Site icon Vistara News

Bagalkot Lok Sabha Constituency: ಬಿಜೆಪಿಯ ಭದ್ರಕೋಟೆ ಭೇದಿಸುವರೇ ಸಂಯುಕ್ತಾ ಪಾಟೀಲ್?

Bagalkot Lok Sabha Constituency

Bagalkot Lok Sabha Constituency: Fight Between PC Gaddigoudar And Samyukta Patil

ಬಾಗಲಕೋಟೆ: 2004ರಿಂದಲೂ ಬಾಗಲಕೋಟೆ ಲೋಕಸಭೇ ಕ್ಷೇತ್ರವು (Bagalkot Lok Sabha Constituency) ಬಿಜೆಪಿಯ ಭದ್ರಕೋಟೆಯಾಗಿದ್ದು, ಸತತ ಐದನೇ ಬಾರಿಗೆ ಗೆಲ್ಲುವ ಉತ್ಸಾಹದೊಂದಿಗೆ ಬಿಜೆಪಿಯ ಪಿ.ಸಿ.ಗದ್ದಿಗೌಡರ್‌ (PC Gaddigoudar) ಕಣಕ್ಕಿಳಿದಿದ್ದಾರೆ. ಇನ್ನು, ಕಾಂಗ್ರೆಸ್‌ನಿಂದ ಯುವ ನಾಯಕಿ, ಸಚಿವ ಶಿವಾನಂದ್‌ ಪಾಟೀಲ್‌ ಅವರ ಪುತ್ರಿ ಸಂಯುಕ್ತಾ ಪಾಟೀಲ್‌ (Samyukta Patil) ಅವರು ಸ್ಪರ್ಧಿಸಿದ್ದು, ಅನುಭವಿ ವರ್ಸಸ್‌ ಯುವ ನಾಯಕಿ ನಡುವಿನ ಸಮರಕ್ಕೆ ಕ್ಷೇತ್ರ ಸಾಕ್ಷಿಯಾಗಿದೆ. ಹಾಗಾಗಿ, ಸಹಜವಾಗಿಯೇ ಫಲಿತಾಂಶದ ಮೇಲೆ ಎಲ್ಲರ ಗಮನವಿದೆ.

ಪಿ.ಸಿ.ಗದ್ದಿಗೌಡರ್‌ ಅವರು 2004ರಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಪತಾಕೆ ಹಾರಿಸಿದ್ದು, ಅದಾದ ನಂತರ ಅವರು ತಿರುಗಿ ನೋಡಿಲ್ಲ. ಕ್ಷೇತ್ರದ ಜನರ ಜತೆ ಒಡನಾಟ, ಅಭಿವೃದ್ಧಿ ಯೋಜನೆಗಳು, ಸರಳತೆಯಿಂದ ಮನೆಮಾತಾಗಿರುವ ಇವರಿಗೆ ನರೇಂದ್ರ ಮೋದಿ ಅವರ ಅಲೆಯ ಕೃಪಾಕಟಾಕ್ಷವೂ ಇದೆ. ಅದರಲ್ಲೂ, ಸಂಯುಕ್ತಾ ಪಾಟೀಲ್‌ ಅವರು ಹೊರಗಿನವರು ಎಂಬ ಭಾವನೆ ಜನರಲ್ಲಿರುವುದು ಕೂಡ ಗದ್ದಿಗೌಡರ್‌ ಅವರಿಗೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತೊಂದೆಡೆ, ಸಂಯುಕ್ತಾ ಪಾಟೀಲ್‌ ಅವರು ಬಾಗಲಕೋಟೆ ಕ್ಷೇತ್ರದ ಆಡಳಿತ ವಿರೋಧಿ ಅಲೆ, ತಂದೆ ಶಿವಾನಂದ್‌ ಪಾಟೀಲರ ಬಲವಿದೆ. ಪ್ರಚಾರದ ವೇಳೆ ಯುವಕರು, ಅದರಲ್ಲೂ, ಯುವತಿಯರನ್ನು ಸೆಳೆಯುವಲ್ಲಿ ಸಂಯುಕ್ತಾ ಪಾಟೀಲ್‌ ಅವರು ಯಶಸ್ವಿಯಾಗಿದ್ದಾರೆ. ಹೊರಗಿನವಳು ಎಂಬ ಮನೋಭಾವವನ್ನು ತೊಡೆದುಹಾಕಿ, ನಾನೂ ನಿಮ್ಮ ಮನೆಮಗಳು ಎಂಬ ಭಾವನೆಯು ಜನರಲ್ಲಿ ಮೂಡುವಂತೆ ಮಾಡಿದ್ದಾರೆ. ಆ ಮೂಲಕ, ಬಾಗಲಕೋಟೆಯಲ್ಲಿ ಸಂಯುಕ್ತಾ ಪಾಟೀಲ್‌ ಅವರು ಪಿ.ಸಿ.ಗದ್ದಿಗೌಡರ್‌ ಅವರಿಗೆ ತೀವ್ರ ಪೈಪೋಟಿ ನೀಡಿದ್ದಾರೆ.

2019, 2014ರ ಫಲಿತಾಂಶ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಪಿ.ಸಿ.ಗದ್ದಿಗೌಡರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ್‌ ಅವರ ವಿರುದ್ಧ 1.68 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯಲ್ಲೂ ನರೇಂದ್ರ ಮೋದಿ ಅವರ ಅಲೆಯನ್ನು ಸದ್ಬಳಕೆ ಮಾಡಿಕೊಂಡಿದ್ದ ಪಿ.ಸಿ.ಗದ್ದಿಗೌಡರ್‌ ಅವರು ಕಾಂಗ್ರೆಸ್‌ನ ಅಜಯ್‌ ಕುಮಾರ್‌ ಸರನಾಯ್ಕ ಅವರ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಬಾರಿಸಿದ್ದರು.

ಇದನ್ನೂ ಓದಿ: Dakshina Kannada Lok Sabha Constituency : ದಕ್ಷಿಣ ಕನ್ನಡದಲ್ಲಿ ವಿಜಯ ಅಭಿಯಾನ ಮುಂದುವರಿಸಲು ಬಿಜೆಪಿ ಕಾತರ

Exit mobile version