Site icon Vistara News

Ayodhya Ramanavami: ರಾಮನವಮಿ ವೇಳೆ ಅಯೋಧ್ಯೆ ಸುರಕ್ಷತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

Ayodhya Ramanavami

ಬೆಂಗಳೂರು: ದೇಶದಾದ್ಯಂತ ಏಪ್ರಿಲ್ 17ರಂದು ರಾಮನವಮಿಯನ್ನು ಆಚರಿಸಲಾಗುತ್ತಿದೆ. ಅಯೋಧ್ಯೆ (Ayodhya Ramanavami) ರಾಮಮಂದಿರಲ್ಲಿ ರಾಮನ ಪಟ್ಟಾಭಿಷೇಕದ ನಂತರ ನಡೆಯುವ ಮೊದಲ ರಾಮನವಮಿ ಇದಾಗಿರುವ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಆಗಮಿಸುವ ನಿರೀಕ್ಷೆಯಿದೆ. ಹಾಗಾಗಿ ಈ ವೇಳೆ ಯಾವುದೇ ಸಮಸ್ಯೆಯಾಗದಂತೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.

560 ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ

ಭದ್ರತೆಯ ಸಲುವಾಗಿ ಅಯೋಧ್ಯೆಯ ಸುತ್ತಮುತ್ತ ಸುಮಾರು 560 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭದ್ರತೆಯ ಮೇಲ್ವಿಚಾರಣೆಗಾಗಿ 11 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 26 ಪೊಲೀಸ್ ಉಪ ಅಧೀಕ್ಷಕರು, 150 ಇನ್ಸ್ ಪೆಕ್ಟರ್‌ಗಳು, 400 ಸಬ್ ಇನ್ಸ್ ಪೆಕ್ಟರ್‌ಗಳು, 25 ಮಹಿಳಾ ಸಬ್ ಇನ್ಸ್‌ಪೆಕ್ಟರ್‌ಗಳು, 1305 ಮುಖ್ಯ ಕಾನ್ ಸ್ಟೆಬಲ್‌ಗಳು , 270 ಮಹಿಳಾ ಮುಖ್ಯ ಕಾನ್‌ಸ್ಟೆಬಲ್‌ಗಳು ಮತ್ತು 15 ಕಂಪನಿ ಪಿಎಸಿಗಳನ್ನು ನಿಯೋಜಿಸಲಾಗುವುದು ಎಂಬುದಾಗಿ ತಿಳಿದು ಬಂದಿದೆ.

ಹಾಗೆಯೇ ಹೆಚ್ಚುವರಿಯಾಗಿ ಪ್ರವಾಹ ಪರಿಹಾರಕ್ಕಾಗಿ ಪಿಎಸಿಯ ಎರಡು ಕಂಪನಿ ಘಟಕಗಳು, ಎಸ್‌ಡಿಆರ್‌ಎಫ್‌ನ ಒಂದು ತಂಡ ಮತ್ತು ಎಟಿಎಸ್‌ನ ಒಂದು ತಂಡಕ್ಕೆ ಕರ್ತವ್ಯವನ್ನು ನಿಯೋಜಿಸಲಾಗಿದೆ. ಪ್ರತಿ ವಲಯವನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ನಿಯೋಜಿತ ಉಪ ಪೊಲೀಸ್ ಅಧೀಕ್ಷಕರು ಇರುತ್ತಾರೆ.

ರಾತ್ರಿಯಿಡೀ ಭದ್ರತೆ ವ್ಯವಸ್ಥೆ

ಶ್ರೀರಾಮನ ಭಕ್ತರಿಗೆ ಸುಗಮ ಮತ್ತು ಸರಾಗ ದರ್ಶನವನ್ನು ಕಲ್ಪಿಸಲು ರಾಮ ಪಥದ ಉದ್ದಕ್ಕೂ 15 ಡ್ರಾಪ್ ಡೌನ್ ತಡೆಗೋಡೆಗಳು ಮತ್ತು 13 ಹೋಲ್ಡಿಂಗ್ ಅನ್ನು ಸ್ಥಾಪಿಸಲಾಗಿದೆ. ಮಂದಿರದ ಆವರಣ ಮತ್ತು ಮೇಳದ ಪ್ರದೇಶದಲ್ಲಿ ರಾತ್ರಿಯಿಡೀ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಅಲ್ಲದೇ ಮೇಳದ ಮೈದಾನದೊಳಗಿನ 50 ಸ್ಥಳಗಳಲ್ಲಿ ಪಬ್ಲಿಕ್ ಅಡ್ರೆಸ್ ಸಿಸ್ಟೆಮ್ ಅಳವಡಿಸಲಾಗುತ್ತದೆ. ಹಳದಿ ವಲಯ ನಿಯಂತ್ರಣ ಕೊಠಡಿಯಲ್ಲಿ 111 ಸಿಸಿಟಿವಿ ಕ್ಯಾಮೆರಾದ ಮೂಲಕ ಕಣ್ಗಾವಲು ನಡೆಸಲಾಗುತ್ತದೆ. ಮುಖ್ಯವಾಗಿ ಸಾಕೇತ್ ಪೆಟ್ರೋಲ್ ಪಂಪ್‌ನಿಂದ ಲತಾ ಚೌಕ್ , ಸರಯೂ ಘಾಟ್‌ನಿಂದ ಹನುಮಾನ್ ಗಢಿ ಮತ್ತು ಹನುಮಾನ್‌ ಗಢಿಯಿಂದ ಕನಕ ಭವನ ಮತ್ತು ರಾಮಂದಿರದವರೆಗೆ ಭಕ್ತರ ಮಾರ್ಗಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.

ವಾಹನಗಳು ಮತ್ತು ಭಕ್ತರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಅಯೋಧ್ಯಾ ಧಾಮದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾದ 24 ಪಿಎನ್ ಪಿಆರ್ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ:K. Annamalai: ಬದುಕು ಬದಲಿಸಿದ ಮಾನಸ ಸರೋವರ ಯಾತ್ರೆ! ಕೆ.ಅಣ್ಣಾಮಲೈ ಕುರಿತ ಕುತೂಹಲಕರ ಸಂಗತಿಗಳಿವು

2 ಟೆಥರ್ಡ್ ಮತ್ತು 8 ಏರಿಯಲ್ ಡ್ರೋನ್‌ಗಳನ್ನು ಬಳಸಿಕೊಂಡು ರಸ್ತೆ, ಬೀದಿ ಮತ್ತು ಪಾರ್ಕಿಂಗ್ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಅಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿ ಆಂಬ್ಯುಲೆನ್ಸ್ ಮತ್ತು ರಕ್ಷಣಾ ತಂಡಗಳ ಹೆಚ್ಚುವರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಮತ್ತು ಅಲ್ಲಲ್ಲಿ ಪೊಲೀಸ್ ಸಹಾಯ ಕೇಂದ್ರಗಳು ಮತ್ತು ವಿಚಾರಣಾ ಕಚೇರಿಗಳನ್ನು ಸ್ಥಾಪಿಸಲಾಗಿದೆ.

Exit mobile version