ಜನಸಂದಣಿ ನಿರ್ವಹಣೆಯ ಕುರಿತು ತಾಂತ್ರಿಕ ಸಲಹೆಗಳನ್ನು ನೀಡಲು ಅಯೋಧ್ಯೆ (ayodhya) ರಾಮಮಂದಿರ ಟ್ರಸ್ಟ್ ನ ಆಹ್ವಾನದ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಎಂಜಿನಿಯರ್‌ಗಳ ತಂಡ ಮತ್ತೆ ಅಯೋಧ್ಯೆಗೆ ಭೇಟಿ ನೀಡಿ ಸಲಹೆಗಳ ಪಟ್ಟಿ ನೀಡಿದೆ.
ಅಯೋಧ್ಯೆ ರಾಮಮಂದಿರ ಟ್ರಸ್ಟ್ ನ ಕೋರಿಕೆಯ ಮೇರೆಗೆ ಟಿಟಿಡಿ ತಂಡ ಈ ಹಿಂದೆ ಫೆಬ್ರವರಿ 16 ಮತ್ತು 17ರಂದು ಅಯೋಧ್ಯೆಗೆ ಭೇಟಿ ನೀಡಿ ದೂರದಿಂದ ಬರುವ ರಾಮನ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವರ ದರ್ಶನ ಪಡೆಯಲು ಟ್ರಸ್ಟ್ ಗೆ ಸಲಹೆಗಳನ್ನು ನೀಡಿತ್ತು. ಇದೀಗ ಮತ್ತೆ ಅಯೋಧ್ಯೆ ರಾಮಮಂದಿರ ಟ್ರಸ್ಟ್ ನ ಆಹ್ವಾನದ ಮೇರೆಗೆ ಟಿಟಿಡಿ ಇಂಜಿನಿಯರ್ ತಂಡ ಅಯೋಧ್ಯೆಗೆ ಭೇಟಿ ನೀಡಿದೆ.
ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಮತ್ತು ಟ್ರಸ್ಟ್ ನ ಸಂಘಟಕರ ನಡುವೆ ಸಭೆ ನಡೆಸಲಾಗಿದ್ದು, ಈ ವೇಳೆ ಜನಸಂದಣಿ ನಿರ್ವಹಣೆ , ಸರತಿ ಸಾಲುಗಳು, ನೀರಿನ ಪಾಯಿಂಟ್, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಕುರಿತ ತಾಂತ್ರಿಕ ಸಲಹೆಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಟ್ರಸ್ಟ್ ಗೆ ಸಲ್ಲಿಸಿದೆ.
ಏಪ್ರಿಲ್ 13ರಂದು ನಡೆದ ಈ ಸಭೆಯಲ್ಲಿ ಟಿಟಿಡಿಯ ತಾಂತ್ರಿಕ ಸಲಹೆಗಾರ ರಾಮಚಂದ್ರ ರೆಡ್ಡಿ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು. ಹಾಗೇ ರಾಮ ಮಂದಿರ ಟ್ರಸ್ಟ್ ನ ವತಿಯಿಂದ ಚಂಪತ್ ರಾಯ್ , ಪ್ರಧಾನ ಕಾರ್ಯದರ್ಶಿ ಗೋಪಾಲಜಿ ಮತ್ತು ಇತರರು ಭಾಗವಹಿಸಿದ್ದರು.
ತಿರುಪತಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರೂ ಕೂಡ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗೇ ಅಯೋಧ್ಯೆ ರಾಮಮಂದಿರಕ್ಕೂ ಕೂಡ ಪ್ರತಿದಿನ ಭಕ್ತರು ದಂಡು ಆಗಮಿಸುತ್ತಿರುವ ಕಾರಣ ಭಕ್ತರಿಗೆ ತೊಂದರೆ ಮುಕ್ತ ದರ್ಶನವನ್ನು ನೀಡಲು ಟ್ರಸ್ಟ್ ನ ಅಧಿಕಾರಿಗಳು ನಿರ್ಧರಿಸಿದ್ದು, ಅದಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಸಲಹೆ ಪಡೆಯಲು ಮುಂದಾಗಿದೆ ಎನ್ನಲಾಗಿದೆ.