Site icon Vistara News

ವಿಸ್ತಾರ ಸಂಪಾದಕೀಯ: ಆಯುರ್‌ಕೇರ್‌ ವಂಚನೆ ಪ್ರಕರಣ, ಇಂಥವರ ವಿರುದ್ಧ ಕಠಿಣ ಕ್ರಮ ಅಗತ್ಯ

Ayurcare

ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೇಲ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಈ ಮಹಾ ಮೋಸ ನಡೆದಿದ್ದು, ಫ್ರಾಂಚೈಸಿ ಮತ್ತು ಬ್ಯುಸಿನೆಸ್ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಚೈನ್‌ಲಿಂಕ್‌ ಮೂಲಕ ಸುಮಾರು 800 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಮಾಡಲಾಗಿದೆ ಎಂಬ ಸಂಗತಿ ಬಯಲಾಗಿದೆ. “ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೇಲ್ಸ್‌ ಪ್ರೈವೇಟ್‌ ಲಿಮಿಟೆಡ್‌”, “ಕಾರ್ಪ್‌ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ” ಹಾಗೂ “ಇ ಸ್ಟೋರ್ ಇಂಡಿಯಾ ಸೂಪರ್ ಮಾರ್ಕೆಟ್ ಸ್ಟೋರ್ ಫ್ರಾಂಚೈಸಿ” ಹೆಸರಿನಲ್ಲಿ ಈ ಮಹಾ ವಂಚನೆ ನಡೆದಿದೆ. ಉತ್ತರ ಪ್ರದೇಶ ಮೂಲದ ಕಂಪನಿ ಇದಾಗಿದ್ದು, ಆಯರ್ವೇದಿಕ್‌ ಉತ್ಪನ್ನ ಉದ್ಯಮದ ಹೆಸರಿನಲ್ಲಿ ಜನರನ್ನು ನಂಬಿಸಿ ವಂಚನೆ ಮಾಡಲಾಗಿದೆ. ಮತ್ತೆ ಮತ್ತೆ ಇಂಥ ಫ್ರಾಂಚೈಸಿ ಹಗರಣಗಳಲ್ಲಿ ಸಿಲುಕಿ ವಂಚನೆಗೀಡಾಗುತ್ತಿರುವ ಜನ ಇನ್ನಾದರೂ ಪಾಠ ಕಲಿಯಬೇಕಿದೆ; ಕಾನೂನು ಕೂಡ ಈ ನಿಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಂಡು, ಸೂಕ್ತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ.

ಇದು ಮೊದಲು ಸಣ್ಣ ಹೂಡಿಕೆಗಳಿಗೆ ಪ್ರತಿಫಲ ನೀಡಿ ಆ ಮೂಲಕ ಜನರನ್ನು ಆಕರ್ಷಿಸಿ ದೊಡ್ಡ ಹೂಡಿಕೆ ಮಾಡಿಸಿಕೊಂಡು ವಂಚಿಸುವ ಸ್ಕ್ಯಾಮ್.‌ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಡೈರೆಕ್ಟ್ ಸೆಲ್ಲಿಂಗ್ ಕಂಪನಿ ಎಂದು ನಂಬಿಸಿ, ಆಯುರ್ವೇದಿಕ್ ಉತ್ಪನ್ನಗಳ ಮೂಲಕ ವಂಚಿಸಲಾಗಿದೆ. ಫ್ರಾಂಚೈಸಿ ಕೊಡುವುದಾಗಿ ಜನರಿಂದ ಲಕ್ಷಾಂತರ ಹಣ ಪಡೆದುಕೊಂಡು, ಪ್ರತಿ ತಿಂಗಳು ದುಪ್ಪಟ್ಟು ಲಾಭಾಂಶ ನೀಡುವುದಾಗಿ ಸುಳ್ಳು ಹೇಳಿದೆ. ಸೂಪರ್ ಮಾರ್ಕೆಟ್ ಸ್ಟೋರ್ಸ್ ಫ್ರಾಂಚೈಸಿ ತೆಗೆದುಕೊಳ್ಳಲು 25 ಲಕ್ಷದಿಂದ 1 ಕೋಟಿ ರೂಪಾಯಿವರೆಗೆ ಹಣ ಪಡೆಯಲಾಗಿದೆ. ಹೀಗೆ ಮೊದಲಿಗೆ ಹಣ ಮರುಪಾವತಿ ಹಾಗೂ ಲಾಭಾಂಶ ಕೊಡುತ್ತಾ ಬಂದು, ಕಳೆದ 10 ತಿಂಗಳಿಂದ ಯಾವುದೇ ಹಣ ನೀಡದೆ, ಕರ್ನಾಟಕದಾದ್ಯಂತ ಸಾವಿರಾರು ಜನರಿಗೆ ವಂಚಿಸಿದ್ದಾರೆ. ಜತೆಗೆ ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಮುಖ್ಯ ಆಡಳಿತ ಕಚೇರಿಯನ್ನು ಮುಚ್ಚಿ ಪರಾರಿ ಆಗಿದ್ದಾರೆ.

ಇದು ಇಂಥ ಫ್ರಾಂಚೈಸಿ ಹಗರಣಗಳ ಸಾಮಾನ್ಯ ಸ್ವರೂಪವೇ ಆಗಿದೆ. ಇಂಥ ಖದೀಮರು ಇದೊಂದು ಲಾಭದಾಯಕ ಉದ್ಯಮವೆಂದೂ, ಫ್ರಾಂಚೈಸಿ ಪಡೆದರೆ ಅಧಿಕ ಲಾಭ ಇದೆ ಎಂದೂ ನಂಬಿಸುತ್ತಾರೆ. ಪ್ರಾರಂಭದಲ್ಲಿ ಎಲ್ಲರಿಗೂ ಲಾಭಾಂಶವನ್ನೂ ಕೊಡುತ್ತಾರೆ. ಹೀಗೆ ಹಣ ಪಡೆದವರು ಪರಿಚಿತರನ್ನೂ ಇದರಲ್ಲಿ ಸೇರಿಸುತ್ತಾರೆ. ಯಾವ ಮ್ಯೂಚುವಲ್‌ ಫಂಡ್‌, ಲಿಕ್ವಿಡಿಟಿ ಫಂಡ್‌, ಗೋಲ್ಡ್‌ ಫಂಡ್‌ ಕೂಡ ನೀಡಲಾರದಷ್ಟು ಮಾಸಿಕ ಲಾಭವನ್ನು ಕೊಡುವುದಾಗಿ ಆಶ್ವಾಸನೆ ನೀಡುತ್ತಾರೆ. ಉದಾಹರಣೆಗೆ, 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಸಾಕು, ಮಾಸಿಕ 50 ಸಾವಿರ ರೂಪಾಯಿ ಕೊಡುತ್ತಾ ಹೋಗಲಾಗುವುದು. ಹೀಗೆ ಒಟ್ಟು 36 ತಿಂಗಳ ಕಾಲ ಹಣ ದೊರೆತು ಒಟ್ಟಾರೆ ಮೊತ್ತ 18 ಲಕ್ಷ ರೂಪಾಯಿ ಸಿಗಲಿದೆ ಎಂದು ನಂಬಿಸುತ್ತಾರೆ. ಆದರೆ, ಯಾವುದೇ ಹಣಕಾಸು ವ್ಯವಹಾರವೂ ಈ ಪ್ರಮಾಣದ ಲಾಭವನ್ನು ಕನಸಿನಲ್ಲೂ ನೀಡಲು ಸಾಧ್ಯವಿಲ್ಲ. ಇಂಥ ವ್ಯವಹಾರ ಕಂಡುಬಂದ ಕೂಡಲೇ ಮೋಸ ಎಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಜನ ತಾವು ಕಷ್ಟಪಟ್ಟು ದುಡಿದು ಉಳಿಸಿಟ್ಟ ಹಣವನ್ನು ದುಪ್ಪಟ್ಟು, ಮೂರು ಪಟ್ಟು ಮಾಡಿಕೊಳ್ಳುವ ಆಮಿಷಕ್ಕೆ ಬಲಿ ಬಿದ್ದು ಇಂಥ ನಕಲಿ ಉದ್ಯಮಗಳಲ್ಲಿ ಹೂಡಿ ಕಳೆದುಕೊಳ್ಳುತ್ತಲೇ ಇರುತ್ತಾರೆ.

ಪ್ರಕರಣದ ಆರೋಪಿಗಳಾದ ಮಹಮ್ಮದ್‌ ಫೈಜಾನ್‌ ಮತ್ತಿತರರು ಜನರನ್ನು ನಂಬಿಸಲು ಆಯುರ್ವೇದ ಉತ್ಪನ್ನಗಳ ಸೋಗು ಹಾಕಿರುವುದು ಗಮನಾರ್ಹ. ಆಯುರ್ವೇದಕ್ಕೆ ಇರುವ ಬೇಡಿಕೆ, ಪಾವಿತ್ರ್ಯವನ್ನು ದುರುಪಯೋಗಡಿಸಿಕೊಳ್ಳುವ ಹೀನಬುದ್ಧಿ ಇದು. ಇದರಿಂದ ವಂಚನೆಗೀಡಾದ ಜನರಿಗೆ ಒಟ್ಟಾರೆ ಹಣಕಾಸು ಸಂಸ್ಥೆಗಳ ಮೇಲೆ, ಆಯುರ್ವೇದ ಉತ್ಪನ್ನಗಳ ಮೇಲಿರುವ ನಂಬಿಕೆಯೂ ಹೊರಟುಹೋಗಬಹುದಾಗಿದೆ. ಜೀವಮಾನದ ಉಳಿತಾಯವನ್ನೆಲ್ಲ ಇದಕ್ಕೆ ಸುರಿದವರು ಯಾವ ಬಗೆಯ ಮಾನಸಿಕ ವೇದನೆಗೆ ತುತ್ತಾಗಬಹುದೋ ಊಹಿಸಲು ಸಾಧ್ಯವಿಲ್ಲ. ಆದ್ದರಿಂದಲೇ ವಂಚಕರ ಮೇಲೆ ಕಠಿಣ ಕ್ರಮ ಅಗತ್ಯವಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮಹಿಳೆಯರ ನಗ್ನ ಮೆರವಣಿಗೆ ಅಮಾನುಷ, ಮಣಿಪುರದ ಅರಾಜಕತೆ ಮುಗಿಯಲಿ

ಈ ಹಿಂದೆಯೂ ಹಲವು ಜನ ವಂಚಕರು ನಾನಾ ಕಂಪನಿಗಳ ಹೆಸರಿನಲ್ಲಿ ಸಾವಿರಾರು, ಲಕ್ಷಾಂತರ ಮಂದಿಗೆ ಧೋಖಾ ಮಾಡಿದ್ದು ಇದೆ. ಶಾರದಾ ಚಿಟ್‌ಫಂಡ್‌ ಹಗರಣ, ಐಎಂಎ ಹಗರಣ, ವಿನಿವಿಂಕ್‌ ಹಗರಣ ಇತ್ಯಾದಿಗಳನ್ನು ನೆನಪಿಸಿಕೊಳ್ಳಬಹುದು. ಆಡುಭಾಷೆಯಲ್ಲಿ ಇವುಗಳನ್ನು ʼಪೋಂಜಿ ಸ್ಕೀಮ್‌ʼ ಅಥವಾ ʼಪಿರಮಿಡ್‌ ಸ್ಕೀಮ್‌ʼ ಎಂದೂ ಕರೆಯುತ್ತಾರೆ. ಇವು ತಮ್ಮನ್ನು ಆರಂಭದಲ್ಲಿ ಬಹು ಹಂತದ ಮಲ್ಟಿ ಲೆವೆಲ್‌ ಮಾರ್ಕೆಟಿಂಗ್‌ ಉದ್ಯಮಗಳೆಂದು ಕರೆದುಕೊಳ್ಳುತ್ತವೆ. ಆದರೆ ಕೊನೆಯ ಹಂತದಲ್ಲಿ ಜನರನ್ನು ವಂಚಿಸಿ ಕಣ್ಮರೆಯಾಗುತ್ತವೆ. ಇವುಗಳನ್ನು ಹಣಕಾಸು ಅವ್ಯವಹಾರ ಕಾಯಿದೆ-2002, ಪ್ರೈಜ್‌ ಚಿಟ್‌ ಮತ್ತು ಹಣ ಸರ್ಕ್ಯುಲೇಷನ್‌ ತಡೆ ಕಾಯಿದೆ- 1978, ನಿಷೇಧಿತ ಅನಿಯಂತ್ರಿತ ಠೇವಣಿ ಸ್ಕೀಮ್ಸ್‌ ಕಾಯಿದೆ- 2019ರ ಅಡಿಯಲ್ಲಿ ಅಪರಾಧ ಎಂದು ಸ್ಪಷ್ಟವಾಗಿ ವಿಷದೀಕರಿಸಲಾಗಿದೆ. ಇವುಗಳಲ್ಲಿ ಮೊದಮೊದಲ ಗ್ರಾಹಕರು ಯಾವಾಗಲೂ ಅಲ್ಪಸ್ವಲ್ಪ ಲಾಭವನ್ನು ಗಳಿಸುತ್ತಾರೆ. ನಂತರ ಸೇರಿಕೊಂಡವರಿಗೆ ವಂಚನೆ ಖಾತ್ರಿ. ಹೀಗಾಗಿ ಜನತೆ ಕೂಡ ಹಣಕಾಸು ವಿಷಯಗಳಲ್ಲಿ ಸಾಕ್ಷರರಾಗಿ, ಇಂಥ ಧೂರ್ತರಿಂದ ದೂರವಿರುವುದು ಅಗತ್ಯವಾಗಿದೆ.

Exit mobile version