಯುನ್ನತ ಮೌಲ್ಯ. ರವೀಂದ್ರ ಕಲಾ ಕ್ಷೇತ್ರ ಮತ್ತು ಸಂಸ ರಂಗ ಮಂದಿರ ನವೀಕರಣಕ್ಕೆ ಇಷ್ಟೆ ಖರ್ಚು ಮಾಡಬೇಕು ಎನ್ನುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. 24 ಕೋಟಿ ಖರ್ಚು ಮಾಡಿ ನವೀಕರಣ ಮಾಡುತ್ತಿದೆ ಎನ್ನುವುದು ಸರಿಯಲ್ಲ. ಮೊತ್ತದ ಬಗ್ಗೆ ಯಾವ ತೀರ್ಮಾನವೂ ಆಗಿಲ್ಲ ಎಂದು ಪುನರುಚ್ಚರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಶರಣ ಶ್ರೇಷ್ಠರಾದ ಬಸವಣ್ಣನವರನ್ನು ಕನ್ನಡ ನಾಡಿನ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸಿದರು.

ಎಲ್ಲ ಪ್ರಶಸ್ತಿಗಳ ಪಟ್ಟಿ ಹೀಗಿದೆ

ಬಸವ ಪುರಸ್ಕಾರ: ಆನಂದ್‌ ತೇಲ್ತುಂಬಡೆ(2022-23), ಡಾ.ಎ.ಜಿ.ಮಹದೇವಪ್ಪ ಧಾರವಾಡ( 2023-24)
ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿ: ಜಿನದತ್ತ ದೇಸಾಯಿ(2022-23), ಗುಜರಾತ್‌ನ ಗಾಂಧಿ (2023-24)
ಟಿ ಚೌಡಯ್ಯ ಪ್ರಶಸ್ತಿ: ನಿತ್ಯಾನಂದ ಹಳದಿಪುರ ಕೊಳಲು (2022-23), ಶ್ರೀರಾಮುಲು ನಾದಸ್ವರ ಕೋಲಾರ(2023-24)
ಗಾನಯೋಗಿ ಪಂಡಿತ್‌ ಪಂಚಾಕ್ಷರಿ ಗವಾಯಿ ಪ್ರಶಸ್ತಿ: ಪಂಡಿತ್‌ ಸೋಮನಾಥ ಮರಡೂರ ಧಾರವಾಡ (2022-23), ಡಾ.ನಾಗಮಣಿ ಶ್ರೀನಾಥ್‌ ಮೈಸೂರು(2023-24)
(ಈ ಪ್ರಶಸ್ತಿ ಆಯ್ಕೆಗೆ ಗೊ.ರು.ಚನ್ನಬಸಪ್ಪ ಅಧ್ಯಕ್ಷರಾಗಿದ್ದರು. ಪ್ರಶಸ್ತಿ 10 ಲಕ್ಷ ರೂ. ನಗದು ಒಳಗೊಂಡಿದೆ.)

ಪಂಪ ಪ್ರಶಸ್ತಿ: ನಾ.ಡಿಸೋಜಾ, ಸಾಗರ(2023-24)
ಪ್ರೊ. ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಮಹಾರಾಷ್ಟ್ರದ ಡಾ. ಕೆ.ವಿಶ್ವನಾಥ್ ಕಾರ್ನಾಡ (2022–23), ಬೆಳಗಾವಿಯ ಚಂದ್ರಕಾಂತ ಪೋಕಳೆ (2023–24)
ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಹಾಸನದ ಬಾನು ಮುಷ್ತಾಕ್ (2022–23), ರಾಯಚೂರಿನ ಎಚ್‌.ಎಸ್.ಮುಕ್ತಾಯಕ್ಕ (2023–24)
ಬಿ.ವಿ.ಕಾರಂತ ಪ್ರಶಸ್ತಿ: ಬೆಂಗಳೂರಿನ ಸಿ.ಬಸವಲಿಂಗಯ್ಯ (2022–23), ಮಂಗಳೂರಿನ ಸದಾನಂದ ಸುವರ್ಣ (2023–24)
ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ: ತುಮಕೂರಿನ ಚನ್ನಬಸಯ್ಯ ಗುಬ್ಬಿ (2022–23) , ವಿಜಯಪುರದ ಎಲ್.ಬಿ.ಶೇಖ್ ಮಾಸ್ತರ (2023–24)
ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ: ಡಾ. ಮೊಗಳ್ಳಿ ಗಣೇಶ್ (2021–22), ಉತ್ತಮ ಕಾಂಬ್ಳೆ (2022–23), ದಾವಣಗೆರೆಯ ಬಿ.ಟಿ.ಜಾಹ್ನವಿ (2023–24)
(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಡಾ. ಬರಗೂರು ರಾಮಚಂದ್ರಪ್ಪ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.)

ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದ ಪ್ರಶಸ್ತಿ

ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: ಬೆಂಗಳೂರಿನ ಕೆ. ಮರುಳಸಿದ್ದಪ್ಪ (2020–21), ಬೆಳಗಾವಿಯ ಹಸನ್‌ ನಯೀಂ ಸುರಕೋಡ (2021–22), ಕೋಲಾರದ ಕೆ. ರಾಮಯ್ಯ (2022–23), ಬಳ್ಳಾರಿಯ ವೀರಸಂಗಯ್ಯ (2023–24)
ಅಕ್ಕಮಹಾದೇವಿ ಪ್ರಶಸ್ತಿ: ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್ (2020–21), ಮಂಡ್ಯದ ಡಾ. ಆರ್.ಸುನಂದಮ್ಮ (2021–22), ಕಲಬುರಗಿಯ ಮೀನಾಕ್ಷಿ ಬಾಳಿ (2022–23), ಬೆಂಗಳೂರಿನ ಡಾ. ವಸುಂಧರಾ ಭೂಪತಿ (2023–24)
ಕನಕಶ್ರೀ ಪ್ರಶಸ್ತಿ: ಹಾವೇರಿಯ ಡಾ. ಲಿಂಗದಹಳ್ಳಿ ಹಾಲಪ್ಪ (2021–22), ಮಂಗಳೂರಿನ ಡಾ. ಬಿ.ಶಿವರಾಮ ಶೆಟ್ಟಿ (2022–23)
(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಬಿ.ಟಿ.ಲಲಿತಾ ನಾಯಕ್ ಅಧ್ಯಕ್ಷರು)

ಕಲಾ ಪ್ರಶಸ್ತಿ ವಿಭಾಗದ ಪ್ರಶಸ್ತಿಗೆ ಆಯ್ಕೆಯಾದವರು

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಮೈಸೂರಿನ ಜಿ.ಎಲ್.ಎನ್.ಸಿಂಹ (2022–23), ಕಲಬುರಗಿಯ ಬಸವರಾಜ್ ಎಲ್. ಜಾನೆ (2023–24)
ಜಾನಪದಶ್ರೀ ಪ್ರಶಸ್ತಿ(ವಾದನ): ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ (2022–23), ಚಿಕ್ಕಮಗಳೂರಿನ ಜಿ.ಪಿ. ಜಗದೀಶ್ (2023–24)
ಜಾನಪದ ಶ್ರೀ ಪ್ರಶಸ್ತಿ(ಗಾಯನ): ಬೀದರ್‌ನ ಕಲ್ಲಪ್ಪ ಮಿರ್ಜಾಪುರ (2022–23), ಚಿತ್ರದುರ್ಗದ ಹಲಗೆ ದುರ್ಗಮ್ಮ (2023–24)
(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಡಾ. ವಿ.ಟಿ.ಕಾಳೆ ಆಯ್ಕೆ ಸಮಿತಿ ಅಧ್ಯಕ್ಷ)

ಸಂಗೀತ, ನೃತ್ಯ ಪ್ರಶಸ್ತಿ ವಿಭಾಗದ ಪುರಸ್ಕೃತರು

ನಿಜಗುಣ–ಪುರಂದರ ಪ್ರಶಸ್ತಿ: ಮೈಸೂರಿನ ಎಂ.ಕೆ.ಸರಸ್ವತಿ (2022–23), ಧಾರವಾಡದ ಅಕ್ಕಮಹಾದೇವಿ ಮಠ (2023–24)
ಕುಮಾರವ್ಯಾಸ ಪ್ರಶಸ್ತಿ: ಗದುಗಿನ ಸಿದ್ದೇಶ್ವರ ಶಾಸ್ತ್ರಿ (2022–23), ಮೈಸೂರಿನ ಕೃ.ರಾಮಚಂದ್ರ (2023–24)
ಶಾಂತಲಾ ನಾಟ್ಯ ಪ್ರಶಸ್ತಿ: ಬೆಂಗಳೂರಿನ ಚಿತ್ರಾ ವೇಣುಗೋಪಾಲ್ (2022–23), ಬೆಂಗಳೂರಿನ ರೇವತಿ ನರಸಿಂಹನ್‌ (2023–24)
ಸಂತ ಶಿಶುನಾಳ ಷರೀಫ ಪ್ರಶಸ್ತಿ: ಬೆಂಗಳೂರಿನ ಕಸ್ತೂರಿ ಶಂಕರ್‌ (2022–23), ಶಿವಮೊಗ್ಗದ ಎನ್.ಬಿ.ಶಿವಲಿಂಗಪ್ಪ (2023–24)
(ಈ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು ಒಳಗೊಂಡಿದೆ. ಡಾ. ನರಸಿಂಹಲು ವಡವಾಡಿ ಆಯ್ಕೆ ಸಮಿತಿ ಅಧ್ಯಕ್ಷ.)

ಇದನ್ನೂ ಓದಿ : Academy Awards : ಇದು ನಿಮ್ಮ ಮೊದಲ ಕೃತಿಯೇ?; ಹಾಗಿದ್ರೆ ಸಾಹಿತ್ಯ ಅಕಾಡೆಮಿ ಬಹುಮಾನಕ್ಕಾಗಿ ಅರ್ಜಿ ಸಲ್ಲಿಸಿ

Exit mobile version