ಬೆಂಗಳೂರು: ಭಾರತದ ಜನಪ್ರಿಯ ಹಾಗೂ ಜನಸ್ನೇಹಿ ಕಂಪನಿಯಾಗಿರುವ ಬಜಾಜ್ ಆಟೋ ತನ್ನ ಸಂಪೂರ್ಣ ಪಲ್ಸರ್ ವೇರಿಯೆಂಟ್ಗಳನ್ನು ಅಪ್ಗ್ರೇಡ್ ಮಾಡುವ ಪ್ರಕ್ರಿಯೆಯಲ್ಲಿದೆ. ಈ ತಿಂಗಳ ಆರಂಭದಲ್ಲಿ ಕಂಪನಿಯು ತನ್ನ ಅತಿದೊಡ್ಡ ಪಲ್ಸರ್ ಬೈಕ್ ಎನ್ ಎಸ್ 400 ಝಡ್ ಅನ್ನು ಬಿಡುಗಡೆ ಮಾಡಿತ್ತು. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.85 ಲಕ್ಷಗಳಾಗಿತ್ತು. ಅದಕ್ಕಿಂತ ಹಿಂದಿನ ತಿಂಗಳು ಅಪ್ಡೇಟೆಡ್ ಪಲ್ಸರ್ ಎನ್ 250 ಬೈಕ್ ಅನಾವರಣ ಮಾಡಿತ್ತು. ಇದೀಗ ಅದರ ಜತೆಗಾರ ಎಫ್ 250 ಬೈಕ್ (2024 Bajaj Pulsar F250) ಅನ್ನು ಬಜಾಜ್ ಕಂಪನಿಗೆ ಮಾರುಕಟ್ಟೆಗೆ ಇಳಿಸಿದೆ.
ಈ ಮೂಲಕ ಬಜಾಜ್ ಕಂಪನಿಯು ಪಲ್ಸರ್ ಬೈಕ್ಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎಂಬ ವ್ಯಾಖ್ಯಾನ ಸುಳ್ಳು ಎಂದು ಹೇಳಿದೆ. ಪಲ್ಸರ್ನ ನಾನಾ ವೇರಿಯೆಂಟ್ಗಳ ಉತ್ಪಾದನೆಯು ಸೀಮಿತ ರೂಪದಲ್ಲಿ ಮುಂದುವರಿಯುತ್ತದೆ ಎಂದು ಬಜಾಜ್ ಹೇಳಿಕೊಂಡಿದೆ. ಅಂತೆಯೇ ಹಲವಾರು ಅಪ್ಡೇಟ್ಗಳೊಂದಿಗೆ ಎಫ್250 ಪಲ್ಸರ್ ರಸ್ತೆಗೆ ಇಳಿದಿದೆ. ಸ್ಟ್ರೀಟ್ ನೇಕೆಡ್ ಎನ್ 250ಯಷ್ಟು ಅಪ್ಡೇಟ್ ಪಡೆದಿಲ್ಲವಾದರೂ ಪಲ್ಸರ್ ಎಫ್ 250 ಬೈಕಿನಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗಿದೆ. ಎಲ್ಲಾ ಪಲ್ಸರ್ ಗಳಲ್ಲಿ ಕಂಡುಬರುವ ಹೊಸ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ದೊಡ್ಡ ಬದಲಾವಣೆಯಾಗಿದೆ.
ಈ ಯೂನಿಟ್ ಫೋನ್ ಕಾಲ್ ಮತ್ತು ಟೆಕ್ಟ್ ಅಲರ್ಟ್ಗಳಿಗಾಗಿ ಬ್ಲೂಟೂತ್ ಸಂಪರ್ಕ ಮತ್ತು ಬಜಾಜ್ ರೈಡ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ನೊಂದಿಗೆ ಬರುತ್ತದೆ. ಕನ್ಸೋಲ್ ಮೆನುವಿನ ಮೂಲಕ ಟಾಗಲ್ ಮಾಡಲು ಇದು ಪರಿಷ್ಕೃತ ಸ್ವಿಚ್ ಗೇರ್ ಅನ್ನೂ ನೀಡಲಾಗಿದೆ. ಇದು ರೇನ್, ರೋಡ್ ಮತ್ತು ಸ್ಪೋರ್ಟ್ ಎಂಬ ಮೂರು ಎಬಿಎಸ್ ಮೋಡ್ ಗಳನ್ನು ಪಡೆದುಕೊಂಡಿದೆ.
ಹಾರ್ಡ್ವೇರ್ ಬದಲಾವಣೆ ಏನು?
ಪಲ್ಸರ್ ಎಫ್ 250 ಬೈಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಪೆಟಲ್ ಡಿಸ್ಕ್ ಬ್ರೇಕ್ ಗಳ ರೂಪದಲ್ಲಿ ಕೆಲವು ಹಾರ್ಡ್ ವೇರ್ ಬದಲಾವಣೆಗಳನ್ನು ಮಾಡಲಾಗಿದೆ. ಆದರೂ ಡಿಸ್ಕ್ ಗಳ ಗಾತ್ರಗಳು ಕ್ರಮವಾಗಿ 300 ಎಂಎಂ ಮತ್ತು 230 ಎಂಎಂ ನಷ್ಟೇ ಇದೆ. ಎನ್ 250 ನಂತೆಯೇ, ನವೀಕರಿಸಿದ ಪಲ್ಸರ್ ಎಫ್ 250 110-ಸೆಕ್ಷನ್ ಮುಂಭಾಗ ಮತ್ತು 140-ಸೆಕ್ಷನ್ ಹಿಂಭಾಗದ ಟೈರ್ ಸೆಟಪ್ ಅನ್ನು ಪಡೆದಿದೆ. ಹಿಂದಿನ ಮಾದರಿಯ 110-ಸೆಕ್ಷನ್ ಮುಂಭಾಗ ಮತ್ತು 130-ಸೆಕ್ಷನ್ ಹಿಂಭಾಗದ ಸೆಟಪ್ ಹೊಂದಿತ್ತು. ಇಲ್ಲಿ ಸಣ್ಣ ಬದಲಾವಣೆಯಾಗಿದೆ.
2024ರ ಬಜಾಜ್ ಪಲ್ಸರ್ ಎಫ್250 ಬೈಕ್ನಲ್ಲಿ ಏನಿಲ್ಲ?
ಮೂಲ ವಿನ್ಯಾಸವು ಅದರ ಹಿಂದಿನ ಬೈಕ್ನಂತೆಯೇ ಉಳಿದಿದೆ, ಅರೆ-ಫೇರ್ಡ್ ಸ್ಟೈಲಿಂಗ್, ಆಕ್ರಮಣಕಾರಿ ವಿ-ಆಕಾರದ ಎಲ್ಇಡಿ ಹೆಡ್ ಲ್ಯಾಂಪ್ ಕ್ಲಸ್ಟರ್, ಸ್ಪ್ಲಿಟ್-ಸೀಟ್ ಗಳು, ಸ್ಟೂಬಿ ಟ್ವಿನ್-ಬ್ಯಾರೆಲ್ ಎಕ್ಸಾಸ್ಟ್ ಮಫ್ಲರ್ ಮತ್ತು ಕ್ಲಿಪ್-ಆನ್ ಹ್ಯಾಂಡಲ್ ಬಾರ್ ನೀಡಲಾಘಿದೆ ಬಜಾಜ್ ಪಲ್ಸರ್ ಎಫ್ 250 ಬೈಕಿನೊಂದಿಗೆ ಕೆಂಪು ಮತ್ತು ಕಪ್ಪು ಎಂಬ ಎರಡು ಬಣ್ಣಗಳ ಆಯ್ಕೆಗಳನ್ನು ನೀಡುವ ನಿರಿಕ್ಷೆಯಿದೆ.
ಪಲ್ಸರ್ ಎನ್ 250 ರೀತಿ , ಎಫ್ 250 ಚಿನ್ನದ ಬಣ್ಣದ ತಲೆಕೆಳಗಾಗಿರುವ ಮುಂಭಾಗದ ಫೋರ್ಕ್ ಗಳನ್ನು ಪಡೆದಿಲ್ಲ. ಹಿಂಭಾಗದ ಸಸ್ಪೆಂಷನ್ ಮೊನೊ-ಶಾಕ್ ಆಗಿದೆ ಎರಡೂ ತುದಿಗಳಲ್ಲಿ 17-ಇಂಚಿನ ವ್ಹೀಲ್ ಸೆಟಪ್ ಮತ್ತು ಅದರ ವಿನ್ಯಾಸವು ಒಂದೇ ಆಗಿದೆ. ನವೀಕರಿಸಿದ ಪಲ್ಸರ್ ಎನ್ 250 ನಲ್ಲಿ ಕಂಡುಬರುವಂತೆ ಇದು ‘250’ ಬಾಡಿ ಗ್ರಾಫಿಕ್ಸ್ ಹೊಂದಿಲ್ಲ.
ಇದನ್ನೂ ಓದಿ: Used Car Sale : ನಿಮ್ಮ ಕಾರನ್ನು ಜಾಸ್ತಿ ಬೆಲೆಗೆ ಮಾರಬೇಕೇ? ಈ ಕೆಲವು ತಂತ್ರಗಳನ್ನು ಅನುಸರಿಸಿ
ಎಂಜಿನ್ ಪವರ್ ಏನು?
ಪಲ್ಸರ್ ಎಫ್250 ಬೈಕ್ 249.07 ಸಿಸಿ ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 8,750 ಆರ್ ಪಿಎಂನಲ್ಲಿ 24.1 ಬಿಹೆಚ್ ಪಿ ಪವರ್ ಮತ್ತು 6,500 ಆರ್ ಪಿಎಂನಲ್ಲಿ 21.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
2024 ಬಜಾಜ್ ಪಲ್ಸರ್ ಎಫ್250 ಬೆಲೆ ಎಷ್ಟು?
ನವೀಕರಿಸಿದ ಪಲ್ಸರ್ ಎಫ್ 250 ಬಿಡುಗಡೆಯನ್ನು ಬಜಾಜ್ ಅಧಿಕೃತವಾಗಿ ಘೋಷಿಸಿಲ್ಲ. ಹೀಗಾಗಿ ಬೆಲೆ ಬಗ್ಗೆ ಮಾಹಿತಿ ಇಲ್ಲ. ಬಜಾಜ್ ವೆಬ್ಸೈಟ್ನಲ್ಲಿ ಅಧಿಕೃತ ಬೆಲೆಯನ್ನು ಇನ್ನೂ ಉಲ್ಲೇಖಿಸಲಾಗಿಲ್ಲ. ಆದರೆ, ಬಜಾಜ್ ಕಂಪನಿಯ ಮೂಲಗಳ ಪ್ರಕಾರ ರೂ.1.51 ಲಕ್ಷ (ಎಕ್ಸ್ ಶೋರೂಂ) ರೂಪಾಯಿಗೆ ಸಿಗುತ್ತದೆ. ಹೀಗಾಗಿ ಬೆಲೆಯಲ್ಲಿ ಹಿಂದಿನ ಆವೃತ್ತಿಗಿಂತ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಲಾಗಿದೆ.