Site icon Vistara News

B.S. Yediyurappa: ನನ್ನ ಏಳಿಗೆಗೆ ಆರ್‌ಎಸ್‌ಎಸ್‌ ತರಬೇತಿಯೇ ಕಾರಣ: ವಿದಾಯ ಭಾಷಣದಲ್ಲಿ ಅನೇಕರನ್ನು ನೆನೆದು ಭಾವುಕರಾದ ಬಿ.ಎಸ್‌. ಯಡಿಯೂರಪ್ಪ

b-s-yediyurappa-says RSS training is the reason for his growth

#image_title

ವಿಧಾನಸಭೆ: ಸತತವಾಗಿ ತಮ್ಮನ್ನು ವಿಧಾನಸಭೆಗೆ ಆಯ್ಕೆ ಮಾಡಿದ ಶಿಕಾರಿಪುರ ಜನತೆಗೆ ಅಭಿನಂದನೆ ಸಲ್ಲಿಸಿದ ಬಿ.ಎಸ್.‌ ಯಡಿಯೂರಪ್ಪ, ಈ ಸಮಯದಲ್ಲಿ ಏನು ಮಾತನಾಡಬೇಕು ಏನು ಮಾತನಾಡಬಾರದು ಎಂದು ತಿಳಿಯುತ್ತಿಲ್ಲ ಎಂದು ಭಾವುಕರಾದರು. 15ನೇ ವಿಧಾನಸಭೆಯ ಕಡೆಯ ದಿನವೂ ಆದ ಶುಕ್ರವಾರ ಮಾತನಾಡಿದ ಬಿ.ಎಸ್‌. ಯಡಿಯೂರಪ್ಪ, ತಮ್ಮ ವಿದಾಯದ ಭಾಷಣವನ್ನು ಮಾಡಿದರು.

ಶಿಕಾರಿಪುರ ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ. ಈ ತಿಂಗಳು 27ಕ್ಕೆ ನನಗೆ 80 ವರ್ಷ ತುಂಬುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರೇ ಬರುತ್ತಿರುವುದು ಅತ್ಯಂತ ಸಮಾಧಾನ ಹಾಗೂ ತೃಪ್ತಿ ತಂದಿದೆ ಎಂದರು.

ನನ್ನ ಜೀವನದಲ್ಲಿ ಅನೇಕ ಒಳ್ಳೆಯ ಅವಕಾಶ ಸಿಕ್ಕಿತು. ರಸ್ತೆಗಳು ಸರಿಯಿಲ್ಲದ ಕಾಲದಲ್ಲಿ ವಾಜಪೇಯಿ ಜತೆಗೆ ರಾಜ್ಯ ಹಾಗೂ ಜಿಲ್ಲೆಯಲ್ಲಿ ಪ್ರವಾಸ ಮಾಡುವ ಸೌಭಾಗ್ಯ ಸಿಕ್ಕಿತು. ಒಂದು ಸಭೆಯಲ್ಲಿ ಭಾಗವಹಿಸಿ ನಾನು ಭಾಷಣ ಮಾಡುತ್ತಿರುವ ಸಮಯದಲ್ಲಿ ಅಟಲ್‌ ಜಿ, ಆಡ್ವಾಣಿ ಬರುತ್ತಿದ್ದರು, ಅಂತಹ ಸ್ಥಿತಿ ಇತ್ತು. ಮೊದಲು ಇಬ್ಬರು ಇದ್ದೆವು, ವಸಂತ ಬಂಗೇರ ಸಹ ನಮ್ಮ ಕೈಬಿಟ್ಟು ಹೋದರು. ಆದರೆ ನಾನು ಎಂದೂ ತಿರುಗಿ ನೋಡಿಲ್ಲ.

ಬಗರ್‌ ಹುಕ್ಕುಂ ಸಾಗುವಳಿ ರೈತರಿಗೆ ನ್ಯಾಯ ಸಿಗಬೇಕೆಂದು ಧರಣಿ ಮಾಡಿದಾಗ ಅಂದಿನ ಸಿಎಂ ಎಸ್‌.ಎಂ. ಕೃಷ್ಣ ಪರಿಹಾರ ಹುಡುಕುವ ಪ್ರಯತ್ನ ಮಾಡಿದರು ಎಂದು ಸ್ಮರಿಸಿಕೊಳ್ಳುತ್ತೇನೆ. ನಾನು ಇಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ, ಅದರ ತರಬೇತಿ ಕಾರಣ. ಅದನ್ನು ಮರೆಯಲು ಸಾಧ್ಯವಿಲ್ಲ. ನಮಗೆಲ್ಲ ಆದರ್ಶ ಎಚ್‌.ಡಿ. ದೇವೇಗೌಡರು. ಈ ವಯಸ್ಸಿನಲ್ಲೂ ರಾಷ್ಟ್ರ, ರಾಜ್ಯದ ವಿಚಾರಗಳ ಕುರಿತು ಚಿಂತನೆ ಮಾಡುತ್ತಾರೆ ಎಂದರೆ ಅವರಿಂದ ಕಲಿಯುವುದು ಬಹಳಷ್ಟಿದೆ.

ಏನು ಮಾತನಾಡಬೇಕು, ಮಾತನಾಡಬಾರದು ಎಂದು ಗೊತ್ತಾಗುತ್ತಿಲ್ಲ. ನನ್ನ ತಾಲೂಕಿನ ಜನತೆಗೆ ಚಿರಋಣಿಯಾಗಿರುತ್ತೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಎಸ್‌ಸಿಎಸ್‌ಟಿ ಸಮುದಾಯಕ್ಕೆ ನೀಡಿರುವ ಕೊಡುಗೆಯನ್ನು ನಾಡಿನ ಜನರು ಮೆಚ್ಚಿದ್ದಾರೆ. ಅದರದ್ದೇ ಆದಂತಹ ಫಲ ಸಿಗುತ್ತದೆ.

ಇದು ನನ್ನ ಕೊನೆಯ ಅಧಿವೇಶನ ಎಂದು ಮೊನ್ನೆಯೇ ಹೇಳಿದ್ದೇನೆ. ಪಕ್ಷವನ್ನು ಬೆಳೆಸಲು, ಸಂಘಟಿಸಲು ಜೀವನದ ಕೊನೆಯ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. ಒಂದು ದಿನ, ಒಂದು ಕ್ಷಣವನ್ನೂ ಸತಕ್ಕೆ ಉಪಯೋಗ ಮಾಡಿಕೊಳ್ಳುವುದಿಲ್ಲ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷವನ್ನು ಗೆಲ್ಲಿಸುತ್ತೇನೆ. ಸಿದ್ದರಾಮಯ್ಯನವರು ಅನೇಕ ವಿಚಾರಗಳನ್ನು ಅಧ್ಯಯನ ನಡೆಸಿ ಮಾರ್ಗದರ್ಶನ ಮಾಡಿದ್ದಾರೆ, ಎ.ಟಿ. ರಾಮಸ್ವಾಮಿ ಸಹ ಮಾರ್ಗದರ್ಶನ ಮಾಡಿದ್ದಾರೆ. ಮುಂದೆ ನೀವೆಲ್ಲರೂ ಆಯ್ಕೆಯಾಗಿ ಬಂದು ಇನ್ನೂ ಹೆಚ್ಚು ಕೆಲಸ ಮಾಡಲು ಆಶಿಸುತ್ತೇನೆ ಎಂದರು.

Exit mobile version