Site icon Vistara News

Ayodhya mosque: ಅಯೋಧ್ಯೆ ಮಸೀದಿಗೆ ಚಿನ್ನದಲ್ಲಿ ಕುರಾನ್‌ ಶ್ಲೋಕ ಬರೆದ ತಳಪಾಯದ ಇಟ್ಟಿಗೆ ಸಿದ್ಧ

ayodhya mosque special brick

ಮುಂಬೈ: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾನ (Ram Lalla) ವಿಗ್ರಹದ ಪ್ರಾಣ-ಪ್ರತಿಷ್ಠೆ ನೆರವೇರಿದ ಕೆಲ ದಿನಗಳಲ್ಲಿಯೇ, ಇಲ್ಲಿ ಸ್ಥಾಪನೆಗೆ ಉದ್ದೇಶಿಸಲಾಗಿರುವ ಬೃಹತ್‌ ಮಸೀದಿಗೆ (Ayodhya Mosque) ಅಡಿಪಾಯದ ವಿಶೇಷ ಇಟ್ಟಿಗೆ (Special Brick) ಸಿದ್ಧವಾಗಿದೆ.

ಅಯೋಧ್ಯೆಯ ಧನ್ನಿಪುರದಲ್ಲಿ, ರಾಮ ಮಂದಿರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿ ರಚನೆಯಾಗಲಿರುವ ಮಸೀದಿಯನ್ನು ಪ್ರವಾದಿಯವರ ಹೆಸರಿನಲ್ಲಿ ʼಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿʼ ಎಂದು ಕರೆಯಲಾಗುತ್ತದೆ.

ಮುಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮತ್ತು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ಟ್ರಸ್ಟಿ, ಮುಂಬೈ ಮೂಲದ ಹಾಜಿ ಅರ್ಫಾತ್ ಶೇಖ್ ಅವರು ಈ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಮಸೀದಿ ಸಂಕೀರ್ಣ ಯೋಜನೆಯನ್ನು ಕಾರ್ಯಗತಗೊಳಿಸಲು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ (UPSCWB) ನಿಂದ IICF ಅನ್ನು ರಚಿಸಲಾಗಿದೆ.

ಮುಂಬೈನ ಇಟ್ಟಿಗೆ ಗೂಡುಗಳಲ್ಲಿ ತಯಾರಿಸಿದ ಅಡಿಪಾಯದ ಇಟ್ಟಿಗೆಯನ್ನು 2023ರ ಅಕ್ಟೋಬರ್ 12ರಂದು ಅಖಿಲ ಭಾರತ ರಬ್ತಾ-ಎ-ಮಸ್ಜಿದ್‌ನ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು ಎಂದು ತಿಳಿದುಬಂದಿದೆ. ಅಲ್ಲಿ ಇಸ್ಲಾಮಿಕ್ ವಿದ್ವಾಂಸರು, ಧರ್ಮಗುರುಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.

ಏಪ್ರಿಲ್‌ನಲ್ಲಿ ರಂಜಾನ್ ಈದ್ ನಂತರ ಇಟ್ಟಿಗೆಯನ್ನು ಅಯೋಧ್ಯೆಗೆ ಕೊಂಡೊಯ್ಯುವ ನಿರೀಕ್ಷೆಯಿದೆ. ಈ ಇಟ್ಟಿಗೆಯಲ್ಲಿ ಪವಿತ್ರ ಕುರಾನ್‌ನ ಕೆಲವು ಪದ್ಯಗಳನ್ನು ಚಿನ್ನದಲ್ಲಿ ಬರೆಯಲಾಗಿದೆ. ಇಟ್ಟಿಗೆಯ ನಾಲ್ಕು ಬದಿಗಳಲ್ಲಿ ʻಪ್ರವಾದಿʼಯವರ ಹೆಸರನ್ನು ಚಿನ್ನದಲ್ಲಿ ಬರೆಯಲಾಗಿದೆ. ಮಕ್ಕಾ ಶರೀಫ್ ಮತ್ತು ಮದೀನಾ ಶರೀಫ್‌ನಲ್ಲಿ ಪವಿತ್ರ ನೀರಿನಿಂದ ತೊಳೆದು, ಸುಗಂಧ ದ್ರವ್ಯದೊಂದಿಗೆ ಸ್ನಾನ ಮತ್ತು ಪ್ರಾರ್ಥನೆಯ ನಂತರ ಪವಿತ್ರ ಇಟ್ಟಿಗೆಯನ್ನು ತರಲಾಗುತ್ತದೆ.

ಅರ್ಫಾತ್ ಶೇಖ್‌ ಅವರು ಇಟ್ಟಿಗೆಯನ್ನು ಮೆಕ್ಕಾಗೆ ತೆಗೆದುಕೊಂಡು ಹೋಗಿ, ಝಮ್ ಝಮ್ (ಪವಿತ್ರ) ನೀರಿನಿಂದ ʼಗುಸ್ಲ್’ (ತೊಳೆದು) ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ಅದನ್ನು ಮದೀನಾ ಶರೀಫ್‌ಗೆ ಕೊಂಡೊಯ್ದು ಮತ್ತೊಂದು ‘ಗುಸ್ಲ್’ಗೆ ನೀಡಿ ಪ್ರಾರ್ಥನೆ ಸಲ್ಲಿಸಲಾಗಿದೆ.

ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ನಗರವಾಗಿದೆ. ಇದು ಪ್ರವಾದಿ ಮುಹಮ್ಮದ್ ಅವರ ಜನ್ಮಸ್ಥಳ ಎಂಬ ನಂಬಿಕೆಯಿದೆ. ಸೌದಿ ಅರೇಬಿಯಾದ ಮದೀನಾ ಕೂಡ ವಿಶಾಲವಾದ ಅಲ್-ಮಸ್ಜಿದ್ ಆನ್-ನಬವಿ (ಪ್ರವಾದಿಯ ಮಸೀದಿ) ಅನ್ನು ಹೊಂದಿದೆ ಮತ್ತು ಪ್ರಮುಖ ಇಸ್ಲಾಮಿಕ್ ಯಾತ್ರಾ ಸ್ಥಳವಾಗಿದೆ.

ಇಸ್ಲಾಂ ಧರ್ಮದ ಐದು ತತ್ವಗಳಾದ ಶಹದಾ (ನಂಬಿಕೆಯ ಘೋಷಣೆ), ಸಲಾಹ್ (ಪ್ರಾರ್ಥನೆ ಅಥವಾ ನಮಾಜ್), ಸವ್ಮ್ (ಉಪವಾಸ ಅಥವಾ ರೋಜಾ), ಝಕಾತ್ (ದಾನ) ಮತ್ತು ಹಜ್ ಅನ್ನು ಹೈಲೈಟ್ ಮಾಡುವ ಐದು ಮಿನಾರ್‌ಗಳನ್ನು ಮಸೀದಿಯು ಹೊಂದಿರಲಿದೆ. 21 ಅಡಿ ಉದ್ದಗಲ ಇರುವ ಈ ಮಸೀದಿಯಲ್ಲಿ ವಿಶ್ವದ ಅತಿ ದೊಡ್ಡ ಕುರಾನ್ ಕೂಡ ಇರಲಿದೆ. ಈ ಕುರಾನ್ ತೆರೆದಾಗ 18.18 ಅಡಿ ಇರಲಿದೆ.

ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೇಸರಿ ಬಣ್ಣದ ಕುರಾನ್ ಅನ್ನು ಮಸೀದಿಯಲ್ಲಿ ಇರಿಸಲಾಗುವುದು. ಈ ಮಸೀದಿಯು ವಾಸ್ತುಶಿಲ್ಪ ಅದ್ಭುತವಾಗಿದ್ದು, ಕೋಮು ಸೌಹಾರ್ದತೆಯ ಸಂಕೇತವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ 5 ಎಕರೆ ಜಾಗದಲ್ಲಿ ಮಸೀದಿ ನಿರ್ಮಾಣ ಈದ್ ನಂತರ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದೆ.

ಫೆಬ್ರವರಿ 29ರಂದು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇಟ್ಟಿಗೆಯನ್ನು ಪ್ರದರ್ಶಿಸಲಾಗುತ್ತಿದ್ದು, ನಂತರ ಅದನ್ನು ಅಜ್ಮೀರ್ ಷರೀಫ್‌ಗೆ ತರಲಾಗುತ್ತದೆ. ಈದ್ ನಂತರ ಏಪ್ರಿಲ್‌ನಲ್ಲಿ ಅಯೋಧ್ಯೆಗೆ ಕಳುಹಿಸಲಾಗುವುದು. 5 ದಿನಗಳ ರಸ್ತೆ ಪ್ರಯಾಣದಲ್ಲಿ ಪ್ರತಿ ಸ್ಥಳದಲ್ಲಿಯೂ ಪ್ರಾರ್ಥನೆ ಇರುತ್ತದೆ. ಅದು ಅಯೋಧ್ಯೆಗೆ ಬಂದ ನಂತರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ವೇಗ ಸಿಗಲಿದೆ.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರ ಸಮೀಪ ಆಹಾರ ಮಳಿಗೆ ತೆರೆಯಲು ಅವಕಾಶ; ಆದರೆ ಈ ಷರತ್ತು ಪಾಲಿಸಬೇಕು

Exit mobile version